ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಸಮಾಜ

ವಿಕಿಸೋರ್ಸ್ದಿಂದ

ಬ್ರಹ್ಮಸಮಾಜ ಒಂದು ಧಾರ್ಮಿಕ ಪಂಥ. ಪಾಶ್ಚಾತ್ಯ ಶಿಕ್ಷಣ ಕ್ರೈಸ್ತ ಮಿಶನರಿಗಳ ಪ್ರಚಾರ ಇವುಗಳಿಂದಾಗಿ ಹಿಂದೂ ಧರ್ಮ ಮತ್ತು ಅದರ ನಂಬಿಕೆಗಳ ಬಗ್ಗೆ ಅನೇಕ ಸುಶಿಕ್ಷಿತ ತರುಣರಲ್ಲಿ ತಿರಸ್ಕಾರ ಮೂಡುತ್ತಿದ್ದ ಸಂದಿಗ್ಧಕಾಲದಲ್ಲಿ ಹಿಂದೂ ಧರ್ಮಗ್ರಂಥಗಳಾದ ವೇದ, ಉಪನಿಷತ್ತುಗಳನ್ನು ಅಧ್ಯಯನಮಾಡಿ, ಅವುಗಳಲ್ಲಿ ಹೇಳಿರುವ ವಿಚಾರ ಹಾಗೂ ವಾಸ್ತಾವಿಕ ಆಚರಣೆಗಳಲ್ಲಿ ಇರುವ ವಿಸಂಗತಿಗಳನ್ನು ಗಮನಿಸಿ, ಅವುಗಳ ನಿವಾರಣೆಗಾಗಿ ರಾಜಾರಾಮಮೋಹನರಾಯ್ (1772-1833) ಈ ಪಂಥವನ್ನು 1828 ಆಗಸ್ಟ್ 20ರಂದು ಕಲ್ಕತ್ತದಲ್ಲಿ ಸ್ಥಾಪಿಸಿದರು. ವೇದೋಪನಿಷತ್ತುಗಳ ಕೇಳಿಕೆಗಳನ್ನು ಒಪ್ಪಿಕೊಂಡು, ವೇದಪ್ರಮಾಣವನ್ನು ಸ್ವೀಕರಿಸಿದ, ಈ ಬ್ರಹ್ಮಸಮಾಜ ಅನೇಕ ದೇವರುಗಳ ಮೂರ್ತಿಪೂಜೆ ಹಾಗೂ ಸಾಂಪ್ರದಾಯಿಕ ಕರ್ಮಕಾಂಡಗಳನ್ನು ತಿರಸ್ಕರಿಸಿ ಏಕೇಶ್ವರ ಬ್ರಹ್ಮನನ್ನು ಆರಾಧಿಸುವ ಹಾಗೂ ಸಮಾಜ ಸುಧಾರಣಾವಾದಿ ಮತ್ತು ಬುದ್ಧಿವಾದಿ ಪಂಥ ಎನಿಸಿತು. ಸ್ತ್ರೀಯರು ಪುರುಷರಿಗೆ ಸಮಾನ ಎಲ್ಲ ಧಾರ್ಮಿಕ, ಸಾಮಾಜಿಕ ನಂಬಿಕೆಗಳಿಗೆ ತರ್ಕಬದ್ಧತೆ ಆಧಾರವಾಗಿರಬೇಕು ಎಂಬುದು ಈ ಸಮಾಹದ ಪ್ರತಿಪಾದನೆ. ಬಾಲ್ಯವಿವಾಹ, ಕನ್ಯಾವಿಕ್ರಯ (ತೆರೆ) ಮತ್ತು ಸತೀಪದ್ಧತಿಗಳನ್ನು ಇದು ಖಂಡಿಸುತ್ತದೆ. ಹಾಗೆಯೇ ಸ್ತ್ರೀಶಿಕ್ಷಣ, ವಿಧವಾ ವಿವಾಹ ಹಾಗೂ ಸ್ತ್ರೀಯರು ಆಸ್ತಿ ಹಕ್ಕನ್ನು ಪುರುಸ್ಕರಿಸುತ್ತದೆ. ನಿರ್ಗುಣ, ನಿರಾಕಾರ ಏಕಮೇವ ಈಶ್ವರನಲ್ಲಿ (ದೇವ) ನಂಬಿಕೆ. ಈಶ್ವರ ಪೂಜೆ ಎಂದರೆ ಈಶ್ವರನ (ಬ್ರಹ್ಮ) ಗುಣಗಳ ಬಗ್ಗೆ ಚಿಂತನೆ, ಅವನ ಪೂಜೆಯನ್ನು ಎಲ್ಲಿ ಬೇಕಾದರೂ ಮನಸ್ಸು ಶಾಂತವಾಗಿರುವಾಗ ಮಾಡಬಹುದು ಇತ್ಯಾದಿ ಈ ಸಮಾಜ ಒಪ್ಪಿರುವ ಆದರ್ಶಗಳು.

