ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಲಾಕ್, ಯೂಲ್ಸ್‌

ವಿಕಿಸೋರ್ಸ್ದಿಂದ

ಬ್ಲಾಕ್, ಯೂಲ್ಸ್ 1880-1953, ಫ್ರೆಂಚ್, ಭಾಷಾವಿಜ್ಞಾನಿ. ಭಾರತೀಯ ಭಾಷಾಶಾಸ್ತ್ರದಲ್ಲಿ ಮಹತ್ತ್ವದ ಸಂಶೋಧನೆ ನಡೆಸಿದವ. 1880 ಮೇ 1ರಂದು: ಪ್ಯಾರಿಸಿನಲ್ಲಿ ಜನಿಸಿದ. ಪ್ರತಿಭಾವಂತ ವಿದ್ಯಾರ್ಥಿ ಎನಿಸಿ ಶಿಷ್ಯವೇತನ ಪಡೆದು 1899ರಲ್ಲಿ ಬಿ.ಎ. ಪದವಿ ಪಡೆದ, ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಸಿಲ್ವೆನ್ ಲೆವ್ವಿ, ಮತ್ತು ಅಂಟೆನೋ ಮಿಲೆಟ್ ಅವರ ಮಾರ್ಗದರ್ಶನದಲ್ಲಿ ಪುರಾತನ ಭಾರತೀಯ ಸಾಹಿತ್ಯ ಸಂಸ್ಕøತಿಗಳ ಅಧ್ಯಯನ ಕೈಗೊಂಡು ಭಾಷಾ ವಿಜ್ಞಾನದ ಅರಂಭದ ಪರಿಚಯ ಮಾಡಿಕೊಂಡ. 1905ರಲ್ಲಿ ಇತರರೊಂದಿಗೆ ಸೇರಿ ಇಂಡೊ-ಜರ್ಮನ್ ಭಾಷೆಗಳ ವ್ಯಾಕರಣ ಕೈಪಿಡಿ ಗ್ರಂಥ ರಚಿಸಿ ಅದನ್ನು ಫ್ರಂಚಿಗೆ ಅನುವಾದಿಸಿದ. ಸಂಸ್ಕøತದ ನಾಮವಿಶೇಷಣಗಳು ಎಂಬ ಪ್ರಬಂಧ ಮಂಡಿಸಿ (1906) ಡಿಪ್ಲೊಮಾ ಪದವಿ ಪಡೆದ. ಪ್ರಾಚ್ಯಸಂಶೋಧನೆಯ ಅನುವಾದಕನಾಗಿ ಕೆಲಸಮಾಡುವಾಗ ಈತ ಭಾರತಕ್ಕೆ ಭಾರತಕ್ಕೆ ಬಂದು (1906-08) ಪುದುಚ್ಚೇರಿ ಮೊದಲಾದ ಕಡೆ ನೆಲೆಸಿ ಭಾರತದ ಜೀವಂತ ಭಾಷೆಗಳ ಅಧ್ಯಯನ ನಡೆಸಿದ. ಮರಾಠೀ ಭಾಷೆಯಲ್ಲಿ ರೂಪವಿಚಾರ ಎಂಬ ಪ್ರೌಢ ನಿಬಂಧವನ್ನು ರಚಿಸಿ ಪ್ಯಾರಿಸ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದ. ಈ ಗ್ರಂಥ ಇಂದಿಗೂ ಮರಾಠೀ ಭಾಷೆಯ ಅಧ್ಯಯನದಲ್ಲಿ ಮಹತ್ತ್ವದ ಸಂಶೋಧನೆಯಾಗಿ ಉಳಿದಿದೆ. ಇದಕ್ಕಾಗಿ ಆರ್.ಜಿ. ಭಂಡಾರಕರ. ವಿ.ಕೆ. ರಾಜವಾಡೆ ಮತ್ತು ಮರಾಠೀ ಪಂಡಿತರ ನೆರವನ್ನು ಪಡೆದ. ಈ ಗ್ರಂಥ ವೊಲನಿ ಬಹುಮಾನಗಳಿಸಿತು. ಸ್ನಾತಕೋತ್ತರ ಸಂಶೋಧನೆ ನಡೆಸಿದ ಈತ ಕ್ಷೇಮೇಂದ್ರ ಮತ್ತು ಲೋಕಪ್ರಕಾಶದ ವಿಮರ್ಶಕ ಆವೃತ್ತಿ ಪ್ರಕಟಿಸಿದ. ಒಂದನೆಯ ಮಹಾ ಯುದ್ಧದಲ್ಲಿ ಸೈನ್ಯಸೇರಿ (1914-18) ಹೋರಾಡಿದ. ಭಾಷಾವಿಜ್ಞಾನಿಗಳ ಸಂಸ್ಥೆಗೆ ಸಹಕಾರ್ಯದರ್ಶಿಯಾಗಿ 1920ರಲ್ಲಿ ಆಯ್ಕೆಯಾದ. ಸಿಲ್ವೆನ್ ಲೆವ್ವಿ ನಿವೃತ್ತರಾದ ಅನಂತರ 1937ರಲ್ಲಿ ಅವರ ಸ್ಥಾನದಲ್ಲಿ ಪ್ಯಾರಿಸಿನಲ್ಲಿ ಪುರಾತನ ಭಾರತೀಯ ಭಾಷಾವಿಜ್ಞಾನದ ಪ್ರಾಧ್ಯಾಪಕನಾಗಿ ಸೇರಿ 1951ರಲ್ಲಿ ನಿವೃತ್ತಿ ಹೊಂದಿದ.

