ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಪುರಿ

ವಿಕಿಸೋರ್ಸ್ದಿಂದ

ಬ್ರಹ್ಮಪುರಿ

ಮಹಾರಾಷ್ಟ್ರದ ಕೊಲ್ಹಾಪುರ ನಗರದ ಪಶ್ಚಿಮದ ಜಿಲ್ಲೆಯಲ್ಲಿ ಪಂಚಗಂಗಾ ನದಿಯ ಬಲದಂಡೆಯಲ್ಲಿರುವ ಒಂದು ಐತಿಹಾಸಿಕ ನೆಲೆ. 1873 ಮತ್ತು 1877ರಲ್ಲಿ ಆಕಸ್ಮಿಕವಾಗಿ ಇಲ್ಲಿ ದೊರಕಿದ. ಸಾತವಾಹನರ ಕಾಲದ ಕೆಲವು ನಾಣ್ಯಗಳು ಮತ್ತು ಅವರ ಕಾಲದ ದಕ್ಷಿಣ ಮಹಾರಾಷ್ಟ್ರದಲ್ಲಿ ಆಳುತ್ತಿದ್ದ ಕುರ ಎಂಬ ರಾಜವಂಶದವರ ಸಾವಿರಾರು ನಾಣ್ಯಗಳನ್ನು ಒಳ ಗೊಂಡಿದ್ದ ಎರಡು ಭೂಗತ ನಾಣ್ಯ ರಾಶಿಗಳು ಈ ನೆಲೆಯ ಪ್ರಾಚೀನತೆ ಹಾಗೂ ಪ್ರಾಮುಖ್ಯವನ್ನು ಬೆಳಕಿಗೆ ತಂದುವು. ಅನಂತರ 1984ರಲ್ಲಿ ಕೊಲ್ಹಾಪುರದ ಕೆ. ಜಿ. ಕುಂದಣಗಾರ. 1945-46 ಪುಣೆಯ ಡೆಕ್ಕನ್ ಕಾಲೇಜಿನ ಎಚ್.ಡಿ ಸಾಂಕಳಿಯಾ ಅವರು ಇಲ್ಲಿ ಉತ್ಖನನಗಳನ್ನು ನಡೆಸಿ. ಈ ನೆಲೆಯ ಹಾಗೂ ದಖನ್ನಿನ ಚಾರಿತ್ರಿಕ ಕಾಲದ ಜನಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೊರೆಗೆಡವಿದ್ದಾರೆ.

ಈ ನೆಲೆಯ ಇತಿಹಾಸ ಪ್ರಾರಂಭವಾಗುವುದು ಸಾತವಾಹನರ ಕಾಲದಲ್ಲಿ. ಕ್ರಿ. ಪೂ. ಸು. ಒಂದನೆಯ ಚಿಕ್ಕ ಗ್ರಾಮವಾಗಿದ್ದು. ಆ ಕಾಲದಲ್ಲಿ ವಿಶೇಷವಾಗಿ ಅಭಿವೃದ್ಧಿಗೊಳ್ಳುತ್ತಿದ್ದ ಭಾರತ-ರೋಮ್ ವ್ಯಾಪಾರ ವ್ಯವಹಾರದಲ್ಲಿ ಪಾಲ್ಗೊಂಡು ಮುಂದಿನ ಒಂದೆರಡು ಶತಮಾನಗಳ ಹೊತ್ತಿಗೆ ದಕ್ಷಿಣ ಭಾರತದ ಒಂದು ಮುಖ್ಯ ವ್ಯಾಪಾರ ಸ್ಥಳವಾಗಿ ಸ್ಥಿತಿವಂತ ನಗರವಾಗಿ ಬೆಳೆಯಿತು. ಆರ್ಥಿಕ ವ್ಯವಹಾರದಲ್ಲಿ ನಾಣ್ಯಗಳ ಉಪಯೋಗ ಹೆಚ್ಚಿತು. ಜನಜೀವನದಲ್ಲಿ ಸೊಗಸುತನ, ವಿದೇಶೀ ವಸ್ತುಗಳ ಮೇಲೆ ಮೋಹ ಹೆಚ್ಚಿದುವು. ಮೆಡಿಟರೇನಿಯನ್ ಪ್ರದೇಶದಿಂದ ಆಮದಾದ ಉತ್ತಮ ಕಲಾತ್ಮಕ ವಸ್ತುಗಳು, ಮೆರುಗಿನ ತಾಮ್ರದ ಕನ್ನಡಿಗಳು, ವಿವಿಧ ರೀತಿಯ ಗಾಜಿನ ಮಣಿಗಳು ವಿಶೇಷರೀತಿಯ ಮದ್ಯಪಾತ್ರೆಗಳೇ ಮೊದಲಾದ ಕಂಚಿನ ಮತ್ತು ಮಣ್ಣಿನ, ಪಾತ್ರೆ ಪಡಗಗಳು ಶ್ರೀಮಂತಿಕೆಯ ಕುರುಹಾಗಿ ಪ್ರಚುರಗೊಂಡವು. ಇವಲ್ಲದೆ ಸಾತವಾಹನರ ಕಾಲದ ನಿತ್ಯಜೀವನದ ಬಗ್ಗೆ ಬೆಳಕು ಚೆಲ್ಲುವ ವಿಶಿಷ್ಟರೀತಿಯ ನಾಲ್ಕು ಕಾಲಿನ ಅರೆಯುವ ಕಲ್ಲು. ಕಬ್ಬಿಣ ಮತ್ತು ತಾಮ್ರದ ಉಪಕರಣಗಳು. ಸ್ಥಳೀಯ ಮಣ್ಣಿನ ಪಾತ್ರೆಗಳು, ಸುಟ್ಟಮಣ್ಣಿನ ಬೊಂಬೆಗಳು, ಶಂಖ ಹಾಗೂ ಗಾಜಿನ ಬಗೆಗಳು. ಮಣ್ಣಿಗಳು ಇತ್ಯಾದಿ ವಸ್ತುಗಳೂ ತತ್ಕಾಲ ಸಂಬಂಧಿತ ಸ್ತರಗಳಲ್ಲಿ ಅನೇಕ ಸಾತವಾಹನ ಮತ್ತು ಅವರ ಸಮಕಾಲೀನ ಕುರು ವಂಶದವರ ನಾಣ್ಯಗಳ ಜೊತೆಗೆ ದೊರಕಿವೆ.

