ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಸ್ವಾತಂತ್ರ್ಯ ಸಂಗ್ರಾಮ

ವಿಕಿಸೋರ್ಸ್ ಇಂದ
Jump to navigation Jump to search

ಭಾರತದ ಸ್ವಾತಂತ್ರ್ಯ ಸಂಗ್ರಾಮ

ಸ್ವರಾಜ್ಯ ಸ್ಥಾಪನೆಗಾಗಿ, ಪರಕೀಯರ ದಬ್ಬಾಳಿಕೆ ಮತ್ತು ಆಡಳಿತದ ವಿರುದ್ಧ ಸ್ವಾತಂತ್ರ್ಯಪ್ರಿಯ ಭಾರತೀಯರು ನಡೆಸಿದ ಹೋರಾಟ. ಇದರ ಪ್ರಥಮ ಘಟ್ಟದಲ್ಲಿ ದೇಶೀಯ ರಾಜರೂ ದೇಶಪ್ರೇಮ ಸರದಾರರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಎರಡನೆಯ ಘಟ್ಟ ಕಾಂಗ್ರೆಸ್ ಸ್ಥಾಪನೆಯಿಂದ ಸ್ವಾತಂತ್ರ್ಯ ಗಳಿಕೆಯವರೆಗೆ ನಡೆದುದಾಗಿದೆ. 17ನೆಯ ಶತಮಾನದಲ್ಲಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ತಮ್ಮ ವ್ಯಾಪಾರ ಮಳಿಗೆಗಳ ಭದ್ರತೆಗಾಗಿ ಕೋಟೆಕೊತ್ತಲ ಕಟ್ಟಿಕೊಂಡು ರಕ್ಷಣೆಗಾಗಿ ಸೇನೆ ಇಟ್ಟುಕೊಂಡರು. ಹಾಗೇ ತಮ್ಮ ಉಚ್ಚಮಟ್ಟದ ಯುದ್ಧತಂತ್ರದಿಂದ ಇಲ್ಲಿಯ ರಾಜರ ಬೃಹತ್‍ಗಾತ್ರದ ಸೈನ್ಯಗಳನ್ನು ತಾವು ಗೆಲ್ಲಬಲ್ಲೆವೆಂದು ಮನಗಂಡರು. ಆರ್ಕಾಟಿನ ಉತ್ತರಾಧಿಕಾರಕ್ಕೆ ನಡೆದ 1751-54ರ ಕರ್ನಾಟಕ ಯುದ್ಧಗಳಲ್ಲಿ ಮೇಲುಗೈ ಪಡೆದು ತಮಿಳುನಾಡಿನಲ್ಲಿ ನೆಲೆಪಡೆದರು. ಪ್ಲಾಸಿಕದನ (1757) ಗೆದ್ದು ಬಂಗಾಳ, ಬಿಹಾರ, ಒರಿಸ್ಸಾ ಸ್ವಾಧೀನ ಮಾಡಿಕೊಂಡರು. ಸಹಾಯಕ ಸೈನ್ಯಪದ್ಧತಿಯ ಜಾಲದಿಂದ ವೆಲ್ಲೆಸ್ಲಿ ನಿಜಾಮನಂಥ ರಾಜರನ್ನು ಬ್ರಿಟಿಷರ ಆಶ್ರಿತರನ್ನಾಗಿ ಮಾಡಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಟಿಪ್ಪುವನ್ನು ಕೊಂದು (1799) ದಕ್ಷಿಣ ಭಾರತದ ಅಧಿಕ ಭಾಗದ ಮೇಲೆ ಸ್ವಾಮ್ಯ ಪಡೆದರು. 1801ರಲ್ಲಿ ಆರ್ಕಾಟು ನವಾಬರಿಗೆ ಪಿಂಚಣಿ ನೀಡಿ ರಾಜ್ಯವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು. ಮುಂದಿನ ಎರಡು ಮರಾಠ ಯುದ್ಧಗಳಲ್ಲಿ (1803-04 ಮತ್ತು 1818) ಮರಾಠರನ್ನು ಜಯಿಸಿದರು. ಪಂಜಾಬ್ ಕೂಡ ಸಿಖ್ಖರ ಸೋಲಿನಿಂದ (1949) ಅವರ ವಶವಾಯಿತು. ಈ ಬಗೆಯಲ್ಲಿ ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳುತ್ತ ಹೋದಂತೆ ಅದಕ್ಕೆ ಭಾರತೀಯರು ಪ್ರತಿಭಟನೆ ತೋರಿ ಹೋರಾಟ ನಡೆಸುತ್ತಲೇ ಇದ್ದರು.

18ನೆಯ ಶತಮಾನದ ಕೊನೆಗೆ ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಸಂನ್ಯಾಸಿಗಳು ಬಂಡಾಯವೆದ್ದರು. 1780-81ರಲ್ಲಿ ಕಾಶಿಯ ಜೈತ್‍ಸಿಂಗನ ಸೈನಿಕರು ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದರು. 1781-82ರಲ್ಲಿ ಸಂತಾಲ್ ಪರಗಣದ ರಾಣಿ ಸರ್ವೇಶ್ವರಿ ಸುತ್ತಲ ಗುಡ್ಡಗಾಡು ಜನರ ನೆರವಿನಿಂದ ಬಂಡೆದ್ದಳು. ಅವದಾದ (ಅಯೋಧ್ಯೆ) ವಜೀರ್ ಆಲಿ ಗಯಾ ಜಿಲ್ಲೆಯ ಟಿಕಾರಿ ಎಂಬ ಊರಿನ ಮಿತ್ರಜಿತಸಿಂಗನ ನೆರವಿನಿಂದ ದಂಗೆ ಹೂಡಿದ್ದ. ತರಾಯಿ ಪ್ರದೇಶದಲ್ಲಿ (ಖಾರಾಪುರ್ ಭಾಗಲಪುರ ಇತ್ಯಾದಿ) ಘಟ್ಟವಾಲದ ಜಗನ್ನಾಥದೇವ ಎಂಬವನ ನೇತೃತ್ವದಲ್ಲಿ 1773ರಿಂದ ಮೂರು ಸಾರಿ ಬಂಡಾಯ ನಡೆದಿತ್ತು. ಈ ಬಂಡಾಯ 1803ರ ತನಕ ಸಾಗಿತ್ತು. ಬಂಗಾಳದ ಚೌರರೆಂಬ ಜನ ಛೋಟಾನಾಗಪುರ ಮತ್ತು ಮಾನಪುರ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ 1767ರಲ್ಲೇ ಆರಂಭಿಸಿದ ಪ್ರತಿಭಟನೆ 1799ರಲ್ಲಿ ಉಗ್ರವಾಯಿತು.

ದಕ್ಷಿಣ ಭಾರತದ ಬಂಡಾಯವೆಂದು (1799-1801) ಹೆಸರಾದ ಈ ಬಂಡಾಯ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳನ್ನು ವ್ಯಾಪಿಸಿತ್ತು. ರಾಜ ವಂಶೀಯರು, ಜಮೀನ್ದಾರರು ಹಾಗೂ ಜನಸಾಮಾನ್ಯರು ಇದರಲ್ಲಿ ಪಾಲುಗೊಂಡಿದ್ದರು. ರಾಮನಾಡು ಜಿಲ್ಲೆಯ ಶಿವಗಂಗೆಯೆಂಬ ಸಂಸ್ಥಾನದ ಮಂತ್ರಿಯಾಗಿದ್ದ ಮರುದುಪಾಂಡ್ಯನ್ ತಮಿಳುನಾಡಿನ ಬಂಡಾಯಗಳನ್ನು ಸಂಘಟಿಸಿದ. ರಾಮನಾಡು, ತಿನ್ನವೆಲ್ಲಿ, ದಿಂಡಿಗಲ್ ಮತ್ತು ಕೊಯಮತ್ತೂರು ಈ ನಾಲ್ಕು ಗುಂಪುಗಳಲ್ಲಿ ಬಂಡಾಯದ ಸಂಘಟನೆಯಾಗಿತ್ತು. ರಾಮನಾಡು ರಾಜ್ಯದ ಸೇತುಪತಿಯ ಮಂತ್ರಿ ಮರುದುಪಾಡ್ಯನ್ 1799 ಮಾರ್ಚ್‍ನಲ್ಲಿ ಈ ಬಂಡಾಯ ಆರಂಭಿಸಿದ. ಆದರೆ ಇದನ್ನು ಹತ್ತಿಕ್ಕಲಾಯಿತು. 'ಕೇವಲ ಸಂಪತ್ತನ್ನು ಸುಲಿಯುವುದಕ್ಕಿಂತ ಹೆಚ್ಚಿನದೇನೋ ಈ ಚಳವಳಿಯ ಹಿನ್ನೆಲೆಯಲ್ಲಿದೆ ಎಂದು ಅಂದಿನ ಜಿಲ್ಲಾಧಿಕಾರಿ ಹೇಳಿದ್ದ. ತಿನ್ನವೆಲ್ಲಿ ಜಿಲ್ಲೆಯ ವೀರಪಾಂಡ್ಯ ಕಟ್ಟಬೊಮ್ಮನ್ 1799 ಜೂನ್‍ನಲ್ಲಿ ಅನೇಕ ನೆರೆಯ ಪಾಳಯಗಾರರ ನೆರವಿನಿಂದ ಬಂಡೆದ್ದ. ಮೈಸೂರು ಯುದ್ಧ ಮುಗಿದು ಬ್ರಿಟಿಷ್ ಸೈನ್ಯ ಮರಳಿದಾಗ ಸೆಪ್ಟೆಂಬರ್‍ನಲ್ಲಿ ಕಟ್ಟಬೊಮ್ಮನ್ ಬಂಧಿತನಾಗಿ ಅಕ್ಟೋಬರ್ 17ಕ್ಕೆ ಪಾಶಿಗೇರಿಸಲ್ಪಟ್ಟ. ದಿಂಡಿಗಲ್ ಸಮೀಪದ ವಿರೂಪಾಕ್ಷಿಯ ಪಾಳೆಯಗಾರ ಗೋಪಾಲನಾಯಕನೂ ಇದೇ ಕಾಲಕ್ಕೆ ಬಂಡೆದ್ದು ಟಿಪ್ಪುವನ್ನು ಸಂಪರ್ಕಿಸಿದ್ದ. ಮೈಸೂರು ಯುದ್ಧ ನಡೆದಾಗ ಕಂಪನಿಗೆ ಸೇರಿದ ಅನೇಕ ಪ್ರದೇಶಗಳನ್ನು ಗೆದ್ದುಕೊಂಡ. ಆದರೆ ಬ್ರಿಟಿಷರ ಸೇನೆ ಇವನನ್ನು ಸೋಲಿಸಿತು. 1799ರಲ್ಲಿ ಈ ಉತ್ಥಾನಗಳೆಲ್ಲ ತಣ್ಣಗಾದರೂ ಕರ್ನಾಟಕದಲ್ಲಿ 1800ರಲ್ಲಿ ದೋಂಡ್‍ಜಿವಾಘ ಮತ್ತು ಬಲಂನ ಕೃಷ್ಣಪ್ಪನಾಯಕ ಬಂಡೆದ್ದಾಗ ಮರುದುಪಾಂಡ್ಯನ್ ಮತ್ತೆ ತಲೆಯೆತ್ತಿದ. ಫ್ರಾನ್ಸಿನ ಕ್ರಾಂತಿಕಾರಿಗಳು ಆಗ ಮೇಲ್ಗೈ ಪಡೆದು ಇವರಿಗೆ ಪ್ರೋತ್ಸಾಹಕರ ಸಂದೇಶ ಕಳುಹಿಸುತ್ತಿದ್ದರು. ಈರೋಡ ಭಾಗದ ಚಿನ್ನಂಗೌಡ ಧೋಂಡ್‍ಜಿ ವಾಘನ ಜೊತೆ ಕರ್ನಾಟಕಕ್ಕೆ ಬಂದು ಮಾತುಕತೆ ನಡೆಸಿದ. ವಾಘ ಮತ್ತು ಬಲಂನ (ಹಾಸನ ಜಿಲ್ಲೆ, ಮಂಜರಾಬಾದ್) ನಾಯಕ ಇವರಿಬ್ಬರೂ ವಿರೂಪಾಕ್ಷಿಯ ಗೋಪಾಲನಾಯಕನ ಮೂಲಕ ದಿಂಡಿಗಲ್ ಗುಂಪಿನವರೊಡನೆ ಸಂಪರ್ಕ ಸಾಧಿಸಿದ್ದರು. ಇದೇ ರೀತಿ ವಾಢ್ ಕೇರಳದ ಪಲಸ್ಸಿಯ ಅರಸು ಕೇರಳವರ್ಮನೊಡನೆ ಸಂಬಂಧವಿರಿಸಿಕೊಂಡಿದ್ದ. ಕೇರಳವರ್ಮ ಕೊಯಮತ್ತೂರು ಗುಂಪಿನವರ ಜೊತೆ ಸಂಪರ್ಕವಿರಿಸಿಕೊಂಡಿದ್ದ. ಪಾಳಯಗಾರರಷ್ಟೇ ರೈತರೂ ಗುಡ್ಡಗಾಡು ಜನರೂ ಇವರ ಜೊತೆ ಸೇರಿಕೊಂಡರು. 1799ರ ಕೊನೆಯಿಂದ 1801ರ ತನಕ ಈ ಬಂಡಾಯ ಸಾಗಿತ್ತು. ರಾಮನಾಡು, ತೂತುಕುಡಿ, ತಂಜಾವೂರು, ಕೊಯಮತ್ತೂರು, ಈರೋಡು, ಕೇರಳದ ವೈನಾಡು, ಕರ್ನಾಟಕದ ಸಕಲೇಶಪುರ, ಜಮಾಲಾಬಾದ್, ಬಂಟ್ವಾಳ, ಸೋಂದಾ, ಶಿಕಾರಿಪುರ, ಗದಗು, ಡಂಬಳ, ಆನೆಗೊಂದಿ ಹಾಗೂ ರಾಯಚೂರು ಪ್ರದೇಶಗಳಲ್ಲಿ ಈ ಬಂಡಾಯದ ಉತ್ಥಾನಗಳು ಕಾಣಿಸಿದವು. 1801 ನವೆಂಬರ್ ಹೊತ್ತಿಗೆ ಈ ಹೋರಾಟ ತಣ್ಣಗಾಯಿತು. 1800 ಏಪ್ರಿಲ್‍ನಿಂದ ಸೆಪ್ಟೆಂಬರ್ ತನಕ ವಾಘನ ಹೊರಾಟ ಸಾಗಿತಾದರೂ ಸೆಪ್ಟೆಂಬರ್ 10ಕ್ಕೆ ಆತ ರಾಯಚೂರು ಜಿಲ್ಲಾ ಕೋಣಗಲ್‍ನಲ್ಲಿ ಹೋರಾಡುತ್ತ ಮೃತನಾದ. ಬಲಂ ನಾಯಕನ ವಶವಿದ್ದ ಅರಕೆರೆ ಕೋಟೆ 1802 ಜನವರಿಯಲ್ಲಿ ಬ್ರಿಟಿಷರ ವಶವಾಗಿ ಫೆಬ್ರವರಿಯಲ್ಲಿ ಕೃಷ್ಣಪ್ಪನಾಯಕ ಸೆರೆಸಿಕ್ಕು ಕೊಲ್ಲಲ್ಪಟ್ಟ. ಕೇರಳದಲ್ಲಿ ಕೇರಳವರ್ಮನ ಬಂಡಾಯ ಮತ್ತೂ ಮುಂದುವರಿಯಿತು. 1804 ನವೆಂಬರ್‍ನಲ್ಲಿ ಪುಲ್ಪಲ್ಲಿಯಲ್ಲಿ ಆತ ಹೋರಾಡುತ್ತ ಮಡಿದ. ವೆಲ್ಲೂರು ಕೋಟೆಯಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಗ ಫತೆಹೈದರ್‍ನ ಹೆಸರಿನಲ್ಲಿ 1806ರಲ್ಲಿ ವೆಲ್ಲೂರು ಕೋಟೆಯಲ್ಲಿದ್ದ ಸಿಪಾಯಿಗಳು ಜುಲೈ 10ರಂದು ಬಂಡೆದ್ದರು. 113 ಐರೋಪ್ಯರೂ 350 ಸಿಪಾಯಿಗಳೂ ಹತರಾಗಿ 500 ಸಿಪಾಯಿಗಳ ಬಂಧನದ ಅನಂತರ ಜುಲೈ 13ಕ್ಕೆ ಬಂಡಾಯ ಹತ್ತಿಕ್ಕಲ್ಪಟ್ಟಿತು. ತಿರುವಾಂಕೂರಿನ ದಿವಾನ ವೇಲಿತಂಬಿದಳವಾ 1809ರಲ್ಲಿ ಬಂಡೆದ್ದ. ಆ ಬಂಡಾಯವನ್ನೂ ಹತ್ತಿಕ್ಕಲಾಯಿತು.

