ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರೀಮ್
ಬ್ರೀಮ್ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಸಿಹಿನೀರು ಮೀನು. ಪ್ಯಾರಬ್ರಾಮಿಸ್ ಪೆಕಿನೆನ್ಸಿಸ್ ಮತ್ತು ಅಬ್ರಾಮಿಸ್ ಬ್ರಾಮ ಎಂಬ ಎರಡು ಬಗೆಯ ಮೀನುಗಳಿಗೆ ಈ ಹೆಸರು ಅನ್ವಯವಾಗುತ್ತದೆ.
ಪ್ಯಾರಬ್ರಾಮಿಸ್ ಪೆಕಿನೆನ್ಸಿಸ್ : ಯೂರೋಪಿನ ಉತ್ತರ ಮಧ್ಯ ಹಾಗೂ ಪೂರ್ವಭಾಗಗಳ ನದಿಗಳಲ್ಲಿ ಜಲಾಶಯಗಳಲ್ಲಿ ಕಾಣಬರುತ್ತದೆ. ಇದರ ಉದ್ದ ಸುಮಾರು 700 ಮಿಮೀ. ದೇಹ ಗಡಸು, ದೇಹದ ಗಾತ್ರಕ್ಕೆ ಹೋಲಿಸಿದರೆ ತಲೆ ಚಿಕ್ಕದು. ಆಳವಾದ ನೀರಿನಲ್ಲಿ, ಹೆಚ್ಚಾಗಿ ಓಡಾಡಿಕೊಂಡಿರುವ ಈ ಪ್ರಭೇದ ಬಸವನ ಹುಳು, ಕೀಟ, ಮೃದ್ವಂಗಿಗಳು ಮುಂತಾದ ಜಲಜೀವಿಗಳನ್ನು ತಿನ್ನುತ್ತದೆ. ಸಂತಾನ ವೃದ್ಧಿಯ ಸಮಯದಲ್ಲಿ ಹೆಣ್ಣು ಮೀನಿನ ದೇಹದಗಾತ್ರ ಹೆಚ್ಚುತ್ತದ್ದಲ್ಲದೆ, ತಲೆ ಹಾಗೂ ರೆಕ್ಕೆಗಳ ಮೇಲೆ ಒಂದು ವಿಧದ ಗಂಟುಗಳು ಮೂಡುವುವು. ಮೊಟ್ಟೆಗಳನ್ನು ಒತ್ತಾಗಿ ಬೆಳೆದ ಜಲಸಸ್ಯಗಳ ಬಳಿ ಇಡುವುದು.
ಅಬ್ರಾಮಿಸ್ ಬ್ರಾಮ : ಚೀನದ ಉತ್ತರ, ಮಧ್ಯ ಹಾಗೂ ದಕ್ಷಿಣ ಭಾಗಗಳ ನದಿಗಳಲ್ಲಿ ವಾಸಿಸುತ್ತದೆ. ಇದು ಸುಮಾರು 300 ಮಿಮೀ ಉದ್ದಕ್ಕೆ ಬೆಳೆಯುತ್ತದೆ. ನೀರಿನಲ್ಲಿರುವ ಕ್ರಿಮಿಕೀಟಗಳು, ಹುಳುಗಳು ಹಾಗೂ ಸಣ್ಣ ಗ್ರಾತದ ಇತರ ಮೀನುಗಳೇ ಇದರ ಆಹಾರ. ಜಲಸಸ್ಯಗಳನ್ನು ತಿನ್ನುವುದೂ ಉಂಟು.
ಎರಡು ತೆರನ ಬ್ರೀಮ್‍ಗಳೂ ಉತ್ತಮ ಬಗೆಯ ಖಾದ್ಯಯೋಗ ಮೀನುಗಳೆನಿಸಿದ್ದು, ಇವನ್ನು ಒಳನಾಡಿನ ಜಲಾಶಯಗಳಲ್ಲಿ, ಕೆರೆಕುಂಟೆಗಳಲ್ಲಿ, ಬೆಳೆಸುವುದಿದೆ. (ಕೆ.ವಿ.ಡಿ)