ಕ್ರಿ.ಶ.ಸು. ಎರಡನೆಯ ಶತಮಾನದ ಅಂತ್ಯದಲ್ಲಿ ಈ ನಗರ ಅಗ್ನಿ ಪ್ರಮಾದಕ್ಕೊಳಗಾಗಿ ಸಾತವಾಹನೋತ್ತರ ಯುಗದಲ್ಲಿ ಪುನರ್ವಸತಿಗೊಳ್ಳಲ್ಪಟ್ಟರೂ ಹಿಂದಿನ ಸಂಪದ್ಬರಿತ ಸ್ಥಿತಿ ಮುಟ್ಟಲಿಲ್ಲ. ಅಲ್ಪ ಕಾಲಾನಂತರ ಈ ಊರೂ ಹಾಳುಬಿದ್ದಿತು. 11-12ನೆಯ ಶತಮಾನದಲ್ಲಿ ಕೊಲ್ಹಪುರದ ಶಿಲಾಹಾರ ರಾಜದ ಆಳ್ವಿಕೆಯ ಕಾಲದಲ್ಲಿ ಈ ನೆಲೆಯ ಮೇಲೆ ಮತ್ತೂಂದು ಊರು ಹುಟ್ಟಿ ಕೊಂಡಿತು. ಈ ಕಾಲದ ಸ್ವಲ್ಪ ಒರಟು ರೀತಿಯ ಮಣ್ಣಿನ ಮಡಕೆಗಳು ಕಲ್ಲು, ಕಬ್ಬಿಣ, ಮತ್ತು ತಾಮ್ರದ ವಿವಿಧ ರೀತಿಯ ಉಪಕರಣಗಳು, ಶಿಲಾಹಾರರ ಕಾಲದ ಚಿನ್ನದ ನಾಣ್ಯಗಳು ಈ ಸ್ಥಳಗಳಲ್ಲಿ ದೊರಕಿವೆ. ಇದೇ ನಗರ ಮುಂದಿನ ಬಹುಮನೀ ಅರಸರ ಕಾಲದಲ್ಲೂ ಮುಂದುವರಿಯಿತು. ಇಲ್ಲಿ ದೊರಕುವ ಹೊಸ ರೀತಿಯ ಮಣ್ಣಿನ ಪಾತ್ರೆಗಳು. ಬಹುವರ್ಣದ ಗಾಜಿನ ಬಗೆಗಳು, ಬಹಮನೀ ಅರಸರ ನಾಣ್ಯಗಳು ಇತ್ಯಾದಿ ವಸ್ತುಗಳು ಆ ಕಾಲ ಮತ್ತು ಅಂದಿನ ಸಮೃದ್ಧ ಜೀವನದ ಬಗ್ಗೆ ಬೆಳಕು ಚೆಲ್ಲುತ್ತವೆ. ಸುಮಾರು 16ನೆಯ ಶತಮಾನದ ಆದಿಭಾಗದಲ್ಲಿ ಈ ನಗರದ ಬಹುಭಾಗ ನದಿಯ ಪ್ರವಾಹದ ಹೊಡೆತಕ್ಕೊಳಗಾಗಿ ಹಾಳಾಯಿತು. ಸುಮಾತು 1701ರಲ್ಲಿ ಔರಂಗಜೇಬ್ ಈ ನೆಲೆಯನ್ನು ತನ್ನ ಸ್ಯೆನ್ಯದ ಠಾಣ್ಯವಾಗಿ ಬಳಸಿಕೊಂಡ. ಆ ಕಾಲಕ್ಕೆ ಸಂಬಂಧಿಸಿದ ಕೆಲವು ಮನೆಗಳು ಮತ್ತು ದೊಡ್ಡ ಬಂಡೆಗಳನ್ನು ಪೇರಿಸಿ ಎತ್ತಿದ ರಕ್ಷಣಾ ಗೋಡೆಗಳ ಅವಶೇಷಗಳು ಇಲ್ಲಿ ಕಂಡು ಬಂದಿವೆ. ಔರಂಗಜೇಬ್ ಈ ಸ್ಥಳವನ್ನು ತೆರವು ಮಾಡಿದ ಅನಂತರ ಈ ನೆಲೆ ಮತ್ತೆ ನಿರ್ವಸಿತವಾಯಿತು.