1818ರಲ್ಲಿ ಪೇಶ್ವೆಯ ರಾಜ್ಯ ಕೊನೆಗೊಂಡ ವರ್ಷವೇ ಪೇಶ್ವೆಬಾಜಿರಾಯನ ಬಲಗೈ ಬಂಟ ತ್ರಿಂಬಕಜಿ ಡೇಂಗಲೇ ಖಾನ್ ದೇಶದ ಭಿಲ್ಲರನ್ನು ಪ್ರಚೋದಿಸಿ ಬಂಡುಹೊಡಿದ (1817-18). ಇದಕ್ಕೂ ಮೊದಲು, ಬಾಜೀರಾಯನ ಪ್ರೇರಣೆಯಿಂದ ಕಾಠೆವಾಡದ ರಾವ್ ಭಾರ್‍ಮಲ್ 1816ರಲ್ಲಿ ಬಂಡುಹೂಡಿದ್ದನಾದರೂ ಮುಂದೆ ಬ್ರಿಟೀಷರ ಜೊತೆ ಒಪ್ಪಂದ ಮಾಡಿಕೊಂಡ. 1816ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಬಂಡಾಯವೂ ಪ್ರಸಿದ್ಧವಾಗಿದೆ. 1819ರಲ್ಲಿ ಕಾಠೆವಾಡದ ಭಾರ್‍ಮಲ್ ಭುಜ್ ಊರನ್ನು ಕೇಂದ್ರವಾಗಿಟ್ಟುಕೊಂಡು ಬಂಡಾಯ ಹೂಡಿದ. ಆಗಲೇ ಅದೇ ಪ್ರದೇಶದ ವಾಘ ಮತ್ತು ಜಜೇರಾ ಪಂಗಡದ ಜನ ಬಂಡಾಯ ನಡೆಸಿದರು. ಕರ್ನಾಟಕದ ಕೊಪ್ಪಳ ಪರಿಸರದ ವೀರಪ್ಪನೆಂಬ ಜಮೀನ್ದಾರ ಕಂದಾಯದ ಹೆಚ್ಚಳದ ವಿರುದ್ಧ ಬಂಡೆದ್ದಾಗ ಮೇ 17ಕ್ಕೆ ಮೇಜರ್ ಡ್ರಿಸ್ಲರ್ ಕೊಪ್ಪಳ ಕೋಟೆಯನ್ನು ಗೆದ್ದು ಬಂಡಾಯ ಹತ್ತಿಕ್ಕಿದ. 1820-21ರಲ್ಲಿ ಮೆರ್‍ವಾರಾದಲ್ಲಿ ಮೆರ್ ಪಂಗಡದ ಜನರೂ ಬಿದರ್ ಜಿಲ್ಲೆಯ ದೇಶ್‍ಮುಖರೂ ಬಂಡಾಯ ನಡೆಸಿದರು.

1824ರಲ್ಲಿ ಉತ್ತರ ಭಾರತದಲ್ಲಿ ಎಲ್ಲೆಡೆ ಬಂಡಾಯಗಳ ಸರಣಿಯೇ ನಡೆದಿದ್ದು ಯಾವೊಂದು ಜಿಲ್ಲೆಯಲ್ಲೂ ಒಂದಲ್ಲ ಒಂದು ರೀತಿಯ ಅಸಮಾಧಾನದ ಪ್ರಕರಣ ನಡದೇ ಇತ್ತು. ಮೊದಲು ಆಂಗ್ಲೋ ಬರ್ಮ ಯುದ್ಧದಲ್ಲಿ ಬ್ರಟಿಷರಿಗೂ ಸೋಲಾಗಿದೆ ಎಂಬ ವದಂತಿ ಹರಡಿದ್ದೇ ಈ ಬಂಡಾಯಗಳಿಗೆ ಕಾರಣ. ಷಹರಾನ್‍ಪುರದ ಗುರ್ಜರರ ನಾಯಕ ರಾಮದಯಾಳ್ 1813ರಲ್ಲಿ ತೀರಿಕೊಂಡಾಗ ಅವನ ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡರು. ಆಗ ನಡೆದ ಬಂಡಾಯವನ್ನು ಬ್ರಟಿಷರು ಹತ್ತಿಕ್ಕಿದ್ದರಾದರೂ ರಾಮದಯಾಳನ ಸಂಬಂಧಿ ರೂರ್ಕಿ ಬಳಿಯ ಕುಂಜಾದ ತಾಲೂಕುದಾರ ಬಿಜಯ್‍ಸಿಂಗ್ 1824ರಲ್ಲಿ ಬಂಡೆದ್ದ. ಗೂರ್ಖಾದಳ ಕಳುಹಿಸಿ 200 ಬಂಡಾಯಗಾರರನ್ನು ಕೊಂದಾಗಲೇ ಈ ಉತ್ಥಾನ ಕೊನೆಗೊಂಡದ್ದು. 2ನೆಯ ಆಂಗ್ಲೋ ಮರಾಠಯುದ್ಧದ ನಂತರ ಭರತಪುರದ ಜಾಟರು 1805ರಲ್ಲಿ ನಡೆಸಿದ ಬಂಡಾಯ ವಿಫಲವಾಯಿತು. 1824ರಲ್ಲಿ ಇದೇ ಜಾಟರು ಮೇವಾತಿ ಮತ್ತು ಭಟ್ಟಿ ಜನರ ನೆರವಿನಿಂದ ಬಂಡೆದ್ದರು. ಸೂರಜಾಮಲ್ ಜಾಟಬೆಹಟ್ ಕೋಟೆ ಗೆದ್ದುಕೊಂಡ. ರೇವಾರಿಯಲ್ಲೂ ಇದೇ ರೀತಿ ಉತ್ಥಾನವಾಯಿತು. ದೆಹಲಿ ರೋರತ್ ಸಂಪರ್ಕ ತಪ್ಪಿಹೋಯಿತು. ಬ್ರಿಟಿಷರು ಈ ಎಲ್ಲ ಬಂಡಾಯಗಳನ್ನು ಗೂರ್ಖಾ ತುಕಡಿ ಕಳುಹಿಸಿ ಹತ್ತಿಕ್ಕಿದರು. ಬುಂಡೇಲ ಖಂಡದ ಜಾಲಿನ್ನಿನ ಜಾಗಿರ್ದಾರ ನಾನಾಪಂಡಿತ್ ಇದೇ ವರ್ಷ ಬ್ರಿಟಿಷರ ವಶವಿದ್ದ ಕಾಲ್ಪಿಯನ್ನು ವಶಪಡಿಸಿಕೊಂಡ. ಇವನನ್ನು ಹತ್ತಿಕ್ಕುವಷ್ಟರಲ್ಲಿ ತಾಪಿ ಕಣಿವೆಯಲ್ಲಿ ದಲ್ಲಿ ಎಂಬ ಪಿಂಡಾರಿ ನಾಯಕ ಬಂಡೇಳಲು ಬಾಜೀರಾಯನ ತಮ್ಮ ಚಿಮಾಜಿ ಅಪ್ಪ ತಾನೆಂದು ಹೇಳಿಕೊಳ್ಳುವವನೊಬ್ಬ ಅವನನ್ನು ಸೇರಿಕೊಂಡ. ಭಿಲ್ಲರೂ ಅವರನ್ನು ಸೇರಿಕೊಂಡರು. ಕಚ್ಛ್‍ನಲ್ಲಿ ರಾವ್ ಭಾರ್‍ಮಲ್‍ನ ಪರ ಬಂಡೆದ್ದು ಅಂಜರ್ ಬಳಿಯ ಬಲಾರಿ ಕೋಟೆ ಗೆದ್ದರು. ಸಿಂಧನ ಅಮಿರನೂ ಅವರಿಗೆ ನೆರವಾದ. ಕರ್ನಲ್ ನೇಪಿಯರ್, 1825ರಲ್ಲಿ ಈ ಬಂಡಾಯ ಕೊನೆಗೊಳಿಸಿದ. ಖಾನ್ ದೇಶದ ಬಲ್ಗಾನಾದಲ್ಲಿ ಮತ್ತೆ 1825ರಲ್ಲಿ ಭಿಲ್ಲರು ಬಂಡೆದ್ದರು. ಬರೋಡಾ ಸಂಸ್ಥಾನದ ನೆರೆಯ ದುಡಮ ಮತ್ತು ಕೈರಾಗಳಲ್ಲಿ ಇದೇ ಕಾಲದಲ್ಲಿ ಜನ ಬಂಡೆದ್ದರು. ಬ್ರಿಟಿಷರು ಇವರನ್ನು ಬೆನ್ನಟ್ಟಲು ಕಚ್‍ನ ರಣಕ್ಕೆ ಓಡಿಹೋಗಿ 1825ರಲ್ಲಿ ಮರಳಿಬಂದರು. ಅವರನ್ನು ಹತ್ತಿಕ್ಕಿದರೂ 1828ರಲ್ಲಿ ಮತ್ತೆ ತಲೆಯೆತ್ತಿದರು. 1825ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ದಿವಾಕರ ದಿ ಕ್ಷಿತನೆಂಬಾತ ಬಂಡೆದ್ದು ತಾನೇ ಕಂದಾಯ ಸಂಗ್ರಹಿಸಲು ಹೊರಟಾಗ ಸೊಲ್ಲಾಪುರದಿಂದ ಬಂದ ಬ್ರಿಟಿಷ್ ಸೇನೆ ಅನೇಕ ಸೇನಾನಿಗಳನ್ನು ಕಳೆದುಕೊಂಡೇ ಈತನನ್ನು ಸೋಲಿಸಿತು. ಕಿತ್ತೂರ ರಾಣಿ ಚನ್ನಮ್ಮ 1824 ಅಕ್ಟೋಬರಿನಲ್ಲಿ ಹೂಡಿದ ಬಂಡಾಯ ಸರ್ವವಿದಿತ. ಇದರ ಹಿಂದೆಯೇ 1829ರಲ್ಲಿ ಸಂಗೊಳ್ಳಿರಾಯಣ್ಣ ಕಿತ್ತೂರಲ್ಲಿ ಬಂಡು ಹೂಡಿದ್ದ. ಮುಂದೆ 1833, 1836 ಹಾಗೂ 1837-38ರಲ್ಲಿ ಕೂಡ ಕಿತ್ತೂರಲ್ಲಿ ಬಂಡಾಯಗಳಾದುವು. 1830ರಲ್ಲಿ ಆದ ಶಿವಮೊಗ್ಗ ಜಿಲ್ಲೆಯ ನಗರ ಬಂಡಾಯ, 1831ರಲ್ಲಿ ಕರಾವಳಿ ಕನ್ನಡ ಜಿಲ್ಲೆಗಳ ರೈತ ಬಂಡಾಯ, 1836-37ರಲ್ಲಾದ ಕೊಡಗಿನ ಬಂಡಾಯ, 1841ರಲ್ಲಿ ನರಸಪ್ಪ ಪೇಟ್‍ಕರ್ ನಡೆಸಿದ ಛತ್ರಪತಿ ಪರವಾದ ಬಾದಾಮಿಯ ಬಂಡಾಯ. 1830-33ರ ನಡುವೆ ಆಂಧ್ರದಲ್ಲಿ ನಡೆದ ವೀರಭದ್ರ ರಾಜುವಿನ ದಂಗೆ. 1846-47ರ ಕರ್ನೂಲು ನರಸಿಂಹರೆಡ್ಡಿಯ ದಂಗೆ. ಹೀಗೆ ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳ ಪಟ್ಟಿಗೆ ಕೊನೆಯಿಲ್ಲ. ವಿದೇಶೀಯ ಆಡಳಿತ ವಿರುದ್ಧ ಅಸಮಾಧಾನ ಸ್ಫೋಟವಾಗುತ್ತಲೇ ಇತ್ತು.

ಭಾರತೀಯರ ಅಸಮಾಧಾನ 1857ರಲ್ಲಿ ಬೃಹತ್ತಾಗಿ ಸಿಡಿದೆದ್ದಿತು. ಪೇಶ್ವೆ ಬಾಜೀರಾಯನ ದತ್ತುಪುತ್ರ ನಾನಾಸಾಹೇಬ ತನ್ನ ಹಕ್ಕನ್ನು ತಿರಸ್ಕರಿಸಿದ್ದರ ವಿರುದ್ಧ ಪ್ರತಿಭಟಿಸಲು ನಿರ್ಣಯಿಸಿ ಬಂಡಾಯದ ಸಂಘಟನೆಗಾಗಿ ಬ್ರಿಟಿಷರ ಕೂಲಿ ಸಿಪಾಯಿಗಳನ್ನು ರಾಜರು ಜಮೀನ್ದಾರರು ಹಾಗೂ ಜನಸಾಮಾನ್ಯರನ್ನು ಸಂಪರ್ಕಿಸಲು ಎಲ್ಲೆಡೆ ದೂತರನ್ನು ಕಳುಹಿಸಿದ.

