ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಂದಿ

ವಿಕಿಸೋರ್ಸ್ದಿಂದ

ಬ್ರಾಂದಿ ಆಸವಿತ ಮಧ್ಯಗಳ ಗುಂಪಿಗೆ ಸೇರಿರುವ ಒಂದು ಮಾದಕ ಪೇಯ. ದ್ರಾಕ್ಷಮಧ್ಯವನ್ನು (ವೈನ್) ಬಟ್ಟಿ ಇಳಿಸಿ ತಯಾರಿಸುತ್ತಾರೆ. ಇದರಲ್ಲಿರುವ ಆಲ್ಕೊಹಾಲ್ ಅಂಶ ಶೇಕಡಾ 40-50. ಇದರ ರುಚಿ ಮತ್ತು ಇತರ ಎಲ್ಲ ಮದ್ಯಗಳಂತೆ ಇದು ಸಹ ಚಟಕಾರಕ ಪಾನೀಯ.

ಬಲುಹಿಂದಿನಿಂದಲೂ ಬಳಕೆಯಲ್ಲಿರುವ ಪೇಯ ಬ್ರಾಂದಿ. ಇದನ್ನು ಚರ್ಮದ ಮೇಲೆ ಉಜ್ಜಿದರೆ ರಕ್ತನಾಳಗಳು ಹಿಗ್ಗಿ ಆ ಭಾಗ ಬಿಸಿಯಾಗುತ್ತದೆ. ಕುಡಿದಾಗ 25% ಭಾಗ ಜಠರದಲ್ಲೂ ಉಳಿದ ಭಾಗ ಸಣ್ಣ ಕರುಳಿನಲ್ಲೂ ಹೀರಲ್ಪಡುತ್ತವೆ. ಹೊಟ್ಟೆಯಲ್ಲಿ ಮೊದಲೇ ಬೇರೆ ಆಹಾರಗಳಿದ್ದರೆ ಹೀರುವಿಕೆ ನಿಧಾನ. ಬೇರೂರಿದ ಚಟವಂತರಲ್ಲಿ ಹೀರುವಿಕೆ ಶೀಘ್ರ. ರಕ್ತದ ಮೂಲಕ ಇದು ಯಕೃತ್ತು ಸೇರಿ ಅಲ್ಲಿ ಇನ್ಸುಲಿನ್ನಿನ ಸಮ್ಮುಖದಲ್ಲಿ ಉತ್ಕರ್ಷಣ ಹೊಂದಿ ಶಕ್ತಿ ಒದಗಿಸುತ್ತದೆ. ಉತ್ಕರ್ಷಣ ಹೊಂದುವಾಗ ಆಲ್ಕೋಹಾಲ್ ಡಿಹೈಡ್ರೋಜಿನೇಸ್ ಮತ್ತು ಡಿಪಿಎನ್‍ಗಳ ಸಮ್ಮುಖದಲ್ಲಿ ಮೊದಲು ಅಸಿಟಾಲ್ಡಿಹೈಡ್ ಆಗಿ ಪರಿವರ್ತಿಸಲ್ಪಟ್ಟು ಅನಂತರ ಅಸಿಟೇಟ್ ಆಗಿ ಇದು ಶಕ್ತಿ ಬಿಡುಗಡೆ ಮಾಡುತ್ತದೆ. ಕುಡಿದಿರುವಾಗ ಹೊರಬರುವ ಉಸಿರಿನಲ್ಲೂ ಸ್ವಲ್ಪ ಭಾಗ ಆವಿಯ ರೂಪದಲ್ಲಿ ಹೊರಕ್ಕೆ ತಲಪುತ್ತದೆ. ಹಾಗಾಗಿ ಉಸಿರಿನ ವಾಸನೆಯಿಂದ ಮದ್ಯಸೇವಿಸಿದಾತನನ್ನು ಗುರುತಿಸಬಹುದಾಗಿದೆ. ಉಸಿರಿನ ವಾಸನೆಗೆ ಬ್ರಾಂದಿಗಿಂತ ಹೆಚ್ಚಾಗಿ ಬ್ರಾಂದಿಯಲ್ಲಿಯ ಎಸ್ಟರುಗಳು ಕಾರಣ. ಹೆಚ್ಚಿಗೆ ಬ್ರಾಂದಿ ಕುಡಿದಾಗ ಉಂಟಾಗುವ ಅಮಲು ಅಳೆಯಲು ರಕ್ತದಲ್ಲಿರುವ ಅದರ ಪ್ರಮಾಣವನ್ನು ಆಧಾರವಾಗಿ ತೆಗೆದುಕೊಳ್ಳುತ್ತಾರೆ. ವೈದ್ಯ ನ್ಯಾಯಾಲಯದಲ್ಲಿ ಅದನ್ನೇ ಆಧಾರವಾಗಿ ಗಣಿಸುತ್ತಾರೆ, ಕುಡಿದು ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುವವರನ್ನು ಮತ್ತು ಕುಡಿದು ರಸ್ತೆಗಳಲ್ಲಿ ಉಪದ್ರವ ಉಂಟು ಮಾಡುವವರನ್ನು ಶಿಕ್ಷಿಸಲು ಮುಖ್ಯವಾಗಿ ರಕ್ತದಲ್ಲಿಯ ಪ್ರಮಾಣ ಅಗತ್ಯವಾಗುತ್ತದೆ.

ಬ್ರಾಂದಿ ಕುಡಿದಾಗ ಮುಖ್ಯವಾಗಿ ನರಗಳಲ್ಲಿಯ ಪ್ರತಿವರ್ತಿಗಳ (ರಿಫ್ಲೆಕ್ಸಸ್) ವೇಗ ಮತ್ತು ತೀಕ್ಷತೆ ಕಡಿಮೆಯಾಗುತ್ತವೆ. ನರಗಳ ಕೇಂದ್ರಕಾರ್ಯ ಕುಗ್ಗಿ ನಿರ್ಬಂಧ (ಇನ್ಹಿಬಿಷನ್) ಅಥವಾ ಹಿಂಜರಿಕೆ ದೂರವಾಗಿ ಸ್ವೇಚ್ಛತೆ ಹಾಗೂ ಉದ್ವೇಗ ಉಂಟಾಗುತ್ತವೆ. ಈ ಸ್ಥಿತಿಯಲ್ಲಿ ದುಃಖಗಳು ದೂರವಾದಂತಿರುತ್ತವೆ. ಕಾಲ ಕಳೆಯುವುದೇ ಗೊತ್ತಾಗುವುದಿಲ್ಲ. ಯಾವ ಕಾರ್ಯವೇ ಆಗಲಿ ಅದನ್ನು ಮಾಡಲು ಶಕ್ತಿ ಇದ್ದಂತೆ ತೋರುತ್ತದೆ. ಮಾತು ಜಾಸ್ತಿ ಆಗುತ್ತದೆ. ಹಿಂದಿನ ನೆನಪುಗಳ ಬಗ್ಗೆ ಮತ್ತು ಮುಂದಿನ ಆಲೋಚನೆಗಳ ಬಗ್ಗೆ ನಿರ್ಬಂಧವಿಲ್ಲದೆ ವಾಕ್ಪ್ರವಾಹ ಹರಿಯುತ್ತದೆ. ಪೊಲೀಸರು ಈ ಸ್ಥಿತಿಯನ್ನು ಎಷ್ಟೋಬಾರಿ ಕೈದಿಗಳ ತಪ್ಪು ಕಂಡುಹಿಡಿಯಲು ಉಪಯೋಗಿಸಿಕೊಳ್ಳುವುದುಂಟು ಅನಂತರ ನಡಿಗೆ ತತ್ತರಿಸುತ್ತದೆ. ಜೋರಾಗಿ ಹಾಡಬಹುದು. ಈ ಸ್ಥಿತಿಯಲ್ಲಿ ಓಡಾಡಲು ಇಲ್ಲವೇ ಬಟ್ಟೆ ಕಳಚಲು ಇತರರ ಸಹಾಯಬೇಕಾಗುತ್ತದೆ. ವೃಥಾ ಕೋಪ, ಅಳು, ಕೂಗಾಟ ಮೊದಲಾಗುತ್ತವೆ. ಪದೇ ಪದೇ ಜಲಬಾಧೆಗೆ ಹೋಗಬೇಕಾಗುತ್ತದೆ. ಸ್ಥಳ, ಕಾಲಪರಿವೆ ಇರುವುದಿಲ್ಲ. ನಾಡಿ ಬಡಿತ ಜಾಸ್ತಿ ಆಗುತ್ತದೆ. ಉಸಿರಾಟ ಕ್ರಮೇಣ ಭಾರವಾಗಿ ಮಂದವಾಗಿ ಕೊನೆಗೆ ಆ ಕೇಂದ್ರದ ಕೆಲಸವೇ ನಿಂತುಹೋಗುತ್ತದೆ.