ಬ್ರಹ್ಮಪುರಿಯಲ್ಲಿ ನಡೆಸಿದ 1945-46ರ ಉತ್ಖನನದಲ್ಲಿ ಬಹಮನಿಕಾಲದ ಮತ್ತು ತರುವಾಯದ ವಸ್ತುಗಳು ಬಹಮನಿ ಕಾಲಕ್ಕಿಂತ ಪೂರ್ವದ ಮತ್ತು ಸಾತವಾಹನರ ಕಾಲಕ್ಕಿಂತ ಈಚಿನ ಅವಶೇಷಗಳು ದೊರಕಿವೆ. ಬಹಮನಿ ಕಾಲದ ಮಣ್ಣಿನ ಪಾತ್ರೆಗಳು ತಿಗುರೆಯ ಮೇಲೆ ತಯಾರಾಗಿದ್ದು, ಪಾತ್ರೆಗಳನ್ನು ತಯಾರಿಸಲು ಜಿಗಟು ಮಣ್ಣುನ್ನು ಬÀಳಸಲಾಗಿದೆ. ಅದರಲ್ಲಿ ಸಣ್ಣ ಹುಲ್ಲಿನ ಚೂರು ಮತ್ತು ಬತ್ತದ ಗೊಳಲಿಯನ್ನು ಕೂಡಿಸಲಾಗಿದೆ. ಕೆಲವು ಮರಗಳುಳ್ಳ ಮಣ್ಣಿನ ಪಾತ್ರೆಗಳು ಬಣ್ಣ ಬಣ್ಣದ ಬಳೆಗಳು ಸಿಕ್ಕಿವೆ.

ಸಾತವಾಹನರ ಕಾಲದ ಅವಶೇಷಗಳೆಂದರೆ ತಟ್ಟೆಗಳು, ಬಟ್ಟಲುಗಳು, ಎತ್ತವಾದ ಕುತ್ತಿಗೆಯುಳ್ಳ ಹೂಜಿಗಳು, ವಿವಿಧ ಅಲಂಕಾರವುಳ್ಳ ಮತ್ತು ಅನೇಕ ಗೆರೆಗಳನ್ನು ಕೊರೆದ ಮಣ್ಣಿನ ಪಾತ್ರೆಗಳು ಇತ್ಯಾದಿ. ಪಾತ್ರೆಗಳು ಚೆನ್ನಾಗಿ ಸುಡಲ್ಪಟ್ಟಿವೆ. ಕಪ್ಪುಲೇಪವನ್ನು ಹೊಂದಿರುವ ಪಾತ್ರೆಗಳೂ ಹೆಚ್ಚು ಸಂಖ್ಯೆಯಲ್ಲಿವೆ. ಅಡುಗೆ ಮನೆಗಳಲ್ಲಿ ಬಳಸುತ್ತಿದ್ದ ಮೂರು ಕಲ್ಲಿನ ಒಲೆಗಳು, ಅರೆಯುವ ಕಲ್ಲುಗಳು, ನೀರು ಸಂಗ್ರಹಿಸುತ್ತಿದ್ದ ಮಣ್ಣಿನ ದೊಡ್ಡ ಹೂಜಿ ಮುಂತಾದ ವಸ್ತುಗಳು ದೊರಕಿವೆ. ಅಗೇಟ, ಲ್ಯಾಪಿಸ್ ಲಾಝಲಿ, ಸ್ಫಟಿಕ, ಗಾಜು ಮೊದಲಾದವುಗಳಿಂದ ತಯಾರಿಸಿದ ಮಣಿಗಳು, ಕಪ್ಪುಗಾಜಿನ ಬಳೆಗಳೂ ಸಿಕ್ಕಿವೆ. ಸುಟ್ಟಮಣ್ಣಿನ ಮಾತೃಕೆಯ ವಿಗ್ರಹ ಕಂಚಿನ ಅಟಿಕೆಯ ಟಾಂಗಾ, ಚುಟು, ಕುರು, ಮತ್ತು ಸಾತವಾಹನರ ಸೀಸದ ನಾಣ್ಯಗಳು ದೊರಕಿವೆ.

