ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ಲ್ಯಾಕ್ವೆಲ್, ಎಲಿಜಬೆತ್

ವಿಕಿಸೋರ್ಸ್ದಿಂದ

ಬ್ಲ್ಯಾಕ್ವೆಲ್, ಎಲಿಜಬೆತ್


ಬ್ಲ್ಯಾಕ್‍ವೆಲ್, ಎಲಿಜಬೆತ್ 1821-1910. ಇಂಗ್ಲೆಂಡಿನ ಮೊತ್ತ ಮೊದಲ ವೈದ್ಯೆ. ಅಲ್ಲಿಯ ಬ್ರಿಸ್ಟಾಲ್ ಕೌಂಟರ್‍ಶಿಪ್‍ಲ್ಲಿ ಜನನ, 3-2-1821. ಸಕ್ಕರೆ ಶುದ್ಧ ಮಾಡುವವನ ಮಗಳು. 1832ರಲ್ಲಿ ನ್ಯೂಯಾರ್ಕಿಗೆ ವಲಸೆ ಹೋಗಿ ವೈದ್ಯಶಾಲೆ ಸೇರಲು ಅಮೆರಿಕ ಸಂಯುಕ್ತ ಸಂಸ್ಥಾನದ ವಿವಿಧ ಪ್ರಾಂತಗಳಲ್ಲಿ ಪ್ರಯತ್ನಿಸಿ ಕೊನೆಗೆ ಪಶ್ಚಿಮ ನ್ಯೂಯಾರ್ಕ್ ಪ್ರಾಂತದ ಜಿನೀವ ಪಟ್ಟಣದಲ್ಲಿ ವೈದ್ಯಶಾಲೆ ಸೇರಿ 1849ರಲ್ಲಿ ಎಮ್. ಡಿ. ಪದವಿ ಪಡೆದಳು. ತರುವಾಯ ಇಂಗ್ಲೆಂಡಿಗೆ ಹಿಂತಿರುಗಿ ಹೋಗಿ ಸಂತ ಬಾರ್ತೋಲ್‍ಮ್ಯೂ ಆಸ್ಪತ್ರೆಯಲ್ಲಿಯೂ ಮುಂದೆ ಯೂರೊಪಿನಲ್ಲಿಯೂ ವ್ಯಾಸಂಗ ಮಾಡಿ ಸಂಯುಕ್ತ ಸಂಸ್ಥಾನಕ್ಕೆ ಹಿಂತಿರುಗಿದಳು. ಎಷ್ಟೇ ವಿರುದ್ಧಗಳು ಎದುರಾದರೂ ಧೃತಿಗೆಡದೆ ಕೇವಲ ಸ್ತ್ರೀಯರೇ ಕೆಲಸಮಾಡಲು ಇರುವಂಥ ಆಸ್ಪತ್ರೆಯನ್ನು ನ್ಯೂಯಾರ್ಕ್ ನಗರದಲ್ಲಿ 1857 ಮೇಯಲ್ಲಿ ಸ್ಥಾಪಿಸಿದಳು. ಕಾಲಕ್ರಮೇಣ ಸ್ತ್ರೀಯರಿಗೆ ಸಂಪೂರ್ಣ ವೈದ್ಯ ಶಿಕ್ಷಣ ಕೊಡುವಂಥ ಶಾಲೆಯನ್ನು ಕೂಡ ಪ್ರಾರಂಭಿಸಿದಳು. 1869ರಲ್ಲಿ ಇವಳು ತನ್ನ ವೃತ್ತಿಯನ್ನು ಆರಂಭಿಸಲು ಇಂಗ್ಲೆಂಡಿಗೆ ವಾಪಸ್ಸು ಬಂದಳು. ಇಂಗ್ಲೆಂಡಿನ ಹೇಸ್ಟಿಂಗ್ಸ್‍ನಲ್ಲಿ 1910ಮೇ 31ರಂದು ಗತಿಸಿದಳು. (ಎಚ್.ಆರ್.ಡಿ.ಎಚ್.)