ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಗ್ಗೆಯ ಮಾಯಿದೇವ
ಮಗ್ಗೆಯ ಮಾಯಿದೇವ ಸು. 1430. ವೀರಶೈವಕವಿ. ಅನುಭವಸೂತ್ರ ಪ್ರಭುಗೀತೆ. ಏಕೋತ್ತರ ಶತಸ್ಥಲ ಷಟ್ಪದಿ, ಷಟ್ಸ್ಥಲಗದ್ಯ, ಶತಕತ್ರಯ, ಮಗ್ಗೆಯ ಮಾಯಿದೇವನ ವಚನ ಎಂಬ ಗ್ರಂಥಗಳನ್ನು ಬರೆದಂತೆ ತಿಳಿಯುತ್ತದೆ. ಅನುಭವಸೂತ್ರ, ಶತಕತ್ರಯ ಉಳಿದು ಇತರ ಗ್ರಂಥಗಳು ಲಭ್ಯವಿಲ್ಲ. ಅನುಭವ ಸೂತ್ರ ಸಂಸ್ಕøತದಲ್ಲಿದೆ. ಮಲಪ್ರಹಾರೀ ನದಿಯ ದಡದಲ್ಲಿರುವ ಐಪುರ ಈತನ ಸ್ಥಳ. ಐಪುರದ ಸೋಮನಾಥ ಈತನ ಇಷ್ಟದೈವ. ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣ ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಗ್ರಂಥಗಳಲ್ಲಿ ಈತನ ಉಲ್ಲೇಖವಿದೆ. ವೀರಶೈವ ಗ್ರಂಥಗಳು ಇವನನ್ನು ಪ್ರಭುವಿಭು ಎಂದು ಸ್ತುತಿಸುತ್ತಿರುವುದರಿಂದ ಈತ ಉನ್ನತ ಪದವಿಯಲ್ಲಿದ್ದಿರಬೇಕು.
ವಿಜಯನಗರದ ಅರಸ ಇಮ್ಮಡಿ ಪ್ರೌಢರಾಯನ (1419-46) ಕಾಲದಲ್ಲಿ ಮಾಯಿದೇವನಿದ್ದುದು. ಆಕಾಲದ ಪ್ರಮುಖ ವೀರಶೈವ ಭಕ್ತರಲ್ಲಿ ಈತನೂ ಒಬ್ಬ. ಇವನ ಶತಕತ್ರಯ ಶಿವಾಧವಶತನಕ, ಶಿವಾವಲ್ಲಭಶತಕ, ಐಪುರೀಶ್ವರ ಶತಕ. ಇವನ್ನು ವೃತ್ತದಲ್ಲಿ ಬರೆದಿದ್ದಾನೆ. ಇವುಗಳಲ್ಲಿ ವೀರಶೈವ ಧರ್ಮಕ್ಕನುಸಾರವಾಗಿ e್ಞÁನ ಭಕ್ತಿ ವೈರಾಗ್ಯಗಳನ್ನು ಮಾಯಿದೇವ ಪ್ರತಿಪಾದಿಸಿದ್ದಾನೆ. ಇವನ ಶತತ್ರಯಕ್ಕೆ ಸುಮಾರು 1560ರಲ್ಲಿದ್ದ ವಿರಕ್ತ ತೋಂಟದಾರ್ಯ ವ್ಯಾಖ್ಯಾನ ಬರೆದಿದ್ದಾನೆ. ಮಾಯಿದೇವನ ಗ್ರಂಥಗಳಲ್ಲಿ ಶತಕತ್ರಯವೇ ಮುಖ್ಯ ಗ್ರಂಥ. ಶಿವಾಧವಶತಕದಲ್ಲಿ ಭಕ್ತಿಯನ್ನು ವಿವರಿಸುವ 101 ವೃತ್ತಗಳಿದ್ದು ಪ್ರತಿಪದ್ಯವೂ ಶಿವಾಧವ ಎಂದು ಕೊನೆಗೊಳ್ಳುತ್ತದೆ. ಐಪುರೀಶ್ವರ ಶತಕದಲ್ಲಿ ವೈರಾಗ್ಯವನ್ನು ಬೋಧಿಸುವ 113 ವೃತ್ತಗಳಿದ್ದು ಪ್ರತಿಪದ್ಯವೂ ಮಹದೈಪುರೀಶ್ವರಾ ಎಂದು ಮುಗಿಯುತ್ತದೆ. ಹದಿನೈದನೆಯ ಶತಮಾನದಲ್ಲಿ ರಚಿತವಾದ ಶತಕಗಳಲ್ಲಿ ಮಾಯಿದೇವನ ಶತನಕತ್ರಯ ಮೊದಲಸ್ಥಾನ ಪಡೆದಿದೆ. (ಎಸ್.ಬಿ.ಎಸ್.)