ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರಗೆಣಸು
ಮರಗೆಣಸು ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಸಸ್ಯ (ಕಸಾವ, ಟ್ಯಾಪೀಯೋಕ). ವಿಪುಲ ಆಹಾರ ಸಂಗ್ರಹಣದಿಂದಾಗಿ ಇದರ ಬೇರು ಗೆಡ್ಡೆಯಂತೆ ದಪ್ಪವಾಗಿದ್ದು ಗೆಣಸಿನ ಆಕಾರ ಪಡೆದಿದೆ. ಆದ್ದರಿಂದಲೇ ಇದಕ್ಕೆ ಮರಗೆಣಸು ಎಂದು ಹೆಸರು. ಸಸ್ಯ ವೈಜ್ಞಾನಿಕವಾಗಿ ಇದನ್ನು ಮ್ಯಾನಿಹಾಟ್ ಯೂಟಿಲಿಸಿಮ ಎಂದು ಕರೆಯಲಾಗುತ್ತದೆ. ಇದಕ್ಕೆ ಔಷಧೀಯ ಪ್ರಾಮುಖ್ಯವೂ ಉಂಟು. ಇದರ ಎಲೆ, ಮೆದುವಾದ ಕಾಂಡ ಮತ್ತು ಗೆಡ್ಡೆ ಜಾನುವಾರುಗಳಿಗೆ ಮೆಚ್ಚಿನ ಮೇವು. ಮರಗೆಣಸು ಮತ್ತು ಇದರ ಉಪೋತ್ಪನ್ನಗಳು ಅನೇಕ ಕೈಗಾರಿಕೆಗಳಿಗೆ ಅಗತ್ಯ ಕಚ್ಚಾವಸ್ತುಗಳೆನಿಸಿವೆ. ಕೇರಳದಲ್ಲಿ ಇದು ಮುಖ್ಯ ಆಹಾರವಾಗಿದೆ. ಇದರಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶಗಳುಂಟು.
ಮರಗೆಣಸಿನ ತವರು ದಕ್ಷಿಣ ಅಮೆರಿಕದ ಬ್ರಜಿಲ್. ಪೋರ್ಚುಗೀಸರು 17ನೆಯ ಶತಮಾನದಲ್ಲಿ ಭಾರತದೇಶಕ್ಕೆ ಇದನ್ನು ತಂದರು. ಮೊದಲು ಮಲಬಾರ್ ತೀರಪ್ರದೇಶದ ತಿರುವನಂತಪುರ ಮತ್ತು ಕೊಚ್ಚಿನ್‍ಗಳಿಗೆ ತರುವಾಯ ದೇಶದ ಇತರ ಭಾಗಗಳಿಗೆ ಹರಡಿತು.
ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯಲಗು ಹಸ್ತಾಕಾರದಲ್ಲಿದ್ದು 3-7 ಭಾಗಗಳಾಗಿ ವಿಂಗಡಗೊಂಡಿದೆ. ಎಲೆಯ ಮೇಲುಭಾಗದಲ್ಲಿ ನವುರಾದ ರೋಮಗಳುಂಟು. ಹೂಗೊಂಚಲು ಅಸೀಮಾಕ್ಷಿ (ರೇಸಿಮೋಸ್) ಅಥವಾ ಪ್ಯಾನಿಕಲ್ ಮಾದರಿಯದು; ಎಲೆಯ ಕಕ್ಷಗಳಲ್ಲೊ ರಂಬೆಗಳ ತುದಿಗಳಲ್ಲೊ ಸ್ಥಿತವಾಗಿರುತ್ತದೆ.
ಮರಗೆಣಸು ಉಷ್ಣವಲಯದ ಬೆಳೆ. ಇದು ತಂಪು ವಾತಾವರಣವನ್ನು ಸಹಿಸದು. ಇದನ್ನು ಸಮುದ್ರ ಮಟ್ಟದಿಂದ ಹಿಡಿದು 1200ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಮಾತ್ರ ಬೆಳೆಸಬಹುದು. ಜೌಗಿಲ್ಲದ ಮರಳುಮಿಶ್ರಿತ ಮಣ್ಣುಗಳಲ್ಲಿ ಇದರ ಬೆಳವಣಿಗೆ ಹುಲುಸು. ಮರಳುಮಿಶ್ರಿತ ಗೋಡು ಅತ್ಯುತ್ತಮ. ಮಲಬಾರ್ ತೀರಪ್ರದೇಶದಲ್ಲಿರುವ ಜಂಬಿಟ್ಟಿಗೆ ಗೋಡುಮಣ್ಣಿನಲ್ಲಿ ಕೂಡ ಇದರ ಬೇಸಾಯ ಯಶಸ್ವಿಯಾಗುತ್ತದೆ.