ಮರಾಠೀಭಾಷೆಯ ರೂಪವಿಚಾರದ ಅಧ್ಯಯನ ಈತನ ಬಹುಕಾಲದ ಆಳವಾದ ಅಧ್ಯಯನದ ಫಲ. 1930ರಲ್ಲಿ ಪ್ರಕಟವಾದ ಇಂಡೋ-ಆರ್ಯನ್ ಭಾಷಾ ವಿಜ್ಞಾನದ ಸಮಸ್ಯಾತ್ಮಕ ವಿಚಾರಗಳು ಎಂಬ ಕೃತಿ ಪುರಾತನ ಭಾರತೀಯ ಭಾಷಾವಿಜ್ಞಾನ ಸ್ವರೂಪದ ಅಧs್ಯಯನಕ್ಕೆ ಒಂದು ವಿಶ್ಲೇಷಣಾತ್ಮಕ ಕೃತಿ. ಬ್ಲಾಕನ ಮಹತ್ತ್ವದ ಸಂಶೋಧನೆ ದ್ರಾವಿಡ ಭಾಷೆಗಳ ವ್ಯಾಕರಣ ರೂಪಗಳು ಎಂಬ ಅಮೂಲ್ಯ ಹೊತ್ತಗೆ. ಇದು ತೌಲನಿಕ ದ್ರಾವಿಡ ಭಾಷಾ ವ್ಯಾಸಂಗಕ್ಕೆ ಮಾರ್ಗದರ್ಶಿಯಾಗಿದೆ. ಪ್ರಮುಖಿವಾಗಿ ಕ್ಡಾಲ್‍ವೆಲ್ಲರು ನಡೆದ ಹಾದಿಯಲ್ಲಿ ಬ್ಲಾಕ್ ಈ ವ್ಯಾಸಂಗದಲ್ಲಿ ಮುಂದುವರಿದಿದ್ದರೂ ದ್ರಾವಿಡ ಭಾಷೆಗಳ ಅಕೃತಿಮಾ ವಿಧಾನವನ್ನು ವಿಶ್ಲೇಷಣೆಗೆ ಗುರುಪಡಿಸಿದ್ದು ಮಹತ್ತ್ವದ್ದಾಗಿದೆ. ಅಶೋಕನ ಶಾಸನಗಳನ್ನು ಫ್ರೆಂಚ್ ಭಾಷೆಗೆ ಅನುವಾದಿಸಿದ್ದಲ್ಲದೆ ಅವುತಳ ಸಕ್ರಮವಿಂಗಡಣೆ ಮತ್ತು ವಿಮರ್ಶಾತ್ಮಕ ಟಿಪ್ಪಣಿ ಇವರ ಅಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. 172 ಪುಟಗಳಲ್ಲಿ 88 ಪುಟಗಳ ಟಿಪ್ಪಣಿ ಇರುವ ಅಶೋಕನ ಶಾಸನಗಳು ಒಂದು ಐತಿಹಾಸಿಕ ದಾಖಲೆ. ಈತನ 50ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು ಭಾರತೀಯ ಭಾಷಾ ವಿಜ್ಞಾನಕ್ಕೆ ನೀಡಿದ ಅಮೂಲ್ಯ ಕೊಡುಗೆ. 1953 ನವೆಂಬರ್ 29ರಂದು ತೀರಿಕೊಂಡ. (ಜೆ.ಎಂ.ಎಚ್.)