ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಟ್ಕಳ

ವಿಕಿಸೋರ್ಸ್ದಿಂದ

ಭಟ್ಕಳ ಕರ್ನಾಟಕ ರಾಜ್ಯದ ಉತ್ತರ ಕನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಹೊನ್ನಾವಾರ ತಾಲ್ಲೂಕು, ಪಶ್ಚಿಮದಲ್ಲಿ ಅರಬ್ಬೀಸಮುದ್ರ, ಪೂರ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕು ಸುತ್ತುವರಿದಿವೆ. ತಾಲ್ಲೂಕಿನಲ್ಲಿ 4 ಹೋಬಳಿಗಳೂ 63 ಗ್ರಾಮಗಳೂ ಇವೆ. ವಿಸ್ತೀರ್ಣ ಸುಮಾರು 411 ಚ.ಕಿ.ಮೀ. ಜನಸಂಖ್ಯೆ 1,49,311 (2001).

ಈ ತಾಲ್ಲೂಕಿನಲ್ಲಿ ವೆಂಕಟಪುರನದಿ, ಭಟ್ಕಳನದಿ ಮತ್ತು ಅನೇಕ ಸಣ್ಣ ತೊರೆಗಳು ಇವೆ. ಸಮುದ್ರತೀರ ಪ್ರದೇಶ ಮರಳುಭೂಮಿ. ಉಳಿದ ಪ್ರದೇಶ ಫಲವತ್ತಾದ ಜಂಬು ಮಣ್ಣಿನಿಂದ ಕೂಡಿದೆ. ತಾಲ್ಲೂಕಿನಲ್ಲಿ ಮಳೆ ಸಮೃದ್ಧಿಯಾಗಿ ಬೀಳುತ್ತದೆ. ಇಡೀ ಭಟ್ಕಳ ಕಣಿವೆ ಪ್ರದೇಶ ಬತ್ತದ ಗದ್ದೆಗಳಿಂದ ತುಂಬಿದೆ. ತಾಲ್ಲೂಕಿನ ಹೆಚ್ಚು ಭೂಪ್ರದೇಶ ವ್ಯವಸಾಯಕ್ಕೊಳಪಟ್ಟಿದೆ. ಬತ್ತ, ಅಡಿಕೆ, ತೆಂಗು ಇಲ್ಲಿಯ ಮುಖ್ಯ ವ್ಯವಸಾಯೋತ್ಪನ್ನಗಳು.

ತಾಲ್ಲೂಕಿನಲ್ಲಿರುವ ಹಲವು ಬಂದರುಗಳಲ್ಲಿ ಭಟ್ಕಳ ಮುಖ್ಯವಾದದ್ದು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆರಡರ ಮಧ್ಯೆ ಇರುವುದರಿಂದ ಈ ತಾಲ್ಲೂಕು ಎರಡೂ ಜಿಲ್ಲೆಗಳ ಸರಕುಗಳ ವ್ಯಾಪಾರಕೇಂದ್ರವಾಗಿದೆ. ಉತ್ತಮ ಮಾರ್ಗಗಳಿವೆ. ದೋಣಿ ಸಂಚಾರ ಮತ್ತು ಸರಕು ಸಾಗಣಿಯ ಸೌಲಭ್ಯ ಉಂಟು. ವಿದ್ಯುಚ್ಛಕ್ತಿ, ಅಂಚೆ, ತಂತಿ, ದೂರವಾಣಿ, ಶಾಲಾಕಾಲೇಜುಗಳು, ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಪಶುವೈದ್ಯಾಲಯಗಳೂ ಇವೆ.

ಈ ತಾಲ್ಲೂಕಿನ ಹಾಡುವಳ್ಳಿ ಭಟ್ಕಳಕ್ಕೆ ಈಶಾನ್ಯದಲ್ಲಿ ಸುಮಾರು 13 ಕಿಮೀ ದೂರದಲ್ಲಿದೆ. ಇಲ್ಲಿ ಅನೇಕ ಶಾಸನಗಳಿದ್ದು ಇದೊಂದು ಜೈನರ ಮುಖ್ಯಪಟ್ಟಣವಾಗಿತ್ತೆಂದು ತಿಳಿದುಬರುವುದು. ಭಟ್ಕಳಕ್ಕೆ ವಾಯವ್ಯದಲ್ಲಿ ಸುಮಾರು 6 ಕಿಮೀ ದೂರದಲ್ಲಿರುವ ಜಾಲಿಕುಂಡ ಅಥವಾ ಹಾಗ್‍ದ್ವೀಪ ಸುಮಾರು 91ಮೀ ಎತ್ತರವಿದೆ. ಮುರ್ಡೇಶ್ವರ ಭಟ್ಕಳದ ಉತ್ತರದಲ್ಲಿರುವ ಒಂದು ಬಂದರು. ಹೊನ್ನಾವರ ಭಟ್ಕಳಗಳ ಮಧ್ಯದಲ್ಲಿರುವ ಕಂದುಗಿರಿ ಗುಡ್ಡದಮೇಲೆ ಮುರ್ಡೇಶ್ವರನ ದೇವಾಲಯವಿದೆ. ಇದರ ಸುತ್ತಲ ಪ್ರಕೃತಿ ಮನೋಹರವಾಗಿದೆ. ಭಟ್ಕಳಕ್ಕೆ ಉತ್ತರದಲ್ಲಿ ಸುಮಾರು 6 ಕಿ.ಮೀ ದೂರದಲ್ಲಿ ಶಿರಾಳಿ ಬಂದರಿದೆ. ವೆಂಕಟಪುರನದಿ ಇಲ್ಲಿ ಸಮುದ್ರವನ್ನು ಸೇರುತ್ತದೆ.

