ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಂಡೋದರಿ
ಮಂಡೋದರಿ - ಹೇಮಾ ಎಂಬ ಅಪ್ಸರೆಯಲ್ಲಿ ಮಯನಿಂದ ಹುಟ್ಟಿದವಳು. ಮಯ ಹೇಮೆಯೊಂದಿಗೆ ಒಂದು ಸಾವಿರ ವರ್ಷ ಪರ್ಯಂತ ಸಂಸಾರ ನಡೆಸಿದ. ಅವಳಿಗೋಸ್ಕರ ತನ್ನ ಮಾಯಾಶಕ್ತಿಯಿಂದ ವಜ್ರವೈಡೂರ್ಯ ಖಚಿತವಾದ ಸುವರ್ಣ ನಗರವನ್ನೇ ನಿರ್ಮಿಸಿದ. ಕೊನೆಯಲ್ಲಿ ಹೇಮ ಮಯನನ್ನು ತೊರೆದು ಹೊರಟು ಹೋದಳು. ಅಷ್ಟರಲ್ಲಿ ಇವರಿಗೆ ಮಾಯಾವಿ, ದುಂದುಭಿ ಎಂಬ ಇಬ್ಬರು ಗಂಡುಮಕ್ಕಳೂ ಮಂಡೋದರಿ ಎಂಬ ಒಬ್ಬ ಹೆಣ್ಣುಮಗಳೂ ಹುಟ್ಟಿದ್ದರು. ಮಯ ಹೇಮೆಯ ವಿರಹದಿಂದ ದುಃಖಿತನಾಗಿ ತನ್ನ ಮಗಳು ಮಂಡೋದರಿಯನ್ನು ಕರೆದುಕೊಂಡು ಕಾಡಿಗೆ ಬಂದುಬಿಟ್ಟ. ರಾವಣ ಒಮ್ಮೆ ಆಕಸ್ಮಿಕವಾಗಿ ಮಯನಿಗೆ ಭೇಟಿಯಾದ. ತನ್ನ ಮಗಳನ್ನು ಮದುವೆಯಾಗುವಂತೆ ಮಯ ರಾವಣನನ್ನು ಕೇಳಿದಾಗ ರಾವಣ ಒಪ್ಪಿಕೊಂಡ. ಆ ಕೂಡಲೇ ಮಯ ಅಗ್ನಿಯನ್ನು ಪ್ರತಿಷ್ಠಾಪಿಸಿ ವಿಧ್ಯುಕ್ತವಾಗಿ ಮಂಡೋದರಿಯನ್ನು ರಾವಣನಿಗೆ ಪಾಣಿಗ್ರಹಣಮಾಡಿಕೊಟ್ಟ. ಅದ್ಭುತವೂ ಅಮೋಘವೂ ಆದ ಒಂದು ಶಕ್ತ್ಯಾಯುಧವನ್ನೂ ರಾವಣನಿಗೆ ಕೊಟ್ಟ. ಅದು ಪರಮ ತಪೋಬಲದಿಂದ ಮಯನಿಗೆ ಲಭಿಸಿತ್ತು. ಮಂಡೋದರಿಗೆ ಮಂಡೋಪರಿ ಎಂಬುದು ಇನ್ನೊಂದು ಹೆಸರು. ಮಂದ ಉಪರೀ ಎಂದರೆ ಕೃಶವಾದ ಉದರವುಳ್ಳವಳು ಎಂದರ್ಥ. ಮಂಡ ಉದರೀ ಎಂದರೆ ಸುಂದರವಾದ ಉದರವುಳ್ಳವಳು ಎಂದು ಅರ್ಥ. ರಾವಣನನ್ನು ಮದುವೆಯಾದ ಮೇಲೆ ಇಂದ್ರಜಿತು, ಅಕ್ಷಯಕುಮಾರ ಎಂಬ ಮಹಾವೀರರನ್ನು ಮಕ್ಕಳಾಗಿ ಪಡೆದಳು. ಅನಂತರ ರಾವಣ ರಾಮಚಂದ್ರನ ಪತ್ನಿ ಸೀತೆಯನ್ನು ಅಪಹರಿಸಿಕೊಂಡು