ಸಮಾಜವನ್ನು ಸ್ಥಾಪಿಸಿದಾಗ ರಾಮಚಂದ್ರ ವಿದ್ಯಾವಾಗೀಶ್, ಉತ್ಸವಾನಂದ, ವಿದ್ಯಾವಾಗೀಶ, ತಾರಾಚಂದ್ರ ಚಕ್ರವರ್ತಿ-ಇವರೆಲ್ಲ ರಾಮಮೋಹನರ ಜೊತೆಗಾರರಾಗಿದ್ದರು. ಪ್ರತಿ ಶನಿವಾರ ಸಂಜೆ ಸಮಾಜದ ಸಭೆ ನಡೆಯುತ್ತಿತ್ತು. ಆ ವೇಳೆ ತೆರೆಯ ಮರೆಯಲ್ಲಿ ಇಬ್ಬರು ಬ್ರಾಹ್ಮಣರು ಕುಳಿತು ವೇದಪಠಣ ಮಾಡುತ್ತಿದ್ದರು. ಅನಂತರ ಸಭೆಯಲ್ಲಿ ಉಪನಿಷತ್ತಿನ ವಾಚನ, ರಾಮಮೋಹನರಿಂದ ಪ್ರವಚನ, ಕೊನೆಗೆ ಪ್ರಾರ್ಥನೆ, ರಾಮಮೋಹನರ ಈ ಸಭೆಯ ನಂಬಿಕೆಗಳ ಬಗ್ಗೆ ಸಂಪ್ರದಾಯವಾದಿಗಳು ಅಸಮಾಧಾನಗೊಂಡು ಧರ್ಮಸಭಾ ಎಂಬ ಸಂಸ್ಥೆ ಸ್ಥಾಪಿಸಿದತು. ಉಭಯ ಪಕ್ಷಗಳ ಟೀಕೆ ಪ್ರತಿಟೀಕೆಗಳ ಪ್ರಕಟಣೆಗಳು ಹೊರಬಂದುವು. ಇದರಿಂದ ಬ್ರಹ್ಮಸಮಾಜದ ಬಗ್ಗೆ ಇಡೀ ಬಂಗಾಳದಲ್ಲಿ ಹೆಚ್ಚು ತಿಳಿವಳಿಕೆ ಮೂಡಿತು. 1830 ರಲ್ಲಿ ಬ್ರಹ್ಮಸಮಾಜದ ಭವನವೊಂದನ್ನು ರಾಮಮೋಹನರು ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಇಲ್ಲಿ ಯಾವುದೇ ಮೂರ್ತಿ, ಪ್ರತೀಕ ಅಥವಾ ಚಿತ್ರವನ್ನು ಇಡಲಾಗುವುದಿಲ್ಲ. ಪ್ರಾಣಿ ಬಲಿ, ಊಟೋಪಚಾರಾದಿಗಳು ನಡೆಯುವುದಿಲ್ಲ. ನೀತಿ, ಭೂತದಯೆ, ಪಾವಿತ್ರ್ಯ, ಪರೋಪಕಾರ ಇತ್ಯಾದಿಗಳಿಗೆ ಸಂಬಂಧಿಸಿದ ವಿಚಾರಗಳ ಪ್ರಚಾರ ಹಾಗೂ ವಿಕಾಸಕ್ಕೆ ಬೇಕಾದ ಉಪದೇಶಗಳು, ಚರ್ಚೆಗಳು ಇಲ್ಲಿ ನಡೆಯುತ್ತವೆಂದು ಆ ಭವನದಬಗ್ಗೆ ರಾಮಮೋಹನರು ವಿವರಣೆ ನೀಡಿದರು. ಸಮಾಜದ ಸಂಬಾದ ಕೌಮುದಿ ಹಾಗೂ ಧರ್ಮಸಭಾದ ಸಮಾಚಾರ ಚಂದ್ರಿಕೆಗಳಲ್ಲಿ ನಡೆಯುತ್ತಿದ್ದ ಚರ್ಚೆಯ ಫಲವಾಗಿ ಹಿಂದೂ ಸಮಾಜದಲ್ಲಿ ಆಗ ಉಂಟಾದ ಜಾಗೃತಿ ಹಿಂದೆಂದೂ ಅಷ್ಟು ಆದದ್ದು ಕಾಣಿಸದು ಎಂಬುದು ಆರ್.ಸಿ.ಮಜುಂದಾರ್ ಅವರ ಅಭಿಪ್ರಾಯ.