19ನೆಯ ಶತಮಾನದ ಆರಂಭದಲ್ಲಿ ಇಸ್ಲಾಮಿನ ಒಂದು ಶಾಖೆಯಲ್ಲಿ ವಹಾಬಿ ಪಂಥ ಇಸ್ಲಾಂನಲ್ಲಿ ಸೇರಿಕೊಂಡು ದುವ್ರ್ಯವಹಾರಗಳನ್ನು ಕಿತ್ತೆಸೆಯಲೆಂದು ಭಾರತವನ್ನು ಪ್ರವೇಶಿಸಿತಾದರೂ ಬಲುಬೇಗ ಅದು ಒಂದು ರಾಜಕೀಯ ಚಳವಳಿಯಾಗಿ ರೂಪು ತಳಿಯಿತು. ಬ್ರಿಟಿಷರನ್ನು ಬಂಗಾಳದಿಂದ ಹಾಗೂ ಸಿಖ್ಖರನ್ನು ಪಂಜಾಬಿನಿಂದ ಅಧಿಕಾರಚ್ಯುತರನ್ನಾಗಿ ಮಾಡಿ ದೇಶದಲ್ಲಿ ಮುಸ್ಲಿಮ್ ಅಧಿಕಾರ ಸ್ಥಾಪನೆ ಇದರ ಗುರಿಯಾಯಿತು. 1820 ರಿಂದ 1870ರ ತನಕ ಈ ಪಂಥ ಕಾರ್ಯನಿರತವಾಗಿತ್ತು. ಪಿಂಡಾರಿ ಅಮೀರಾಖಾನನ ಸೇವೆಯಲ್ಲಿದ್ದ ಸಯ್ಯದ್ ಅಹ್ಮದ್ ಇದರ ನಾಯಕ. ದೇಶದಲ್ಲೆಲ್ಲ ಸಂಚರಿಸಿ ಸಶಸ್ತ್ರ ಹೋರಾಟಕ್ಕೆ ಮುಸಲ್ಮಾನರನ್ನು ಈತ ಸಜ್ಜುಗೊಳಿಸಿದ. ಸಿಖ್ಖರ ವಿರುದ್ಧ ನಡೆದ ಒಂದು ಹೋರಾಟದಲ್ಲಿ ಬಲಾಕೋಟ್‍ನಲ್ಲಿ ಈತ ತೀರಿಕೊಂಡ (1831). ಇವನ ಶಿಷ್ಯ ಷಾ ಮಹಮದ್ ಬಂಗಾಲ, ಬಿಹಾರಗಳಲ್ಲಿ ಸಂಘಟನೆಯ ಕೆಲಸ ಮಾಡಿದ. ಹೈದರಾಬಾದ್ ನಿಜಾಮನ ಸೋದರ ಮುಬಾರಿಜಾ-ಉದ್-ದೌಲ ಚಳವಳಿಗೆ ಸೇರಿದ್ದು ಬಂಧಿತವಾಗಿ 1854ರಲ್ಲಿ ತೀರಿಕೊಂಡ. ಮೆರಟ್, ದೆಹಲಿ, ಬರೇಲಿ, ಪಟ್ನಾಗಳು ವಹಾಬಿಗಳ ಕೇಂದ್ರಗಳು. ಬಂಗಾಳದಲ್ಲೂ ಅವರು ಚುರುಕಾಗಿ ಕೆಲಸ ಮಾಡುತ್ತಿದ್ದರು. ರಾವಲ್ಪಿಂಡಿಯ ಸೈನ್ಯದಲ್ಲಿ ಬ್ರಿಟಿಷ್ ವಿರೋಧೀ ಪ್ರಚಾರ ನಡೆಸಿದ ಹಲವಾರು ಸೈನಿಕರನ್ನು 1853ರಲ್ಲಿ ಬಂಧಿಸಿ ಶಿಕ್ಷಿಸಿದರು. ಮಹಾಬಿಗಳು ಪಟ್ನಾ, ಆಗ್ರಾ, ಹೈದರಾಬಾದ್‍ಗಳಲ್ಲಿ ಒಂದಿಷ್ಟು ಗಲಾಟೆ ಮಾಡಿದರು. ಮತ್ತೇನನ್ನೂ ಅವರು ಸಾಧಿಸಲಿಲ್ಲ. 1857ರ ದೆಹಲಿಯ ಉತ್ಥಾನದ ನಾಯಕರಲ್ಲಿ ಒಬ್ಬನಾಗಿದ್ದ ಬಖ್ತ್‍ಖಾನ್ ವಹಾಬಿಯೆಂದು ತಿಳಿದುಬಂದಿದೆ. ವಾಯವ್ಯ ಭಾರತದ ಆಚೆಗಿನ ಸಿತ್ತಾನ ಅವರ ಕೇಂದ್ರ. ಅಲ್ಲಿಗೆ ಬ್ರಿಟಿಷರು 1850ರಿಂದ 1857ರ ನಡುವೆ 16 ಬಾರಿ ದಂಡು ಕಳುಹಿಸಿದ್ದರು. ಕಡೆಗೆ ಅಂಬಾಲಾ, ಪಟ್ನಾ, ಮಾಲ್ಡಾ, ರಾಜಮಹಲ್ ಮುಂತಾದ ಕಡೆ ಇವರುಗಳನ್ನು ಬಂಧಿಸಿ 1870ರಲ್ಲಿ ವಿಚಾರಣೆಗೆ ಒಳಪಡಿಸಿದರು. ನೂರಾರು ಜನಕ್ಕೆ ಶಿಕ್ಷೆಯಾಗಿ ಚಳವಳಿ ನಿಂತಿತು.

ಸಿಪಾಯಿದಂಗೆ ಎಂದು ಕರೆದ 1857-58 ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವಾರು ಕಾರಣಗಳುಂಟು. ಡಾಲ್‍ಹೌಸಿ ಮಾಡಿದ ಕಾನೂನಿನ ಪ್ರಕಾರ ದತ್ತು ಪುತ್ರರಿಗೆ ಉತ್ತರಾಧಿಕಾರದ ಹಕ್ಕು ತಪ್ಪಿಹೋಯಿತು. ಇದರಿಂದ ಉಂಟಾದ ಅಸಂತುಷ್ಟಿಯ ಜೊತೆಗೆ ಮೊಗಲ್ ಮನೆತನದ ಮಾಜೀ ಸಮ್ರಾಟ ಬಹಾದೂರ್ ಷಾನನ್ನು ದೆಹಲಿಯ ಅವನ ಅರಮನೆ ಖಾಲಿಮಾಡುವಂತೆ ಮಾಡಿದ್ದು ಮತ್ತು ಅವಧ್ ನವಾಬನನ್ನು ಪದಚ್ಯುತಗೊಳಿಸಿದ್ದು ಮುಸಲ್ಮಾನರ ಅಸಮಾಧಾನಕ್ಕೆ ಕಾರಣವಾಯಿತು. ಪೇಶ್ವೆಯ ಪಿಂಚಣಿಯನ್ನು ಅವನ ದತ್ತು ಪುತ್ರ ನಾನಾಸಾಹೇಬನಿಗೆ ಕೊಡಲೊಪ್ಪದ್ದು. ಝಾನ್ಸಿರಾಣಿಯ ದತ್ತಕನನ್ನು ಮಾನ್ಯ ಮಾಡದ್ದು. ಅದೇ ರೀತಿ ಜಗದೇಶಪುರದ ಕುಂದರಸಿಂಹನ ಜಮೀನನ್ನು ಕಂದಾಯ ಮಂಡಳಿ ಕಸಿದದ್ದು ಇವೆಲ್ಲಾ ಅಸಂತೋಷಕ್ಕೆ ಕಾರಣವಾದ ಇತರ ಸಂಗತಿಗಳು. ನಾನಾಸಾಹೇಬ ಅವನ ಸೋದರ ಸಂಬಂಧಿ ರಾವ್ ಸಾಹೇಬ ಮತ್ತು ನಾನಾಸಾಹೇಬನ ಸಹಚರ ತಾಂತ್ಯಾಟೋಪಿ ಹಾಗೂ ಅಜಿಮುಲ್ಲಾಖಾನ್ ಬಹದೂರ್‍ಷಾನ ಸಂಬಂಧಿ ಫಿರೂಜ್‍ಷಾ ಇವರೆಲ್ಲಾ ದೇಶದಲ್ಲಿ ಸುತ್ತಾಡಿ ಬ್ರಿಟಿಷ ವಿರೋಧಿ ಭಾವನೆ ಪ್ರಚೋದಿಸಿದರು. ಸ್ಥಾನಮಾನ ಮತ್ತು ಆಸ್ತಿಪಾಸ್ತಿ ಕಳೆದುಕೊಂಡ ಭೂಮಾಲೀಕರು. ತಾಲ್ಲೂಕುದಾರರು ಹಾಗೂ ಇನಾಂದಾರರು ಇವರ ಜೊತೆ ಸೇರಿ ಕೊಂಡರು. ಇವಲ್ಲದೆ ಸ್ಥಾನಮಾನ ಆಸ್ತಿಪಾಸ್ತಿ ಕಳೆದುಕೊಂಡ ರಾಜವಂಶಜರೂ ಶ್ರೀಮಂತರೂ ತಮ್ಮ ಆಸ್ಥಾನಿಕರನ್ನೂ ನೌಕರನ್ನೂ ನೌಕರಿಯ ಇಂದ ಕಿತ್ತೆಸೆದದ್ದರಿಂದ ಸಾಕಷ್ಟು ಅಸಮಾಧಾನಕ್ಕೆ ಹಾದಿಯಾಯಯಿತು. ಕಂದಾಯವಿಲ್ಲದ ಸರ್ವಮಾನ್ಯ ಭೂಮಿಗಳನ್ನು ಕಸಿಯುವ ಬೆಂಟಿಂಕನ ಕ್ರಮದಿಂದ ಅನೇಕ ಭೂಮಾಲಿಕರು ದಾರಿದ್ರ್ಯಕ್ಕೆ ಒಳಗಾದರು. ಡಾಲ್‍ಹೌಸಿ ನೇಮಿಸಿದ ಇನಾಮ್ ಆಯೋಗದಿಂದ ದಖನ್ನಿನ 20,000 ಇನಾಮ್‍ದಾರರು ಭೂಮಿ ಕಳೆದುಕೊಂಡು ಬ್ರಿಟಿಷರ ವೈರಿಗಳೇ ಆದರು. ಪಿಂಚಣಿ, ಮಾಸಾಶನ ಪಡೆಯುತ್ತಿದ್ದವರಿಗೆ ಪಾವತಿ ನಿಲ್ಲಿಸುವ ಚೀಫ್ ಕಮಿಷನರ್ ಜಾಕ್ಸನ್ನನ ಕ್ರಮದಿಂದ ಅನೇಕರು ಬ್ರಿಟಿಷ್ ವಿರೋಧಿಗಳಾದರು. ಆರಮ್ಸ್ ಆ್ಯಕ್ಟ್ ಎಂಬ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಕಾಯಿದೆಯೂ ಅಸಮಾಧಾನಕ್ಕೆ ಕಾರಣವಾಯಿತು.

ಪಾಶ್ಚಾತ್ಯ ಶಿಕ್ಷಣ ಸಂಸ್ಕøತಿಗಳ ಪ್ರಭಾವ, ಕ್ರೈಸ್ತ ಪಾದ್ರಿಗಳ ಪ್ರಚಾರಗಳಿಂದ ಸಂಪ್ರದಾಯಸ್ಥರು ಗಾಬರಿಗೊಂಡರಲ್ಲದೆ ರೈಲು, ತಂತಿ ಜಾಲಗಳು ದೇಶವನ್ನು ಪಾಶ್ಚಾತ್ಯೀಕರಿಸಲು ನಡೆದ ಯತ್ನಗಳು ಎಂಬ ಭಯ ಮೂಡಿತು. 1850ರ ರಿಲಿಜನ್ ಡಿಸೆಬಿಲಿಟಸ್ ಆ್ಯಕ್ಟ್ ಮತಾಂತರಗಳಿಗೂ ಆಸ್ತಿಯ ಹಕ್ಕು ನೀಡಿ ಮತಾಂತರಕ್ಕೆ ಪ್ರೋತ್ಸಾಹ ನೀಡುವ ಕ್ರಮ ಎನಿಸಿತು. 1856ರ ವಿಧವಾವಿವಾಹ ಮಸೂದೆಯ ಬಗ್ಗೆ ಅದೇ ಭಾವನೆ ಬೆಳೆಯಿತು.

ಬ್ರಿಟಿಷರು ಸಾಮ್ರಾಜ್ಯವನ್ನು ಚೆಂಗೂಲಿ ಸಿಪಾಯಿಗಳಿಂದ ಕಾಪಾಡಿಕೊಂಡು ಬಂದರಾದರೂ ಸಿಪಾಯಿಗಳಲ್ಲಿ ಅವರ ಬಗ್ಗೆ ಸಾಕಷ್ಟು ನಿಷ್ಠೆ ಇರಲಿಲ್ಲ. ಆಫ್‍ಘನ್ ಯುದ್ಧ ಪರ್ಶಿಯದ ದಂಡಯಾತ್ರೆ (1856) ಮುಂತಾದ ದೀರ್ಘ ಕಾಲದ ಚಟುವಟಿಕೆಗಳು ಸೈನಿಕರಲ್ಲಿ ಅಸಮಾಧಾನ ಹುಟ್ಟಿಸಿದ್ದುವು. ಹೆಚ್ಚಿನ ಭತ್ತೆ, ಸವಲತ್ತುಗಳ ಬೇಡಿಕೆಗಳು ತಿರಸ್ಕರಿಸಲ್ಪಟ್ಟಿದ್ದುವು. 1844, 1849, 1850 ಮತ್ತು 1852ರಲ್ಲಿ ಸೈನ್ಯದ ವಿವಿಧ ತುಕಡಿಗಳಲ್ಲಿ ಬಂಡಾಯಗಳು ಆಗಿದ್ದುಂಟು. ಬಂಗಾಳದ ಸೈನ್ಯದಲ್ಲಿ ಯಾವಾಗಲೂ ಅಶಿಸ್ತು ಇರುತ್ತಿತ್ತು. ಗಂಗಾ ಕಣಿವೆಯ ಅವಧ್ ಮುಂತಾದ ಪ್ರದೇಶಗಳ ಉಚ್ಚ ಜಾತಿಯ ಜನರನ್ನು ಒಳಗೊಂಡ ಬಂಗಾಳ ಸೈನ್ಯವನ್ನು ಸಮುದ್ರಯಾನ ಮಾಡಿಸಿದ್ದೂ ಒಂದು ಅಸಮಾಧಾನ. 1857 ಜೂನ್‍ರಲ್ಲಿ ರೂಢಿಗೆ ತಂದ ಎನ್‍ಫಿಲ್ಡ್ ಬಂದೂಕುಗಳಿಗೆ ಹಂದಿ ಇಲ್ಲವೆ ಹಸುವಿನ ಕೊಬ್ಬು ಹಚ್ಚಿದ ಕಾಡಕತೂಸುಗಳನ್ನು ಬಳಸಬೇಕಾಗಿದ್ದು ಅದನ್ನು ಬಾಯಿಯಿಂದ ಕಚ್ಚಿ ತೆಗೆಯಬೇಕೆಂಬ ನಿಯಮ ಮಾಡಲಾಗಿದ್ದುದ್ದರಿಂದ ಹಿಂದೂಗಳ ಮತ್ತು ಮುಸಲ್ಮಾನರ ಭಾವನೆಗಳಿಗೆ ತೀವ್ರವಾಗಿ ನೋವಾಯಿತು. ಬಾಯಿಯಿಂದ ಕಚ್ಚಿ ತೆರೆಯಬೇಕೆಂಬ ನಿಯಮವನ್ನು ಹಿಂದೆಗೆದರೂ ಆ ಕಾಡತೂಸುಗಳನ್ನೇ ಬಳಕೆಯಿಂದ ಹಿಂದೆಗೆದರೂ ಸಿಪಾಯಿಗಳಲ್ಲಿಯ ಅಸಮಾಧಾನ ಕುಂದಲಿಲ್ಲ.

