ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂರ್ಜಪತ್ರ

ವಿಕಿಸೋರ್ಸ್ದಿಂದ

ಭೂರ್ಜಪತ್ರ ಬೆಚಲೇಸಿ ಕುಟುಂಬಕ್ಕೆ ಸೇರಿದ ಉಪಯುಕ್ತ ವೃಕ್ಷ. ಬರ್ಚಾ ಮರಗಳೆಂದು ಯೂರೋಪ್, ಅಮೆರಿಕಗಳಲ್ಲಿ ಪ್ರಸಿದ್ಧವಾಗಿರುವ ಬೆಚಲ ಜಾತಿಯ ಪ್ರಭೇದಗಳ ಪೈಕಿ ಒಂದು. ಆಲ್ಡರ್ (ಆಲ್ನಸ್), ಹಾರ್ನ್‍ಬೀಮ್ (ಕಾರ್ಪೈನಸ್), ಹೇಜûಲ್‍ನಟ್ (ಕೊರೈಲಸ್) ಮುಂತಾದವುಗಳ ಸಂಬಂಧಿ. ಬೆಚಲ ಯೂಟಿಲಿಸ್ ಅಥವಾ ಬೆ.ಭೋಜ್‍ಪತ್ರ ಇದರ ವೈe್ಞÁನಿಕ ಹೆಸರು. ಹಿಮಾಲಯನ್ ಸಿಲ್ವರ್ ಬರ್ಚ್ ಇದರ ಇಂಗ್ಲಿಷ್ ಹೆಸರು. ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲೂ ಕಾಶ್ಮೀರಕೊಳ್ಳ ಮತ್ತು ಪಂಜಾಬ ಪ್ರಾಂತಗಳಲ್ಲೂ ಕಂಡುಬರುತ್ತದೆ. ಇದು ಸುಮಾರು 20 ಮೀ. ಎತ್ತರ ಬೆಳೆಯುವ ಮರ. ಇದರ ಎಲೆಗಳು ಗುಂಡನೆಯ ಆಕಾರದವು. ಎಲೆಯಂಚು ದಂತಿತ. ಎಲೆಯ ಮಧ್ಯ ನಗರ ಭಾಗದಲ್ಲಿ ರೋಮಗಳುಂಟು. ಹೂಗೊಂಚಲುಗಳು ಬೆಕ್ಕಿನ ಬಾಲದ ಆಕಾರದಲ್ಲಿರುವುವು. ಗಂಡು ಮತ್ತು ಹೆಣ್ಣು ಹೂಗಳು ವಿಭಿನ್ನ ಗೊಂಚಲುಗಳಲ್ಲಿವೆ. ಕಾಯಿ ಅಷ್ಟಿಫಲ ಮಾದರಿಯದು. ಸಿಪ್ಪೆ ಚಿಕ್ಕ ರೆಕ್ಕೆಗಳಂತೆ ಚಾಚಿದೆ. ಭೂರ್ಜಪತ್ರದ ತೊಗಟೆಯೇ ಭೂರ್ಜ ಅಥವಾ ಭೋಜಪತ್ರ. ಇದು ತೆಳುವಾದ ಕಾಗದದಂಥ ಪದರಗಳಿಂದ ಕೂಡಿದ್ದು ಸುಲಿದುಕೊಳ್ಳುತ್ತದೆ. ಬಿಳಿಬಣ್ಣದ್ದಾಗಿರುವ ಇದನ್ನೆ ಹಿಂದಿನಕಾಲದಲ್ಲಿ ಬರೆಯಲು ಕಾಗದವಾಗಿ ಉಪಯೋಗಿಸುತ್ತಿದ್ದರು. ಇಂದಿಗೂ ಪುರಾತನ ಕಾಲದ ಲಿಖಿತಗಳು ಭೂರ್ಜಪತ್ರಗಳಲ್ಲಿ ಇವೆ. ವಸ್ತುಗಳನ್ನು ಕಟ್ಟಲು, ಕೊಡೆಗಳಿಗೆ ಹೊದಿಕೆ ಹಾಕಲು ಮತ್ತು ಮನೆಗಳಿಗೆ ಚಾವಣೆ ಹೊದಿಸಲು ಭೂರ್ಜಪತ್ರವನ್ನು ಉಪಯೋಗಿಸುವರು. ಇದರ ಚೌಬೀನೆಯನ್ನು ಮನೆಕಟ್ಟಲು ಬಳಸುವುದಿದೆ. ಚಿಕ್ಕರೆಂಬೆಗಳಿಂದ ಸೇತುವೆ ಕಟ್ಟಬಹುದು. ಎಲೆಗಳು ದನಗಳಿಗೆ ಮೇವಾಗಿ ಉಪಯುಕ್ತ. (ವಿ.ಎಸ್.ವೈ.)