ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಂಟೊಸಾರಸ್

ವಿಕಿಸೋರ್ಸ್ದಿಂದ

ಬ್ರಾಂಟೊಸಾರಸ್ ಮೇಲಿನ ಜುರಾಸಿಕ್ ಕಾಲದಲ್ಲಿ ಬದುಕಿದ್ದ ಸಸ್ಯಾಹಾರಿ ದೈತ್ಯೋರಗಗಳ ಪೈಕಿ ಒಂದು. ಇಗ್ವಾನೋಡಾನ್ ಸರೀಸೃಪದ ಸಮಕಾಲಿಕ. ಇದು ನಡೆಯುವಾಗ ಅತೀವ ಶಬ್ದ ಮಾಡುತ್ತಿದ್ದಿತಾದ್ದರಿಂದ ಇದನ್ನು ಗುಡುಗು ಸರೀಸೃಪ ಎಂದು ಕರೆವುದಿದೆ. ಉತ್ತರ ಅಮೆರಿಕದ ವ್ಯೋಮಿಂಗ್ ಮತ್ತು ಕಾಲರಾಡೊ ಪ್ರಾಂತ್ಯಗಳಲ್ಲಿ ಇದರ ಪಳೆಯುಳಿಕೆಗಳು ದೊರೆತಿವೆ. ಇದರ ಪಾದಗಳಲ್ಲಿ ತಲಾ 5 ಬೆರಳುಗಳಿದ್ದುವು. ಬ್ರಾಂಟೊಸಾರಸ್ ಸುಮಾರು 20 ಮೀ ಉದ್ದ ಬೆಳೆಯುತ್ತಿತ್ತು. ಉದ್ದವಾದ ತೆಳು ಕುತ್ತಿಗೆಯೂ ಅತ್ಯಲ್ಪ ಗಾತ್ರದ ಮೆದುಳುಳ್ಳ ಸಣ್ಣ ತಲೆಯೂ ಇದರ ಕೆಲವು ಲಕ್ಷಣಗಳ ಪೈಕಿ ಎರಡು. ಬ್ರಾಂಟೊಸಾರಸ್ ಪ್ರಾಯಶಃ ಜೌಗುಪ್ರದೇಶವಾಸಿಯಾಗಿದ್ದು ಆಳವಿಲ್ಲದ ನೀರಿನಲ್ಲಿ ತಲೆಯನ್ನು ಮಾತ್ರ ಹೊರಗಿಟ್ಟು ಜಲಸಸ್ಯಗಳನ್ನು ತಿಂದು ಜೀವಿಸುತ್ತಿತ್ತು.

ಇದರ ಇನ್ನೊಂದು ವೈಶಿಷ್ಟ್ಯ ಮಿದುಳುಬಳ್ಳಿ ಸೊಂಟದ ಭಾಗದಲ್ಲಿ ಕೊಂಚಮಟ್ಟಿಗೆ ಕೇಂದ್ರೀಕೃತವಾಗಿ ಎರಡನೆಯ ಮಿದುಳು ರೂಪುಗೊಂಡಿದ್ದುದು. ತಲೆಯಲ್ಲಿರುವ ಸಣ್ಣ ಮಿದುಳನ್ನು ಬಲಪಡಿಸುವುದಕ್ಕೆ ಈ ಏರ್ಪಾಟು ಇದ್ದಿರಬೇಕು. ಬೇರೆ ಜಾತಿಯ ಮಾಂಸಾಹಾರಿ ಸರೀಸೃಪಗಳಿಗೆ ಸುಲಭವಾಗಿ ಈಡಾಗುತ್ತಿತ್ತೆನ್ನಲಾಗಿದೆ. (ಎಂ.ಡಿ.ಪಿ.)