ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮತ್ಸ್ಯಾವತಾರ

ವಿಕಿಸೋರ್ಸ್ದಿಂದ

ಮತ್ಸ್ಯಾವತಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಮೊದಲನೆಯದು. ಶತಪಥ ಬ್ರಾಹ್ಮಣದಲ್ಲಿ ಇದರ ಸೂಚನೆ ಸಿಗುತ್ತದೆ. ಪುರಾಣಗಳಲ್ಲಿ ಈ ಅವತಾರ ಕುರಿತಂತೆ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಪ್ರಳಯದಲ್ಲಿ ಸಿಕ್ಕಿಬಿದ್ದ ವೈವಸ್ವತ ಮನುವನ್ನು ಉದ್ಧರಿಸುವುದೇ ಈ ಅವತಾರದ ಉದ್ದೇಶ. ಪ್ರಪಂಚವೆಲ್ಲ ನೀರು ತುಂಬಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿರಲು ಮನು ವೇದಗಳನ್ನೂ ಪ್ರಾಣಿಗಳನ್ನೂ ಸಸ್ಯಗಳ ಬೀಜಗಳನ್ನೂ ಶೇಖರಿಸಿ ಅವನ್ನು ಕಾಪಾಡಬೇಕೆಂಬ ಉದ್ದೇಶದಿಂದ ಹಡಗಿನಲ್ಲಿ ರಕ್ಷಿಸಿಟ್ಟ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಲು ಮನು ಹಾಗೇಯೇ ಮಾಡಿದ ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಸಿಕ್ಕಿತು. ಆದರೆ ಹಯಗ್ರೀವನೆಂಬ ರಾಕ್ಷಸ ಬಂದು ಮನುವಿಗೆ ತಿಳಿಯದಂತೆ ವೇದಗಳನ್ನು ಅಪಹರಿಸಿ ಸಮುದ್ರತಳಕ್ಕೆ ಕೊಂಡೊಯ್ದ. ಮನು ವಿಷ್ಣುವಿಗೆ ಮೊರೆಯಿಡಲು ಮೀನಿನ ರೂಪದಲ್ಲಿದ್ದ ವಿಷ್ಣು ಹಯಗ್ರೀವನನ್ನು ಕೊಂದು ವೇದಗಳನ್ನು ತಂದು ಮನುವಿಗೆ ನೀಡಿದ. (ಕೆ.ಬಿ.ಆರ್.)