ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭರತ
ಭರತ
1. ವೃಷಭದೇವ ಮತ್ತು ಜಯಂತಿ ಇವರ ಹಿರಿಯ ಮಗ. ಹೆಂಡತಿ ಪಂಚಜನಿ. ಸುಮತಿ, ರಾಷ್ಟ್ರಭೃತ್, ಸುದರ್ಶನ, ಆವರಣ, ಧೂಮ್ರಕೇತು ಈ ಐವರು ಪುತ್ರರು. ಈತ ಆಳಿದ ದೇಶಕ್ಕೆ ಅಜನಾಭವರ್ಷ ಅಥವಾ ಭರತಖಂಡವೆಂದು ಹೆಸರು. ಈ ವೃತ್ತಾಂತ ವಿಷ್ಣುಪುರಾಣ ಹಾಗೂ ಭಾಗವತಗಳಿಂದ ತಿಳಿದುಬರುತ್ತದೆ.
2. ಪುರು ವಂಶದ ರಾಜ ದುಷ್ಯಂತ ಶಕುಂತಲೆಯರ ಮಗ. ಇವನಿಗೆ ಸರ್ವದಮನ ಎಂಬ ಹೆಸರೂ ಇದೆ. ವಿದರ್ಭದ ಮೂವರು ರಾಜಪುತ್ರಿಯರನ್ನೂ ಈತ ವಿವಾಹವಾಗಿದ್ದ. ಅವರಲ್ಲಿ ಸುನಂದೆ ಹಿರಿಯವಳು. ಈತ ದೀರ್ಘಮಂತನೆಂಬ ಋಷಿಯನ್ನು ಪುರೋಹಿತನಾಗಿ ಮಾಡಿಕೊಂಡು ಗಂಗಾನದಿಯ ದಡದಲ್ಲಿ 55 ಅಶ್ವಮೇಧಯಾಗಗಳನ್ನೂ ಯಮುನಾ ತೀರದಲ್ಲಿ 28 ಅಶ್ವಮೇಧಯಾಗಗಳನ್ನೂ ಮಾಡಿದ. ಅನಂತರ ಈತನ ಮೂವರು ಪತ್ನಿಯರು ಗಂಡು ಮಕ್ಕಳನ್ನು ಹೆತ್ತರು. ಒಬ್ಬರೂ ತನ್ನನ್ನು ಹೋಲುವುದಿಲ್ಲ ಎಂಬ ಭರತನ ಮಾತಿನಿಂದ ಜುಗುಪ್ಸೆಗೊಂಡ ಆ ಮೂವರು ರಾಜಪುತ್ರಿಯರು ತಮ್ಮ ಪುತ್ರರನ್ನು ಕೊಂದ ಕಾರಣ ವಂಶವೇ ನಿಂತು ಹೋಗುವ ಸ್ಥಿತಿಗೆ ಬಂತು. ಇದರಿಂದ ಭರತ ಖಿನ್ನನಾದ. ಆಗ ದೇವತೆಗಳು ಭರದ್ವಾಜನನ್ನು ಭರತನಿಗೆ ಸಾಕಲು ಕೊಟ್ಟರು. ಭರತ ಈತನಿಗೆ ವಿತಥ ಅಥವಾ ಭುಮನ್ಯು ಎಂದು ಹೆಸರಿಟ್ಟು ತನ್ನ ಉತ್ತರಾಧಿಕಾರಿಯಾಗಿ ಸ್ವೀಕರಿಸಿದ.