ರಾಮಮೋಹನರು ತೀರಿಕೊಂಡಾಗ (1833) ಸಮಾಜದಲ್ಲಿ ಶೈಥಿಲ್ಯ ಕಾಣಿಸಿದರೂ ದ್ವಾರಕನಾಥ ಠಾಕೂರ ಮತ್ತು ರಾಮಚಂದ್ರ ವಿದ್ಯಾವಾಗೀಶರು ಅದರ ಚಟುವಟಿಕೆಗಳನ್ನು ಮುಂದುವರಿಸಿದರು. ಆದರೆ, ಸಮಾಜಕ್ಕೆ ಯಾವುದೇ ಒಂದು ಸಂವಿಧಾನವಿರಲಿಲ್ಲ. ಬ್ರಹ್ಮ ಸಮಾಜದ ಚಟುವಟಿಕೆಗಳಲ್ಲಿ ಪಾಲುಗೊಳ್ಳುವ ಜನ ಮನೆಯಲ್ಲಿ ಮೂರ್ತಿ ಪೂಜೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದರು. ದ್ವಾರಕಾನಾಥ ಠಾಕೂರರು ಇವರ ಮಗ ದೇವೇಂದ್ರನಾಥರು (ಕವಿ ರವೀಂದ್ರರ ತಂದೆ) ಈ ಸಮಾಜಕ್ಕೆ ತತ್ವಬೋಧಿನಿ ಸಭಾ ಎಂಬ ಪ್ರಚಾರಣಾಂಗವನ್ನು ಜೋಡಿಸಿದರು. ಇದರ ಪ್ರಭಾವದಿಂದ ಅನೇಕ ಶ್ರೀಮಂತರೂ ಪ್ರತಿಷ್ಟಿತರೂ ಅದರಲ್ಲಿ ಸಮಾವೇಶಗೊಂಡು ಸಂಸ್ಥೆಯ ಸದಸ್ಯ ಬಲ 500ಕ್ಕೆ ಏರಿತು. ಸಮಾಜದಲ್ಲಿ ಪ್ರವೇಶ ಬಯಸುವ ಸದಸ್ಯ ಪ್ರತಿಜ್ಞೆಯೊಂದಕ್ಕೆ ಅಂಕಿತ ಹಾಕಬೇಕು ಎಂದು ದೇವೇಂದ್ರನಾಥರು ರೂಢಿಮಾಡಿದರು. ನಾನು ನಿತ್ಯಭೋಜನ ಪೂರ್ವದಲ್ಲಿ ಗಾಯತ್ರಿ ಮಂತ್ರ ಪಠಿಸಿ ದೇವರ ಉಪಾಸನೆ ಮಾಡುತ್ತೇನೆ. ಮೂರ್ತಿ ಪೂಜೆ ಮಾಡುವುದಿಲ್ಲ. ಸಮಾಜಕ್ಕೆ ನೀಡುವ ವಂತಿಗೆ ತಪ್ಪದೆಕೊಡುತ್ತೇನೆ ಮತ್ತು ರಾಜಾರಾಮ ಮೋಹನರಾಯ್ ಅವರು ಉಪದೇಶಿಸಿದ ವೇದಾಂತ ತತ್ತ್ವಗಳಿಗೆ ಅನುಸಾರವಾಗಿ ಧರ್ಮಾಚರಣೆ ಮಾಡುತ್ತೇನೆ ಎಂಬುದು ಈ ಪ್ರತಿಜ್ಞೆಯ ಪಾಠದ ಸಾರಾಂಶ. ಗಾಯತ್ರಿ ಉಚ್ಚಾರಣೆ ಅನೇಕರಿಗೆ ಕಷ್ಟವೆನಿಸಿದಾಗ ಉಪನಿಷತ್ತಿನಿಂದ ಒಂದು ಪ್ರಾರ್ಥನಾ ಮಂತ್ರವನ್ನು ದೇವೇಂದ್ರನಾಥರು ಆಯ್ಕೆ ಮಾಡಿದರು. ಸಮಾಜದ ಅನುಯಾಯಿಗಳ ಆಚಾರ, ವಿಚಾರಗಳು ಸಮಾಜದ ತತ್ತ್ವಗಳಿಗೆ ಅನುಗುಣವಾಗಿರಬೇಕೆಂಬ ಕಾರಣದಿಂದ ಜಾತ ಕರ್ಮ, ನಾಮಕರಣ, ಉಪನಯನ, ವಿವಾಹ, ಅಂತ್ಯೇಷ್ಟಿ ಮತ್ತು ಶ್ರಾದ್ಧ ಇವುಗಳಿಗೆ ಸಂಬಂಧಿಸಿದ ವಿಧಿಗಳನ್ನು ದೇವೇಂದ್ರನಾಥರು ರೂಪಿಸಿದರು.

1850ರ ಅನಂತರ ಬುದ್ಧಿಶಾಲಿ ತರುಣರು ಬ್ರಹ್ಮಸಮಾಜಕ್ಕೆ ಸೇರಿದರು. ಅಂಥವರಲ್ಲಿ ಕೇಶವಚಂದ್ರ ಸೇನ್ ಒಬ್ಬರು. 1851ರಲ್ಲಿ ಸಮಾಜ ಸೇರಿ 1861ರಿಂದ ಸಮಾಜದ ಪ್ರಚಾರಕಾರ್ಯದ ಜವಾಬ್ದಾರಿ ವಹಿಸಿಕೊಂಡರು. ಅನಂತರ ಸಮಾಜದ ಪ್ರಮುಖ ಆಚಾರ್ಯರಾದರು (1862). ಅವರು ಸಮಾಜ ಸುಧಾರಣಿಗಳ ಬಗ್ಗೆ ತೀರ ಗಮನವಿತ್ತರಲ್ಲದೆ ಹೆಚ್ಚು ಪ್ರಚಾರ ನಡೆಸಿ ಸಮಾಜದ ವ್ಯಾಪ್ತಿಯನ್ನು ಹೆಚ್ಚಿಸಿದರೂ ಕೂಡ ಮಹಿಳೆಯರಿಗಾಗಿಯೇ ಭಾಮಾಬೋಧಿನೀ (1863) ಎಂಬ ಪತ್ರಿಕೆ ಪ್ರಕಟಿಸಿದರು. ಮದ್ರಾಸಿನಲ್ಲಿ ವೇದ ಸಮಾಜವೆಂಬ ಹೆಸರಿನಲ್ಲಿ ಸಮಾಜದ ಶಾಖೆ ಪ್ರಾರಂಭಿಸಿದರು (1864). ಅದೇ ರೀತಿ ಮುಂಬೈಯಲ್ಲೂ ಪ್ರಾರ್ಥನಾ ಸಮಾಜ ಎಂಬ ಹೆಸರಿನಿಂದ ಅದರ ಶಾಖೆ 1867ರಲ್ಲಿ ಪ್ರಾರಂಭವಾಯಿತು. ನ್ಯಾಯಮೂರ್ತಿ ರಾನಡೆ, ಭಂಡಾರ್ಕರ್, ಕರ್ವೆಯವರಂಥ ಗಣ್ಯರು ಇದರಲ್ಲಿದ್ದರು. 