ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಟಿಸ್ಲಾವ

ವಿಕಿಸೋರ್ಸ್ದಿಂದ

ಬ್ರಾಟಿಸ್ಲಾವ ಚೆಕೊಸ್ಲೂವಾಕಿಯದ ಮೂರನೆಯ ದೊಡ್ಡನಗರ. ಸ್ಲೂವಾಕ್ ಪ್ರಾಂತ್ಯದ ರಾಜಧಾನಿ. ಡ್ಯಾನ್ಯೂಬ್ ನದಿಯ ಎಡದಂಡೆಯ ಮೇಲೆ ವಿಯೆನ್ನಾದ ಪೂರ್ವಕ್ಕೆ 56ಕಿಮೀ ದೂರದಲ್ಲಿದೆ. ಜನಸಂಖ್ಯೆ 3,74,860 (1980).

ಈ ನಗರ ರೈಲು, ರಸ್ತೆ ಮತ್ತು ಜಲ ಮಾರ್ಗ ಸೌಕರ್ಯ ಪಡೆದಿದ್ದು ಒಂದು ಕೈಗಾರಿಕಾ ನಗರವಾಗಿ ಬೆಳೆದಿದೆ. ರಾಸಾಯನಿಕ ವಸ್ತುಗಳ, ವಿವಿಧ ಯಂತ್ರಗಳ ಪೆಟ್ರೋಲಿಯಮ್ ವಸ್ತುಗಳ ಮತ್ತು ಬಟ್ಟಯ ತಯಾರಿಕಾ ಕೇಂದ್ರ. 1919ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯ, 1937ರಲ್ಲಿ ಪ್ರಾರಂಭಿಸಿದ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು 1953ರಲ್ಲಿ ಸ್ಥಾಪಿಸಿದ ಸ್ಲೊವಾಕ್ ವಿಜ್ಞಾನ ಅಕಾಡೆಮಿ ಮುಂತಾದವುಗಳಿದ್ದು ಇದೊಂದು ಉನ್ನತ ಶಿಕ್ಷಣ ಕೇಂದ್ರವಾಗಿದೆ.

ಬ್ರಾಟಿಸ್ಲಾವ 1536ರಿಂದ 1784ರ ತನಕ ಹಂಗರಿಯ ರಾಜಧಾನಿಯಾಗಿತ್ತು. 1848ರ ತನಕವೂ ಹಂಗರಿಯ ಸಂಸತ್ತು ಇಲ್ಲಿ ಸೇರುತ್ತಿತ್ತು. ಹಂಗರಿಯ ರಾಜದ ಕಿರೀಟಧಾರಣೆ ಜರಗುತ್ತಿದ್ದ ಪ್ರಾಚೀನ ಗಾತಿಕ್ ಚರ್ಚು ಇಲ್ಲಿದೆ. 1918ರಿಂದ 1939 ಮತ್ತು 1945 ರಿಂದ 1948ರ ತನಕ ಸ್ಲೊವಾಕಿಯಾ ಪ್ರಾಂತ್ಯದ ರಾಜಧಾನಿಯಾಗಿಯೂ ಎರಡನೆಯ ಮಹಾಯುದ್ದದಲ್ಲಿ ಜರ್ಮನರ ಆಕ್ರಮಣ ಕಾಲದಲ್ಲೂ (1939-45) ರಾಜಧಾನಿಯಾಗಿಯೇ ಉಳಿದಿತ್ತು. 1948ರಲ್ಲಿ ಪಶ್ಚಿಮ ಸ್ಲೊವಾಕಿಯದ ಆಡಳಿತ ಕೇಂದ್ರವಾಯಿತು. (ಕೆ.ಆರ್.)