ಇದಲ್ಲದೇ ಕ್ರಿಮಿಯ ಯುದ್ಧದಲ್ಲಿ ಬ್ರಿಟಿಷರಿಗೆ ಗೆಲುವಾಗಿದೆಯೆಂಬುದು ಸುಳ್ಳು. ಈ ಯುದ್ಧದಿಂದ ಬ್ರಿಟನ್ ತೀರ ದುರ್ಬಲವಾಗಿದೆ. ಈಗ ಬಂಡೆದ್ದರೆ ಜಯ ಖಚಿತ ಎಂಬ ಭಾವನೆ ಭಾರತದ ಹಲವು ವರ್ಗಗಳಲ್ಲಿ ಬೆಳೆದಿತ್ತು. ಅಲ್ಲದೆ ಭಾರತದಲ್ಲಿ ಆಂಗ್ಲರಿಗಿಂತ ಭಾರತೀಯ ಸಿಪಾಯಿಗಳ ಸಂಖ್ಯೆ ಹೆಚ್ಚಿತ್ತು. 1856ರಲ್ಲಿ ಬಂಗಾಲದಲ್ಲಿ 45,322 ಬಿಳಿಯ ಸೈನ್ಯಕ್ಕೆ ಬದಲಾಗಿ 2,33,00 ಭಾರತೀಯ ಸಿಪಾಯಿಗಳಿದ್ದು ದೆಹಲಿ, ಅಲಹಾಬಾದ್ ಮುಂತಾದೆಡೆ ಬಿಳಿಯರು ತೀರ ಅಲ್ಪ ಸಂಖ್ಯಾತರಾಗಿದ್ದರು. ಸ್ವಾತಂತ್ರ್ಯ ಹೋರಾಟ ಮೇ 10ರಂದು ಮೇರಟ್ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾಗಿ ಎರಡೂ ಕಡೆಯ ಸಿಪಾಯಿಗಳು ಅಲ್ಲಿಯ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ದೆಹಲಿಗೆ ಸಾಗಿದರು. ಮಾರೋ ಪರಂಗಿಕೊ (ಬಿಳಿಯರನ್ನು ಕೊಲ್ಲಿ) ಎಂಬುದು ಅವರ ಘೋಷಣೆಯಾಗಿತ್ತು. ದೆಹಲಿಗೆ ಬಂದ ಸಿಪಾಯಿಗಳು ಬಹಾದೂರ್ ಷಾನನ್ನು ಭಾರತದ ಚಕ್ರವರ್ತಿಯೆಂದು ಸಾರಿದರು. ಮೂರು ವಾರಗಳ ಬಳಿಕ ಪೂರ್ವ ಯೋಜನೆಯಂತೆ ಬರೇಲಿ, ಕಾನ್‍ಪುರ, ಲಕ್ನೋ, ವಾರಾಣಾಸಿ, ಝಾನ್ಸಿ, ಜಗದೀಶಪುರ, ರಾಜಸ್ಥಾನದ ನಸೀರಾಬಾದ್ ಇಲ್ಲೆಲ್ಲ ಬಂಡಾಯವಾಗಿ, ಆಂಗ್ಲ ಅಧಿಕಾರಿಗಳ ಕೊಲೆಯಾಯಿತು. ಇದೆಲ್ಲ ಜೂನ್‍ನಲ್ಲಿ ನಡೆದರೆ ಲಕ್ನೋದಲ್ಲಿ ಜುಲೈಯಿಂದ ನವೆಂಬರ್‍ತನಕ ಲಾರೆನ್ ಎಂಬ ಅಧಿಕಾರಿ ಸಿಪಾಯಿಗಳಿಂದ ಸುತ್ತುವರಿಯಲ್ಪಟ್ಟ ಜೂನ್ 8ರಿಂದ ದೆಹಲಿಯನ್ನು ಮತ್ತೆ ಗೆಲ್ಲುವ ಯತ್ನ ನಡೆದು ಸೆಪ್ಟೆಂಬರ್ 14ರಂದು ನಗರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಲಕ್ನೋವನ್ನು 1858 ಮಾರ್ಚ್ 21ರಲ್ಲೂ ಬರೇಲಿಯನ್ನು ಮೇ ತಿಂಗಳಲ್ಲೂ ವಶಪಡಿಸಿಕೊಂಡರು. ಈ ವೇಳೆಗೆ 20,000 ಸೈನಿಕರೊಡನೆ ಯಮುನಾ ನದಿಯನ್ನು ದಾಟಿ ತಾಂತ್ಯ ದೋಪಿ ಝಾನ್ಸಿ ರಾಣಿಯನ್ನು ಸೇರಿಕೊಂಡು ಮೇ 22ರಂದು ಕಾಲ್ಪಿಯಲ್ಲಿ ಬ್ರಿಟಿಷರ ವಿರುದ್ಧ ಮುಖಾಮುಖಿ ಯುದ್ಧ ಮಾಡಿ ಸೋತ. ಅಲ್ಲಿಂದ ಆತ ಗ್ವಾಲಿಯರ್‍ಗೆ ಹೋದಾಗ ಗ್ವಾಲಿಯರ್‍ನ ಸಿಂಧ್ಯ ಆಗ್ರಾಕ್ಕೆ ಓಡಿಹೋದ. ಗ್ವಾಲಿಯರ್ ತಾಂತ್ಯನ ವಶವಾಯಿತು. ಝಾನ್ಸಿರಾಣಿ ಜೂನ್ 17ರಂದು ಯದ್ಧದಲ್ಲಿ ಮಡಿದಳು. ತನ್ನ ಸೈನಿಕರನ್ನು ಕಳೆದುಕೊಂಡು ತಾಂತ್ಯಟೋಪೆ 1859 ಏಪ್ರಿಲ್‍ನಲ್ಲಿ ಬಂಧಿತನಾಗಿ ಮುಂದೆ ಪಾಶಿಗೇರಿಸಲ್ಪಟ್ಟ. ನಾನಾಸಾಹೇಬ ಅವಧ್‍ನ ಹಜರತ್ ಮಹಲ್ ಬೇಗಮಳೊಡನೆ ನೇಪಾಲಕ್ಕೆ ಪಲಾಯನ ಮಾಡಿದ. ಇದೇ ಕಾಲಕ್ಕೆ ಕರ್ನಾಟಕದಲ್ಲಿ ಹಲಗಲಿಯ ಬೇಡರು ಸುರಪುರದ ವೆಂಕಟಪ್ಪನಾಯಕ ನರಗುಂದದ ಬಾಬಾ ಸಾಹೇಬ ಮುಂಡರಿಗಿಯ ಭೀಮರಾಯ ಇವರೆಲ್ಲ 1857-58ರ ಅವಧಿಯಲ್ಲಿ ಬಂಡು ಹೂಡಿದರು. ಉತ್ತರ ಕನ್ನಡದ ಸೂಪಾ ತಾಲ್ಲೂಕಿನಲ್ಲಿ ಸಾವಂತ್ ಸೋದರರು ಹಾಗೂ ಫಡ್ನೀಸ್ ಸೋದರರು 1858-59ರಲ್ಲಿ ಬಂಡು ಹೂಡಿದರು. 1857ರ ಬಂಡಾಯ ವಿಫಲವಾಗಿ ಬ್ರಿಟಿಷರಿಗೆ ಜಯಲಭಿಸಲು ಅನೇಕ ಕಾರಣಗಳುಂಟು. ಅವುಗಳಲ್ಲಿ ಬಂಡಾಯಗಾರರಲ್ಲಿಯ ಸಾಧನ ಸಲಕರಣೆಗಳು ಕೆಳದರ್ಜೆಯವಾಗಿದ್ದು ಬ್ರಿಟಿಷರು ಬಳಸಿದ್ದು ಉತ್ತಮ ಮಟ್ಟದವುಗಳಾಗಿದ್ದುವು. ಬ್ರಿಟಿಷರು ತಮ್ಮ ಕಾರ್ಯಾಚರಣೆಯಲ್ಲಿ ಏಕಸೂತ್ತತೆ ವೇಗ ಸಾಧಿಸಲು ಅಂಚೆತಂತಿ ಸಾಧನಗಳನ್ನು ಬಳಸಿಕೊಂಡರು. ಬಂಡಾಯವನ್ನು ಇನ್ನೂ ವ್ಯಾಪಕವಾಗಿ ಸಂಘಟಿಸುವ ಅವಶ್ಯಕತೆ ಇತ್ತು. ಅಂಬಾಲಾ, ಮೆರಟ್‍ಗಳಲ್ಲಿ ಪೂರ್ವ ತಯಾರಿಗೆ ಮೊದಲೇ ಬಂಡಾಯವಾಯಿತು. ಹೀಗೆ ಹಲವು ಕಾರಣಗಳಿಂದ ಈ ಸ್ವಾತಂತ್ರ್ಯ ಸಂಗ್ರಾಮ ವಿಫಲವಾದರೂ ಬ್ರಟಿಷ್ ವಿರೋಧಿ ಚಟುವಟಿಕೆಗಳೇನೂ ನಿಲ್ಲಲಿಲ್ಲ.

1857ರ ಅನಂತರ ಆದ ಬಂಡಾಯಗಳಲ್ಲಿ ವಾಸುದೇವ ಬಳವಂತ ಫಡಕೆಯ ಉತ್ಥಾನ ಉಲ್ಲೇಖನೀಯ. ರಾಮೋಶಿಗಳೆಂಬ ಬೇಡರನ್ನು ಪುಣೆಯ ಪರಿಸರದಲ್ಲಿ ಸಂಘಟಿಸಿ 1879ರಲ್ಲಿ ಬಂಡಾಯ ಹೂಡಿದ ಅವನು ಹೈದರಾಬಾದ್ ಸಂಸ್ಥಾನ ಪ್ರವೇಶಿಸಿ ಗಾಣಗಾಪುರದಿಂದ ರೋಹಿಲರನ್ನು ಸಂಘಟಿಸಲು ಯತ್ನಿಸಿದ. ಆದರೆ ಬಿಜಾಪುರ ಜಿಲ್ಲೆಯ ದೇವರನಾವಗಿಯಲ್ಲಿ ಬಂಧಿತನಾಗಿ ಏಡನ್ ದ್ವೀಪಾಂತರವಾಸಕ್ಕೆ ಕಳುಹಿಸಲ್ಪಟ್ಟ.

18ನೆಯ ಶತಮಾನದ ಮಧ್ಯದಲ್ಲಿ ಸಿಖ್ಖರಲ್ಲಿ ಆರಂಭವಾದ ಒಂದು ಸುಧಾರಣಾ ಚಳವಳಿ ಮುಂದೆ ರಾಜಕೀಯ ಸ್ವಾತಂತ್ರಕ್ಕೆ ಯತ್ನಸಿತು. ಇದೇ ತೂಕಾ ಚಳವಳಿ, ರಾಮಸಿಂಗ್ ತೂಕಾ ಇವರ ನಾಯಕನಾದ. ಗೋಹತ್ಯೆ ಪ್ರತಿಬಂಧಿಸಬೇಕೆಂದು ಒತ್ತಾಯಿಸಿ ಗೋಹಂತಕರ ಕೊಲೆಯನ್ನು 1871ರಲ್ಲಿ ಆರಂಭಿಸಿದರು ಇದಕ್ಕಾಗಿ ಒಂಬತ್ತುಮಂದಿ ತೂಕಾಗಳಿಗೆ ಪಾಶಿ, ಇಬ್ಬರಿಗೆ ದ್ವೀಪಾಂತರವಾಸದ ಶಿಕ್ಷೆ ಆಯಿತು ಇದರಿಂದ 150ತೂಕಾಗಳು ಸಿಟ್ಟೆದ್ದು ರಾಮ ಸಿಂಗನ ಮಾತನ್ನೂ ಕೇಳದೆ ಫಡಿಯಾಲಾ ಮತ್ತು ಕೋಟ್ಲಾ ಸಂಸ್ಥಾನಗಳಲ್ಲಿ ಗೊಂದಲವೆಬ್ಬಿಸಲು 68 ಜನ ಬಂಧಿತರಾದರು, 49 ಜನರನ್ನು ಫಿರಂಗಿ ಹಾರಿಸಿ ಕೊಲ್ಲಲಾಯಿತು. 1872ರಲ್ಲಿ ರಾಮಸಿಂಗನನ್ನು ರಂಗೂನಿಗೆ ಗಡೀಪಾರು ಮಾಡಿದರು. ಈ ಎರಡು ಪ್ರಕರಣಗಳು ದೇಶಭಕ್ತರ ಮೇಲೆ ಅಪಾರ ಪ್ರಭಾವ ಬೀರಿದುವು. 1857ರ ವಿಫಲ ಬಂಡಾಯ ಮತ್ತು ಈ ಪ್ರಕರಣಗಳ ಹಿನ್ನೆಲೆಯಲ್ಲಿ ಮುಂದೆ ಕ್ರಾಂತಿಕಾರೀ ಚಟುವಟಿಕೆಗಳು ಬೆಳೆದುವು.

