ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಹತ್ಯೆ

ವಿಕಿಸೋರ್ಸ್ದಿಂದ

ಬ್ರಹ್ಮಹತ್ಯೆ ಮಹಾಪಾತಕಗಳಲ್ಲಿ ಒಂದೆಂದೂ ಬ್ರಾಹ್ಮಣನನ್ನು ಕೊಂದರೆ ಬರುವುದೆಂದೂ ಹೇಳಲಾಗಿದೆ. ವೃತ್ರನನ್ನು ಇಂದ್ರ ಕೊಂದಾಗ ಬ್ರಹ್ಮಹತ್ಯೆ ಇವನನ್ನು ಅಡಗಿಸಿತು. ಅನಂತರ ಬ್ರಹ್ಮ ಈ ಪಾಪವನ್ನು ವಿಭಾಗಿಸಿ ಬೇರೆ ಬೇರೆ ಕಡೆಗಳಲ್ಲಿ ಇರಿಸಿದ. ವೈಶಂಪಾಯನ, ಯಾಜ್ಞವಲ್ಕ್ಯ ಜನಮೇಜಯ ಇವರಿಗೆ ಬ್ರಹ್ಮಹತ್ಯಾದೋಷ ಬಂದಿರುವುದು ಮಹಾಭಾರತ ಭಾಗವತಗಳಿಂದ ತಿಳಿದುಬರುತ್ತದೆ. ಇಂಥ ದೋಷಗಳಿಗೆ ಪ್ರಾಯಶ್ಚಿತ್ತಗಳನ್ನೂ ಹೇಳಲಾಗಿದೆ. ಮಾಡಿರುವ ಪಾಪಕೃತ್ಯಗಳಿಗನುಸಾರವಾಗಿ ಪರಿಹಾರ ಉಂಟು. ಆತ್ಮರಕ್ಷಣಿಗಾಗಿ ಹೋರಾಡಿ ಆ ವೇಳೆಯಲ್ಲಿ ಸತ್ತವ ಬ್ರಾಹ್ಮಣನಾಗಿ ಅದು ಬ್ರಹ್ಮಹತ್ಯೆಯೇ ಆದರೂ ಲಘುವಾದ ಪ್ರಾಯಶ್ಚಿತ ಮಾಡಬೇಕಾಗುವುದು. ಬುದ್ಧಿಪೂರ್ವಕವಾಗಿ ಕೊಲ್ಲಬೇಕೆಂದೇ ಕೊಂದರೆ ಗ್ರಾಮಗಳಿಂದ ದೂರವಿರುವ ಅರಣ್ಯ, ಶ್ಮಶಾನಗಳಲ್ಲಿ ವೃಕ್ಷಮೂಲದಲ್ಲಿ ವಾಸಮಾಡಿ ಕೊಂದವನ ತಲೆಬುರುಡೆಯನ್ನು (ಅಥವಾ ಇನ್ನಾವುದೋ ಒಂದನ್ನು) ಧ್ವಜದೋಪಾದಿಯಲ್ಲಿ ದಂಡಸಮೇತ ಧಾರಣಮಾಡಿ ಭಿಕ್ಷಾಟನೆ ಮಾಡಬೇಕು. ನಿಯಮಿತವಾಗಿ ಏಳು ಮನೆಗಳ ಭಿಕ್ಷೆ ಬೇಡುವಾಗ ಬ್ರಹ್ಮಹತ್ಯೆಮಾಡಿದವನಿಗೆ ಯಾರು ಭಿಕ್ಷೆ ಕೊಡುವಿರೆಂದು ಕೇಳಬೇಕು. ದೊರಕಿದ ಭಿಕ್ಷೆಯಲ್ಲೇ ಬದುಕಬೇಕು. ಕೆಲವು ಹತ್ಯೆಗಳಿಗೆ ಮರಣವೇ ಪರಿಹಾರ ಎನ್ನಲಾಗಿದೆ. ಸ್ತ್ರೀ ಗೋವುಗಳ ಹತ್ಯೆ ಬ್ರಹ್ಮಹತ್ಯೆಗೆ ಸಮಾನ ವೇದವನ್ನು ನಾಶಮಾಡಿದವರಿಗೂ ಈ ದೋಷ ಸಂಭವಿಸುತ್ತದೆ. (ಕೆ.ಎಂ.ಬಿ.)