ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ರಾಷ್ಟ್ರಧ್ವಜ
ಭಾರತದ ರಾಷ್ಟ್ರಧ್ವಜ
ಕೇಸರಿ, ಬೀಳಿ, ಹಸುರು-ಈ ತ್ರಿವಣ ರಂಜಿತ ಧ್ವಜವನ್ನು ಭಾರತದ ರಾಜ್ಯಾಂಗ ರಚನಾ ಸಭೆ 1947 ಜುಲೈ 22ರಂದು ರಾಷ್ಟ್ರಧ್ವಜವಾಗಿ ಅಂಗೀಕರಿಸಿತು. ಧ್ವಜದ ಉದ್ದ ಹಾಗೂ ಅಗಲಗಳ ಪ್ರಮಾಣ 2:3 ಧ್ವಜದ ನಡುವೆ, ಬಿಳಿವರ್ಣದ ಪಟ್ಟಿಯ ಮೇಲೆ 24 ಅರೆಗಳಿರುವ ನೀಲಿ ಬಣ್ಣದ ಚಕ್ರವಿದ್ದು, ಇದು ಚರಕವನ್ನು ಸಂಕೇತಿಸುತ್ತದೆ. ಈ ಚಕ್ರದ ರೂಪರೇಷೆ ಸಾರನಾಥದಲ್ಲಿರುವ ಅಶೋಕ ಸ್ತಂಭದಲ್ಲಿಯ ಧರ್ಮ ಚಕ್ರದಂತಿದೆ. ಧ್ವಜದಲ್ಲಿಯ ಮೂರೂ ಬಣ್ಣಗಳು ಸಪ್ರಮಾಣದಲ್ಲಿದ್ದು ಕೇಸರಿ ಸ್ಧೈರ್ಯತ್ಯಾಗಗಳನ್ನೂ ಬಿಳಿ ಸತ್ಯ ಶಾಂತಿಗಳನ್ನೂ ಹಸುರು ಭರವಸೆ ಶೌರ್ಯಗಳನ್ನೂ ಸಂಕೇತಿಸುತ್ತವೆ. ಧ್ವಜಕ್ಕೆ ಸಾಮಾನ್ಯವಾಗಿ ಹತ್ತಿ, ಉಣ್ಣೆ ಅಥವಾ ರೇಷ್ಮೆಯ ಖಾದಿ ಬಟ್ಟಿಯನ್ನು ಉಪಯೋಗಿಸಲಾಗುತ್ತದೆ. ಧ್ವಜವನ್ನು ಹಾರಿಸುವಾಗ ಕೇಸರಿಯ ಬಣ್ಣ ಯಾವಾಗಲೂ ಮೇಲಿರಬೇಕು. ರಾಷ್ಟ್ರಧ್ವಜವನ್ನು ಏರಿಸುವ, ಇಳಿಸುವ ಹಾಗೂ ಬಳಸುವ ಕ್ರಮ ಕುರಿತು ಭಾರತ ಸರ್ಕಾರ ನೀತಿ ಸಂಹಿತೆಯೊಂದನ್ನು ಪ್ರಕಟಿಸಿದೆ.