ಪಾಶ್ಚಾತ್ಯ ಶಿಕ್ಷಣ, ಪಾಶ್ಚಾತ್ಯ ಉದಾರವಾದಿ ಹಾಗೂ ಪ್ರಜಾತಂತ್ರ ವಿಚಾರಗಳು, ಆರ್ಯ ಸಮಾಜ, ಬ್ರಹ್ಮ ಸಮಾಜ, ಥಿಯೋಸಫಿಕಲ್ ಸೊಸೈಟಿ ಮುಂತಾದ ಸಂಘಟನೆಗಳ ಪ್ರಭಾವ ಸಾಂಸ್ಕøತಿಕ ನವೋದಯ, ಬುದ್ಧಿಜೀವಿಗಳ ವ್ಯವಹಾರ ಮಾಧ್ಯಮವಾಗಿ ಇಂಗ್ಲಿಷ್ ಬೆಳೆದುದು, ಅಂಚೆ ತಂತಿ ರೈಲುಗಳಿಂದ ದೇಶದ ವಿವಿಧ ಭಾಗಗಳ ನಿಕಟಸಂಪರ್ಕ, ವೃತ್ತಪತ್ರಿಕೆಗಳ ಪ್ರಕಟಣೆ, ನೌಕರಿಗಳಲ್ಲಿ ಹಾಗೂ ಬಡ್ತಿಗಳಲ್ಲಿ ಬಿಳಿಯರ ಹಾಗೂ ಭಾರತೀಯರ ನಡುವೆ ಮಾಡುತ್ತಿದ್ದ ತಾರತಮ್ಯ, ದೇಶದ ಉದ್ದಿಮೆಗಳನ್ನು ಹಾಳುಗೆಡವಿ ಭಾರತವನ್ನು ಬರಿಯ ಕಚ್ಚಾವಸ್ತುಗಳನ್ನು ಬೆಳೆಸುವ ಹಾಗೂ ಇಂಗ್ಲೆಂಡಿನ ಕಾರ್ಖಾನೆಗಳ ಸಿದ್ಧವಸ್ತುಗಳನ್ನು ಕಾಯಮ್ ಆಗಿಕೊಳ್ಳುವ ಮಾರುಕಟ್ಟೆಯಾಗಿ ಪರಿವರ್ತಿಸಿದ ಸನ್ನಿವೇಶ ಮತ್ತು ಹಲವು ವಿಧಗಳಿಂದ ಭಾರತವನ್ನು ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಸಂಪತ್ತನ್ನು ದೋಚುವ ಪರಿಸ್ಥಿತಿ ಹಾಗೂ ತಮ್ಮ ಪ್ರಾಚೀನ ಇತಿಹಾಸ ಸಂಸ್ಕøಗಳ ಬಗ್ಗೆ ಭಾರತೀಯರಲ್ಲಿ ಮೂಡಿಬಂದ ಜ್ಞಾನ ಮತ್ತು ಗೌರವ ಇವೆಲ್ಲ ನವರಾಷ್ಟ್ರೀಯ ಪ್ರಜ್ಞೆಯ ಉದಯಕ್ಕೆ ದಾರಿ ಮಾಡಿಕೊಟ್ಟುವು. ಬಂಗಾಳದಲ್ಲಿ 1839ರಲ್ಲಿ ಸ್ಥಾಪಿತವಾದ ಭೂಮಾಲಿಕರ ಸಂಘ, 1840ರ ಅನಂತರ ಆರಂಭವಾದ ಬಂಗಾಳದ ಬ್ರಿಟಿಷ್ ಇಂಡಿಯಾ ಸೊಸೈಟಿ ಇವುಗಳ ಐಕ್ಯದಿಂದ 1851ರಲ್ಲಿ ಮೂಡಿದ ಬ್ರಿಟಿಷ್ ಇಂಡಿಯನ್ ಎಸೋಸಿಯೇಶನ್, 1875ರಲ್ಲಿ ಹುಟ್ಟಿದ ಕಲ್ಕತ್ತೆಯ ಇಂಡಿಯಾಲೀಗ್, 1876ರಲ್ಲಿ ಸ್ಥಾಪನೆಗೊಂಡ ಇಂಡಿಯನ್ ಎಸೋಸಿಯೇಶನ್, 1852ರಲ್ಲಿ ಮುಂಬೈಯಲ್ಲಿ ಸ್ಥಾಪಿತವಾದ ದಿ ಬಾಂಬೆ ಎಸೋಸಿಯೇಶನ್, 1885ರಲ್ಲಿ ಹುಟ್ಟಿದ ಬಾಂಬೆ ಪ್ರೆಸಿಡೆನ್ಸಿ ಎಸೋಸಿಯೇಶನ್, 1867ರ ಪುಣೆಯ ಸಾರ್ವಜನಿಕ ಸಭಾ, 1852ರಲ್ಲಿ ಸ್ಥಾಪಿತವಾದ ಮುದ್ರಾಸ್ ನೇಟಿವ್ ಎಸೋಸಿಯೇಶನ್, 1884ರ ಮದ್ರಾಸ್ ಮಹಾಜನ ಸಭಾ ಇವೆಲ್ಲವೂ ಒದಗಿಸಿದ ಹಿನ್ನೆಲೆ ಅವುಗಳ ಚಟುವಟಿಕೆಗಳು, ಅವುಗಳ ಕಾರ್ಯಕರ್ತರ ಓಡಾಟ ಇವೆಲ್ಲವುಗಳಿಂದ ಕಾಂಗ್ರೆಸ್ ಸಂಸ್ಥೆಯ ಸ್ಥಾಪನೆಗೆ ಬೇಕಾದ ಭೂಮಿಕೆ ಸಿದ್ಥವಾಯಿತು. ಜೊತೆಗೆ ಘಟನಾಬದ್ಧ ಚಳವಳಿಗೆ ದಾರಿಯಾಯಿತು. ಸರ್ಕಾರಿ ನೌಕರಿಗಾಗಿ ಭರ್ತಿ ಮಾಡುವಾಗ ಪ್ರವೇಶದ ವಯಸ್ಸನ್ನು 21ರಿಂದ 19ಕ್ಕೆ ಇಳಿಸಿದ 1876ರ ಕ್ರಮ (ಇದರಿಂದ ಭಾರತೀಯರಿಗೆ ಪ್ರವೇಶಾವಕಾಶ ಕಡಿಮೆ ಆಯಿತು) ವರ್ನಾಕ್ಯುಲರ್ ಪ್ರೆಸಾ ಆಕ್ಟ್ (1878) ಎಂಬ ದೇಶ ಭಾಷಾ ಪತ್ರಿಕೆಗಳ ಮೇಲೆ ಪ್ರತಿಬಂಧಗಳನ್ನು ಹೇರುವ ಕಾನೂನು ಬಿಳಿಯ ಅಪರಾಧಿಗಳನ್ನು ಭಾರತೀಯ ನ್ಯಾಯಾಧೀಶರು ವಿಚಾರಣೆ ನಡೆಸಲು ಅವಕಾಶ ನೀಡುವ ಇಲ್ಬರ್ಟ್ ಮಸೂದೆ (1883) ವಿರುದ್ಧ ನಡೆದ ಬಿಳಿಯರ ಯಶಸ್ವೀ ಚಳುವಳಿ ಮುಂತಾದವುಗಳಿಂದ ಮಧ್ಯಮ ವರ್ಗದಲ್ಲಿ ಹೆಚ್ಚಿನ ಜಾಗೃತಿ ಆಯಿತು. ನೌಕರಿಗೆ ಪ್ರವೇಶದ ವಯಸ್ಸನ್ನು ಇಳಿಸಿದ್ದರ ವಿರುದ್ಧ ನಡೆದ ಚಳವಳಿಯಲ್ಲಿ ಸುರೇಂದ್ರನಾಥ್ ಬ್ಯಾನರ್ಜಿ ಅಗ್ರಪಾತ್ರ ವಹಿಸಿ ಅನೇಕ ನಗರಗಳಲ್ಲಿ ಭಾಷಣ ಮಾಡಿದ್ದು ಇಂಡಿಯನ್ ಎಸೋಸಿಯೇಶನ್‍ನಂಥ ಸಂಸ್ಥೆಗೆ ಹೆಚ್ಚಿನ ಪ್ರಾಧಾನ್ಯ ಬರಲು ಅವಕಾಶ ಒದಗಿಸಿತು. ಕಲ್ಕತ್ತಾದಲ್ಲಿ ಅಂತರರಾರಾಷ್ಟ್ರೀಯ ಪ್ರದರ್ಶನದ ಕಾಲಕ್ಕೆ (1883) ಅಖಿಲ ಭಾರತ ರಾಷ್ಟ್ರೀಯ ಸಮ್ಮೇಳನವೊಂದನ್ನು ಈ ಸಂಸ್ಥೆ ಸಂಘಟಿಸಿತು. ಮುಂದೆ 1885 ಡಿಸೆಂಬರ್‍ನಲ್ಲೂ ಇಂಥದೇ ಎರಡನೆಯ ಸಮ್ಮೇಳನವನ್ನು ಈ ಸಂಸ್ಥೆ ಸಂಘಟಿಸಿತು. ಉತ್ತರ ಭಾರತದ 30 ಸಂಸ್ಥೆಗಳ ಪ್ರಾತಿನಿಧ್ಯ ಇದರಲ್ಲಿ ಆಯಿತು. ಮುಂದೆ ಈ ಸಂಸ್ಥೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಮಾವಿಷ್ಟವಾಯಿತು. ಭಾರತೀಯರ ಮನೆಗಳಲ್ಲಿ ಮಾಡುವ ಸರ್ಕಾರದ ಬಗೆಗಿನ ವಿವಿಧ ಸ್ವರೂಪದ ಅಸಮಾಧಾನಗಳ ಹಾಗೂ ಆಡಳಿತದ ಬಗೆಗಿನ ಕುಂದುಕೊರತೆಗಳ ಪರಿಹಾರಕ್ಕೆ ಅಂಥ ಸಂಗತಿಗಳು ಸರ್ಕಾರದ ಗಮನಕ್ಕೆ ಬಾರದೇ ಉಳಿಯುವ ಅಂಶಗಳು ತೀವ್ರ ತರದ ಕ್ಷೋಭೆಗೂ 1857ರ ರೀತಿಯ ದಂಗೆಗೂ ಹಾದಿಮಾಡಿತು. ಇದನ್ನು ತಪ್ಪಿಸಲು ಜನಮನದ ಭಾವನೆಗಳ ಪ್ರಕಟೀಕರಣಕ್ಕಾಗಿ ರಕ್ಷಣಾಕವಾಟದಂತೆ ಕೆಲಸಮಾಡಬಲ್ಲ ಒಂದು ವ್ಯವಸ್ಥೆಯನ್ನು ರೂಪಿಸಬೇಕೆಂದು ಅನೇಕ ಆಂಗ್ಲ ಅಧಿಕಾರಿಗಳು ಆಲೋಚಿಸುತ್ತಿದ್ದರು. ಅಂಥವರಲ್ಲಿ ಒಬ್ಬರಾದ ಎ.ಓ. ಹ್ಯೂಮ್ ಎಂಬ ಅಧಿಕಾರಿ, ಭಾರತೀಯರ ಮಾನಸಿಕ, ನೈತಿಕ, ಸಾಮಾತಿಕ ಮತ್ತು ರಾಜಕೀಯ ಪುನರುತ್ಥಾನಕ್ಕಾಗಿ ಒಂದು ಸಂಸ್ಥೆ ಸ್ಥಾಪಿಸಬೇಕೆಂದು ಕಲ್ಕತ್ತಾ ವಿಶ್ವವಿದ್ಯಾಲಯದ ಪದವೀಧರರಿಗೆ ಬಹಿರಂಗ ಪತ್ರ ಬರೆದರು. ಆಗಿನ ವೈಸ್‍ರಾಯ್ ಡಫರಿನ್ ಈ ಕಲ್ಪನೆಗೆ ಬೆಂಬಲ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉಮೇಶಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ 1885 ಡಿಸೆಂಬರಿನಲ್ಲಿ ಸ್ಥಾಪಿತವಾಗಿ ದೇಶದ ವಿವಿಧ ಭಾಗಗಳಿಂದ 72ಜನ ಪ್ರತಿನಿಧಿಗಳು ಅದರಲ್ಲಿ ಪಾಲುಗೊಂಡರು. ದೇಶೀಯ ಸಂಪತ್ತಿನ ಬೀಜ ಇದಾಗಬೇಕು ಎಂದು ಹ್ಯೂಮ್ ತಮ್ಮ ಆಶಯ ವ್ಯಕ್ತಪಡಿಸಿದರು. ಮರುವರ್ಷ ಕಾಂಗ್ರೆಸ್ಸು ಕಲ್ಕತ್ತಾದಲ್ಲಿ ಸೇರಲು ಸುರೇಂದ್ರನಾಥ ಬ್ಯಾನರ್ಜಿ ಅದರ ಕ್ರಿಯಾಶೀಲ ಸದಸ್ಯರಾದರು. ಅವರ ಇಂಡಿಯಾ ಎಸೋಸಿಯೇಷನ್ ಕಾಂಗ್ರೆಸ್‍ನಲ್ಲಿ ಲೀನವಾಯಿತು. ಭಾರತ ಸರ್ಕಾರದಲ್ಲಿ ಸುಧಾರಣೆ ಭಾರತೀಯರಿಗೆ ಕೇಂದ್ರ ಮತ್ತು ಪ್ರಾಂತಮಟ್ಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಮತ್ತು ಸ್ವಯಮಾಡಳಿತದ ವಿಸ್ತರಣೆ, ತಾಂತ್ರಿಕವೂ ಸೇರಿ ಶಿಕ್ಷಣದ ವಿಸ್ತರಣೆ, ಸೇನಾ ವೆಚ್ಚದಲ್ಲಿ ಕಡಿತ, ಅಧಿಕಾಧಿಕ ಭಾರತೀಯರನ್ನೂ ಸೇನೆಯಲ್ಲಿ ಭರ್ತಿ ಮಾಡುವುದು, ಐಸಿಎಸ್ ಪರೀಕ್ಷೆಗಳನ್ನು ಭಾರತದಲ್ಲೂ ನಡೆಸಲು ಒತ್ತಾಯ ಮುಂತಾದ ಠರಾವುಗಳನ್ನು ಆರಂಭದಲ್ಲಿ ಕಾಂಗ್ರೆಸ್ ತನ್ನ ಅಧಿವೇಶನಗಳಲ್ಲಿ ಮಾಡಿತು. ಮೂರನೆಯ ಅಧಿವೇಶ ಮದ್ರಾಸ್‍ನಲ್ಲಿ (1887)ನಡೆಯಿತು. ಆರಂಭದ ಮೂರು ವರ್ಷಗಳ ಕಾಂಗ್ರೆಸ್ ಅಧಿವೇಶನಗಳ ಕಾಲಕ್ಕೆ ಆಯಾ ಪ್ರಾಂತದ ರಾಜ್ಯಪಾಲರು ಪ್ರತಿನಿಧಿಗಳಿಗೆ ಉಪಾಹಾರಕೂಟ ಏರ್ಪಡಿಸಿದರಾದರೂ ಮುಂದೆ ಇಂಥ ಸ್ನೇಹನಿಲುವನ್ನು ಬ್ರಿಟಿಷ್ ಸರ್ಕಾರ ಇಟ್ಟುಕೊಳ್ಳಲಿಲ್ಲ. ಆರಂಭದಲ್ಲಿ ಪ್ರಾರ್ಥನೆ ಮುಂದೆ ಅಲ್ಪಸ್ವಲ್ಪ ಟೀಕೆಯ ಸ್ವರೂಪದಲ್ಲಿ ಇದ್ದ ಠರಾವುಗಳು ಕಟುಭಾಷೆಯ ಅಥವಾ ಸರ್ಕಾರದ ವಿರುದ್ಧವಾದ ನಿಲುವಿನವಾಗಿರಲಿಲ್ಲ. ಮುಂದೆ ಸರ್ಕಾರ ಇದೊಂದು ವಿದ್ಯಾವಂತ ಅಲ್ಪಸಂಖ್ಯಾತರ ಸಂಸ್ಥೆಯೆಂದು ಕಾಂಗ್ರೆಸ್ಸನ್ನು ತಿರಸ್ಕಾರದಿಂದ ಕಾಣಲಾರಂಭಿಸಿತು. 1892ರ ಇಂಡಿಯಾ ಕೌನ್ಸಿಲ್‍ಬಿಲ್ (ಅದು ಕೂಡ ಬ್ರಿಟಿಷ್ ಎಂ. ಪಿ. ಬ್ರಾಡ್ಲೊರ ಯತ್ನದಿಂದ ಆದುದು) ಬಿಟ್ಟರೆ ಬೇರೆ ಯಾವುದೂ ಹೇಳಿಕೊಳ್ಳುವಂಥ ಸಾಧನೆಯನ್ನು ಕಾಂಗ್ರೆಸ್ ಆರಂಭದ ವರ್ಷಗಳಲ್ಲಿ ಮಾಡದ್ದರಿಂದ ಭಾರತದ ರಾಜಕೀಯದಲ್ಲಿ ತೀವ್ರಗಾಮಿ ಮತ್ತು ಕ್ರಾಂತಿಕಾರಿಪಂಥದ ಉದಯವಾಯಿತು.

