ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಲ್ಯಾಕ್ಬರ್ಡ್

ವಿಕಿಸೋರ್ಸ್ದಿಂದ

ಬ್ಲ್ಯಾಕ್ಬರ್ಡ್

ಬ್ಲ್ಯಾಕ್‍ಬರ್ಡ್ - ಪ್ಯಾಸೆರಿಫಾರ್ಮಿಸ್ ಗಣದ ಟರ್ಡಿಡೀ ಕುಟುಂಬಕ್ಕೆ ಸೇರಿದ ಹಾಡುಹಕ್ಕಿ, ತ್ರಷ್, ರಾಬಿನ್, ಶಾಮ ಮುಂತಾದವುಗಳ ಹತ್ತಿರ ಸಂಬಂಧಿ. ಟರ್ಡಸ್ ಮೆರುಲ ಇದರ ಶಾಸ್ತ್ರೀಯ ಹೆಸರು, ಯೂರೊಪ್, ಉತ್ತರ ಆಫ್ರಿಕ, ಭಾರತ ಶ್ರೀಲಂಕಾಗಳಲ್ಲಿ ಕಾಣಸಿಗುತ್ತದೆ. ಭಾರತದ ವಿಂಧ್ಯಪರ್ವತ ಶ್ರೇಣಿಯಿಂದ ದಕ್ಷಿಣಕ್ಕೆ ಬಲುಸಾಮಾನ್ಯ. 1750 ಮೀ ಎತ್ತರದವರೆಗಿನ ಬೆಟ್ಟಗುಡ್ಡಗಳ ಕಾಡುಗಳಲ್ಲಿ ವಾಸ. ಚಳಿಗಾಲದಲ್ಲಿ ಮೈದಾನ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುವುದುಂಟು; ಹಳ್ಳಿಗಳ ಆಸುಪಾಸಿನಲ್ಲಿ ಕೈತೋಟಗಳಲ್ಲಿ ಓಡಾಡಿಕೊಂಡಿದ್ದು ನೆಲದಮೇಲೆ ಬಿದ್ದಿರುವ ತರಗೆಲೆ ಮುಂತಾದ ವಸ್ತುಗಳನ್ನು ಕೆದಕುತ್ತ ಅವುಗಳ ಅಡಿಯಲ್ಲಿ ಇರಬಹುದಾದ ಹುಳುಹುಪ್ಪಟೆಗಳನ್ನು ಹುಡುಕಿ ತಿನ್ನುವುದು ಸ್ವಭಾವ. ಕಾಡುಮರಗಳ ಕಾಯಿಗಳನ್ನು ಹೂವಿನ ಮಕರಂದವನ್ನೂ ಸೇವಿಸುವುದಿದೆ.

ಹೆಸರೇ ಹೇಳುವಂತೆ ಇದು ಕಪ್ಪು ಇಲ್ಲವೆ ಕಪ್ಪುಮಿಶ್ರಿತ ಕಂದುಬಣ್ಣದ ಹಕ್ಕಿ. ಎಂದೇ ಹಿಂದಿ ಭಾಷೆಯಲ್ಲಿ ಕಸ್ತೂರಿ ಎಂಬ ಹೆಸರಿದೆ. ಕೊಕ್ಕು, ಕಾಲುಗಳು ಕಿತ್ತಳೆಹಳದಿ ಬಣ್ಣಕ್ಕಿವೆ. ಗೊರವಂಕದ ಗಾತ್ರದ (ಸುಮಾರು 25 ಸೆಮೀ ಉದ್ದದ) ಹಕ್ಕಿಯಿದು.

ಮೇ-ಆಗಸ್ಟ್ ಇದರ ಸಂತಾನವೃದ್ಧಿಯ ಶ್ರಾಯ, ಈ ಸಮಯದಲ್ಲಿ ಗಂಡು ಹಕ್ಕಿ ಇಂಪಾಗಿ ಹಾಡುತ್ತಿರುತ್ತದೆ. ಆಗಾಗ್ಗೆ ಇತರ ಹಕ್ಕಿಗಳ ಸ್ವರವನ್ನು ಅನುಕರಿಸುವುದೂ ಉಂಟು. ಬೇರುನಾರುಗಳನ್ನೂ ಮೃದುಕಾಂಡಗಳನ್ನೂ ಹಸಿಮಣ್ಣನ್ನೂ ಬಳಸಿ ಬಟ್ಟಲಿನ ಆಕಾರದ ಗೂಡು ರಚಿಸಿ 3-5 ತಿಳಿಹಸುರುಬಣ್ಣದ ಮೊಟ್ಟೆಗಳನ್ನಿಡುತ್ತದೆ. ಗೂಡು ರಚನೆ, ಮೊಟ್ಟೆಗಳ ಮರಿಗಳ ಪಾಲನೆ ಪ್ರಧಾನವಾಗಿ ಹೆಣ್ಣಿನದು.

ಬ್ಲ್ಯಾಕ್‍ಬರ್ಡ್ ಎಂಬ ಹೆಸರು ಇಕ್ಟೆರಿಡೀ ಕುಟುಂಬಕ್ಕೆ ಸೇರಿದ ಕೆಲವು ಜಾತಿಯ ಹಕ್ಕಿಗಳಿಗೂ ಅನ್ವಯವಾಗುತ್ತದೆ. ಇವೆಲ್ಲವೂ ಉತ್ತರ ಅಮೆರಿಕದ ನಿವಾಸಿಗಳು. (ಜಿ.ಎಂ.ಬಿ.) (ಪರಿಷ್ಕರಣೆ : ಕೆ ಎಸ್ ನವೀನ್)