3 ದಶರಥನಿಂದ ಕೈಕೆಯಲ್ಲಿ ಜನಿಸಿದವ. ರಾಮನ ಸಹೋದರ. ಜನಕ ಮಹಾರಾಜನ ತಮ್ಮ ಕುಶಧ್ವಜನ ಹಿರಿಯ ಮಗಳಾದ ಮಾಂಡವಿಯನ್ನು ಮದುವೆಯಾಗಿದ್ದ. ಭರತ ತನ್ನ ಸೋದರಮಾವನ ಮನೆಗೆ ಹೋಗಿದ್ದಾಗ ರಾಮನಿಗೆ ಪಟ್ಟಾಭಿಷೇಕ ನಿಶ್ಚಯವಾಗಿ ಮಂಥರೆಯ ದೆಸೆಯಿಂದ ಅದು ಭಗ್ನವಾಯಿತು. ಅತ್ತ ಭರತನಿಗೆ ಮಾತಾಮಹನ ಮನೆಯಲ್ಲಿ ದುಃಸ್ವಪ್ನ ಕಾಣಿಸಿಕೊಂಡಿತು. ಇದರಿಂದ ವಿಮನಸ್ಕನಾದ ಭರತ ಮಾರನೆಯ ದಿನ ದೂತನ ಸಂಗಡ ವಸಿಷ್ಠಮುನಿ ಕಳುಹಿಸಿದ ತುರ್ತು ಆದೇಶದ ಮೇರೆಗೆ ಅಯೋಧ್ಯೆಗೆ ಮರಳಿದ. ಆ ವೇಳೆಗೆ ರಾಮ ಕಾಡಿಗೆ ಹೋಗಿದ್ದು ದಶರಥ ಸ್ವರ್ಗಸ್ಥನಾಗಿದ್ದ. ಈ ದುರ್ವಾರ್ತೆಯಿಂದ ತಲ್ಲಣಗೊಂಡ ಭರತ ತಾಯಿ ಕೈಕೆಯಿಂದ ವಿಷಯ ತಿಳಿದು ತನಗೆ ರಾಜ್ಯಸಿಗುವ ವಿಷಯದಲ್ಲಿ ನಿರಾಸಕ್ತಿ ತೋರಿ ತಾಯಿಯನ್ನು ನಿಂದಿಸಿದ. ಕೌಸಲ್ಯೆಯಿಂದ ಸಕಲವನ್ನೂ ತಿಳಿದ ಭರತ ತಂದೆಗೆ ಅಂತ್ಯ ಸಂಸ್ಕಾರ ಮಾಡಿ ವಸಿಷ್ಠಾದಿಗಳು ಪಟ್ಟಗಟ್ಟಿಸಿಕೊಳ್ಳಲು ಪ್ರೇರೇಪಿಸಿದರೂ ಕೇಳದೆ ಅಣ್ಣನನ್ನೇ ಕರೆತರುವುದಾಗಿ ಕಾಡಿಗೆ ಹೊರಟ. ಗಂಗಾ ತೀರದಲ್ಲಿ ಗುಹನನ್ನು ಕಂಡು ರಾಮನ ಇರುವಿಕೆಯನ್ನು ಪತ್ತೆಮಾಡಿ ಚಿತ್ರಕೂಟದಲ್ಲಿ ರಾಮನನ್ನು ಸಂಧಿಸಿ ಕಂಬನಿಗರೆದು ಮತ್ತೆ ರಾಜ್ಯಕ್ಕೆ ಮರಳಲು ಬೇಡಿಕೊಂಡ, ರಾಮ ಹಿಂತಿರುಗಲು ನಿರಾಕರಿಸಿ ಭರತನಿಗೆ ತತ್ತ್ವೋಪದೇಶ ನೀಡಿದ. ಕೊನೆಗೆ ಅಣ್ಣನಿಗೆ ಬದಲಾಗಿ ಅವನ ಪಾದುಕೆಯನ್ನೇ ತಂದು ಸಿಂಹಾಸನದಲ್ಲಿರಿಸಿ ಅಣ್ಣನ ಹೆಸರಲ್ಲಿ ರಾಜ್ಯಭಾರ ನಡೆಸುತ್ತ ತಾನು ಉಪವನದಲ್ಲೇ ಉಳಿದುಕೊಂಡು ರಾಮನಿಗೆ ತಕ್ಕ ತಮ್ಮನೆಂದು ಕೀರ್ತಿಗಳಿಸಿದ. ಹದಿನಾಲ್ಕು ವರ್ಷಗಳ ಬಳಿಕ ರಾಮನ ಆಗಮನವನ್ನೇ ಕಾದು ಅವನಿಗೆ ರಾಜ್ಯ ಒಪ್ಪಿಸಿ ಅವನ ಅನುಚರನಾಗಿ ಉಳಿದ. ಈತ ರಾಮನಿಗೆ ರಾಜಸೂಯಯಾಗ ಮಾಡಲು ಒಪ್ಪಿಗೆ ಕೊಡಲಿಲ್ಲ. ಮುಂದೆ ರಾಮನ ಅನುಜ್ಞೆಯಂತೆ ಗಂಧರ್ವ ದೇಶವನ್ನು ಗೆದ್ದು ತಕ್ಷಶಿಲಾ ಮತ್ತು ಪುಷ್ಕಲಾವತ ಎಂಬ ಎರಡು ಪಟ್ಟಣಗಳನ್ನು ನಿರ್ಮಿಸಿ ತನ್ನ ಇಬ್ಬರು ಮಕ್ಕಳಾದ ತಕ್ಷ ಮತ್ತು ಪುಷ್ಕಲ ಎಂಬವರಿಗೆ ಪಟ್ಟಕಟ್ಟಿದ. ರಾಮಾವಾತಾರ ಮುಗಿಯುವ ಸೂಚನೆಯನ್ನು ಈತ ಶತ್ರುಘ್ನನಿಂದ ತಿಳಿದು ರಾಮನೊಂದಿಗೆ ಮಹಾಪ್ರಸ್ಥಾನ ಮಾಡಿದ.
(ಬಿ.ಎನ್.ಎನ್.ಬಿ.)
4 ಒಬ್ಬ ಮಹರ್ಷಿ. ನಾಟ್ಯಶಾಸ್ತ್ರವನ್ನು ಬರೆದವ.