ದುರ್ಬಲರಿಗೆ ಮತ್ತು ರೋಗಿಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಬ್ರಾಂದಿಯನ್ನು ಉತ್ತೇಜಕವಾಗಿ ಕೊಡುವುದುಂಟು. ಹಸಿವು ಹೆಚ್ಚಿಸಲು ಮತ್ತು ವಾತಹರಣ (ಕಾರ್ಮಿನೆಟ್ಯೂ) ಮಾಡಲು ಈ ಪಾನೀಯ ಉಪಯೋಗಿಸುತ್ತಾರೆ. ಬೆವರಿಳಿಸಲು (ಡಯಪೋರಿಟಿಕ್) ಮತ್ತು ಜ್ವರವಿಳಿಸಲು (ಆ್ಯಂಟಿಪ್ಯೆರೆಟಿಕ್) ಉಪಯೋಗಿಸುತ್ತಾರೆ. ಚಟವಂತರಾದವರು ಮನಸ್ಸಿನ ಆತಂಕಗಳನ್ನು ಮರೆಯಲು ಕುಡಿಯುತ್ತಾರೆ. ಇನ್ನೂ ಕೆಲವರು ಇದನ್ನು ಕಾಮೋತ್ತೇಜಕವೆಂದು ನಂಬಿ ಉಪಯೋಗಿಸುವುದೂ ಉಂಟು. ಈ ನಂಬಿಕೆಗೆ ಆಧಾರವಿಲ್ಲ. ಇದು ಆಸೆ ಹೆಚ್ಚಿಸಿ ದೈಹಿಕ ಕಾರ್ಯ ಕಡಿಮೆ ಮಾಡುತ್ತದೆ. ಅನಾದಿ ಕಾಲದಿಂದ ಇದನ್ನು ಅಲ್ಪ ಪ್ರಮಾಣದಲ್ಲಿ ಶೀತ ಅಥವಾ ನೆಗಡಿಗೆ ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಕೊಡುವ ಅಭ್ಯಾಸ ಉಂಟು. ಶೀತದಿಂದುಂಟಾಗುವ ರಕ್ತಗಟ್ಟಿಕೆಯನ್ನೂ (ಕಂಜೆಶ್ಯನ್) ಜ್ವರದ ತಾಪವನ್ನೂ ರಕ್ತನಾಳ ವ್ಯಾಕೋಚಕ ಗುಣವನ್ನೂ ಬ್ರಾಂದಿ ಕಡಿಮೆ ಮಾಡಬಹುದೆಂಬುದೇ ಪ್ರಾಯಶಃ ಇದರ ಕಾರಣವಾಗಿರಬಹುದು.

ಚಟಕ್ಕೆ ಸಿಕ್ಕು ಬಹಳವಾಗಿ ಕುಡಿದರೆ ಯಕೃತ್ತು ಕೆಡುತ್ತದೆ ಎನ್ನುತ್ತಾರೆ. ಯಕೃತ್ತಿನ ಪರೀಕ್ಷೆಗಳು ಇದಕ್ಕೆ ಬೆಂಬಲ ನೀಡಿಲ್ಲ. ಅದರೆ ಮೇದೋಯಕೃತ್ತು (ಫ್ಯಾಟಿ ಲಿವರ್) ಮತ್ತು ಪೋರ್ಟಲ್ ಸಿರ್ಹೋಸಿಸ್ ಪೀಡಿತರೋಗಿಗಳ ಗುಂಪಿನಲ್ಲಿ ಬ್ರಾಂದಿ ಕುಡಿಯುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿದೆ. ಬ್ರಾಂದಿಯಿಂದ ಉಂಟಾಗುವ ಹೆಚ್ಚಿನ ವಿಷಪರಿಣಾಮವೆಂದರೆ ಉಸಿರಾಟದ ಕೇಂದ್ರದ ಕೆಲಸ ನಿಲ್ಲುವುದು. ಇದನ್ನು ಸರಿಪಡಿಸಲು ಕೂಡಲೇ ನಿಕೆಮೈಡ್ ಅಥಾವ ಪಿಕ್ರೂಟಾಕ್ಸಿನ್ ಎಂಬ ಉತ್ತೇಜಕ ಔಷಧಿ ಉಪಯೋಗಿಸಬೇಕು. ಬೇರೂರಿದ ಕುಡಿತದ ಚಟ ಸಮಾಜದ ಒಂದು ಕಠಿಣ ಸಮಸ್ಯೆ. ಈ ಅಭ್ಯಾಸ ತಪ್ಪಿಸಲು ಡೈಸಲ್ಫಿರಾಮ್ ಅಥಾವ ಅಂಟಬ್ಯೂಸೆ ಉಪಯೋಗಿಸುತ್ತಾರೆ. (ಎಚ್.ಎನ್.ಡಿ.)