ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂಷಣ

ವಿಕಿಸೋರ್ಸ್ದಿಂದ

ಭೂಷಣ 1613-1715. ಹಿಂದೀ ಸಾಹಿತ್ಯದ ರೀತಿ ಕಾಲದ ಪ್ರಸಿದ್ಧ ಕವಿ. ಚಿಂತಾಮಣಿ ಮತ್ತು ಮತಿರಾಮನ ತಮ್ಮ. ಕಾನ್‍ಪುರ ಜಿಲ್ಲೆಯ ದಕ್ಷಿಣದಲ್ಲಿ ಯಮುನಾನದಿಗೆ ಸಮೀಪದಲ್ಲಿರುವ ಟಿಕಮಾಪುರ ಇವನ ಜನ್ಮಸ್ಥಳ. 20ನೆಯ ವಯಸ್ಸಿನ ತನಕವೂ ಈತ ಅಣ್ಣನ ಮನೆಯಲ್ಲಿದ್ದು ಅವನಿಗೆ ಭಾರವಾಗಿದ್ದ. ಒಂದು ದಿನ ಊಟಕ್ಕೆ ಕುಳಿತಿದ್ದಾಗ ಅಡುಗೆ ಸಪ್ಪೆಯಾಗಿರಲು ಉಪ್ಪು ಬೇಕೆಂದು ಅತ್ತಿಗೆಯನ್ನು ಕೇಳಿದ. ಮೊದಲು ನಿನ್ನ ಉಪ್ಪನ್ನು ಸಂಪಾದನೆ ಮಾಡು, ಆಮೇಲೆ ಕೇಳುವೆಯಂತೆ ಎಂದು ಅತ್ತಿಗೆ ಬಿರುನುಡಿ ಆಡಿದಳು. ಆಗ ಭೂಷಣ ಅರ್ಧದಲ್ಲೇ ಊಟ ಬಿಟ್ಟೆದ್ದು ಅಣ್ಣನ ಮನೆಯನ್ನು ತ್ಯಜಿಸಿದ. ಮುಂದೆ ಅನೇಕ ರಾಜಮಹಾರಾಜರುಗಳಿಂದ ಬಿರುದು ಬಾವಲಿಗಳನ್ನು ಸಂಪಾದಿಸಿ ಕನಕಾಭಿಷೇಕ ಮಾಡಿಕೊಂಡು ತನ್ನ ಅತ್ತಿಗೆಗೆ ಉಪ್ಪಿನ ಆನೆಯನ್ನು ಕಾಣಿಕೆಯಾಗಿ ಕಳಿಸಿದನಂತೆ. ಇವನ ಕವಿತ್ವವನ್ನು ಮನಗಂಡ ಪನ್ನಾದ ಮಹಾರಾಜ ಛತ್ರಸಾಲ ಇವನಿಗೆ ಆಶ್ರಯನೀಡಿ ಸನ್ಮಾನಿಸಿದ. ಚಿತ್ರಕೂಟದ ಸೋಲಂಕೀ ರಾಜ ರುದ್ರ ಇವನ ಕವಿತಾ ಮಾಧುರ್ಯಕ್ಕೆ ಮನಸೋತು "ಕವಿಭೂಷಣ" ಎಂಬ ಬಿರುದು ನೀಡಿದ. ಅಂದಿನಿಂದ ಈತ ಭೂಷಣನೆಂದೇ ಪ್ರಸಿದ್ಧನಾದ; ಇವನ ನಿಜವಾದ ಹೆಸರು ಅe್ಞÁತವಾಗಿಯೇ ಉಳಿಯಿತು. ಮಹಾರಾಜ ಛತ್ರಸಾಲನಂತೂ ಭೂಷಣನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆವಣಿಗೆ ಮಾಡಿ ಆ ಪಲ್ಲಕ್ಕಿಗೆ ತನ್ನ ಹೆಗಲು ಕೊಟ್ಟಿದ್ದನಂತೆ. ಇವನ ಒಂದೇ ಪದ್ಯಕ್ಕೆ ಮಂತ್ರ ಮುಗ್ಧನಾಗಿ ತಲೆದೂಗಿ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಶಿವಾಜಿ ಲಕ್ಷಾಂತರ ರೂಪಾಯಿ ಕೊಟ್ಟು ಸನ್ಮಾನಿಸಿದಂತೆ.

ಶಿವರಾಜ ಭೂಷಣ, ಶಿವಾ ಬಾವನೀ, ಛತ್ರಸಾಲದಸಕ, ಭೂಷಣ ಉಲ್ಲಾಸ, ದೂಷಣ ಉಲ್ಲಾಸ ಮತ್ತು ಭೂಷಣ ಹಜಾರಾ - ಇವು ಇವನ ಗ್ರಂಥಗಳು. ಆದರೆ ಕೊನೆಯ ಮೂರು ಉಪಲಬ್ಧವಿಲ್ಲ. ಶಿವರಾಜ ಭೂಷಣ ಒಂದು ಲಕ್ಷಣ ಗ್ರಂಥ. ಇದರ ಉದಾಹರಣೆಗಳಲ್ಲಿ ಶಿವಾಜಿಯ ಶೌರ್ಯ ಪ್ರಶಂಸಕ ಪದ್ಯಗಳಿವೆ.

ಭೂಷಣ ವೀರಕವಿ. ಇವನ ಉಕ್ತಿಗಳಲ್ಲಿ ಓಜಸ್ಸು ಮತ್ತು ವೀರದರ್ಪ ಕಾಣುತ್ತೇವೆ. ನುಡಿಗಟ್ಟುಗಳಲ್ಲಿ ಓಜಸ್ಸಿನ ಮಳೆ ಸುರಿಯುತ್ತದೆ; ಜ್ವಾಲಾಮುಖಿ ವಿಸ್ಫೋಟವಾದಂತೆ, ಬರಸಿಡಿಲು ಬಡಿದಂತೆ, ಅಲಂಕಾರಗಳ ಕಿಡಿ ಕೆದರುತ್ತದೆ; ಭಾವಾವೇಶದ ಬಿರುಗಾಳಿ ಬೀಸುತ್ತದೆ. ಇವನ ವಾಣಿಯಲ್ಲಿ ರಣಹೇಡಿಯನ್ನು ಬಡಿದೆಬ್ಬಿಸಿ ಕೆರಳಿಸಿ ಕಲಿಯನ್ನಾಗಿಸುವ ವಿಲಕ್ಷಣಶಕ್ತಿಯಿದೆ. ಇವನು ಯಾವ ಪ್ರಬಂಧಕಾವ್ಯ ಬರೆಯದಿದ್ದರೂ ಮುಕ್ತಕದಿಂದಲೇ ಓದುಗರ ಕಣ್ಣೆದುರಿಗೆ ಸಜೀವ ಪ್ರತಿಮೆಗಳನ್ನು ಕಡೆದು ನಿಲ್ಲಿಸುವ ಶಕ್ತಿ ಇವನ ಕಾವ್ಯಕ್ಕೆ ಸಿದ್ಧಿಸಿದೆ. (ವಿ.ಡಿ.ಎಚ್.)