ಕಾಂಗ್ರೆಸ್ಸಿನ ವಯಸ್ಸಾದ ಹಿರಿಯನಾಯಕರು ಮನವಿ ಪತ್ರಗಳಲ್ಲಿ ಮತ್ತು 1892ರ ಶಾಸನ ಸಭೆಗಳಲ್ಲಿ ಪಾಲ್ಗೊಂಡು ಬ್ರಿಟಿಷರ ಬರಿಯ ಆಶ್ವಾಸನೆಗಳನ್ನು ನಂಬಿದವರು ಆಗಿನ ನವಸುಶಿಕ್ಷಿತ ತರುಣರಿಗೆ ಸ್ಫೂರ್ತಿ ನೀಡಲು ಸಮರ್ಥರಾಗಲಿಲ್ಲ. ಅಬಿಸೀನಿಯದಲ್ಲಿ ಇಟಲಿಗೂ (1896) ಜಪಾನ್‍ನಲ್ಲಿ ರಷ್ಯಾಕ್ಕೂ (1905) ಆದ ಸೋಲಿನಿಂದ ಬಿಳಿಯರನ್ನು ಇತರ ಜನ ಯುದ್ಧದಲ್ಲಿ ಸೋಲಿಸಲು ಸಾಧ್ಯವೆಂದು ಮನವರಿಕೆ ಮಾಡಿಕೊಂಡ ಈ ತರುಣರಿಗೆ ಅರ್ಜಿ ಮನವಿಗಳ ಶಾಸನ ಬದ್ಧ ಕ್ರಮದಲ್ಲಿ ನಂಬಿಕೆ ಬರಲಿಲ್ಲ. ಟಿಳಕರ ಕೇಸರಿ (1880) ಅವರು ಆರಂಭಿಸಿದ ಗಣಪತಿ ಉತ್ಸವ (1893) ಹಾಗೂ ಶಿವಾಜಿ ಉತ್ಸವ (1895) ಮಹಾರಾಷ್ಟ್ರದಲ್ಲಿ 1896ರಲ್ಲಿ ಬಂದ ತೀವ್ರ ಕ್ಷಾಮ ಇದರ ಹಿಂದೆ ಮೂಡಿದ ಪ್ಲೇಗು (1897) ಇವೆಲ್ಲ ಉಗ್ರಪಂಥದ ಉದಯಕ್ಕೆ ಮಹಾರಾಷ್ಟ್ರದಲ್ಲಿ ಅವಕಾಶವಿತ್ತಿತ್ತು. ಚಾಪೇಕರ್ ಬಂಧುಗಳ ಹುತಾತ್ಮ್ಯದಿಂದ ಉದ್ದೀಪನಗೊಂಡ ವಿನಾಯಕ ಸಾವರ್ಕರ್ ಕ್ರಾಂತಿಕಾರೀ ಸಂಘಟನೆ ಮಿತ್ರಮೇಳಾ(1900), ಮುಂದೆ ಅಭಿನವ ಭಾರತ (1908) ಇವುಗಳ ಸ್ಥಾಪನೆಗೆ ಕಾರಣರಾದರು. ಗುಪ್ತ ಸಂಘಟನೆ, ವ್ಯಾಯಾಮಶಾಲೆಗಳ ಸ್ಥಾಪನೆ, ಪತ್ರಿಕೆಗಳಲ್ಲಿ ಕ್ರಾಂತಿಕಾರೀ ವಿಚಾರಗಳು, ಪ್ರಕಟನೆ ಮೊದಲಿಟ್ಟಿತು. ಇದೇ ರೀತಿ ಬಂಗಾಳದಲ್ಲಿ ಬಂಕಿಮ್‍ಚಂದ್ರ ಚಟ್ಟೋಪಾಧ್ಯಾಯರ ಬರೆಹಗಳು, ಪರಮಹಂಸ, ವಿವೇಕಾನಂದರ ಚಟುವಟಿಕೆಗಳು ಬ್ರಟಿಷ್ ಅಧಿಕಾರಿಗಳ ಬಂಗಾಳೀ ವಿರೋಧಿ ನಿಲುವು, ನೀಲಿ ಬೆಳೆಗಾರರ ಶೋಷಣೆ, ಬಿಪಿನ್ ಚಂದ್ರಪಾಲ್ ಮತ್ತು ಅರವಿಂದರ ಚಟುವಟಿಕೆಗಳು ಹಾಗೂ ಹಿಂದೂ ಪೇಟ್ರಿಆಟ್ ಬಗೆಯ ಪತ್ರಿಕೆಗಳ ಬರೆಹ ಬಂಗಾಳದಲ್ಲಿ ಕ್ರಾಂತಿಕಾರಿಗಳ ಚಟುವಟಿಕೆಗೆ ಹಾದಿ ಮಾಡಿತು. 1902ರಲ್ಲಿ ಅನುಶೀಲನ ಸಮಿತಿ ಸ್ಥಾಪನೆಯಾಯಿತು. ಜತೀಂದ್ರ ಬ್ಯಾನರ್ಜಿ ಮತ್ತು ಬಾರೀಂದ್ರ ಘೋಷ್ ಇದರ ಮುಖ್ಯ ಕಾರ್ಯಕರ್ತರು. ಇದೇ ರೀತಿ ಪಂಜಾಬಿನ ಸಹರಾನಪುರದಲ್ಲಿ ಒಂದು ಗುಪ್ತ ಸಂಘಟನೆ ಆರಂಭವಾಯಿತು. ಲಾಲಾಹರದಯಾಳ್, ಅಜಿತ್‍ಸಿಂಗ್, ಸೂಫೀ ಅಂಬಾಪ್ರಸಾದ್ ಇವರೆಲ್ಲ ಈ ಸಂಘಟನೆಗೆ ಸೇರಿದ್ದರು. ಲಂಡನ್‍ನಲ್ಲಿ ನೆಲೆನಿಂತ ಗುಜರಾತೀ ಗೃಹಸ್ಥ ಶ್ಯಾಮಜೀ ಕೃಷ್ಣವರ್ಮ ಅಲ್ಲೇ ಇಂಡಿಯನ್ ಹೋಮ್ ರೂಲ್ ಲೀಗ್ ಸ್ಥಾಪಿಸಿದರು. ಇಂಡಿಯನ್ ಸೋಷಲಜಿಸ್ಟ್ ಪತ್ರಿಕೆ ಹಾಗೂ ಇಂಡಿಯಾ ಹೌಸ್‍ಗಳನ್ನು ಅದೇ ವರ್ಷಸ್ಥಾಪಿಸಿದರು (1905). ಭಿಕಾಜಿ ಕಾಮಾ ಮತ್ತು ಲಾಲಹರದಯಾಳ್ ಅವರ ಜೊತೆ ಸೇರಿಕೊಂಡರು. ಈ ಎಲ್ಲ ಸಂಸ್ಥೆಗಳು ಬೆಳೆಯಲು ವಂಗಭಂಗ ಹಾಗೂ ಸ್ವದೇಶೀ ಚಳವಳಿಗಳು ಒಳ್ಳೆಯ ಅವಕಾಶ ನೀಡಿದುವು. 1908ರಲ್ಲಿ ಅಲಿಪುರದಲ್ಲಿ ಖುದಿರಾಮ್ ಬಸು ಬಾಂಬು ಹಾಕಿ ಮತ್ತು ನಾಸಿಕದಲ್ಲಿ 1909ರಲ್ಲಿ ಅನಂತರ ಕನ್ಸೇರ್ ಜ್ಯಾಕ್ಸನ್‍ನನ್ನು ಕೊಂದು ಹಾಗೂ ಅದೇ ವರ್ಷ ಮದನಲಾಲ್ ಢಿಂಗ್ರಾ ಲಂಡನಿನಲ್ಲಿ ಕರ್ಜನ್ ವಯ್ಲಿಗೆ ಗುಂಡಿಕ್ಕಿ ಗುಪ್ತ ತೀವ್ರಗಾಮಿ ಸಂಘಟನೆಗಳ ಅಸ್ತಿತ್ವದ ಪರಿಚಯ ಜಗತ್ತಿಗೆ ತೋರಿದರು.

ಇದೇ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿ ಮಂದಗಾಮಿ ಮತ್ತು ಉಗ್ರಗಾಮಿ ಗುಂಪು ಬೆಳೆಯಿತು. ಮಂದಗಾಮಿಗಳು ಬ್ರಿಟಿಷರ ಔದಾರ್ಯದಲ್ಲಿ ನಂಬಿಕೆ ಇದ್ದವರು. ಬ್ರಿಟಿಷರ ಆಡಳಿತ ಇಲ್ಲಿ ಇದ್ದಂತೆ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆ ಬಯಸಿದವರು; ತಕ್ಷಣ ಸ್ವಾತಂತ್ರ್ಯ ಬೇಕೆಂದು ಬಯಸಿದವರಲ್ಲ, ವೈಜ್ಞಾನಿಕ ಸುಧಾರಣೆಗಳಲ್ಲಿ ನಂಬಿಕೆಯಿಟ್ಟವರು. ಫಿರೋಜಾಷಾ ಮೆಹ್ತಾ ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಮಂದಗಾಮಿಗಳ ನಾಯಕರು. ಪೂರ್ಣ ಸ್ವಾತಂತ್ರಯಕ್ಕಾಗಿ ಹೋರಾಡುವ ಉಗ್ರಗಾಮಿಗಳಲ್ಲಿ ಟಿಳಕ, ಬಿಪಿನ್‍ಚಂದ್ರಪಾಲ್ ನಾಯಕರು. ಈ ಎರಡು ಗುಂಪುಗಳ ನಡುವಿನ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋಗಿ 1907ರ ಸೂರತ್ ಕಾಂಗ್ರೆಸ್ಸಿನಲ್ಲಿ ವಿಭಜನೆಗೆ ಕಾರಣವಾಯಿತು.

ವೈಸ್‍ರಾಯ್ ಕರ್ಜನ್ 1905ರಲ್ಲಿ ಬಂಗಾಳದ ವಿಭಜನೆ ಮಾಡಿದಾಗ ವಂಗಭಂಗ ವಿರೋಧಿ ಹಾಗೂ ಸ್ವದೇಶಿ ಚಳವಳಿ, ವಿದೇಶೀ ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ ಮುಂತಾದ ಚಳವಳಿಗಳು ಪ್ರಾರಂಭವಾದವು. ಲಾಲ್, ಬಾಲ್, ಪಾಲ್, ಎಂದು ಪ್ರಸಿದ್ಧರಾದ ಬಾಲಾ ಲಜಪತ್‍ರಾಯ್, ಲಾಲ ಗಂಗಾಧರ ಟಿಳಕ್ ಮತ್ತು ಬಿಪಿನ್‍ಚಂದ್ರಪಾಲ್ ಇವರುಗಳು ಚಳವಳಿಯ ನಾಯಕರಾದರು. ಚಳವಳಿಯನ್ನು ವಿರೋಧಿಸಿದ ಸುರೇಂದ್ರನಾಥಬ್ಯಾನರ್ಜಿ ಜನಪ್ರಿಯತೆಗೆ ಎರವಾದರು. ರಾಷ್ಟ್ರ ಭಕ್ತಿಗೀತೆಗಳನ್ನು ಹಾಡುತ್ತ ಪ್ರಭಾತಫೇರಿ ನಡೆಸುವುದು, ವಿದೇಶೀ ವಸ್ತು ಮಾರಾಟದ ಅಂಗಡಿಗಳ ಮುಂದೆ ಪ್ರದರ್ಶನ, ವಿದೇಶೀವಸ್ತುಗಳ ನಾಶ ಸಾಮಾನ್ಯವಾಯಿತು. ಇದರಿಂದ ಅನೇಕರ ಬಂಧನ, ಶಿಕ್ಷೆಗಳೂ ಆದುವು. ಟಿಳರಿಗೆ 1908ರಲ್ಲಿ ಆರು ವರ್ಷ ಶಿಕ್ಷೆಯಾಯಿತು. ಲಾಲಾಲಜಪತರಾಯ್ ಅವರನ್ನು ಗಡೀಪಾರು ಮಾಡಿದರು. ಚಳವಳಿಯ ಹಿಂದೆಯೇ ಕ್ರಾಂತಿಕಾರಿಗಳ ಚಟುವಟಿಕೆ ಹೆಚ್ಚಿ ಅಲಿಪುರ್ ಬಾಂಬ್ ಪ್ರಕರಣ (1908) ನಾಸಿಕದ ಕಲೆಕ್ಟರ್ ಜಾಕ್ಸನ್‍ನ ಕೊಲೆ(1909) ಮುಂತಾದ ಘಟನೆಗಳಾದುವು. ಕ್ರಾಂತಿಕಾರರ ವಿರುದ್ಧ ಉಗ್ರ ಕಾರ್ಯಾಚರಣೆ ಕೈಗೊಳ್ಳಲಾಯಿತು. 1907ರಲ್ಲಿ ಸೂರತ್‍ನಲ್ಲಿ ಕಾಂಗ್ರೆಸ್ ಒಡೆಯಿತು. ಮಂದಗಾಮಿಗಳ ಪಕ್ಷ ಎತ್ತಿ ಹಿಡಿಯುವ ಉದ್ದೇಶದಿಂದ 1909ರಲ್ಲಿ ಮಿಂಟೋಮಾರ್ಲೆ ಸುಧಾರಣೆಗಳನ್ನು ಸುಧಾರಣೆಗಳನ್ನು ಜಾರಿಗೆ ತಂದರು. ಕಾಂಗ್ರೆಸ್ಸಿನಲ್ಲಿ ಮಂದಗಾಮಿಗಳ ಮೇಲ್ಗೈಯಾಯಿತು. ಆದರೆ ಈ ಸುಧಾರಣೆಗಳಿಂದ ಭಾರತೀಯರಿಗೆ ನಿರೀಕ್ಷಿತ ಲಾಭವೇನೂ ಸಿಗಲ್ಲಿಲ್ಲ. 1915ರಲ್ಲಿ ಗೋಖಲೆ ಮತ್ತು ಫಿರೋಜ್ ಷಾ ಮೆಹ್ತಾ ತೀರಿಕೊಂಡದ್ದರಿಂದಲೂ 1941ರಲ್ಲಿ ಟಿಳಕರು ಜೈಲಿನಿಂದ ಮರಳಿದ್ದರಿಂದಲೂ ಕಾಂಗ್ರೆಸ್ಸಿನ ಮಂದಗಾಮೀನಾಯಕರು ವಿಶೇಷ ಕ್ರೀಯಾಶೀಲರಾಗಿ ಇಲ್ಲದ್ದರಿಂದಲೂ ಮಂದಗಾಮಿ ಪಕ್ಷ ದುರ್ಬಲವಾಯಿತು. 1915ರ ಮುಂಬೈ ಕಾಂಗ್ರೆಸ್ಸಿನಲ್ಲಿ ಆನಿಬೆಸೆಂಟರ ಭಾಷಣದಲ್ಲೇ ತೀವ್ರಗಾಮಿಗಳು ಮೇಲ್ಮೈ ಸಾಧಿಸುತ್ತಿದ್ದುದರ ಸುಳಿವು ಕಾಣಬರುತ್ತದೆ. 1916ರ ಲಕ್ನೋ ಕಾಂಗ್ರೆಸ್ಸಿನಲ್ಲಿ ಮತ್ತೆ ತೀವ್ರಗಾಮಿಗಳು ಕಾಂಗ್ರೆಸ್ಸಿಗೆ ಮರಳಿದರು . 1919ರ ಜಲಿಯನ್‍ವಾಲಾ ದುರಂತ ಹಾಗೂ ಮುಂದೆ 1920ರಲ್ಲಿ ಕಾಂಗ್ರೆಸ್ಸಿನ ನಾಯಕತ್ವ ಗಾಂಧೀಜಿಯ ಕಡೆ ಬಂದು ಅವರು ಅಸಹಕಾರ ಚಳವಳಿ ಹೂಡಿದ ಘಟನೆಗಳಿಂದ ಮಂದಗಾಮಿಗಳು ಹಿನ್ನಡೆ ಕಂಡರು. ಆದರೆ ಮಂದಗಾಮಿಗಳಾದ ಶ್ರೀನಿವಾಸ ಶಾಸ್ತ್ರಿ, ತೇಜ್ ಬಹದೂರ್ ಸಪ್ರು, ಚಮನ್ ಲಾಲ್ ಸೆಟಲ್‍ವಾಡ್ ಮುಂತಾದವರು ಇಂಡಿಯನ್ ಲಿಬರಲ್ ಫೆಡರೇಶನ್ ಕಟ್ಟಿದರು. ಟಿಳಕರೂ ಅನಿಬೆಸೆಂಟರೂ 1916ರಲ್ಲಿ ಪ್ರತ್ಯೇಕ ಹೋಮ್ ರೂಲ್ ಲೀಗ್ ಸ್ಥಾಪಿಸಿ ಜನಜಾಗೃತಿಗೆ ಪ್ರಯತ್ನಿಸಿದರು.

