ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೀಮಾ

ವಿಕಿಸೋರ್ಸ್ದಿಂದ

ಭೀಮಾ ಕರ್ನಾಟಕದ ದೊಡ್ಡ ನದಿಗಳ ಪೈಕಿ ಒಂದು; ಕೃಷ್ಣಾ ನದಿಯ ಒಂದು ಉಪನದಿ. ಮಹಾರಾಷ್ಟ್ರದ ಪಶ್ಚಿಮಘಟ್ಟಗಳ ಭೀಮಾಶಂಕರದಲ್ಲಿ ಉಗಮ. ಮಹಾರಾಷ್ಟ್ರದ ಪುಣೆ, ಸೊಲ್ಲಾಪುರ ಜಿಲ್ಲೆಗಳಲ್ಲಿ ಹರಿದು ಬರುವ ಈ ನದಿ ಬಿಜಾಪುರ ಜಿಲ್ಲೆಯ ಉತ್ತರ ತುದಿಯಲ್ಲಿರುವ ದಸೂರಿನ ಬಳಿ ಕರ್ನಾಟಕದ ಎಲ್ಲೆಯನ್ನು ಮುಟ್ಟುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ಹಲವು ಅಂಕುಡೊಂಕುಗಳೊಡನೆ ಬಿಜಾಪುರ ಮತ್ತು ಸೊಲ್ಲಾಪುರ ಜಿಲ್ಲೆಗಳ ಗಡಿರೇಖೆಯಾಗಿ ಹರಿಯುತ್ತದೆ. ಇಂಡಿ ತಾಲ್ಲೂಕಿನ ಅಗರಖೆಡದ ಬಳಿಯಿಂದ, ಕೆಲವು ಬಳಸುಗಳೊಡನೆ ಸುತ್ತಿ ಸಿಂದಗಿ ತಾಲ್ಲೂಕಿನ ಮಾದನಹಳ್ಳಿಯವರೆಗೆ ಆಗ್ನೇಯಾಭಿಮುಖವಾಗಿಯೂ ಅಲ್ಲಿಂದ ಅಫಜಲಪುರದವರೆಗೆ ಪೂರ್ವಾಭಿಮುಖವಾಗಿಯೂ ಹರಿದು ಮತ್ತೆ ಕೆಲವು ಬಳಸುಗಳೊಡನೆ ಆ ತಾಲ್ಲೂಕಿನ ಘಟ್ಟರಗಿಯವರೆಗೆ ದಕ್ಷಿಣಕ್ಕೆ ಕ್ರಮಿಸುತ್ತದೆ. ಇಲ್ಲಿಯವರೆಗೆ ಇದು ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳ ಗಡಿರೇಖೆ ನದಿಯ ಮುಂದಿನ ಗಮನ ಪೂರ್ಣವಾಗಿ ಗುಲ್ಬರ್ಗ ಜಿಲ್ಲೆಯ ಒಳಗೆ. ಘಟ್ಟರಗಿಯಿಂದ ಹಲವು ಬಳಸುಗಳೊಡನೆ ಅಫಜಲಪುರ ತಾಲ್ಲೂಕಿನಲ್ಲಿ ಬಂದರವಾಡದ ವರೆಗೆ ಈಶಾನ್ಯಾಭಿಮುಖವಾಗಿ ಹರಿದು ಅಲ್ಲಿಂದ ಇದ್ದಕ್ಕಿದಂತೆ ನೈಋತ್ಯಕ್ಕೆ ತಿರುಗಿ ಮತ್ತೆ ಹಂಚನಾಳದ ಬಳಿ ಪೂರ್ವಕ್ಕೆ ತಿರುಗಿ ಹಲವು ಬಳಸುಗಳೊಡನೆ ಜೇವರಗಿ ತಾಲ್ಲೂಕಿನ ಹರವಾಳದವರೆಗೆ ಬರುತ್ತದೆ. ಅಲ್ಲಿಂದ ಗುಲ್ಬರ್ಗ ತಾಲ್ಲೂಕಿನ ಹಗರಗುಂಡಿಯವರೆಗೆ ಈಶಾನ್ಯಾಭಿಮುಖವಾಗಿ ಸಾಗಿ ಮತ್ತೆ ದಕ್ಷಿಣಕ್ಕೆ ತಿರುಗಿ ಜೇವರಗಿ ತಾಲ್ಲೂಕಿನ ಕಟ್ಟೆಸಂಗವಿಯಿಂದ ಪೂರ್ವಕ್ಕೂ ಮತ್ತೆ ದಕ್ಷಿಣಕ್ಕೂ ಹರಿದು ಚಿತ್ತಾಪುರ ತಾಲ್ಲೂಕಿನ ಸನ್ನತಿಯವರೆಗೆ ಬರುತ್ತದೆ. ಆ ಸ್ಥಳದಿಂದ ನದಿಯ ಗಮನ ಸಾಮಾನ್ಯತಃ ಆಗ್ನೇಯಾಭಿಮುಖವಾಗಿ, ಇದುವರೆಗೆ ಜೇವರಗಿ ತಾಲ್ಲೂಕಿನ ಉತ್ತರ ಮತ್ತು ಪೂರ್ವಗಡಿಯಾಗಿ ಹರಿಯುವ ಈ ನದಿ ಮುಂದೆ ಶಹಪುರ ತಾಲ್ಲೂಕನ್ನು ಚಿತ್ತಾಪುರ ಮತ್ತು ಯಾದಗಿರಿ ತಾಲ್ಲೂಕುಗಳಿಂದ ಬೇರ್ಪಡಿಸುವಂತೆ ಹರಿದು ಗುಲ್ಬರ್ಗ ಜಿಲ್ಲೆಯ ಆಗ್ನೇಯದ ಅಂಚಿದಲ್ಲಿ ಶಾಹಪುರ ತಾಲ್ಲೂಕಿನ ಸಂಗಮದ ಬಳಿ ಕೇಷ್ಣಾ ನದಿಯನ್ನು ಕೂಡುತ್ತದೆ. ಭೀಮಾ ನದಿ ತನ್ನ ಒಟ್ಟು ಹರಿವಿನ 856 ಕಿಮೀನಲ್ಲಿ 520 ಕಿಮೀ ಮಹಾರಾಷ್ಟ್ರದಲ್ಲೂ 48ಕಿಮೀ ಕರ್ನಾಟಕ ಮಹಾರಾಷ್ಟ್ರ ಗಡಿಯಾಗಿಯೂ ಇದ್ದು ಊಳಿದ 240 ಕಿಮೀ ಪೂರ್ತಿ ಗುಲ್ಬರ್ಗ ಜಿಲ್ಲೆಯಲ್ಲಿಯೇ ಹರಿಯುತ್ತದೆ.

