ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮದತ್ತ

ವಿಕಿಸೋರ್ಸ್ದಿಂದ

ಬ್ರಹ್ಮದತ್ತ

1. ಸಾಲ್ವ ದೇಶದ ರಾಜ. ಈತನಿಗೆ ಸಾಲ್ವ ಎಂಬ ಹೆಸರೂ ಇದೆ. ಕಾಶಿರಾಜನ ಹಿರಿಯ ಪುತ್ರಿ ಅಂಬೆಯನ್ನು ಪ್ರೇಮಿಸಿದ್ದ. ಕಾಶಿರಾಜ ತನ್ನ ಪುತ್ರಿಯರಿಗಾಗಿ ಏರ್ಪಡಿಸಿದ್ದ ಸ್ವಯಂವರದಲ್ಲಿ ಭೀಷ್ಮ ರಾಜಪುತ್ರಿಯರಾದ ಅಂಬಾ, ಅಂಬಿಕಾ, ಅಂಬಾಲಿಕೆಯರನ್ನು ಅಪಹರಿಸಿಕೊಂಡು ಹೋದ. ಆಗ ಬ್ರಹ್ಮದತ್ತ ಭೀಷ್ಮನನ್ನು ಎದುರಿಸಿ ಸೋತ. ಬ್ರಹ್ಮದತ್ತನನ್ನು ಪ್ರೇಮಿಸಿದ್ದ ಅಂಬೆ ಭೀಷ್ಮನಿಗೆ ವಿಷಯ ತಿಳಿಸಿ ಅವನ ಅನುಮತಿ ಪಡೆದು ಬ್ರಹ್ಮದತ್ತನಲ್ಲಿಗೆ ಬಂದಳು. ಆದರೆ ಬ್ರಹ್ಮದತ್ತ ಅವಳನ್ನು ತಿರಸ್ಕರಿಸಿದ.

ಈತ ಶಿಶುಪಾಲನ ಸ್ನೇಹಿತ. ಶಿಶುಪಾಲನನ್ನು ಕೊಂದ ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳಲು ದ್ವಾರಕೆಗೆ ಮುತ್ತಿಗೆ ಹಾಕಿದ. ಆಗ ನಡೆದ ಯುದ್ಧದಲ್ಲಿ ಕೃಷ್ಣ ಈತನನ್ನು ಕೊಂದ.

2. ಚಂದ್ರವಂಶದ ಅಣುಹ ಅಥವಾ ನೀಪರಾಜನಿಂದ ಶುಕಮುನಿಯ ಮಗಳಾದ ಕೃತ್ವಿ ಎಂಬವಳಲ್ಲಿ ಜನಿಸಿದ ಒಬ್ಬ ರಾಜ. (ನೋಡಿ- ಪೂಜನೀ)

3. ಚೂಲಿ ಋಷಿಯ ಮಾನಸ ಪುತ್ರ. ತಾಯಿ ಸೋಮಧೆ ಎಂಬ ಗಂಧರ್ವಿ. ಈತ ಕಾಂಪಿಲ್ಯನಗರವನ್ನು ಆಳುತ್ತಿದ್ದ. ಬ್ರಹ್ಮನ ಮಾನಸ ಪುತ್ರನಾದ ಕುಶನ ಮಗ ಕುಶನಾಭನಿಗೆ ಘೈತಾಚಿಯಲ್ಲಿ ಜನಿಸಿದ ಸುಂದರಿಯರಾದ ನೂರು ಹೆಣ್ಣು ಮಕ್ಕಳಿದ್ದರು. ಅವರೆಲ್ಲ ಒಮ್ಮೆ ಅಲಂಕರಿಸಿಕೊಂಡು ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ವಾಯು ಅವರನ್ನು ಕಂಡು ಮೋಹಿಸಿ ತನ್ನನ್ನು ಮದುವೆಯಾಗಿರೆಂದು ಕೇಳಿದ. ಈ ಮಾತಿಗೆ ಅವರು ತಮ್ಮ ತಂದೆಯನ್ನು ಕೇಳು ಎಂದಾಗ ಕುಪಿತಗೊಂಡು ವಾಯು ಅವರ ದೇಹಗಳಲ್ಲಿ ಹೊಕ್ಕು ಅವರ ಗಾತ್ರವನ್ನು ಸೆಳೆದು ಕುಬ್ಜರನ್ನಾಗಿ ಮಾಡಿ ವಿಕಾರಗೊಳಿಸಿದ. ಮುಂದೆ ಇದನ್ನೆಲ್ಲ ತಿಳಿದ ಕುಶನಾಭ ಆ ಕನ್ನೆಯರನ್ನು ಬ್ರಹ್ಮದತ್ತನಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸಿದ. ಪಾಣಿಗ್ರಹಣ ಕಾಲದಲ್ಲಿ ಬ್ರಹ್ಮದತ್ತ ಒಬ್ಬೊಬ್ಬರ ಕೈಗಳನ್ನು ಹಿಡಿಯುತ್ತಲೆ ಅವರ ಕುಬ್ಜತ್ವ ಹೋಗಿ ಅವರು ಮೊದಲಿನಂತೆ ರೂಪ ಲಾವಣ್ಯಗಳಿಂದ ಕಂಗೊಳಿಸಿದರು.

4. ಭರತ ನಗರ ವೂದಲಾದ ಹನ್ನೆರಡು ಜನ ಜೈನ ಚಕ್ರವರ್ತಿಗಳಲ್ಲಿ ಕೊನೆಯವ. (ಕೆ.ವೈ.ಎಸ್.)