ಕ್ರಾಂತಿಕಾರಿ ಚಟುವಟಿಕೆಗಳು ಬೆಳೆಯುತ್ತ ಸಾಗಿದುವು. ಜ್ಯಾಕ್ಸನ್ ಕೊಲೆಯಿಂದ ಸಾವರ್ಕರ್ ಹಾಗೂ ಅವರ ಸೋದರರು ಬಂಧಿತರಾಗಿ ದೀರ್ಘಕಾಲ ಕರಿನೀರ ಶಿಕ್ಷೆಗೆ ಗುರಿಯಾದರು. ಬಂಗಾಳದಲ್ಲಿ ಅಲಿಪುರ್ ಬಾಂಬ್ (1908) ಪ್ರಕರಣದ ವಿಚಾರಣೆಯಾಗಿ ಖುದಿರಾಮನಿಗೆ ಫಾಶಿಯಾದಾಗ ಆ ಬಗ್ಗೆ ಬರೆದ ಲೇಖನಕ್ಕಾಗಿಯೇ ಟಿಳಕರಿಗೆ ಶಿಕ್ಷೆಯಾಯಿತು. ಬಂಗಾಲದ ಮನಿಕ್ತೊಲಾ ಹಾಗೂ ಇತರ ಕಡೆ ಬ್ರಿಟಿಷರಿಗೆ ದೊರೆತ ವಸ್ತುಗಳಿಂದಾಗಿ ಕ್ರಾಂತಿಕಾರಿಗಳನೇಕರ ಬಂಧನವಾಯಿತು. ಅರವಿಂದಘೋಷರು ಪಾಂಡಿಚೆರಿಗೆ (ಪುದುಚೇರಿ) ಹೋಗಿ ಬಂಧನ ತಪ್ಪಿಸಿಕೊಂಡರು. ಕನ್ನಯಲಾಲ್‍ದತ್ತ, ಎಸ್. ಎಸ್ ಬೋಸರ ವಿಚಾರಣೆಯಾಗಿ ಅವರಿಗೆ ಫಾಶಿಯಾಯಿತು. ಈ ಪ್ರಕರಣದ ಮಾಫಿ ಸಾಕ್ಷಿದಾರನಾದ ನರೇಂದ್ರ ಗೋಸಾಯಿ, ಖುದಿರಾಮನನ್ನು ಬಂಧಿಸಿದ ಪೊಲೀಸ್‍ಅಧಿಕಾರಿ, ಅವನ ವಿರುದ್ಧ ಖಟ್ಲೆಯ ಸರ್ಕಾರೀ ವಕೀಲ ಮುಂತಾದವರನ್ನು ಕ್ರಾಂತಿಕಾರಿಗಳು ಕೊಂದರು. ಇದೇ ಕಾಲದಲ್ಲಿ ಪಾಂಡಿಚೇರಿಯಲ್ಲಿ ತರಬೇತಿ ಪಡೆದ ಮಂಜಿ ಅಯ್ಯರ್ 1911ರಲ್ಲಿ ತಿನ್ನವೆಲ್ಲಿ ಮ್ಯಾಜಿಸ್ಟ್ರೇಟನಿಗೆ ಗುಂಡಿಕ್ಕಿಕೊಂದು ಫಾಶಿಗೇರಿದ. ಇದರ ಹಿಂದೆಯೇ ದೆಹಲಿಯಲ್ಲಿ ಹಾರ್ಡಿಂಜ್ ಮೇಲೆ ಬಾಂಬ್ ಎಸೆದು ರಾಸ್ ಬಿಹಾರಿ ಬೋಸ್ ಪರಾರಿಯಾದರು. ಈ ದೆಹಲಿ ಬಾಂಬ್ ಪ್ರಕರಣದಲ್ಲಿ ಮಾಸ್ಟರ್ ಅಮೀರ್‍ಚಂದ್‍ಭಾಯಿ, ಬಾಲಮುಕುಂದ್ ಮುಂತಾದವರಿಗೆ ಫಾಶಿಯಾಯಿತು (1914). ಲಂಡನ್‍ನಿಂದ ಪ್ಯಾರಿಸ್ಸಿಗೆ ಹೋಗಿದ್ದ ಶ್ಯಾಮಜಿ ಕೃಷ್ಣವರ್ಮ ಕ್ರಾಂತಿಕಾರೀ ಚಟುವಟಿಕೆ ಮತ್ತು ಭಾರತ ಪರ ಪ್ರಚಾರ ನಡೆಸಿದರು. ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜಶಾಸ್ತ್ರಜ್ಞರ ಸಭೆಯಲ್ಲಿ ಭಾರತದ ರಾಷ್ಟ್ರಧ್ವಜ ತಯಾರಿಸಿ ಪ್ರದರ್ಶಿಸಲು ಕಾಮಾರನ್ನು ಕಳುಹಿಸಿದವರೇ ಅವರು. ಅಲ್ಲದೆ ಬರ್ಲಿನ್ನಿನಲ್ಲಿ ನೆಲಸಿದ್ದ ಕ್ರಾಂತಿಕಾರಿ ವೀರೇಂದ್ರನಾಥ ಚಟ್ಟೋಪಾಧ್ಯಾಯರ ಕೂಡ ಅವರಿಗೆ ಸಂಬಂಧವಿತ್ತು. ಲಾಲಾಹರದಯಾಳರು ಲಂಡನ್‍ನಿಂದ ಅಮೇರಿಕಕ್ಕೆ ತೆರಳಿ ಅಲ್ಲಿ ಡಾ. ಖಾನಖೋಜೆ ಸವರ ನೆರವಿನಿಂದ ಘದರ್ ಪಕ್ಷ ಸ್ಥಾಪಿಸಿ (1912) ಅಲ್ಲಿಯ ಭಾರತೀಯರನ್ನು ಸಂಘಟಿಸಿದರು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಭಾರತದಲ್ಲಿ ಕ್ರಾಂತಿನಡೆಸುವ ಯೋಜನೆ ಹಾಕಿದರು ಜರ್ಮನಿಗೆ ಹೋಗಿ ಅಲ್ಲಿಯ ಸರ್ಕಾರದ ನೆರವಿನಿಂದ ಕಾಬೂಲ್‍ನಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ರಾಜಾ ಮಹೇಂದ್ರಪ್ರತಾಪರ ನೇತೃತ್ವದಲ್ಲಿ ಸ್ಥಾಪಿಸಿದರು (1915). ಫೆಬ್ರುವರಿ 21ಕ್ಕೆ ಇಡೀ ಭಾರತದಲ್ಲಿ ದಂಗೆ ಎಬ್ಬಿಸಬೇಕೆಂದು ಯೋಚಿಸಿದರು. ರಾಸ್ ಬಿಹಾರ್ ಬೋಸ್ ಮುಂತಾದವರು ಇದರ ಹಿನ್ನೆಲೆಯಲ್ಲಿ ಇದ್ದರು. ಆದರೆ ಇದರ ಗುಟ್ಟು ಕೃಪಾಲ್‍ಸಿಂಗ್ ಎಂಬವನಿಂದ ಬ್ರಿಟಿಷರಿಗೆ ತಿಳಿದು ಲಾಹೋರ್ ಒಳಸಂಚಿನ ಖಟ್ಲೆ ಎಂದು ಪ್ರಸಿದ್ಧವಾದ ಈ ಹಲವು ಪ್ರಕರಣಗಳಲ್ಲಿ 291 ಜನರ ವಿಚಾರಣೆಯಾಗಿ 42 ಜನರಿಗೆ ಫಾಶಿ, 114 ಜನರಿಗೆ ಕರಿನೀರು ಶಿಕ್ಷೆ ಆಯಿತು (1915). ಕರ್ತಾರ್‍ಸಿಂಗ್, ಭಾಯಿಪರಮಾನಂದ, ಜಗತ್‍ಸಿಂಗ್, ಗಣೇಶ ಪಿಂಗಳ್ ಇವರ ಬಗ್ಗೆ ಫಾಶಿ ಶಿಕ್ಷೆ ಪ್ರಕಟಿಸಿದಾಗ ಅವರು ಸಂತಸದಿಂದ ನಲಿದಾಡಿದರು. ಆದರೆ ಭಾಯಿ ಪರಮಾನಂದರಿಗೆ ಫಾಶಿಯ ಬದಲು ಜೀವಾವಧಿ ಶಿಕ್ಷೆಕೊಟ್ಟರು.

ಒಂದನೆಯ ಮಹಾಯುದ್ಧದ ಅನಂತರ ರಷ್ಯ ಕ್ರಾಂತಿಯ ವಿಶೇಷ ಪ್ರೇರಣೆಯಿಂದಾಗಿ ಕ್ರಾಂತಿಕಾರಿ ಸಂಘಟನೆಗಳಾದುವು. ಬಂಗಾಳದ ಅನುಶೀಲನ ಸಮಿತಿ ನಾಯಕರ ನೆರವಿನಿಂದ 1923ರಲ್ಲಿ ಕಾನ್ಪುರದಲ್ಲಿ ಹಿಂದೂಸ್ಥಾನ ರಿಪಬ್ಲಿಕನ್ ಅಸೋಸಿಯೇಶನ್ ಸಂಘಟಿಸಿದ್ದ ರಾಮಪ್ರಸಾದ ಬಿಸ್ಮಲ್ ಅದೇ ವರ್ಷ ತನ್ನ ಜೊತೆಗಾರರ ನೆರವಿನಿಂದ ಕಾಕೋರಿಯಲ್ಲಿ ರೈಲು ನಿಲ್ಲಿಸಿ ಸರ್ಕಾರಿ ತಿಜೋರಿ ಲೂಟಿ ಮಾಡಿದ. ಈ ಪ್ರಕರಣದಲ್ಲಿ 40 ಜನರ ಬಂಧನವಾಗಿ ಅಶ್ಭಾಖ್ ಉಲ್ಲಾಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಶನ್‍ಸಿಂಗ್, ರಾಜೆಂದ್ರಲಾಹಿರಿ ಇವರುಗಳಿಗೆ ಫಾಶಿಯಾಯಿತು (1927). ಪಂಜಾಬಿನಲ್ಲಿ ಭಗತ್‍ಸಿಂಗ್ ಮುಂತಾದವರು ಸಂಘಟಸಿದ್ದ ನೌಜವಾನ್ ಭಾರತ ಸಭಾ (1925) 1928ರಲ್ಲಿ ಉತ್ತರ ಪ್ರದೇಶದ ಸಂಘಟನೆಯಲ್ಲಿ ಐಕ್ಯವಾಗಿ ಹಿಂದೂಸ್ಥಾನ ಸೋಷಲಿಷ್ಟ್ ರಿಪಬ್ಲಿಕನ್ ಆರ್ಮಿ ಅಸ್ತಿತ್ವಕ್ಕೆ ಬಂತು. ಲಾಹೊರಿನಲ್ಲಿ ಸ್ಯಾಂಡ್‍ರ್ಸನ ಕೂಲೆ, ದೆಹಲಿ ಕೇಂದ್ರ ಶಾಸನ ಸಭೆಯಲ್ಲಿ ಬಾಂಬ್ ಎಸೆತ ಇವುಗಳ ಸಂಬಂಧವಾಗಿ ಭಗತ್‍ಸಿಂಗ್, ರಾಜಗುರು, ಸುಖದೇವ ಇವರುಗಳನ್ನು 1931ರಲ್ಲಿ ಫಾಶಿಗೇರಿಸಲಾಯಿತು ಅವರ ಜೊತೆಗಾರ ಹಾಗೂ ಅಗ್ರಗಣ್ಯ ಹೋರಾಟಗಾರ ಚಂದ್ರಶೆಖರ ಆಝಾದ್ 1931ರಲ್ಲಿ ಅಲಹಾಬಾದ್‍ನಲ್ಲಿ ಪೊಲೀಸರ ವಿರುದ್ಧ ಹೋರಾಡುತ್ತ ಅಸು ನೀಗಿದ. ಈ ಎಲ್ಲ ಕ್ರಾಂತಿಕಾರಿಗಳ ಚಟುವಟಿಕೆಗಳು ದೇಶದ ತರುಣರಿಗೆ ದೇಶ ಭಕ್ತಿಯ ದೀಕ್ಷೆ ನೀಡಿದುವು. ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ತಂದ ರೌಲೆಟ್ ಕಾಯಿದೆ ಪ್ರತಿಭಟನೆಯ ಜಲಿಯನವಾಲಾ ಬಾಗ್‍ನ ಸಭೆಯ ಮೇಲೆ ನಡೆಸಿದ ಅಮಾನುಷ ಗುಂಡಿನ ದಾಳಿ ಆಂಗ್ಲರ ಉದಾರ ನೀತಿಯ ಪೊಳ್ಳುತನವನ್ನು ಬಯಲು ಮಾಡಿ ಅಸಂಖ್ಯ ಜನರನ್ನು ಬ್ರಿಟಿಷರ ವಿರುದ್ಧ ಬಡಿದೆಬ್ಬಿಸಿತು. ಮರು ವರ್ಷವೇ ಟಿಳಕರು ತೀರಿಕೊಂಡು ಗಾಂಧೀಜಿಯವರು ಭಾರತದ ರಾಜಕೀಯ ರಂಗದ ನಾಯಕರಾಗಿ 1920ರ ನಾಗಪುರ ಕಾಂಗ್ರೆಸ್ಸಿನಲ್ಲಿ ಅಹಿಂಸಾತ್ಮಕ ಅಸಹಕಾರದ ಠರಾವು ಸತ್ಯಾಗ್ರಹದ ರೂಪರೇಷೆ ಸಿದ್ಧವಾದುವು. ಮುಸಲ್ಮಾನರನ್ನು ಚಳವಳಿಯಿಡೆ ಸೆಳೆಯಲೆಂದು ಪದಚ್ಯುತನಾದ ಟರ್ಕಿಯ ಖಲೀಫನ ಪುನಃ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿತು. ಹೀಗೆ ಕಾಂಗ್ರೆಸ್ ಖಿಲಾಫತ್ ಚಳವಳಿ ಹೂಡಿತು. ವಿದೇಶಿ ವಸ್ತುಗಳ ಬಹಿಷ್ಕಾರ, ವಿದೇಶಿ ವಸ್ತು ಮತ್ತು ಮದ್ಯ ಮಾರುವ ಅಂಗಡಿಗಳ ಮುಂದೆ ಧರಣಿ, ಸರ್ಕಾರಿ ನೌಕರಿಯ ತ್ಯಾಗ, ವಕೀಲಿ ತ್ಯಾಗ, ಬಿರುದು ಬಾವಲಿಗಳ ತ್ಯಾಗ, ಶಾಸನ ಸಭೆ ನ್ಯಾಯಾಲಯ, ಶಾಲಾ ಕಾಲೇಜುಗಳ ಬಹಿಷ್ಕಾರ ಮುಂತಾದ ಹಲವು ರೂಪದಲ್ಲಿ ಚಳುವಳಿ ದೇಶದಲ್ಲಿ ಎಲ್ಲೆಡೆ ಸಾಗಿತು. ರಾಷ್ಟ್ರೀಯ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಸ್ಥಾಪನೆ ನಡೆಯಿತು. ದೊಡ್ಡ ಪ್ರಾಮಾಣದಲ್ಲಿ ಮೆರವಣಿಗೆ, ಪ್ರತಿಭಟನೆ, ಬಂಧನ, ಲಾಠಿಚಾರ್ಜ್, ಗೋಳಿಬಾರ್, ದೇಶದ ಮುಖ್ಯ ಕೇಂದ್ರಗಳಲ್ಲಿ ಆದುವು. 1921 ನವೆಂಬರ್ 17ರಂದು ಭಾರತಕ್ಕೆ ಇಂಗ್ಲೆಂಡ್ ರಾಜಕುಮಾರ ಬಂದ ಸಂದರ್ಭದಲ್ಲಿ ಎಲ್ಲೆಡೆ ಹರತಾಳ ಆವರಿಸಲಾಯಿತು. ಆದರೆ ಮುಂಬೈಯಲ್ಲಿ ಆದಿನ ನಡೆದ ಹಿಂಸಾಚಾರದಿಂದಾಗಿ ಗಾಂಧೀಜಿ ಉಪವಾಸ ಆಚರಿಸಬೇಕಾಯಿತು. ಮುಂದೆ ಚೌರಿಚೌರ ಎಂಬಲ್ಲಿ ನಡೆದ ಹಿಂಸಾಚಾರದಿಂದ 22ಮಂದಿ ಪೊಲೀಸರ ಸಜೀವ ದಹನದಿಂದ ಗಾಂಧೀಜಿ ಚಳವಳಿಯನ್ನು ಹಿಂತೆಗೆದುಕೊಂಡರು. ಇದರಿಂದ ಮಹಾತ್ಮರನ್ನು ಕಾಂಗ್ರೆಸ್ ನಾಯಕರೇ ಟೀಕಿಸಿದರಲ್ಲದೆ, ಮುಸಲ್ಮಾನ ನಾಯಕರು ತೀವ್ರ ನಿರಾಶೆಗೆ ಒಳಗಾದರು. ಇದರ ಅನಂತರ ದೇಶದಲ್ಲಿ ಹಿಂದೂ-ಮುಸ್ಮಿಮ್ ದಂಗೆಗಳು ಹೆಚ್ಚಿದುವು. ಆದರೆ ಕಾಂಗ್ರೆಸ್ ಒಂದು ಸುಸಂಘಟಿತ ಸಂಸ್ಥೆಯಾಗಲು ಹಾಗೂ ಒಂದು ಕ್ರಾಂತಿಕಾರೀ ಸಂಘಟನೆಯಾಗಿ ಬೆಳೆಯಲು ಚಳವಳಿ ನೆರವಾಯಿತು. ಗಾಂಧೀಜಿಯವರ ಕ್ರಮದಿಂದ ಅಸಮಾಧಾನಗೊಂಡವೊ ತಿಲಾಲನೆಹರೂ ಹಾಗೂ ಚಿತ್ತರಂಜನದಾಸ್ ಇವರುಗಳು ಸ್ವರಾಜ್ಯ ಪಕ್ಷ ರಚಿಸಿ 1923ರ ಚುನಾವಣೆಯಲ್ಲಿ ಸ್ಪರ್ಧಿಸಿ ಕೇಂದ್ರಶಾಸನಸಭೆಯಲ್ಲಿ 45 ಸ್ಥಾನಗಳನ್ನು ಗೆದ್ದರಲ್ಲದೆ ಎರಡು ಪ್ರಾಂತಗಳಲ್ಲಿ ಬಹುಮತ ಪಡೆದರು ಕೂಡ. ಆದರೆ ಮುಂದಿನ ಅವಧಿಯಲ್ಲಿ ಚಳವಳಿ ತಣ್ಣಗಾಗಿತ್ತು. ಸುಮಾರು ಐದು ವರ್ಷಗಳ ಸ್ಥಿರ ಪರಿಸ್ಥಿತಿಯ ಅನಂತರ 1928ರಲ್ಲಿ ಸೈಮನ್ ಆಯೋಗದ ವಿರುದ್ಧ ನಡೆದ ಪ್ರತಿಭಟನಾ ಪ್ರದರ್ಶನದಿಂದ ಮತ್ತೆ ಕಾಂಗ್ರೆಸ್ ಚಟುವಟಿಕೆಗಳು ವರ್ಧಿಸಿದುವು. ಬ್ರಿಟಿಷರು 1929ರಲ್ಲಿ ಕರೆದ ಚಕ್ರಗೋಷ್ಠಿಗೆ ಕಾಂಗ್ರೆಸ್ ಹೋಗಲಿಲ್ಲ. ಲಾಹೋರ್ ಕಾಂಗ್ರೆಸ್ಸಿನ (1929) ಅಧ್ಯಕ್ಷ ಜವಾಹರ್‍ಲಾಲ್ ನೆಹರೂ ಅವರು 'ಪೂರ್ಣಸ್ವರಾಜ್ಯದ ಗುರಿ ಸಾರಿದರು. ಗಾಂಧೀಜಿ ದಂಡೀಯಾತ್ರೆಯನ್ನು 1930 ಮಾರ್ಚ್ 12ರಂದು ಪ್ರಾರಂಭಿಸಿ ಏಪ್ರಿಲ್ 6ರಂದು ದಂಡಿಯಲ್ಲಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಚಳವಳಿ ಪ್ರಾರಂಭಿಸಿದರು. ಏಪ್ರಿಲಿನಿಂದ ಒಂದು ವರ್ಷಕಾಲ ನಡೆದ ಈ ಚಳುವಳಿ ಕಾಲದಲ್ಲಿ ಸರ್ಕಾರೀ ಲೆಕ್ಕಾಚಾರದಂತೆ 29 ಕಡೆ ಗೋಳೀಬಾರು, 103 ಸಾವು. 60,000 ಜನರ ಬಂಧನ ಆಯಿತು. ಮುಂದೆ ಗಾಂಧಿ-ಇರ್ವಿನ್ ಒಪ್ಪಂದವಾಗಿ ಚಳವಳಿಯನ್ನು ಸ್ಥಗಿತಗೊಳಿಸಿ, ಗಾಂಧೀಜಿ ಲಂಡನ್ನಿಗೆ ಎರಡನೆಯ ಚಕ್ರಗೋಷ್ಠಿಗೆ ಹೋಗಿ ಬರಿಗೈಯಲ್ಲಿ ಮರಳಿ ಬಂಧಿತರಾದರು. ಕಾನೂನುಭಂಗ ಚಳವಳಿ ಮತ್ತೆ ಉಗ್ರವಾಗಿ 1932 ಜನವರಿಯಲ್ಲಿ ಆರಂಭವಾಯಿತು. ಹಿಂದೆಂದೂ ಕಾಣದ ಪ್ರಮಾಣದಲ್ಲಿ ಭಾರತ ಜನಸಮುದ್ರದಲ್ಲಿ ರಾಜಕೀಯ ಜಾಗೃತಿಯನ್ನು ಇದು ಉಂಟುಮಾಡಿತು. 1933 ಮೇ ತಿಂಗಳಲ್ಲಿ ಗಾಂಧೀಜಿಯ ಬಿಡುಗಡೆ ಆದಾಗ ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ ವೈಸರಾಯರು ಮಾತುಕತೆಗೆ ಒಪ್ಪದ್ದರಿಂದ 1933 ಆಗಸ್ಟನಿಂದ 1934 ಮಾರ್ಚ್ ತನಕ ವೈಯಕ್ತಿಕ ಕಾನೂನುಭಂಗ ಚಳವಳಿ ನಡೆದು ಮತ್ತೆ ಹಲವು ಸಾವಿರ ಜನ ಜೈಲು ಕಂಡರು. ಮುಂದೆ 1935 ಫೆಡರಲ್ ಕಾಯ್ದೆಯಂತೆ 1937ರಲ್ಲಿ ಪ್ರಾಂತೀಯ ಶಾಸನ ಸಭೆಗಳಿಗೆ ಚುನಾವಣೆಗಳಾಗಿ ಆರು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ಸು ಪೂರ್ಣ ಬಹುಮತ ಪಡೆದು ಮತ್ತು ಮೂರು ಪ್ರಾಂತ್ಯಗಳಲ್ಲಿ ಇತರ ಪಕ್ಷಗಳ ಜೊತೆ ಸೇರಿ ಅಧಿಕಾರ ಪಡೆಯಿತು. ಆದರೆ ಮುಸ್ಲಿಮ್ ಲೀಗ್ ಕಾಂಗ್ರೆಸ್ ಜೊತೆ ಸಹಕರಿಸದೆ ಹಿಂದು ಮುಸ್ಲಿಮ್ ಒಗ್ಗಟ್ಟು ಕನಸಿನ ಮಾತಾಗಿ ದೇಶ ವಿಭಜನೆ ಅನಿವಾರ್ಯವೆನ್ನುವ ಭಾವನೆ ಬೆಳೆಯಲಾಂಭಿಸಿತು.