ತಂದ. ರಾಮಲಕ್ಷ್ಮಣರು ವಾನರ ಸೈನ್ಯವನ್ನು ಕಟ್ಟಿಕೊಂಡು ರಾವಣನ ಮೇಲೆ ಯುದ್ಧಕ್ಕೆ ಬಂದರು. ಆ ಯುದ್ದದಲ್ಲಿ ರಾವಣ ಕುಂಭಕರ್ಣ ಇಂದ್ರಜಿತು ಎಲ್ಲರೂ ಸತ್ತುಹೋದರು. ಇಂದ್ರಾದಿಗಳಿಗೂ ಅಜೇಯರಾದ ಇವರು ನಾಶವಾಗಬೇಕಾದರೆ ರಾಮ ಮಾನವನಲ್ಲ ದೇವಾಂಶ ಸಂಭೂತನೇ ಆಗಿರಬೇಕೆಂದು ಮಂಡೋದರಿ ಊಹಿಸಿದಳು. ವಾಲ್ಮೀಕಿರಾಮಾಯಣದಲ್ಲಿ ಮಂಡೋದರಿಯ ಬಗ್ಗೆ ಇಷ್ಟು ತಿಳಿಯುವುದು. ಆನಂದ ರಾಮಾಯಣದಲ್ಲಿ ಮಂಡೋದರಿಯ ವಿಚಾರ ಹೀಗಿದೆ:
ಈಕೆ ರಾಕ್ಷಸರ ಶಿಲ್ಪಿಯಾದ ಮಯಾಸುರನ ಮಗಳು. ಈಕೆಯ ತಾಯಿ ಹೇಮೆಯೆಂಬ ಅಪ್ಸರೆ. ಮಂಡೋದರಿಯನ್ನು ರಾವಣ ಮದುವೆಯಾದ. ಒಬ್ಬ ಮುನಿ ಲಕ್ಷ್ಮಿಯನ್ನು ಮಗಳಾಗಿ ಪಡೆಯಬೇಕೆಂದು ಬಯಸಿ ಮಂತ್ರ ಸಿದ್ಧ ರಕ್ತವನ್ನು ಒಂದು ಕಲಶದಲ್ಲಿಟ್ಟಿದ್ದ. ದಿಗ್ವಿಜಯಕ್ಕೆ ಹೋಗಿದ್ದ ರಾವಣ ಅದನ್ನು ಹೊತ್ತು ತಂದು ಮಂಡೋದರಿಗೆ ಕೊಟ್ಟು ಇದನ್ನು ಕುಡಿಯಬೇಡ ಎಂದ. ರಾವಣಪರಸ್ತ್ರೀಗಮನನಾದುದನ್ನು ಕಂಡು ಸಹಿಸಲಾರದೆ ಆ ಕಲಶದಲ್ಲಿದ್ದ ರಕ್ತವನ್ನು ವಿಷವೆಂದು ಭಾವಿಸಿ ಮಂಡೋದರಿ ಕುಡಿದುಬಿಟ್ಟಳು. ಇದರ ಪರಿಣಾಮವಾಗಿ ಮಂಡೋದರಿ ಗರ್ಭಧರಿಸಿದಳು. ಕುರುಕ್ಷೇತ್ರದ ಬಳಿ ವಿಮಾನದಲ್ಲಿ ಬರುತ್ತಿದ್ದಾಗ ಅಲ್ಲೇ ಪ್ರಸವವೇದನೆಯಿಂದ ಒಂದು ಹೆಣ್ಣು ಮಗುವನ್ನು ಹೆತ್ತಳು. ನಾಚಿಕೆಯಿಂದ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟು ಮುಚ್ಚಿ, ಅಲ್ಲಿಯೆ ಹುಗಿದುಬಿಟ್ಟು ತಾನು ಲಂಕೆಗೆ ಹಿಂತಿರುಗಿದಳು. ಈ ಮಗುವೇ ಜನಕರಾಜನಿಗೆ ಭೂಮಿಯಲ್ಲಿ ದೊರೆತ ಸೀತೆ ಎನ್ನಲಾಗಿದೆ. (ಕೆ.ವೈ.ಎಸ್.)