ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಂತ್ರಿ ಪರಿಷದ್

ವಿಕಿಸೋರ್ಸ್ದಿಂದ

ಮಂತ್ರಿ ಪರಿಷದ್ - ವೇದಗಳ ಕಾಲದಿಂದಲೂ ರೂಢಿಯಲ್ಲಿದ್ದ ಮಂತ್ರಿಗಳ ಆಲೋಚನಾ ಸಭೆ. ಇದು ರಾಜ್ಯದ ಮುಖ್ಯ ಆಡಳಿತ ಕಾರ್ಯನಿರ್ವಾಹಕ ಮಂಡಳಿಯಾಗಿತ್ತು. ಸಾಧಾರಣವಾಗಿ ಮಂತ್ರಿ ಪರಿಷದ್‍ನಲ್ಲಿ ಎಂಟು ಮಂದಿ ಮಂತ್ರಿಗಳಿರುತ್ತಿದ್ದರು. ಮನು ಮತ್ತು ಶುಕ್ರ ಇವರು ಮಂತ್ರಿಗಳ ಸಂಖ್ಯೆ 7 ಅಥವಾ 8ಕ್ಕೆ ಹೆಚ್ಚಾಗಿರಕೂಡದೆಂದು ಹೇಳಿದ್ದಾರೆ. ಮೆಗಸ್ತನೀಸ್ ತನ್ನ ಕಾಲದ ಮಂತ್ರಿ ಪರಿಷದ್ ಕುರಿತು ಅದು ಚಿಕ್ಕದಾಗಿತ್ತೆಂದೂ ಅದರ ಸದಸ್ಯರು e್ಞÁನಿಗಳು ಮತ್ತು ನೀತಿವಂತರು ಆಗಿದ್ದರೆಂದೂ ವರ್ಣಿಸಿದ್ದಾನೆ. ಕೌಟಿಲ್ಯ ಮುಖ್ಯವಿಚಾರಗಳನ್ನೆಲ್ಲ ಮಂತ್ರಿ ಪರಿಷದ್‍ನಲ್ಲಿ ಪರಿಶೀಲಿಸಬೇಕೆಂದೂ ಯಾವುದಾದರೂ ಭಿನ್ನಾಭಿಪ್ರಾಯವಿದ್ದರೆ ಬಹುಮತದಂತೆ ನಡೆಯಬೇಕೆಂದೂ ಹೇಳಿದ್ದಾನೆ. ಈ ಸಭೆ ರಾಜ ನಿರಂಕುಶನಾಗಲು ಅವಕಾಶಕೊಡದೆ ಆಡಳಿತವನ್ನು ವಿಚಕ್ಷಣೆಯಿಂದ ನಡೆಸುತ್ತಿತ್ತು. ಶಿವಾಜಿ ಕೂಡ ತಾನು ಸ್ಥಾಪಿಸಿದ ರಾಜ್ಯದ ಆಡಳಿತವನ್ನು ವೇದಗಳ ಆಧಾರದ ಮೇಲೆ ಕ್ರಮಪಡಿಸಿ ಮಂತ್ರಿ ಪರಿಷದ್ ಮಾದರಿಯಲ್ಲಿ ಅಷ್ಟ ಪ್ರಧಾನರ ಸಭೆ ರಚಿಸಿದ್ದ. ಆಧುನಿಕ ಪ್ರಜಾಪ್ರಭುಸತ್ವ ರಾಜ್ಯಗಳಲ್ಲೂ ಮಂತ್ರಿಗಳ ಆಡಳಿತವೇ ಇರುವುದು. ಆದರೆ ಇಂತಿಷ್ಟೇ ಮಂತ್ರಿಗಳೆಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ರಾಜ್ಯದ ವಿಸ್ತಾರ, ಆಡಳಿತ ಕ್ರಮ ಮತ್ತು ಅದರ ವಿವಿಧ ಅಂಗಗಳ ರಚನೆಯ ಮೇಲೆ ಮಂತ್ರಿಗಳ ಸಂಖ್ಯೆ ನಿರ್ಧಾರವಾಗುತ್ತದೆ. (ಬಿ.ಎಸ್.ಕೆ.)