ಪ್ರಾಂತ್ಯಗಳಲ್ಲಿ ಪ್ರಾಮಾಣಿಕ ದಕ್ಷ ಆಡಳಿತ ನೀಡಿದ ಕಾಂಗ್ರೆಸ್ ಸರ್ಕಾರಗಳು ಎರಡನೆಯ ಮಹಾಯುದ್ಧ ಘೋಷಿತವಾದಾಗ ಬ್ರಿಟಿಷ್ ಸರ್ಕಾರದ ಜೊತೆಯುದ್ಧ ಕಾರ್ಯದಲ್ಲಿ ಸಹಕರಿಸಲು ಒಪ್ಪದೆ ರಾಜೀನಾಮೆ ನೀಡಿದುವು. 1940-41ರಲ್ಲಿ ಯುದ್ಧವಿರೋಧಿಸಿ ವೈಯಕ್ತಿಕ ಸತ್ಯಾಗ್ರಹವಾಗಿ ಗಾಂಧೀಜಿಯವರೇ ಆಯ್ಕೆ ಮಾಡಿದ 23000 ಜನ ಜೈಲು ತುಂಬಿದರು. ಮುಂದೆ ಜನವರಿತಲ್ಲಿ ಕ್ರಿಪ್ಸ್ ನಡೆಸಿದ ರಾಯಭಾರ ವಿಫಲವಾಗಿ 1942 ಆಗಸ್ಟ್ 8ಕ್ಕೆ ಕಾಂಗ್ರೆಸ್ಸು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹೂಡಿತು (ನೋಡಿ- ಭಾರತ-ಬಿಟ್ಟು-ತೊಲಗಿ) ಮುಖ್ಯ ನಾಯಕರೆಲ್ಲ ಬಂಧಿತರಾದರು. ದೇಶಾದ್ಯಂತ ರೈಲು, ತಂತಿ ಸಂಪರ್ಕ ವಿಫಲ ಗೊಳಿಸುವ, ಸೈನ್ಯಕ್ಕೆ ಪೂರೈಕೆಯಾಗುವ ವಸ್ತುಗಳು ಸಿಗದಂತೆ ಮಾಡುವ ಹಾಗೂ ಸರ್ಕಾರೀ ಯಂತ್ರವನ್ನು ಭಗ್ನಗೊಳಿಸುವ ಉಗ್ರ ಚಳವಳಿ ಸಾಗಿತು. ಬ್ರಿಟಿಷ್ ಪ್ರಾಂತ, ದೇಶೀಯ ಸಂಸ್ಥಾನಗಳೆಂಬ ತಾರತಮ್ಯವಿಲ್ಲದೆ ಈ ಚಳವಳಿ ಇಡೀ ದೇಶದಲ್ಲಿ ಎರಡು ವರ್ಷ ಪರ್ಯಂತ ಉಗ್ರವಾಗಿ ಸಾಗಿ ಜನತಾಕ್ರಾಂತಿಯ ಸ್ವರೂಪ ತಳೆಯಿತು.

ಇದೇ ಕಾಲಕ್ಕೆ ದೇಶ ತ್ಯಾಗ ಮಾಡಿ ಜರ್ಮನಿಗೆ ಹೋಗಿ ಸುಭಾಷ್‍ಚಂದ್ರ ಬೋಸರು ಅಲ್ಲಿ ಭಾರತೀಯರ ಸೇನೆ ಸಂಘಟಿಸಿದರು. ಮುಂದೆ ಜಪಾನಿಗೂ ಹೋಗಿ (1943) ಜಪಾನಿಯರಿಗೆ ಸೆರೆಸಿಕ್ಕ ಭಾರತೀಯ ಸೈನಿಕರನ್ನು ಸಂಘಟಿಸಿ ಕ್ಯಾಪ್ಟನ್ ಮೋಹನ್‍ಸಿಂಗ್ ಎಂಬವರು ಕಟಿದ್ದ ಐ.ಎನ್.ಎ ಎಂದು ಹೆಸರಾದ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವ ವಹಿಸಿದರು. ಜಪಾನಿಯರ ನೆರೆವಿನಿಂದ ಸ್ವತಂತ್ರ ಭಾರತ ಸರ್ಕಾರ ಸ್ಥಾಪಿಸಿದರು. ಚಲೋ ದಿಲ್ಲಿ ಘೋಷಣೆಯೊಡನೆ ಈಶಾನ್ಯ ಭಾರತದಲ್ಲಿ 1944 ಮಾರ್ಚ್‍ನಂದು ಕೊಹಿಮಾವರೆಗೆ ಈ ಸೇನೆ ತಲಪಿ ಭಾರತದಲ್ಲಿ 241 ಕಿಮಿ. ಒಳಕ್ಕೆ ನುಗ್ಗಿತು. ಆದರೆ ಜಪಾನಿಯರು ಹಿಂದೆಗೆದಾಗ ಶೀಘ್ರವೇ ಇವರೂ ಹಿಂದೆಗೆಯಬೇಕಾಯಿತು. ಭಾರತದ ಜನತೆಯ ಹೃದಯದಲ್ಲಿ ತೀವ್ರ ಸ್ಪಂದನ ಮೂಡಿಸಿದ್ದ ಈ ಸೇನೆಯ ನಾಯಕರನ್ನು ಯುದ್ಧ ನಂತರ ಬಂಧಿಸಿ 6-11-1945ರಂದು ದೆಹಲಿ ಕೆಂಪುಕೋಟೆಯಲ್ಲಿ ವಿಚಾರಣೆ ಆರಂಭಿಸಿದಾಗ ಆದ ಪ್ರಚಂಡ ಜನತಾ ಪ್ರತಿಭಟನೆ ಸರ್ಕಾರವನ್ನು ಎದೆಗುಂದಿಸಿತು. 1946 ಫೆಬ್ರುವರಿಯಲ್ಲಿ ಭಾರತದಲ್ಲಿ ವಿಮಾನ ಸೈನಿಕರು ಐ.ಎನ್.ಎ. ಬಗ್ಗೆ ತೋರಿದ ಸಹಾನುಭೂತಿ, ಮುಂಬೈಯ ನೌಕಾಸೈನಿಕರ ಬಂಡಾಯ (ಫೆ. 18) ಅದರ ಹಿಂದೆ ನಗರದಲ್ಲಾದ ಗಲಭೆ ಕಲ್ಕತ್ತಾ, ಮದ್ರಾಸ್, ಹಾಗೂ ಕರಾಚಿಯ ನೌಕಾ ಸೈನಿಕರ ಬಂಡಾಯ, ಇವರೆಲ್ಲರೂ ಮಾಡಿದ ಬ್ರಿಟಿಷ್ ಅಧಿಕಾರಗಳ ಕೊಲೆ, ಇವುಗಳಿಂದ ಭಾರತೀಯ ಕೂಲಿ ಸಿಪಾಯಿಗಳ ನೆರವಿನಿಂದ ಈ ದೇಶವನ್ನು ಆಳುವುದು ಅಸಾಧ್ಯವೆಂದು ಬ್ರಿಟಿಷರಿಗೆ ಮನವರಿಕೆಯಾಯಿತು. ಯುದ್ಧದಿಂದ ಬ್ರಿಟನ್‍ಗೆ ಆದ ಆರ್ಥಿಕ ದೌರ್ಬಲ್ಯ, ಅಂತಾರಾಷ್ಟ್ರೀಯ ಒತ್ತಡ, ಇವೆಲ್ಲ ಕಾರಣಗಳಿಂದ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಇಂಗ್ಲೆಂಡಿನ ಚುನಾವಣೆಯಲ್ಲಿ ಗೆದ್ದು ಬಂದ ಲೇಬರ್ ಪಕ್ಷ ನಿರ್ಧರಿಸಿತು. ಈ ಎಲ್ಲ ತ್ಯಾಗ ಬಲಿದಾನಗಳಿಂದ ಕೂಡಿದ ಭಾರತೀಯರ ಸ್ವಾತಂತ್ರ್ಯ ಹೋರಾಟ ಫಲವಾಗಿ 1947 ಆಗಸ್ಟ್ 15ರಂದು ಸ್ವತಂತ್ರಭಾರತದ ಉದಯವಾಯಿತು. ಜೊತೆಗೇ ಮುಸ್ಲಿಮ್ ಸಹೋದರರ ಬೇಡಿಕೆಯಂತೆ ಪಾಕಿಸ್ತಾನ ಹುಟ್ಟಿಕೊಂಡಿತು. (ಎಸ್.ಎನ್.ಕೆ.ಎ.)