ಭಟ್ಕಳ ಪಟ್ಟಣ ಈ ತಾಲ್ಲೂಕಿನ ಆಡಳಿತ ಕೇಂದ್ರ ಕಾರವಾರಕ್ಕೆ ಆಗ್ನೇಯದಲ್ಲಿ 103 ಕಿಮೀ ದೂರದಲ್ಲಿಯೂ ಹೊನ್ನಾವರಕ್ಕೆ ದಕ್ಷಿಣದಲ್ಲಿ 19 ಕಿ.ಮೀ ದೂರದಲ್ಲಿಯೂ ಇದೆ. ಜನಸಂಖ್ಯೆ 42,171 (2001). ಭಟ್ಕಳ ನದಿಯ ಮುಖಜಭೂಮಿಯಲ್ಲಿ ಈ ಊರು ಹರಡಿದೆ. ಇದೊಂದು ಬಂದರು. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಗಡಿ ಇಲ್ಲಿಂದ ಸುಮಾರು 26 ಕಿ.ಮೀ ದೂರದಲ್ಲಿದೆ. ಊರು ಸಮುದ್ರದಿಂದ ಪೂರ್ವಕ್ಕೆ ಸುಮಾರು 5 ಕಿ.ಮೀ ದೂರದಲ್ಲಿದೆ. ಇದರ ಬದಿಯಲ್ಲೇ ಶಂಕರಿಹೊಳೆ ಎಂಬ ಚಿಕ್ಕಹೊಳೆ ಅರಬ್ಬೀಸಮುದ್ರ ಸೇರುತ್ತದೆ. ಈ ಹೊಳಗೆ ದೀವತ್ ಕೊಲ್ಲಿ ಎಂದೂ ಹೆಸರಿದೆ. ಈ ಹೊಳೆಯ ಮೂಲಕ ನಾಡದೋಣಿಗಳು ಸಮುದ್ರ ತೀರದಲ್ಲಿರುವ ಹಡಗುಗಳಿಂದ ಸರಕನ್ನು ಭಟ್ಕಳ ಪಟ್ಟಣಕ್ಕೆ ತರುತ್ತವೆ. ಭಟ್ಕಳ ಪಟ್ಟಣ ಮಂಗಳೂರು-ಮುಂಬಯಿ ಹೆದ್ದಾರಿಯಲ್ಲಿರುವುದರಿಂದ ಇಲ್ಲಿಂದ ಮುಂಬಯಿಗೆ ತೆಂಗಿನಕಾಯಿ, ಒಣ ಮತ್ತು ಶೈತ್ಯೀಕರಿಸಿದ ಹಸಿ ಮೀನು ಲಾರಿಗಳಲ್ಲೂ ಹಡಗುಗಳಲ್ಲೂ ಹೇರಳವಾಗಿ ಮಾರಾಟಕ್ಕೆ ಸಾಗುವುದು. ಮೀನನ್ನು ಕೆಡದಂತೆ ಸಂರಕ್ಷಿಸಲು ಇಲ್ಲಿ ಶೈತ್ಯೀಕರಿಸುವ ಒಂದು ಕಾರ್ಖಾನೆಯಿದೆ. ಪಟ್ಟಣ ಪೌರಸಭಾಡಳಿತಕ್ಕೆ ಸೇರಿದೆ.