ಬ್ರಹ್ಮಪುರಿಯ ಸಂಶೋಧನೆಯಲ್ಲಿ ದೊರೆತ ವಸ್ತುಗಳಲ್ಲಿ ಕೆ.ಜಿ. ಕುಂದಣಗಾರರ ಅಗೆತದಲ್ಲಿ ಕಂಡುಬಂದ 37 ತಾಮ್ರ ಕಂಚಿನ ವಸ್ತುಗಳು ಇತಿಹಾಸ ಕಾರರ ಗಮನವನ್ನು ವಿಶೇಷವಾಗಿ ಸೆಳದಿವೆ. ಈ ವಸ್ತುಗಳನ್ನು ಎರಡು ತಾಮ್ರದ ಕಡಾಯಿಗಳಲ್ಲಿ ತುಂಬಿ ಸಾತವಾಹನರ ಕಾಲದ ಮನೆಯೊಂದರಲ್ಲಿ ಹುದುಗಿಡಲಾಗಿತ್ತು. ಈ ವಸ್ತುಗಳಲ್ಲಿ, ಗ್ರೀಕ್ ದೇವತೆ ಪೋಸೀಡಾನಿನ ಒಂದು ಸುಂದರ ವಿಗ್ರಹ, ಪರ್ಷಿಯಸ್ ಮತ್ತು ಆಂಡ್ರೋಮಿಡಾ ಕಥೆಯನ್ನು ರೂಪಿಸುವ ಉಬ್ಬು ಶಿಲ್ಪವಿರುವ ಕಂಚಿನ ವರ್ತುಲ ಫಲಕ, ನಯವಾದ ಮೆರಗಿರುವ ವರ್ತುಲಾಕಾರದ ತಾಮ್ರದ ಕನ್ನಡಿಗಳು ಹಾಗೂ ಹಲವು ಮದ್ಯಪಾತ್ರೆಗಳೂ ಇವೆ. ಇವೆಲ್ಲ ಕ್ರಿ.ಶ. ಎರಡನೆಯ ಶತಮಾನದಲ್ಲಿ ಈಜಿಪ್ಟಿನ ಅಲೆಕ್ಸಾಂಡ್ರಿಯಾದಲ್ಲಿ ತಯಾರಾದವುಗಳೆಂದು ಗುರುತಿಸಲಾಗಿದೆ. ಇವಲ್ಲದೆ ಕಾಲದ ಅಪರೂಪ ಕಂಚಿನ ಶಿಲ್ಪಗಳು ಎನ್ನಬಹುದಾದ ಕಾಲ್ಪನಿಕ ಪ್ರಾಣಿಗಳ ಚಿಕ್ಕಬೊಂಬೆಗಳು, ನಾಲ್ಕು ಸವಾರರಿರುವ ಒಂದು ಆನೆ, ಎರಡು ಆಟದ ಗಾಡಿಗಳು, ಪ್ರಾಣಿಗಳ ಚಿತ್ರಗಳನ್ನು ಕೊರೆದಿರುವ ಪಾತ್ರೆಗಳು, ಕೆಲವು ದಿನ ಬಳಕೆಯ ಹಾಗೂ ಪೂಜಾ ಉಪಕರಣಗಳು ದೊರಕಿವೆ.

ಬ್ರಹ್ಮಪುರಿಯಲ್ಲಿ ಬಹುಸಂಖ್ಯೆಯಲ್ಲಿ ದೊರಕಿರುವ ರೋಮನ್ ಮೂಲದ ವಸ್ತುಗಳ ಮತ್ತು ಸ್ಥಳೀಯ ರಾಜರ ನಾಣ್ಯಗಳ ಆಧಾರದಿಂದ, ದಕ್ಷಿಣಭಾರತದ ಒಳನಾಡಿನ ಮುಖ್ಯ ವ್ಯಾಪಾರಸ್ಥಳಗಳಲ್ಲಿ ಒಂದು ಎಂದು ಟಾಲೆಮಿ ಹೆಸರಿಸುವ ಹಿಪ್ಪೋಕೂರಾ ಈ ಸ್ಥಳವೇ ಎಂದೂ ಈ ಊರು ಕುರ ರಾಜವಂಶದವರ ರಾಜಧಾನಿಯಾಗಿತ್ತು ಎಂದೂ ಊಹಿಸಲಾಗಿದೆ. (ಎಸ್.ಎನ್.; ಎ.ಎಂ.ಎ.)