ಕರ್ನಾಟಕದಲ್ಲಿ ಈ ನದಿಯ ಹರಿವಿನ ಉದ್ದಕ್ಕೂ ಅನೇಕ ನದಿ ಹಳ್ಳಗಳು ಬಂದು ಸೇರುತ್ತವೆ. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಉತ್ತರದಲ್ಲಿ ಬೋರಿ ಹಳ್ಳವೂ ಪೂರ್ವದಲ್ಲಿ ರೊಡಗಿಯ ಸಮೀಪ ಸತ್ನಾಳ ಹೊಳೆಯೂ ಈ ನದಿಯನ್ನು ಬಲದಂಡೆಯ ಮೂಲಕ ಸೇರುತ್ತವೆ. ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಎರಡು ನದಿಗಳು ಈ ನದಿಯನ್ನು ಎಡದಂಡೆಯಲ್ಲಿ ಸೇರುತ್ತವೆ. ಮಹಾರಾಷ್ಟ್ರದ ಸೊಲ್ಲಾಪುರದ ಜಿಲ್ಲೆಯಲ್ಲಿ ಹುಟ್ಟಿ ದಕ್ಷಿಣಕ್ಕೆ ಹರಿದ ಬೋರಿನದಿ ಅಫಜಲಪುರದ ಪಶ್ಚಿಮಕ್ಕೆ ಸ್ವಲ್ಪ ದೂರದಲ್ಲಿ ಭೀಮಾನದಿಯನ್ನು ಸೇರುತ್ತದೆ. ಅಮರಜನದಿ ಗಾಣಗಾಪುರದ ಸಮೀಪ ಇದನ್ನು ಕೂಡಿಕೊಳ್ಳುತ್ತದೆ. ಚಿತ್ತಾಪುರ ತಾಲ್ಲೂಕಿನ ಹುನುಗುಂಟದ ಬಳಿ ಕಾಗಿಣಾ ನದಿ ಎಡದಂಡೆಯ ಮೂಲಕ ಸೇರುತ್ತದೆ.