ಒಂದನೆಯ ಭಟ್ಟಾಕಳಂಕನಿಂದ (ಸುಮಾರು 750) ಈ ಪಟ್ಟಣಕ್ಕೆ. ಭಟ್ಕಳವೆಂಬ ಹೆಸರು ಬಂತೆಂಬ ಪ್ರತೀತಿಯುಂಟು. 1321ರಲ್ಲಿ ಭಟ್ಕಳ ಒಬ್ಬ ಮುಸಲ್ಮಾನ ರಾಜನ ಆಳ್ವಿಕೆಗೆ ಸೇರಿತ್ತೆಂದು ಜೋರ್ಡಾನಸ್ ಎಂಬ ಪಾದ್ರಿ ಉಲ್ಲೇಖಿಸಿದ್ದಾನೆ.

14-15ನೆಯ ಶತಮಾನಗಳಲ್ಲಿ ಭಟ್ಕಳ ಪಶ್ಷಿಮ ಏಷ್ಯದ ಓರ್ಮುಜ್‍ನಿಂದ ಅಮದಾದ ಅರಬ್ಬೀ ಕುದುರೆಗಳ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. 1498ರಲ್ಲಿ ವಾಸ್ಕೋಡಗಾಮ ಭಟ್ಕಳ ಬಳಿಯ ಒಂದು ದ್ವೀಪದಲ್ಲಿ ತಂಗಿದ್ದು ಅದಕ್ಕೆ ಪಾದ್ರೂ ಡಿ ಸಾರಿಕ್ವಾ ಮರಿಯ ಎಂದು ಹೆಸರಿಟ್ಟು ಒಂದು ಶಿಲುಬೆ ಸ್ಥಾಪಿಸಿದ. 1503ರಲ್ಲಿ ವಾಸ್ಕೋಡಗಾಮ ಭಟ್ಕಳವನ್ನು ಆಕ್ರಮಿಸಿದ. ಅಲ್ಲಿದ್ದ ನಾಯಕ ಇವನೊಡನೆ ಶಾಂತಿ ಒಪ್ಪಂದ ಮಾಡಿಕೊಂಡ. 1505ರಲ್ಲಿ ವಿಜಯನಗರದ ನರಸಿಂಹ ಪೋರ್ಚುಗೀಸರ ಭಟ್ಕಳದಲ್ಲಿ ಕೋಟೆ ಕಟ್ಟಿಕೊಳ್ಳಲು ಅನುಮತಿ ಇತ್ತ. ಅಂದಿನಿಂದ ಈ ಊರು ಪೋರ್ಚುಗೀಸರ ಒಂದು ಮುಖ್ಯ ವ್ಯಾಪಾರ ಸ್ಥಳ ಆಯಿತು. ಇಲ್ಲಿಯ ಬಂದರಿನಿಂದ ಕಬ್ಬಿಣ, ಸಂಬಾರ ಪದಾರ್ಥಗಳು, ಅಕ್ಕಿ ಮತ್ತು ಸಕ್ಕರೆ ರಫ್ತಾಗುತ್ತಿದ್ದುವು. 1542ರ ಸುಮಾರಿನಲ್ಲಿ ಈ ಭಾಗದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಕಾರ್ಕಳದ ಭೈರರಸ ವಂಶದ ರಾಣಿ ಪೋರ್ಚುಗೀಸರಿಗೆ ಹಿಂದಿನ ಒಪ್ಪಂದದಂತೆ ಕಪ್ಪ ಒಪ್ಪಿಸಲಿಲ್ಲವಾಗಿ ಭಟ್ಕಳ ಪೋರ್ಚುಗೀಸ್ ಸೈನ್ಯದ ದಾಳಿಗೆ ತುತ್ತಾಯಿತು. 1554ರ ಹೊತ್ತಿಗೆ ಮತ್ತೆ ಒಪ್ಪಂದವಾಯಿತು. 1637ರಲ್ಲಿ ಬ್ರಿಟಿಷರು ಇಲ್ಲಿ ಒಂದು ವ್ಯಾಪಾರಿಕೋಠಿ ಸ್ಥಾಪಿಸಿದರು. ಭೈರರಸ ಒಡೆಯರ ಅನಂತರ ಈ ಭಾಗ ಹಾಡುವಳ್ಳಿಯ ಮತ್ತು ಮುಂದೆ ಬಿದನೂರು ನಾಯಕರ ವಶವಾಯಿತು. 1799ರಲ್ಲಿ ಹೈದರನ ಅಧೀನಕ್ಕೆ ಒಳಪಟ್ಟು ಅನಂತರ ಬ್ರಿಟಿಷರ ಕೈಸೇರಿತು. ಭಟ್ಕಳದಲ್ಲಿ ಹದಿಮೂರು ದೇವಾಲಯಗಳಿವೆ. ಇವೆಲ್ಲ ಸುಮಾರು 15-16ನೆಯ ಶತಮಾನಗಳಲ್ಲಿ ಕಟ್ಟಿದ ಸುಂದರ ರಚನೆಗಳು.