ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಧ್ಯಸ್ಥಿಕೆ

ವಿಕಿಸೋರ್ಸ್ದಿಂದ
Jump to navigation Jump to search

ಮಧ್ಯಸ್ಥಿಕೆ ಇಬ್ಬರು ವ್ಯಕ್ತಿಗಳ ಹಾಗೂ ಎರಡು ಮತ್ತು ಅದಕ್ಕೂ ಹೆಚ್ಚಾದ ದೇಶಗಳ ಮಧ್ಯೆ ಉಂಟಾಗುವ ಭಿನ್ನಾಭಿಪ್ರಾಯಗಳ ನಿವಾರಣೆಗೆ ಆಯಾ ವ್ಯಕ್ತಿಗಳ ಇಲ್ಲವೇ ದೇಶಗಳ ಯಾಚಿತ ಸಲಹೆಗಾರ ಅಥವಾ ಸಮಿತಿ ನಿರ್ವಹಿಸುವ ಕಾರ್ಯ. ಇದರ ನಿರ್ವಾಹಕನೇ ಮಧ್ಯಸ್ಥಗಾರ. ಈತ ತಾನಾಗಿ ಬರುವವನಲ್ಲ. ವ್ಯಕ್ತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತಾವೇ ಬಗೆಹರಿಸಿಕೊಳ್ಳಲು ವಿಫಲರಾದಾಗ ಇತರರ ಸಹಾಯ ಯಾಚಿಸುವುದರಿಂದ ಮಧ್ಯಸ್ಥಿಕೆ ಪ್ರಾರಂಭವಾಗುತ್ತದೆ. ಇದು ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳ, ಸಂಘಗಳ, ಕೈಗಾರಿಕಾ ಘಟಕಗಳ, ದೇಶಗಳ ನಡುವೆ ಇರಬಹುದು. ಮಧ್ಯಸ್ಥಿಕೆ ವಹಿಸಲು ಆಹ್ವಾನಿಸಲ್ಪಟ್ಟ ವ್ಯಕ್ತಿಗೆ ಪೂರ್ಣ ಸ್ವಾತಂತ್ರ್ಯವಿದ್ದು ಆತ ಅಥವಾ ಆ ಸಮಿತಿ ತನ್ನ ಒಪ್ಪಿಗೆ ಕೊಡಬಹುದು ಇಲ್ಲವೇ ಕೊಡದಿರಬಹುದು. ಒಂದು ಸಾರಿ ನೇಮಿತವಾದ ಮಧ್ಯಸ್ಥಿಕೆ ಸಮಿತಿಯ ಅಥವಾ ವ್ಯಕ್ತಿಯ ಕೆಲಸಕಾರ್ಯಗಳ ಮೇಲೆ ಯಾರೂ ಯಾವ ವಿಧವಾದ ನಿರ್ಬಂಧವನ್ನೂ ಹೇರುವಂತಿಲ್ಲ. ಆದರೆ ಮಧ್ಯಸ್ಥಿಕೆಯ ನಿರ್ಣಯ ಅಥವಾ ತೀರ್ಮಾನವನ್ನು ಸಂಬಂಧಿಸಿದವರು ಒಪ್ಪಬಹುದು ಅಥವಾ ಬಿಡಬಹುದು.

ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಯಾ ಪಂಗಡಗಳು, ರಾಜ್ಯಗಳು, ದೇಶಗಳು, ತಮಗೆ ಒಪ್ಪಿಗೆಯಾದ ವ್ಯಕ್ತಿಯನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಪರಿಶೀಲನೆಯ ಬಳಿಕ ಮಧ್ಯಸ್ಥಗಾರ ಓದಿ ಹೇಳಿದ, ಇಲ್ಲವೆ ಅವನು ಸಾರಿದ ನಿರ್ಣಯ ವ್ಯಕ್ತಿಗಳಿಗೆ, ಬಣಗಳಿಗೆ, ರಾಜ್ಯಗಳಿಗೆ, ದೇಶಗಳಿಗೆ ಬಂಧನಕಾರಿಯಾಗಿ ಪರಿಣಮಿಸುತ್ತದೆ. ಅಂದರೆ ಅವು ಆ ನಿರ್ಣಯಕ್ಕೆ ತಲೆಬಾಗಿ ಒಪ್ಪಬೇಕಾಗುತ್ತದೆ. ಹೆಚ್ಚು ಮಳದಿ, ಹೆಚ್ಚು ದೇಶಗಳು ಈ ಬಗೆಯ ನಿರ್ಣಯಗಳಿಗೆ ಕಟ್ಟುಬಿದ್ದು ತಾವು ನೇಮಿಸಿದ ಸಮಿತಿ ಅಥವಾ ವ್ಯಕ್ತಿಯನ್ನು ಗೌರವಿಸಿ ಅದರಂತೆ ನಡೆಯುವುದುಂಟು. ಆದರೆ ಕೆಲವು ಸಾರಿ ಈ ಬಗೆಯ ತೀರ್ಮಾನವನ್ನು ದೇಶಗಳು ತಿರಸ್ಕರಿಸುವುದೂ ಉಂಟು. ಇತ್ತೀಚೆಗೆ ಈ ಬಗೆಯ ಸಲಹೆಗಳನ್ನು, ತೀರ್ಮಾನಗಳನ್ನು ಕಡತದಲ್ಲಿ ಕೊಳಯಿಸಿ ಅವನ್ನು ಅನುಷ್ಠಾನಕ್ಕೆ ತರದಿರುವುದೂ ಉಂಟು. ಅಮೆರಿಕ, ರಷ್ಯ, ಚೀನ ಈ ಮೂರು ಬಲಾಢ್ಯ ರಾಷ್ಟ್ರಗಳು. ಇವುಗಳಲ್ಲಿ ಅಮೆರಿಕ ಬಂಡವಾಳಶಾಹಿ ರಾಷ್ಟ್ರವಾಗಿದ್ದು ಪ್ರಪಂಚದ ಅತಿ ದೊಡ್ಡ ಶ್ರೀಮಂತ ರಾಷ್ಟ್ರವೂ ಆಗಿದೆ. ರಷ್ಯ ಹಾಗೂ ಚೀನ ದೇಶಗಳು ಭಿನ್ನ-ಭಿನ್ನ ತತ್ತ್ವಗಳ ಮೇಲೆ ನಿಂತಿದ್ದರೂ ಕಮ್ಯುನಿಸ್ಟ್ ರಾಷ್ಟ್ರಗಳಾಗಿವೆ. ಭಾರತವೂ ಸೇರಿದಂತೆ ಅಲಿಪ್ತ ನೀತಿಯನ್ನು ಅನುಸರಿಸುವ ಕೆಲವು ರಾಷ್ಟ್ರಗಳ ಬಣವಿದೆ ಹಾಗೂ ಅತಿ ಹಿಂದುಳಿದಿರುವ ರಾಷ್ಟ್ರಗಳೂ ಇವೆ. ಇಂದು ಅನೇಕ ರಾಷ್ಟ್ರಗಳ ನಡುವೆ ಗಡಿ. ಸಮುದ್ರದ ಮೇಲಿನ ಹಕ್ಕು, ವ್ಯಾಪಾರವಾಣಿಜ್ಯ ಇತ್ಯಾದಿ ವಿವಿಧ ಸಮಸ್ಯೆಗಳಿವೆ. ಇವೆಲ್ಲವನ್ನೂ ಶಾಂತರೀತಿಯ ಮಾತುಕತೆಗಳಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದಕ್ಕಾಗಿಯೇ ಇಂದು ಮಧ್ಯಸ್ಥಿಕೆಯ ಪಂಚಾಯಿತಿಗಳಿಗೆ, ಸಮಿತಿಗಳಿಗೆ ಹಿರಿದಾದ ಹೊಣೆಯುಂಟು. ಶಾಂತಿ ರಕ್ಷಣೆಯ ಭಾರ ಈಗ ಎಲ್ಲ ರಾಷ್ಟ್ರಗಳ ಮೇಲೂ ಇದ್ದು ಈ ಮಧ್ಯಸ್ಥಿಕೆ ಈಗ ಅಂತಾರಾಷ್ಟ್ರೀಯ ಸ್ವರೂಪ ಪಡೆದಿದೆ. ಮಧ್ಯಸ್ಥಿಕೆಯ ಜವಾಬ್ದಾರಿ ಸಮಸ್ಯೆಗೆ ತಕ್ಕಂತೆ ಇರುತ್ತದೆ. ಅಂತಾರಾಷ್ಟ್ರೀಯವಾಗಿ ಪರಿಹಾರವಾಗಿ ಒಂದು ಖಾಯಂ ಮಧ್ಯಸ್ಥಗಾರ ಬೇಕೆಂದು ಒಂದನೆಯ ಮಹಾಯುದ್ಧದ ದಿನಗಳಂದು ಮನಗಂಡ ಕೆಲವು ರಾಷ್ಟ್ರಗಳು ಲೀಗ್ ಆಫ್ ನೇಶನ್ಸ್ ಎಂಬ ಒಕ್ಕೂಟವನ್ನು ಸ್ಥಾಪಿಸಿದವು.

ಎರಡನೆಯ ಮಹಾಯುದ್ಧ ಕೊನೆಗೊಂಡ ಮೇಲೆ 1945ರಲ್ಲಿ ಮಿತ್ರ ಮತ್ತು ತಟಸ್ಥ ರಾಷ್ಟ್ರಗಳು ಸೇರಿ ಸ್ಯಾನ್‍ಫ್ರಾನ್ಸಿಸ್ಕೋ ಎಂಬಲ್ಲಿ ಸಭೆ ಕರೆದುವು. ಯುದ್ಧ ತಡೆಯಲು ವಿಫಲವಾಗಿದ್ದ ಲೀಗ್ ಆಫ್ ನೇಶನ್ಸ್ ಬದಲು ಸಂಯುಕ್ತ ರಾಷ್ಟಗಳ ಸಂಸ್ಥೆ ಎಂಬ ಹೊಸತೊಂದು ಒಕ್ಕೂಟವನ್ನು ಸ್ಥಾಪಿಸಲು ಎಲ್ಲರೂ ಒಪ್ಪಿದರು. ಅದರಂತೆ ವಿಶ್ವಸಂಸ್ಥೆಯ ಸ್ಥಾಪನೆಯಾಯಿತು. ಇದರ ಉದ್ದೇಶ ಪ್ರಪಂಚದಲ್ಲಿ ಶಾಂತಿ ನೆಲಸುವಂತೆ ಮಾಡುವುದು, ಎಲ್ಲ ರಾಷ್ಟ್ರಗಳಲ್ಲಿಯೂ ಪರಸ್ಪರ ಮೈತ್ರಿ ಬೆಳೆಸುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಮನೋಭಾವನೆಯನ್ನು ವೃದ್ಧಿಸುವುದು, ಮಾನವ ಜನಾಂಗದ ಜೀವನಮಟ್ಟವನ್ನು ಸುಧಾರಿಸುವುದು ಇತ್ಯಾದಿ. ಈಗಾಗಲೇ ವಿಶ್ವಸಂಸ್ಥೆ ಕೆಲವು ರಾಷ್ಟ್ರಗಳ ಮಧ್ಯೆ ಉಂಟಾದ ಭಿನ್ನಾಭಿಪ್ರಾಯಗಳನ್ನು ಶಾಂತರೀತಿಯಲ್ಲಿ ಸಂಧಾನಗಳ ಮೂಲಕ ಬಗೆಹರಿಸಿಕೊಳ್ಳಬಹುದೆಂಬುದನ್ನು ತೋರಿಸಿ ಕೊಟ್ಟಿದೆ. ಇಷ್ಟಾದರೂ ಕೆಲವು ದೇಶಗಳ ಮಧ್ಯೆ ಬೆಳೆದಿರುವ ಅವಿಶ್ವಾಸ, ದ್ವೇಷಗಳನ್ನು ವಿಶ್ವಸಂಸ್ಥೆ ತಡೆಯಲಾರದೆ ಕುಳಿತಿದೆ. ಬಾಂಗ್ಲಾ, ಚೀನ ದೇಶಗಳ ಜೊತೆ ಭಾರತದ ಗಡಿ ಸಮಸ್ಯೆ, ಪಾಕಿಸ್ತಾನ- ಕಾಶ್ಮೀರ, ಇರಾನ್, ಪ್ಯಾಲೆಸ್ತೇನ್ ಸಮಸ್ಯೆಗಳು ಬಗೆಹರಿಯಬೇಕಾಗಿದೆ. ಈ ಸಮಸ್ಯೆಗಳೆಲ್ಲವೂ ಯುದ್ಧಕ್ಕೆ ತೀವ್ರ ಪ್ರಚೋದಕಗಳಾಗಿವೆ. ಇವುಗಳ ನಿವಾರಣೆಗೆ ಬಲಿಷ್ಟ ಮಧ್ಯಸ್ಥಗಾರನೊಬ್ಬನ ಅವಶ್ಯಕತೆ ಇದೆ. ವಿಶ್ವಸಂಸ್ಥೆ ಆ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದೇ, ಅದರ ಮೂಲ ಉದ್ದೇಶ ನೆರವೇರಿಸಬಲ್ಲದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇವಲ ದೇಶ ದೇಶಗಳ ನಡುವಿನ ವ್ಯಾಪಾರ ವಾಣಿಜ್ಯಕ್ಕೆ ಸಂಬಂಧಿಸಿದಂತೆ ವಿವಿಧ ಕೈಗಾರಿಕಾ ನಿಗಮಗಳ ನಡುವೆ ಉಂಟಾಗುವ ವ್ಯವಹಾರ ಸಂಬಂಧ ತೊಡಕುಗಳನ್ನು ಮತ್ತು ಕಾರ್ಮಿಕ ಸಂಘಟನೆಗಳ ಮತ್ತು ನಿರ್ವಹಣಕಾರರ ನಡುವೆ ಉದ್ಬವಿಸುವ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸಲೂ ಬೇಕಾಗುತ್ತದೆ. ಮಾಲಿಕ ಮತ್ತು ಕಾರ್ಮಿಕ ವರ್ಗಗಳ ಅನುಮತಿ ಮತ್ತು ಅಭೀಪ್ಸೆಯಂತೆ ಅವರ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಸಮಿತಿಗಳನ್ನು, ಪಂಚಾಯಿತಿಗಳನ್ನು ಮಧ್ಯಸ್ಥಿಕೆಯ ಕಾರ್ಯನಿರ್ವಹಿಸಲು ನೇಮಿಸುವುದುಂಟು. (ಎನ್.ಜಿ.ಬಿ.ಸಿ.)