ಈ ನದಿ ಹರಿಯುವ ಪ್ರದೇಶ ಬಲುಪಾಲು ದಕ್ಖನ್ ಟ್ರ್ಯಾಪಿನದು. ಇಲ್ಲೆಲ್ಲ ಅಡಿಯಲ್ಲಿ ಕರಿಕಲ್ಲು ಹೆಚ್ಚಾಗಿದ್ದು ಅದರ ಮೇಲೆ ದಪ್ಪನೆಯ ಫಲವತ್ತಾದ ಕಪ್ಪುಮಣ್ಣಿನ ಪದರ ಇದೆ. ಪ್ರತಿವರ್ಷ ಪ್ರವಾಹ ಕಾಲದಲ್ಲಿ ನದಿ ಹೊತ್ತು ತಂದ ಫಲವತ್ತಾದ ಮಣ್ಣು ಕೆಲವು ಕಡೆ ನದಿಯ ಇಕ್ಕೆಲಗಳಲ್ಲಿ ಹರಡುತ್ತಿರುತ್ತದೆ. ಈ ಪ್ರದೇಶದ ಮಣ್ಣು ಫಲವತ್ತಾಗಿರುವಂತೆಯೇ ನೀರಿನ ಅಂಶವನ್ನು ಹಿಡಿದಿಟ್ಟು ಕೊಳ್ಳಬಹುದು ಕೂಡ. ಎಂತಲೇ ಸಕಾಲದಲ್ಲಿ ಸ್ವಲ್ಪ ಮಳೆಯಾದರೂ ಇಲ್ಲಿ ಬೆಳೆ ಚೆನ್ನಾಗಿ ಆಗುತ್ತದೆ. ಈ ಬದಿಯ ಇಕ್ಕೆಲದಲ್ಲಿ ಜೋಳ, ಗೋದಿ, ಸಜ್ಜೆ, ಹತ್ತಿ ಮತ್ತು ತಂಬಾಕು ಬೆಳೆಸುತ್ತಾರೆ. ನೀರಾವರಿಗಾಗಿ ಭೀಮಾನದಿಯನ್ನು ಬಳಸಿಕೊಂಡಿರುವುದು ಬಲು ಕಡಿಮೆ. ಅಫಜಲಪುರದ ಸಮೀಪ ಒಂದು ಅಡ್ಡಕಟ್ಟೆ ಕಟ್ಟಿ ಕೊಳಾಯಿಗಳ ಮೂಲಕ ನೀರನ್ನು ಬಳಸುವ ಯೋಜನೆ ಈಗಾಗಲೇ ಬಳಕೆಯಲ್ಲಿದೆ. ಶಾಹಪುರ ತಾಲ್ಲೂಕಿನಲ್ಲಿ ತಂಗಡಿಯ ಬಳಿ ಈ ನದಿಗೆ ಅಣೆಕಟ್ಟನ್ನು ನಿರ್ಮಿಸುವ ಯೋಜನೆ ಇದೆ. ಇದರ ಪ್ರಕಾರ ಗುಲ್ಬರ್ಗ ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಬಹುದೆಂದು ಅಂದಾಜು. ಬಿಜಾಪುರ ಜಿಲ್ಲೆಯ ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಈ ನದಿಯ ನೀರನ್ನು ತೋಟಗಾರಿಕೆಗೆ ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಕಬ್ಬು ಬೆಳೆಸುತ್ತಾರೆ.

ನದೀ ಪ್ರದೇಶದಲ್ಲಿ ಉತ್ತಮವಾದ ಕರಿಕಲ್ಲು, ಕಾರ್ನಿಲಿಯನ್, ಅಗೇಟ್ ಮುಂತಾದ ಶಿಲೆಗಳು ಸಿಗುತ್ತವೆ. ಪ್ರಾಗೈತಿಹಾಸಿಕ ಕಾಲದ ಶಿಲಾ ಸಂಸ್ಕøತಿಗೆ ಸಂಬಂಧಿಸಿದ ನೆಲೆಗಳು ಈ ಪ್ರದೇಶದಲ್ಲಿ ಅನೇಕ ಕಡೆ ಕಂಡುಬಂದಿವೆ.

