ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಂಗಳ ದ್ರವ್ಯಗಳು

ವಿಕಿಸೋರ್ಸ್ ಇಂದ
Jump to navigation Jump to search

ಮಂಗಳ ದ್ರವ್ಯಗಳು - ಒಳ್ಳೆಯದಾಗಲಿ ಎಂಬ ನಂಬಿಕೆಗೆ ಪೂರಕವಾಗಿ ಜನ ಪದರು ಬಳಸುವ ಪರಿಕರಗಳು. ಇವನ್ನು ಬಳಸುವ ಸಂದರ್ಭಗಳಿಗನುಗುಣವಾಗಿ ಸ್ಥೂಲವಾಗಿ ದ್ಯೆನಂದಿನ ಜೀವನದ, ಹಬ್ಬಹರಿದಿನಗಳ, ಮದುವೆ ಮುಂಜಿಗಳ ಮಂಗಳದ್ರವ್ಯಗಳೆಂದು ವಿಂಗಡಿಸಬಹುದು. ಅರಿಶಿನ, ಕುಂಕುಮ, ಹೂವು, ಗಂಧ, ಅಕ್ಷತೆ, ಬಳೆ, ರಂಗೋಲಿ, ಧೂಪ, ದೀಪ, ತೋರಣ ಇತ್ಯಾದಿಗಳನ್ನು ನಿತ್ಯಜೀವನದಲ್ಲಿಯೂ ಹಬ್ಬಹರಿದಿನಗಳಲ್ಲಿಯೂ ಮದುವೆ ಮುಂಜಿಗಳಲ್ಲಿಯೂ ಬಳಸುತ್ತಾರೆ. ಇವುಗಳೊಂದಿಗೆ ಆಯಾ ಹಬ್ಬಗಳ ಆಚರಣೆಗೆ ಅನುಗುಣವಾಗಿ ಕೆಲವು ವಿಶೇಷ ವಸ್ತುಗಳನ್ನೂ ಬಳಸುವುದುಂಟು. ಉದಾಹರಣೆಗೆ, ಸ್ವರ್ಣಗೌರೀವ್ರತದಲ್ಲಿ ಸಾಮಾನ್ಯವಾಗಿ ಬಳಸುವ ಪೂಜಾ ವಸ್ತುಗಳೊಂದಿಗೆ ಕಳಸ-ಕನ್ನಡಿ, ಬಳೆ-ಬಿಚ್ಚೋಲೆ, ಹದಿನಾರು ಸೊಡರು, ಧಾನ್ಯಗಳು, ಕುಪ್ಪುಸದ ಕಣ, ಬೆಲ್ಲದ ಅಚ್ಚು ಇತ್ಯಾದಿಗಳಿಂದ ಅಣಿ ಮಾಡಿದ ಮರದ ಬಾಗಿನ-ಇವನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ನೀರು, ತೆಂಗಿನಕಾಯಿ, ಮಾವಿನಕೂನೆ ಇವುಗಳಿಂದ ಕಳಸ ನಿರ್ಮಿಸಿ ದೇವರನ್ನು ಪೂಜಿಸುವುದು ಸಾಮಾನ್ಯವಾಗಿ ವ್ರತಗಳ ಆಚರಣೆಯಲ್ಲಿ ಮಾತ್ರ. ಗಣಪತಿ ಹಬ್ಬದಲ್ಲಿ ಗರಿಕೆಹುಲ್ಲು, ಶಿವರಾತ್ರಿಯಲ್ಲಿ ಬಿಲ್ವಪತ್ರೆ, ನಾಗಲಿಂಗ ಪುಷ್ಪಗಳು, ಮಾರಿಹಬ್ಬದಲ್ಲಿ ಕೆಂಪು ದಾಸವಾಳ ಮತ್ತು