1866ರಲ್ಲಿ ಸಮಾಜದ 54 ಶಾಖೆಗಳಿದ್ದು ಆ ಪೈಕಿ ಎರಡು ಉತ್ತರ ಪ್ರದೇಶ ಹಾಗೂ ಒಂದು ಪಂಜಾಬಿನಲ್ಲೂ ಇದ್ದುವು. ಸೇನ್ ಅವರ ಪ್ರಯತ್ನದಿಂದ ಮಹಿಳಾ ವಿವಾಹ ಕಾನೂನು 1872ರಲ್ಲಿ ಜಾರಿಗೆ ಬಂತು. ಇದರಿಂದ ಬಾಲಿಕೆಯರ ವಿವಾಹದ ಕನಿಷ್ಠ ವಯೋಮಿತಿ 14ಕ್ಕೆ ನಿಗದಿಪಡಿಸಲಾಯಿತು. ಸೇನ್ ಅವರ ತೀವ್ರತರ ವಿಚಾರಗಳ ಬಗ್ಗೆ ಸಹಮತರಾಗಿದ್ದ ಹಲವರು ಅವರ ಕೆಲವೊಂದು ವಿಚಾರಗಳನ್ನು ವಿರೋಧಿಸಲು 1866ರಲ್ಲಿ ಸೇನ್ ಅವರ ಅನುಯಾಯಿಗಳು ಭಾರತವರ್ಷೀಯ ಬ್ರಹ್ಮ ಸಮಾಜ ಎಂಬ ಪ್ರತ್ಯೇಕ ಸಂಸ್ಥೆ ಮಾಡಿಕೊಂಡರು. ಹಿಂದಿನ ಸಂಸ್ಥೆ ಆದಿ ಬ್ರಹ್ಮಸಮಾಜ ಎಂಬ ಹೆಸರಿನಿಂದ ಮುಂದುವರಿಯಿತು. ರಾಜ ನಾರಾಯಣ ಬೋಸ್ ಇದರ ಅಧ್ಯಕ್ಷರಾದರು.

ಬ್ರಹ್ಮಸಮಾಜ ಹಿಂದೂ ಧರ್ಮದ ಒಂದು ಅಂಗವೆಂದೂ ಜನ ತಮ್ಮ ತಮ್ಮ ಜಾತಿಗಳನ್ನು ತೊರೆಯಬೇಕಾಗಿಲ್ಲವೆಂದೂ ಆದಿ ಬ್ರಹ್ಮಸಮಾಜ ತಳೆದ ನಿಲವು. ಸೇನ್ ಅವರ ಬ್ರಹ್ಮ ಸಮಾಜ ಹಿಂದುಗಳಲ್ಲದವರಿಗೂ ಸೇರಿದ್ದೆಂದು ಘೋಷಿಸಿ ಮೂರ್ತಿಪೂಜೆ ಮತ್ತು ಜಾತೀಯತೆಯ ನಿರ್ಮೂಲನೆಯನ್ನು ಪ್ರತಿಪಾದಿಸಿತು. ಪಾಶ್ಚತ್ಯ ಸಂಸ್ಕøತಿಯ ಅಭಿಮಾನ ಅವರಿಗೆ ಅಧಿಕವಾಗಿತ್ತು. ಆದರೆ, ಈಶ್ವರಚಂದ್ರ ಸೇನ್ ತಮ್ಮ ಮಗಳನ್ನು 14 ವರ್ಷ ತುಂಬುವ ಮೊದಲೇ ಹಾಗೂ ಸಮಾಜದ ವಿಧಿಗಳಿಗೆ ವ್ಯತಿರಿಕ್ತವಾಗಿ ಸಾಂಪ್ರದಾಯಿಕ ವೈದಿಕವಿಧಿಗಳ ಪ್ರಕಾರ ಕೂಚ್‍ಬಿಹಾರಿನ ರಾಜಪುತ್ರನಿಗೆ ಮದುವೆಮಾಡಿಕೊಟ್ಟು ಭಾರೀ ಗೊಂದಲಕ್ಕೆ ಕಾರಣರಾದರು. ಇದರಿಂದ ಅವರ ನಾಯಕತ್ವದ ಸಮಾಜದಲ್ಲಿ ಒಡಕುಂಟಾಗಿ ಪಂಡಿತ ಶಿವನಾಥಶಾಸ್ತ್ರಿ ನೇತೃತ್ವದಲ್ಲಿ ಸಾಧಾರಣ ಬ್ರಹ್ಮ ಸಮಾಜ ಎಂಬ ಹೊಸ ಗುಂಪೊಂದು ಹುಟ್ಟಿಕೊಂಡಿತು (1878). ಆನಂದ ಮೋಹನ ಬೋಸ್, ಶಿವಚಂದ್ರ ಸೇನ್, ಉಪೇಂದ್ರ ದತ್ತ ಇವರೆಲ್ಲ ಈ ಹೊಸ ಸಂಸ್ಥೆಯಲ್ಲಿ ಇದ್ದರು.

ಕರ್ನಾಟಕದ ಮಂಗಳೂರಲ್ಲಿ 1870ರಲ್ಲಿ ಬ್ರಹ್ಮಸಮಾಜದ ಶಾಖೆ ಆರಂಭವಾಯಿತು. ಖ್ಯಾತ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅದರಿಂದ ಪ್ರಭಾವಿತರಾಗಿದ್ದರು. ಬೆಂಗಳೂರಿನಲ್ಲಿ 1870ರ ದಶಕದಲ್ಲಿ ಸಮಾಜದ ಐದು ಶಾಖೆಗಳು ಸ್ಥಾಪಿತವಾದವು. ಸಮಾಜದ ಚಟುವಟಿಕೆಯಿಂದ ಪ್ರಭಾವಿತರಾದ ಆರ್ಕಾಟ್ ನಾರಾಯಣಸ್ವಾಮಿ ಮೊದಲಿಯಾರರು ತಾವು ಸ್ಥಾಪಿಸಿದ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಿಪಿನ್ ಚಂದ್ರ ಪಾಲರನ್ನು ಆಮಂತ್ರಿಸಿದ್ದರು (1880).

ಬ್ರಹ್ಮಸಮಾಜದ ಮೂರು ಸಂಸ್ಥೆಗಳೂ ಇಂದು ಅಸ್ತಿತ್ವದಲ್ಲಿವೆ. ಆರಂಭದ ದಶಕಗಳಂತೆ ಈಗ ಅವು ಬೆಳೆಯುತ್ತಿಲ್ಲ. ಆದರೆ ರಾಮಮೋಹನರು ಪ್ರತಿ ಪಾದಿಸಿದ ಸ್ತ್ರೀಸಮಾನತೆ, ಸ್ತ್ರೀಯರ ಆಸ್ತಿಹಕ್ಕು ನೀಡುವಿಕೆ, ಬಾಲ್ಯವಿವಾಹ ವಿರೋಧ ಮುಂತಾದ ಅನೇಕ ಸಾಮಾಜಿಕ ನಿರ್ಧಾರಗಳು ಗಾಂಧೀಜಿಯವರಂಥ ಗಣ್ಯರಿಂದ ಆರಂಭಿಸಿ ಇಡೀ ಭಾರತದ ವಿದ್ಯಾವಂತ ಸಮಾಜದಿಂದ ಸ್ವೀಕೃತವಾಗಿ ಸ್ವತಂತ್ರ ಭಾರತದ ಸಂವಿಧಾನ, ಹಿಂದೂ ಕಾನೂನು ಸಂಹಿತೆಗಳಲ್ಲಿ ಸಮಾವೇಶವಾದುದ್ದನ್ನು ಗಮನಿಸಬಹುದು. (ಎಸ್.ಎನ್.ಕೆ.ಎ.)