ಹಿನ್ನೆಲೆ: ಸ್ವಾತಂತ್ರಪೂರ್ವ ಭಾರತದ ಮೊತ್ತಮೊದಲ ರಾಷ್ಟ್ರಧ್ವಜವನ್ನು 1906 ಆಗಸ್ಟ್ 7ರಂದು ಕಲ್ಕತ್ತೆಯ ಗ್ರೀನ್‍ಪಾರ್ಕ್‍ನಲ್ಲಿ (ಪಾರ್ಸಿಬಗನ್ ಚೌಕ) ಹಾರಿಸಲಾಯಿತು. ಆ ಧ್ವಜದಲ್ಲಿ ಅನುಕ್ರಮವಾಗಿ ಕೆಂಪು, ಹಳದಿ, ಹಸುರು ಬಣ್ಣದ ಪಟ್ಟಿಗಳಿದ್ದು, ಕೆಂಪಿನಮೇಲೆ ಬಿಳಿಯ ಕಮಲದ ಹೂಗಳು ಹಳದಿಯ ಮೇಲೆ ದೇವನಾಗರಿ ಲಿಪಿಯಲ್ಲಿ ವಂದೇಮಾತರಂ ಎಂಬ ಗಾಢ ನೀಲಿ ಅಕ್ಷರಗಳು, ಹಸುರಿನ ಮೇಲೆ ಒಂದು ಕಡೆ ಸೂರ್ಯ, ಮತ್ತೊಂದು ಕಡೆಗೆ ಬಾಲಚಂದ್ರ ಹಾಗೂ ನಕ್ಷತ್ರ-ಈ ವಿನ್ಯಾಸವಿತ್ತು. ಹೆಚ್ಚುಕಡಿಮೆ ಇದೇ ರೂಪುರೇಷೆಯನ್ನು ಪಡೆದಿದ್ದ ಎರಡನೆಯ ರಾಷ್ಟ್ರಧ್ವಜವನ್ನು ಅದೇ ವರ್ಷ ಕೆಲವರು ಪ್ಯಾರಿಸ್ಸಿನಲ್ಲಿ ಹಾರಿಸಿದರು. ಆನಿಬೆಸೆಂಟ್ ಮತ್ತು ಬಾಲಗಂಗಾಧರ ತಿಲಕರು ಹೋಮ್ ರೂಲ್ ಚಳವಳಿಯ ಸಮಯದಲ್ಲಿ (1917ರ ಸುಮಾರಿಗೆ) ಕೆಂಪು ಹಸುರು ಪಟ್ಟಿಗಳಿರುವ, ಸಪ್ತರ್ಷಿ ಮಂಡಲದ ನಕ್ಷತ್ರವಿನ್ಯಾಸವೂ ಬ್ರಿಟಿಷರ ಧ್ವಜ ಚಿಹ್ನೆಯೂ ಚಂದ್ರ ನಕ್ಷತ್ರಗಳೂ ಇರುವ ಧ್ವಜವೊಂದನ್ನು ಹಾರಿಸಿದರು. 1921-31ರ ಸುಮಾರಿಗೆ ಗಾಂಧೀಜಿ ಅನುಮೋದಿಸಿದ ಬಿಳಿ, ಹಸುರು, ಕೆಂಪು ಪಟ್ಟಿಗಳನ್ನು ಪಡೆದ, ಚರಕದ ಚಿಹ್ನೆ ಹೊತ್ತ ಧ್ವಜವನ್ನು ಕಾಂಗ್ರೆಸ್ ಅಧಿವೇಶನ ಮುಂತಾದ ಸಂದರ್ಭಗಳಲ್ಲಿ ಹಾರಿಸಲಾಗುತ್ತಿತ್ತು. ಕೇಸರಿ, ಬಿಳಿ, ಹಸರು ಬಣ್ಣಗಳು, ನಡುವೆ ಚರಕ ಚಿಹ್ನೆಯಿರುವ ಧ್ವಜವನ್ನು 1931ರ ಕರಾಚಿ ಅಧಿವೇಶನದಲ್ಲಿ ಅಧಿಕೃತವಾಗಿ ಅಂಗೀಕರಿಸಲಾಯಿತು. ಭಾರತ ಸ್ವಾತಂತ್ರ್ಯ ಹೊಂದಿದ ಮೇಲೆ ಚರಕಕ್ಕೆ ಬದಲಾಗಿ, ಈಗಿರುವಂತೆ ಅಶೋಕ ಚಕ್ರವನ್ನು ಅಳವಡಿಸಲಾಯಿತು.
ಧ್ವಜವನ್ನು ತುಳಿಯುವುದು, ಹರಿಯುವುದು, ಸುಡುವುದು ಶಿಕ್ಷಾರ್ಹ ಅಪರಾಧ. ರಾಷ್ಟ್ರೀಯ ಶುಭ ಸಂದರ್ಭಗಳಲ್ಲಿ ಧ್ವಜವನ್ನು ಪೂರ್ಣ ಪ್ರಮಾಣದಲ್ಲಿ ಏರಿಸಿ ಹಾರಿಸಿದರೆ, ರಾಷ್ಟ್ರೀಯ ಅಶುಭ ಸಂದರ್ಭಗಳಲ್ಲಿ ಧ್ವಜವನ್ನು ಧ್ವಜಸ್ತಂಭದ ಅರ್ಧಕ್ಕೆ ಇಳಿಸಿ ಹಾರಿಸಲಾಗುತ್ತದೆ.