ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಶಿವ

ವಿಕಿಸೋರ್ಸ್ದಿಂದ

"ಬ್ರಹ್ಮಶಿವ":- ಸುಮಾರು 1190 ಜೈನಕವಿ. ಸಮಯಪರೀಕ್ಷೆ ಎಂಬ ಕಾವ್ಯದ ಕರ್ತೃ. ಈತನಿಗೆ ಬ್ರಹ್ಮ, ಬ್ರಹ್ಮದೇವ ಎಂಬ ಹೆಸರುಗಳೂ ಇದ್ದಂತೆ ತೋರುತ್ತದೆ." ಪೊಟ್ಟಣಗೆರೆ" ಕವಿಯ ಜನ್ಮಸ್ಥಳ. ಇದು ಈಗಿನ ಹೈದರಾಬಾದ್ ಹತ್ತಿರವಿರುವ ಪಟ್ಟಣಚೆರುವು ಆಗಿರಬೇಕೆಂದು ಊಹಿಸಲಾಗಿದೆ. ಈತನ ತಂದೆ ಸಿಂಗರಾಜ, ಗುರು "ವೀರಣಂದಿ". ಕವಿ ತಾನು ಅಗ್ಗಳದೇವನ ಕೆಳೆಯಂ ಎಂದು ಹೇಳಿಕೊಂಡಿರುವುದರಿಂದ ಅಗ್ಗಳ ಎಂಬವನು ಕವಿಯ ಪ್ರಿಯಸ್ನೇಹಿತನಾಗಿದ್ದು ಈತ ಚಂದ್ರಪ್ರಭಪುರಾಣ ಬರೆದ ಅಗ್ಗಳನೇ (ಸುಮಾರು 1189) ಇರಬಹುದೆಂದು ಊಹೆ. ಕವಿ ತನ್ನನ್ನು ಸುಕವಿ ಪಂಪರಾಜನ ಮೊಮ್ಮಗ ಎಂದು ಕರೆದು ಕೊಂಡಿದ್ದಾನೆ. ಈ ಪಂಪರಾಜ ರಾಮಚಂದ್ರ ಚರಿತ ಪುರಾಣ ಬರೆದ ನಾಗಚಂದ್ರನಿರಬೇಕೆಂದು ಅಭಿಪ್ರಾಯ ಪಡಲಾಗಿದೆ. ಕವಿ ಮೊದಲು ಶೈವಧರ್ಮಾವಲಂಬಿಯಾಗಿದ್ದು ಅನಂತರ ಜೈನನಾದಂತೆ ಕಂಡುಬರುತ್ತದೆ. ಪೂರ್ವ ಕವಿಗಳಲ್ಲಿ ಪಂಪರನ್ನ, ಅಸಗ, ನಾಗಚಂದ್ರ ಮೊದಲಾದವರನ್ನು ಸ್ಮರಿಸಿದ್ದಾನೆ. ಚಾಳುಕ್ಯ ತ್ರೈಲೋಕ್ಯ ಮಲ್ಲನ ಮಗ ಕೀರ್ತಿವರ್ಮನನ್ನು (ಸುಮಾರು 1100-ಗೋವೈದ್ಯದ ಕರ್ತೃ) ಸ್ತುತಿಸಿರುವುದರಿಂದ ಕವಿ ಈತನ ಸಮಕಾಲೀನನಾಗಿರಬೇಕೆಂಬ ಅಭಿಪ್ರಾಯವೂ ಇದೆ. ತ್ರೈ ಲೋಕ್ಯಚೂಡಾಮಣೀ-ಎಂದು ಹೇಳಿಕೊಂಡಿರುವುದರಿಂದ ಈತ ರಾಜಮರ್ಯಾದೆಯನ್ನೂ ಕವಿಚಕ್ರವರ್ತಿಯೆಂಬ ಬಿರುದನ್ನೂ ಪಡೆದಿದ್ದಂತೆ ತಿಳಿಯುತ್ತದೆ. ಕವಿ ತಾನು ಅಖಿಲ ವೇದಸ್ಮøತಿ ಪುರಾಣಗಳಲ್ಲಿ ಬಲ್ಲಿದನೆಂದು ಹೇಳಿಕೊಂಡಿದ್ದಾನೆ. ತ್ರೈಲೋಕ್ಯಚೂಡಾಮಣಿ ಸ್ತೋತ್ರ ಈತನ ಇನ್ನೊಂದು ಕೃತಿ.

