ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರೈಸ್, ಜೇಮ್ಸ್‌

ವಿಕಿಸೋರ್ಸ್ದಿಂದ

ಬ್ರೈಸ್, ಜೇಮ್ಸ್ 1838-1922. ಬ್ರಿಟಿಷ್ ಇತಿಹಾಸಕಾರ, ರಾಜಕಾರಣಿ, ನ್ಯಾಯವಾದಿ ಮತ್ತು ಪ್ರಥಮ ವೈಕಾಂಟ್. ಐರ್ಲೆಂಡಿನ ಬೆಲ್‍ಫಾಸ್ಟ್ ನಗರದಲ್ಲಿ 1838 ಮೇ 10ರಂದು ಜನಿಸಿದ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಬಳಿಕ ಲಂಡನ್ ಮತ್ತು ಜರ್ಮನಿಯಲ್ಲಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿ 1867ರಿಂದ 1882ರ ತನಕ ವಕೀಲವೃತ್ತಿಯಲ್ಲಿದ್ದ. 1870ರಿಂದ 1893ರ ತನಕ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಆ ವೇಳೆ ತಾನು ನೀಡಿದ ಉಪನ್ಯಾಸಗಳನ್ನು 1901ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದ.

1870ರಲ್ಲಿ ಬ್ರೈಸ್ ಪ್ರಥಮವಾಗಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭೇಟಿಕೊಟ್ಟ. ಮುಂದೆ ಅನೇಕಬಾರಿ ಅಲ್ಲಿಗೆ ಹೋಗಿ ಅಲ್ಲಿಯ ಜನಜೀವನವನ್ನು ಆಳವಾಗಿ ಅಭ್ಯಸಿಸಿದ. ಇಂಗ್ಲೆಂಡಿನ ರಾಜಕೀಯ ಪ್ರವೇಶಿಸಿ, 1880-85 ಮತ್ತೆ 1885-1907ರ ಅವಧಿಗಳಲ್ಲಿ ಪಾರ್ಲಿಮೆಂಟ್ ಸದಸ್ಯನಾಗಿದ್ದ. ಲಿಬೆರಲ್ ಪಕ್ಷ ರಚಿಸಿದ ಮಂತ್ರಿ ಮಂಡಲದ ಸದಸ್ಯನಾಗಿ, ಸರ್ಕಾರದ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ. ಪ್ರಸಿದ್ಧ ಇತಿಹಾಸಕಾರ ಲಾರ್ಡ್ ಆಕ್ಟನ್ ಜೊತೆಗೂಡಿ ಇಂಗ್ಲಿಷ್ ಹಿಸ್ಟಾರಿಕಲ್ ರಿವ್ಯೂ ಪತ್ರಿಕೆಯನ್ನು ಸ್ಥಾಪಿಸಿದ (1885). 