ಮರಗೆಣಸು ದಷ್ಟಪುಷ್ಟವಾಗಿ ಬೆಳೆಯುವುದರಿಂದ ಭೂಮಿಯಲ್ಲಿರುವ ಲವಣ, ಖನಿಜಾಂಶಗಳನ್ನು ಚೆನ್ನಾಗಿ ಮತ್ತು ಶೀಘ್ರವಾಗಿ ಉಪಯೋಗಿಸಿಕೊಂಡು ಭೂಮಿಯನ್ನು ನಿಸ್ಸಾರ ಮಾಡುತ್ತದೆ. ಆದ್ದರಿಂದ ಪ್ರತಿವರ್ಷ ಇದೇ ಬೆಳೆಯನ್ನು ಬೆಳೆಸುವುದು ಭೂಮಿಯ ಫಲವತ್ತು ಮತ್ತು ಫಸಲಿನ ಇಳುವರಿ ದೃಷ್ಟಿಯಿಂದ ಉತ್ತಮವಲ್ಲ. ಇದನ್ನು ತರಕಾರಿ ಬೆಳೆಗಳ ಅನಂತರ ಪರ್ಯಾಯ ರೀತಿಯಲ್ಲಿ ಬೆಳಸುವುದು ವಾಡಿಕೆ. ಅಲ್ಲದೆ ಬೇರೆ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುವುದು ಕೂಡ ಉಂಟು.
ಮರಗೆಣಸನ್ನು ಕಾಂಡ ತುಂಡುಗಳಿಂದ ವೃದ್ಧಿ ಮಾಡುವುದು ಸಾಮಾನ್ಯ. ಇದನ್ನು ಬೀಜದಿಂದ ವೃದ್ಧಿ ಮಾಡುವ ಸಾಧ್ಯತೆ ಇದ್ದರೂ ಹೀಗೆ ಬೆಳಸಿದ ಸಸ್ಯಗಳು ಇಳುವರಿ ಕೊಡಲು ಹೆಚ್ಚು ಕಾಲ ಹಿಡಿಯುವುದರಿಂದ ಈ ವಿಧಾನ ಹೆಚ್ಚಾಗಿ ಬಳಕೆಯಲ್ಲಿಲ್ಲ.
ಮರಗೆಣಸು ಸರಿಸುಮಾರಾಗಿ ಒಂದು ವರ್ಷದ ಬೆಳೆ. ತುಂಡುಗಳನ್ನು ನೆಟ್ಟ 8-10 ತಿಂಗಳ ತರುವಾಯ ಬೇರುಗಳು ಬಲಿತು ಕುಯ್ಲಿಗೆ ಬರುತ್ತವೆ. ಬೇಸಾಯ ಕ್ರಮ ಹಾಗೂ ತಳಿ ಅವಲಂಬಿಸಿ ಮರಗೆಣಸಿನ ಇಳುವರಿ ಹೆಕ್ಟೇರಿಗೆ 12-15 ಟನ್ ಇದೆ. 50 ಟನ್ ಇಳುವರಿ ಕೊಡುವಂಥ ಸುಧಾರಿತ ತಳಿಯನ್ನು ಇತ್ತಿಚೆಗೆ ತಿರುವನಂತಪುರದ ಮರಗೆಣಸು ಸಂಶೋಧನ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಮರಗೆಣಸು ಮಲಬಾರ್ ತೀರಪ್ರದೇಶ ಜನರ ಮುಖ್ಯ ಅಹಾರ. ಇದನ್ನು ಬೇಯಿಸಿ ಇಲ್ಲವೆ ಸುಟ್ಟು ಉಪಯೋಗಿಸುವುದಿದೆ. ಅಲ್ಲದೆ ಹುಳಿ ಮತ್ತು ಪಲ್ಯದ ರೀತಿಯಲ್ಲಿ ಸಹ ಉಪಯೋಗಿಸುವುದುಂಟು. ಇದರಿಂದ ಹಿಟ್ಟು ಮತ್ತು ಕೃತಕ ಅಕ್ಕಿ ತಯಾರು ಮಾಡುವುದಿದೆ. ಫಿಲಿಪೀನ್ಸ್‍ನಲ್ಲಿ ಇದರಿಂದ ಮದ್ಯ ತಯಾರಿಸುತ್ತಾರೆ. ಇದರ ಹಿಟ್ಟು ಬಿಸ್ಕತ್ತು ತಯಾರಿಕೆಗೂ ಗಂಜಿಯು ಬಟ್ಟೆಗಳಿಗೆ ಹಾಕಲೂ ಒದಗುತ್ತದೆ. ಮರಗೆಣಸಿನ ಹಿಟ್ಟನ್ನು ಚಪಾತಿ, ಪೂರಿ ಇತ್ಯಾದಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರಿಂದ ರವೆ ತಯಾರಿಸಿ ಉಪ್ಪಿಟ್ಟು, ಸಜ್ಜಿಗೆ, ಇಡ್ಲಿ ಮುಂತಾದವನ್ನು ಮಾಡಬಹುದು. (ಡಿ.ಎಂ.)