ಸಮಯಪರೀಕ್ಷೆ ಕಂದವೃತ್ತಗಳಲ್ಲಿ ರಚಿತವಾಗಿದೆ. ಇದರಲ್ಲಿ 16 ಅಧಿಕಾರಗಳಿವೆ. ಇದು ಸಮಕಾಲೀನ ಜನಜೀವನನನ್ನು ಚಿತ್ರಿಸುವ ವಿಡಂಬನಕಾವ್ಯ. ಜೈನಧರ್ಮ ಪ್ರಚಾರ ಕವಿಯ ಮುಖ್ಯ ಉದ್ದೇಶ. ಕಥೆಗಾಗಲಿ, ಪಾತ್ರಚಿತ್ರಣಕ್ಕಾಗಲಿ, ವರ್ಣನೆಗಳಿಗಾಗಲಿ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಸ್ವಮತಮಂಡನೆ ಪರಮತ ವಿಡಂಬನೆ ಕಾವ್ಯದುದ್ದಕ್ಕೂ ಎದ್ದುಕಾಣುತ್ತದೆ. ಈತನಿಗೆ ಜೈನೇತರ ಧರ್ಮಗಳ ಪರಿಚಯ. ಅವುಗಳ ಆಳವಾದ ಜ್ಞಾನ ಸಾಕಷ್ಟು ಇದ್ದುದರಿಂದ ಆ ಎಲ್ಲ ಧರ್ಮಗಳ ಹುಳುಕನ್ನು ಎತ್ತಿತೋರಿಸಿ, ವಿಡಂಬಿಸಿ, ಗೇಲಿಮಾಡಿ ಜೈನಧರ್ಮವೊಂದೇ ನಿಜವಾದ ಧರ್ಮ, ಇಂಥ ಧರ್ಮವನ್ನು ಎಲ್ಲರೂ ಆಶ್ರಯಿಸಿ ಎಂದು ಹೇಳಿದ್ದಾನೆ. ಶೈವ, ವೈದಿಕ, ಸೌರ, ಕೌಳ ಮೊದಲಾದ ಧರ್ಮಗಳ ತತ್ತ್ವಗಳನ್ನು ಸಾಕಷ್ಟು ಉಗ್ರವಾಗಿ ವಿರೋಧಿಸಿದ್ದಾನೆ. ಇದರಿಂದ ಅಂದಿನ ಕಾಲದ ಜನಜೀವನವನ್ನು ಸ್ವಲ್ಪಮಟ್ಟಿಗಾದರೂ ಅರಿತುಕೊಳ್ಳಲು ಸಾಧ್ಯವಾಗಿದೆ. ಜೈನಧರ್ಮ ಕ್ಷೀಣಿಸುತ್ತಿದ್ದ ಅವಧಿಯಲ್ಲಿ ಮತಾಂತರಹೊಂದಿದ ಬ್ರಹ್ಮಶಿವ ಆವೇಶಭರಿತನಾಗಿದ್ದುದರ ಜೊತೆಗೆ ತನ್ನ ಸುತ್ತಮುತ್ತಣ ಸಮಾಜದ ವ್ಯವಸ್ಥೆಯನ್ನು ಕಂಡು ಸಿಡಿದೆದ್ದಿದ್ದಾನೆ. ಇವನ ವಿಡಂಬನ ಶೈಲಿ ಅಪೂರ್ವವಾದದ್ದು. ಸೃಷ್ಟಿಸ್ಥಿತಿ ಲಯಗಳನ್ನು ಕುರಿತು-ಓವ್ರ್ವಂ ಜಗವ, ಮಾಡುವನೋವ್ರ್ವಂ ಮತ್ತದನೆ ಕಾವನಲ್ಲವನೇಂ ಮತ್ತೋವ್ರ್ವಂಕಿಡಿಸುವನನಿಬರುಮೋರ್ವನೆ ಗಡ ಕಡೆಯೊಳಿನ್ನುಮಘಟಿತ ಮೊಳವೇ ಎಂದು ಹಾಸ್ಯ ಮಾಡುತ್ತಾನೆ. ಬ್ರಹ್ಮ ತನ್ನ ಒಂದು ತಲೆಯನ್ನು ಕಳೆದುಕೊಂಡದ್ದನ್ನು ಕುರಿತು-ಜಗಮಂ ಮಾಳ್ಟಂಗಡಪದ್ಮಗರ್ಭನಂತನಿತುಶಕ್ತಿಯುಳ್ಳಂತಾನೇಕೆ ಗಡಂನಿಜಶಿರ ಮುಕ್ತಿಗೆಯೆತಿತ್ತದಮೃಡನನಿನಿಸುಮಾಣಿಸಲಾರಂ-ಎನ್ನುತ್ತಾನೆ. ಕವಿಗೆ ಪರಮತ ಸಹಿಷ್ಟುತೆ ಇಲ್ಲ. ಆದರೂ ಇವನ ವಿಡಂಬನವಾದ ಹಿತವಾಗಿ ತೋರುತ್ತದೆ. ತರ್ಕ ಮನರಂಜಕವಾಗಿರುತ್ತದೆ. ಅರ್ಧನಾರೀಶ್ವರ ಕಲ್ಪನೆಯನ್ನು ಕುರಿತು ತನ್ನ ಒಡಲಿನ ಅರ್ಧಭಾಗವನ್ನು ಶಂಭು ಕಾಂತೆಗೆ ಕೊಟ್ಟ, ಪಾರ್ವತಿ ತನ್ನೊಡಲಿನ ಅರ್ಧವನ್ನು ಶಂಭುವಿಗೆ ಕೊಟ್ಟಳು. ಮಿಕ್ಕ ಎರಡು ಅರ್ಧ ದೇಹಗಳನ್ನು ಅವರು ಯಾರಿಗೆ ಕೊಟ್ಟರು- ಎನ್ನುವುದು ಇವನ್ನು ವಿಡಂಬನೆ ಮಾಡುವ. ರೀತಿ ಕವಿಗೆ ತರ್ಕಜ್ಞಾನ ಎರಡೂ ಇದೆ. ಕಾವ್ಯಶೈಲಿ ಸರಳವಾಗಿದೆ. ಬಂಧ ಲಲಿತವಾಗಿದೆ. ಕವಿ ಅಲ್ಲಲ್ಲಿ ಬಳಸಿರುವ ನಾಣ್ಣುಡಿಗಳಿಂದ ಶೈಲಿಗೆ ಮೆರಗು ಬಂದಿದೆ. ಸಮಯ ಪರೀಕ್ಷೆ ಸಮಕಾಲೀನ ಜೀವನವನ್ನು ಚಿತ್ರಿಸುತ್ತಿರುವ ಕೃತಿಯಾದರೂ ಇದರಲ್ಲಿ ವೀರಶೈವಧರ್ಮಕ್ಕೆ ಸಂಬಂಧಪಟ್ಟ ಪಟ್ಸ್ಥಲ ಸಿದ್ದಾಂತ, ಅಷ್ಟಾವರಣ ಮೊದಲಾದುವುಗಳ ಉಲ್ಲೇಖ ಇಲ್ಲಿ ಕಂಡುಬರುವುದಿಲ್ಲ. ವೀರಶೈವಧರ್ಮವನ್ನು ಪುನರುಜ್ಜೀವಿಸಿದ ಬಸವಣ್ಣನವರ ಬಗ್ಗೆಯಾಗಲೀ ಅವರ ಸಮಕಾಲೀನ ಶಿವಶರಣರ ಬಗ್ಗೆಯಾಗಲೀ ಯಾವುದೇ ಸಂಗತಿ ಈ ಕಾವ್ಯವೆನ್ನುವ ದೃಷ್ಟಿಯಿಂದ ಈ ಕೃತಿಗೆ ಮನ್ನಣೆ ದೊರಕಿದೆ. ಕವಿ ತಾನು ಮಹಾಕವಿ ಎಂದು ಹೇಳಿಕೊಂಡಿದ್ದರೂ ಮಹಾಕವಿಯಲ್ಲಿರಬೇಕಾದ ಪ್ರತಿಭೆ ಇವನಲ್ಲಿ ಕಂಡುಬರುವುದಿಲ್ಲ ಸಮಯಪರೀಕ್ಷೆ ಒಂದು ಮಧ್ಯಮ ದರ್ಜೆಯ ಕಾವ್ಯ ಎನ್ನಬಹುದು.

ತ್ರೈಲೋಕ್ಯಚೂಡಾಮಣಿ ಸ್ತೋತ್ರದಲ್ಲಿ ಮೂವತ್ತಾರು ವೃತ್ತಗಳಿವೆ. ಇದಕ್ಕೆ ಛತ್ತೀಸರತ್ನಮಾಲೆ ಎಂಬ ಹೆಸರೂ ಇದೆ. ಪ್ರತಿ ಪದ್ಯವೂ ತ್ರೈಲೋಕ್ಯ ಚೂಡಾಮಣಿ ಎಂದು ಮುಗಿಯುತ್ತದೆ. ಹರಿ ಹರ ಇಂದ್ರ ಸೂರ್ಯ ಗಣಪತಿ ನದಿ ಮರ ಸಮುದ್ರ ಮೊದಲಾದವನ್ನು ದೇವರೆಂದು ತಿಳಿಯುವಲ್ಲಿ ಅರ್ಥವಿಲ್ಲ. ಜಿನಮಾರ್ಗದಲ್ಲಿ ನಡೆದು ಜಿನಪತಿಯನ್ನು ಪೂಜಿಸಿ ಜನ್ಮಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸುವುದೇ ಈ ಕೃತಿಯ ಉದ್ದೇಶ. (ಬಿ.ಎಸ್.ಕೆಯು.; ಎಚ್.ಪಿ.ಎನ್.)