1894ರಲ್ಲಿ ಇಂಗ್ಲೆಂಡಿನ ಪ್ರೌಢ ವಿದ್ಯಾಭ್ಯಾಸ ಸಮಿತಿಯ ಅಧ್ಯಕ್ಷನಾಗಿದ್ದ. ಆಗ ಕೇಂದ್ರ ಶಿಕ್ಷಣ ಇಲಾಖೆ, ಮಂತ್ರಿಯೊಬ್ಬರ ನೇರ ಆಡಳಿತಕ್ಕೆ ಒಳಪಟ್ಟಿರಬೇಕೆಂದು ಸಲಹೆ ನೀಡಿದ. ಅಮೆರಿಕದ ಸಮಾಜ ಮತ್ತು ಸಂಸ್ಥೆಗಳ ಸ್ವರೂಪ ಮತ್ತು ಅವುಗಳ ಚಟುವಟಿಕೆಗಳ ಬಗ್ಗೆ ಅಮೆರಿಕನ್ ಕಾಮನ್‍ವೆಲ್ತ್ ಎಂಬ ಗ್ರಂಥ ಬರೆಯಲು 1883ರಲ್ಲಿ ಪ್ರಾರಂಭಿಸಿ 1888ರಲ್ಲಿ ಅದನ್ನು ಪ್ರಕಟಿಸಿದ. ಇಂಗ್ಲೆಂಡ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವೆ ಮಧುರ ಬಾಂಧವ್ಯ ಬೆಳೆಸಲು ಬ್ರೈಸ್ ಇಂಗ್ಲೆಂಡಿನ ರಾಯಭಾರಿಯಾಗಿ ಅಮೆರಿಕದಲ್ಲಿದ್ದ 6 ವರ್ಷಗಳ ಅವಧಿಯಲ್ಲಿ (1907-13) ಚೆನ್ನಾಗಿ ದುಡಿದು ಯಶಸ್ವಿಯಾದ. 1914ರಲ್ಲಿ ಹೇಗ್ ಅಂತರಾಷ್ಟ್ರೀಯ ನ್ಯಾಯಾಲಯದ ಸದಸ್ಯನಾಗಿದ್ದ. ಒಂದನೆಯ ಮಹಾಯುದ್ಧ ಕಾಲದಲ್ಲಿ ಜರ್ಮನರು ಬೆಲ್ಜಿಯಮ್ ಮತ್ತು ಫ್ರಾನ್ಸಿನಲ್ಲಿ ನಡೆಸಿದ ಅಮಾನುಷ ಕೃತ್ಯಗಳ ವಿಚಾರಣಾ ಸಮಿತಿಯ ಅಧ್ಯಕ್ಷನಾಗಿದ್ದ. 1917ರಲ್ಲಿ ಬ್ರಿಟಿಷ್ ಸರ್ಕಾರ ಮೇಲ್ಮನೆಯ ಸುಧಾರಣೆಗಾಗಿ ರಚಿಸಿದ ಸಮಿತಿಯ ಅಧ್ಯಕ್ಷನಾಗಿ, ಅದರ ಸ್ವರೂಪ ಬದಲಾಯಿಸಲು ಉತ್ತಮ ಸಲಹೆ ನೀಡಿದ. ಪ್ರಜಾಸತ್ತೆಯಲ್ಲಿ ನಂಬಿಕೆಯಿಟ್ಟಿದ್ದ ಬ್ರೈಸ್ ಪ್ರಪಂಚದ ನಾನಾ ರಾಷ್ಟ್ರಗಳಿಗೆ ಭೇಟಿ ಇತ್ತು ಅಲ್ಲಿಯ ಪ್ರಜಾಸತ್ತಾತ್ಮಕ ಸಮಾಜಗಳನ್ನು ವ್ಯಾಸಂಗ ಮಾಡಿ 1921ರಲ್ಲಿ ಆಧುನಿಕ ಪ್ರಜಾಸತ್ತೆ (ಮಾಡರನ್ ಡೆಮಾಕ್ರಸೀಸ್) ಗ್ರಂಥವನ್ನು ಎರಡು ಸಂಪುಟಗಳಲ್ಲಿ ಬರೆದ. ಅವು ಇಂದಿಗೂ ರಾಜ್ಯಶಾಸ್ತ್ರಜ್ಞರ ಕೈಪಿಡಿಯಾಗಿವೆ. ಬ್ರೈಸ್ ಬರೆದ ಇತರ ಪುಸ್ತಕಗಳೆಂದರೆ 1903ರಲ್ಲಿ ರಚಿಸಿದ ಸಮಕಾಲೀನ ಜೀವನಚರಿತ್ರೆಗಳ ಸಮೀಕ್ಷೆ (ಸ್ಟಡೀಸ್ ಇನ್ ಕಾಂಟೆಂಪೊರರಿ ಬಯೋಗ್ರಫಿ) ಮತ್ತು 1922ರಲ್ಲಿ ಬರೆದ ಅಂತಾರಾಷ್ಟ್ರೀಯ ಸಂಬಂಧಗಳು (ಇಂಟರ್ ನ್ಯಾಷನಲ್ ರಿಲೇಷನ್ಸ್). 1922 ಜನವರಿ 22ರಂದು ತೀರಿಕೊಂಡ. (ಕೆ.ಟಿ.ಆರ್.; ಎಂ.ಕೆ.ಎ.)