ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮದಕಲಾ
ಮದಕಲಾ - ಸುಮತಿಯೆಂಬ ವಿದ್ಯಾಧರನ ಹೆಂಡತಿ. ಒಮ್ಮೆ ಈಕೆ ಆಕಾಶಗಂಗೆಯ ಕೆಂದಾವರೆಗಳ ಮಾಲೆ ರಚಿಸಿ, ತನ್ನ ಸಖಿಯರೊಡನೆ ಜಲಕೇಳಿಗಾಗಿ ಪುಷ್ಪ ಭದ್ರಾನದಿಗೆ ಹೋಗುತ್ತಿದ್ದಾಗ ದಾರಿಮಧ್ಯದಲ್ಲಿ ದುರ್ವಾಸಮುನಿ ಎದುರಾದ. ಮದಕಲೆಯು ಕೈಯಲ್ಲಿದ್ದ ಆ ಮಾಲೆಯ ಸುವಾಸನೆಗೆ ಆತ ಮನಸೋತು, ಅದನ್ನು ತನಗೆ ಕೊಡುವಂತೆ ಆಕೆಯನ್ನು ಬೇಡಿದ. ಅವನ ಮಹಿಮೆಯನ್ನು ಅರಿತಿದ್ದ ಮದಕಲೆ ಮರುಮಾತಾಡದೆ ಆ ಮಾಲೆಯನ್ನು ಅವನ ಕೊರಳಿಗೆ ಹಾಕಿ ಕೈಮುಗಿದಳು. ಸಂತಸಗೊಂಡ ದುರ್ವಾಸ ಹುಚ್ಚನಂತೆ ಹಾಡುತ್ತ ಬರುತ್ತಿದ್ದ. ಈತ ಹೀಗೆ ಬರುತ್ತಿದ್ದಾಗ ರಂಭೆಯ ನೃತ್ಯ ಗೀತೆಗಳಿಗೆ ಮರುಳಾಗಿದ್ದ, ಐರಾವತದ ಮೇಲೆ ಕುಳಿತಿದ್ದ ಇಂದ್ರ ಈತನಿಗೆ ಎದುರಾದ, ಆಗ ದುರ್ವಾಸಮುನಿ ತನ್ನ ಕೈಯಲ್ಲಿದ್ದ ಮಾಲೆಯನ್ನು ಇಂದ್ರನ ಮೇಲೆ ಎಸೆದ. ಮೊದಲೇ ಪರವಶನಾಗಿದ್ದ ಇಂದ್ರ ಆ ಮಾಲೆಯನ್ನು ಐರಾವತದ ಕುಂಬಸ್ಥಲದ ಮೇಲೆ ಬಿಸಾಕಿದ. ಮಾಲೆಯ ಸುವಾಸನೆಗೆ ಮದವೇರಿದ ಆನೆ ತನ್ನ ಸೊಂಡಲಿನಿಂದ ಅದನ್ನು ಎಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಕಾಲಿನಿಂದ ಹೊಸಕಿಹಾಕಿತು. ಇದರಿಂದ ಕೋಪಿಸಿಕೊಂಡ ದುರ್ವಾಸ ಇಂದ್ರನ ಸಂಪತ್ತು ನಾಶವಾಗುವಂತೆ ಶಾಪವಿತ್ತ. (ಕೆ.ವೈ.ಎಸ್.)