ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಂಡೆನ್ಬರ್ಗ್

ವಿಕಿಸೋರ್ಸ್ದಿಂದ

ಬ್ರಾಂಡೆನ್‍ಬರ್ಗ್ ಪೂರ್ವ ಜರ್ಮನಿಯ ಪಾಟ್ಸ್‍ಡ್ಯಾಮ್ ಜಿಲ್ಲೆಯ ಒಂದು ಕೈಗಾರಿಕಾ ನಗರ ಬರ್ಲಿನ್ ನಗರದ ನೈಋತ್ಯಕ್ಕೆ ಸುಮಾರು 61 ಕಿಮೀ ದೂರದಲ್ಲಿ ಹಾವೆಲ್ ನದಿಯ ದಡದಮೇಲಿದೆ. ಇದನ್ನು ಬ್ರಾಂಡೆನ್ ಬರ್ಗ್ ಅಂಡೆರ್ ಆಫಲ್ ಎಂದೂ ಕರೆಯುವರು. ಜನಸಂಖ್ಯೆ 93,660 (1970). ಈ ನಗರದ ಸುತ್ತ ಕೋಟೆಯಿದೆ. ಹಾವೆಲ್ ನದಿಯಿಂದ ನಗರ ಮೂರು ವಿಭಾಗಗಳಾಗಿವೆ. ನದಿಯ ಬಲಭಾಗದಲ್ಲಿ ಹಳೇ ನಗರ, ಎಡದಡದಲ್ಲಿ ಹೊಸ ನಗರ ಬೆಳೆದಿದ್ದು ಮಧ್ಯದ ದ್ವೀಪಭಾಗದಲ್ಲಿ ಕೆತೆಡ್ರಲ್ ಪಟ್ಟಣವಿದೆ. ಹಳೇ ಮತ್ತು ಹೊಸನಗರಗಳು 1717ರಲ್ಲಿ ಒಂದೇ ನಗರ ಸಭೆಯ ಆಡಳಿತಕ್ಕೆ ಒಳಪಟ್ಟವು. ಇಲ್ಲಿ ಉಕ್ಕು ಮತ್ತು ಕೈಮಗ್ಗದ ಬಟ್ಟೆ ತಯಾರಿಕೆಯುಂಟು. ಹಳೆಯ ಬ್ರಾಂಡೆನ್‍ಬರ್ಗ್ ನಗರ ಹಾವೆಲ್ ಸ್ಲಾವಿಕ್ ಬುಡಕಟ್ಟಿಗೆ ಸೇರಿದ ಗಿರಿಜನರ ಮೂಲನಿವಾಸ ಸ್ಥಾನ. ಜರ್ಮನ್ ದೊರೆ ಮೊದಲನೆಯ ಹೆನ್ರಿ ಇದನ್ನು ಗೆದ್ದುಕೊಂಡಿದ್ದ. ಇಲ್ಲಿ 12ನೆಯ ಶತಮಾನದ ರೋಮೆನೆಸ್ಕ ಶೈಲಿಯ ಚರ್ಚುಗಳಿವೆ. ಐತಿಹಾಸಿಕ ಗುರುತುಗಳಾಗಿ ಪ್ರಷ್ಯ ರಾಜವಂಶಸ್ಥರ ನಿವಾಸ್ಥಾನ, ಪ್ರಷ್ಯನ್ ರಾಷ್ಟ್ರದ ಪ್ರಜಾಪ್ರತಿನಿಧಿ ಸಭೆ ಸೇರುತ್ತಿದ್ದ ಭವನ ಮತ್ತು 14ನೆಯ ಶತಮಾನದ ನಗರಸಭಾಭವನ ಮುಂತಾದವುಗಳಿವೆ.

ಬ್ರಾಂಡೆನ್ ಬರ್ಗ್ ಹಿಂದೆ ಪ್ರಷ್ಯ ರಾಜ್ಯದ ಒಂದು ಪ್ರಾಂತ್ಯವಾಗಿತ್ತು. ಅನಂತರ ಜರ್ಮನಿಯ ಒಂದು ದೊಡ್ಡ ರಾಜ್ಯವಾಯಿತು. 1920 ರಲ್ಲಿ ಬರ್ಲಿನನ್ನು ಒಂದು ಪ್ರಾಂತ್ಯವೆಂದು ಪರಿಗಣಿಸಲಾಯಿತು. ಅಲ್ಲಿಯ ತನಕ ಬರ್ಲಿನ್ ಬ್ರಾಂಡೆನ್ ಬರ್ಗ್ ರಾಜ್ಯದ ರಾಜಧಾನಿಯಾಗಿತ್ತು. 1949 ರಲ್ಲಿ ಬ್ರಾಂಡೆನ್ ಬರ್ಗ್ ರಷ್ಯದ ಆಡಳಿತಕ್ಕೆ ಸೇರಿದ ಪೂರ್ವ ಜರ್ಮನಿಯ ಒಂದು ರಾಜ್ಯವಾಯಿತು. 1952ರಲ್ಲಿ ಇದನ್ನು ಫ್ರಾಂಕ್‍ಫರ್ಟ್, ಪಾಟ್ಸ್‍ಡ್ಯಾಮ್ ಮತ್ತು ಕಾಟ್‍ಬಸ್ ಎಂಬ ಮೂರು ಜಿಲ್ಲೆಗಳಾಗಿ ವಿಂಗಡಿಸಲಾಯಿತು.

ಪ್ರಸಿದ್ಧ ಬ್ರಾಂಡೆನ್‍ಬರ್ಗ್‍ಗೇಡ್ ಐತಿಹಾಸಿಕ ಕಟ್ಟಡ ಪೂರ್ವ ಪಶ್ಚಿಮ ಬರ್ಲಿನಿನ ನಡುವೆ ಪೂರ್ವ ಬರ್ಲಿನ್ನಿನ ಎಲ್ಲೆಯೊಳಗೆ ಇದೆ. 1791 ರಲ್ಲಿ ಕಟ್ಟಿಪೂರೈಸಿದ ಈ ಕಟ್ಟಡವೇ ಪೂರ್ವ ಪಶ್ಚಿಮದವರಿಗೆ ಸಂಪರ್ಕ ಸೇತುವಾಗಿತ್ತು. ಇಂದು ಬರ್ಲಿನ್ ಗೋಡೆ ಈ ಸಂಪರ್ಕವನ್ನು ಕಡಿದುಹಾಕಿದೆ. (ಕೆ.ಆರ್.)