ಗುಲ್ಬರ್ಗ ಜಿಲ್ಲೆಯ ಅಫಜಲಪುರ, ಜೇವರಗಿ ಮತ್ತು ಯಾದಗಿರಿ ಭೀಮಾನದಿಗೆ ಸಮೀಪದಲ್ಲಿರುವ ದೊಡ್ಡ ಊರುಗಳು. ನದಿಯ ದಂಡೆಗುಂಟ ತೀರ್ಥಕ್ಷೇತ್ರಗಳಿಗೂ ಕೊರತೆ ಇಲ್ಲ. ಇಂಡಿ ತಾಲ್ಲೂಕಿನ ಅಗರಖೇಡ, ಧೂಳಖೇಡ, ಮತ್ತು ಮಿರಗಿ ಪ್ರಸಿದ್ಧ ಕ್ಷೇತ್ರಗಳು. ಸಿಂದಗಿ ತಾಲ್ಲೂಕಿನ ದೇವನಗಾಂವ್ ಕಮಲೇಶ್ವರ, ಮಲ್ಲಿಕಾರ್ಜುನ ಮತ್ತು ಶಂಕರಲಿಂಗ ದೇವಾಲಯಗಳಿಗಾಗಿ ಪ್ರಸಿದ್ಧವಾಗಿದೆ. ಗುಲ್ಬರ್ಗ ಜಿಲ್ಲೆಯಲ್ಲಿ ಅಮರಜ, ಭೀಮಾ ಸಂಗಮದ ಬಳಿ ಇರುವ ಗಾಣಗಾಪುರ (ನೋಡಿ- ಗಾಣಗಾಪುರ) ಒಂದು ಪ್ರಸಿದ್ಧ ತೀರ್ಥಕ್ಷೇತ್ರ. ಚಿತ್ತಾಪುರ ತಾಲ್ಲೂಕಿನ ಸನ್ನತಿ ಚಂದಲಾ ಪರಮೇಶ್ವರಿ ದೇವಾಲಯವಿರುವ ಕ್ಷೇತ್ರ.

ಮತ್ಸ್ಯ, ಬ್ರಹ್ಮ ಮತ್ತು ವಾಮನ ಪುರಾಣಗಳಲ್ಲಿ ಹಾಗೂ ಮಹಾಭಾರತದಲ್ಲಿ ಭೀಮಾ ನದಿಯನ್ನು ಉಲ್ಲೇಖಿಸಲಾಗಿದೆ. ಪುರಾಣದ ಪವಿತ್ರ ನದಿಗಳ ಸಾಲಿನಲ್ಲಿ ಒಂದೆನಿಸಿದ ಇದನ್ನು ಮಹಾನದಿ ಎಂದು ಹೆಸರಿಸಲಾಗಿದೆ. ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಭೀಮಾಶಂಕರಲಿಂಗ ಈ ನದಿಯ ಉಗಮಸ್ಥಾನದಲ್ಲಿದೆ.

ತ್ರಿಪುರಾಸುರನನ್ನು ಸೋಲಿಸಿ ದಣಿದ ಶಿವ ವಿಶ್ರಾಂತಿಗೆಂದು ಸಹ್ಯಾದ್ರಿಗೆ ಬಂದನಂತೆ. ಆಗ ಇಬ್ಬರು ಋಷಿಗಳನ್ನು ಕೊಂದ ಅಯೋಧ್ಯೆಯ ರಾಜ ಭೀಮಕ ಪಾಪಪರಿಹಾರಕ್ಕಾಗಿ ತಪಸ್ಸಿಗೆಂದು ಇಲ್ಲಿಗೇ ಬಂದ. ಈತನ ತಪ್ಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ವರ ನೀಡುವ ಕೃಪೆ ಮಾಡಿದ. ಆಗ ಶಿವನ ಹಣೆ ಬೆವರುತ್ತಿತ್ತಂತೆ. ಅದನ್ನು ಕಂಡ ಭೀಮಕ ಆ ಹಣೆಯ ಬೆವರೇ ನದಿಯಾಗಿ ಪ್ರವಹಿಸಲಿ ಎಂದು ಕೇಳಿದನಂತೆ. ಈ ರೀತಿ ಭೀಮಕನ ಪ್ರಾರ್ಥನೆಯಂತೆ ಮೂಡಿಬಂದ ನದಿ ಭೀಮಾನದಿ ಎನಿಸಿಕೊಂಡಿತ್ತೆಂಬುದು ಪುರಾಣಕಥೆ.