ಕಣಿಗಲೆ ಹೂವುಗಳು ಮಂಗಳ ವಸ್ತುಗಳಾಗುತ್ತವೆ. ಕಳಸ-ಕನ್ನಡಿಗೆ ಕೆಲವರು ಹೊಂಬಾಳೆಯನ್ನೂ ಇನ್ನು ಕೆಲವರು ವೀಳ್ಯದೆಲೆಯನ್ನೂ ಬಳಸುತ್ತಾರೆ. ಬಾಸಿಂಗ, ಕಂಕಣ, ಮಾಂಗಲ್ಯ, ಅರಿಶಿನದ ಬಟ್ಟೆ ಇತ್ಯಾದಿಗಳು ಮದುವೆ ಮುಂಜಿಗಳ ಸಂದರ್ಭದಲ್ಲಿ ಮಂಗಳದ್ರವ್ಯಗಳೆನಿಸಿಕೊಳ್ಳುತ್ತವೆ. ಹಸಿರು ಚಪ್ಪರವನ್ನು ವಿಶೇಷವಾಗಿ ಅಂದು ಬಗಿನಿತಾರು, ಬಾಳೆಕಂಬ, ಮಾವಿನಸೊಪ್ಪು, ತೆಂಗಿನಗರಿಗಳನ್ನು ಬಳಸಿ ನಿರ್ಮಿಸುತ್ತಾರೆ. ಫಲಪುಷ್ಪಗಳ ಗೊಂಚಲುಗಳಿಂದ ಅವನ್ನು ಅಲಂಕರಿಸುವುದೂ ಉಂಟು. ಇದೇ ಸಂದರ್ಭದಲ್ಲಿ ಹೊಸಸೀರೆ, ಬಟ್ಟೆಗಳನ್ನು ಅರಿಶಿನದ ನೀರಿನಲ್ಲಿ ಅದ್ದಿ ಉಡಿಸುವುದು, ಐದು ಇಕ್ಕೆಲುಗಳುಳ್ಳ ಅರಿಶಿನದ ಕೊನೆಯನ್ನು ಹಸಿದಾರ ಮತ್ತು ಕಂಬಳಿದಾರಗಳಲ್ಲಿ ಬಂದಿಸಿ ವಧೂವರರ ಕೈಗೆ ಕಂಕಣವೆಂದು ಕಟ್ಟುವುದು ಶುಭವೆಂಬ ನಂಬಿಕೆಯಿದೆ. ಧಾರೆ ಎರೆಯುವುದಕ್ಕೆ ಬಳಸುವ ನೀರು ಅಕ್ಕಿಗಳೂ ಇಲ್ಲಿ ಮಂಗಳದ್ರವ್ಯಗಳೆಂದು ಪರಿಗಣಿತವಾಗುತ್ತದೆ. ಮದುವೆಯ ಹೆಣ್ಣು ಮಕ್ಕಳು ದಿನಬಳಕೆಯ ಪರಿಕರಗಳೊಂದಿಗೆ ಮಾಂಗಲ್ಯ, ಮೂಗುತಿ, ಓಲೆ, ಕಾಲುಂಗುರ ಇತ್ಯಾದಿ ಆಭರಣಗಳನ್ನು ಧರಿಸುತ್ತಾರೆ. ಚೊಚ್ಚಲ ಗರ್ಭಿಣಿ ಸ್ತ್ರಿಯರಿಗೆ ನಡೆಸುವ ಸೀಮಂತದ ಬಳೆ ತೊಡಿಸುವ ಸಂದರ್ಭದಲ್ಲಿ, ಹಿರಿ ಮಗನ ಮದುವೆಯ ಸಂದರ್ಭದಲ್ಲಿ, ತಾಯಿಗೆ ನೇಮ ಬಿಡಿಸುವ ಸಮಯದಲ್ಲಿ ಹಸಿರು ಸೀರೆ, ಬಳೆಗಳಿಗೆ ವಿಶೇಷ ಮಾನ್ಯತೆ ಉಂಟು. ವೀಳ್ಯೆದೆಲೆ, ಅಡಿಕೆಗಳಿಗೆ ಮಾತ್ರ ಎಲ್ಲ ಸಂದರ್ಭಗಳಲ್ಲೂ ಪ್ರಾಶಸ್ತ್ಯವಿರುವುದು ಕಂಡುಬರುತ್ತದೆ.