ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮರಳು ದಿಬ್ಬ

ವಿಕಿಸೋರ್ಸ್ದಿಂದ

ಮರಳು ದಿಬ್ಬ ಗಾಳಿಯ ವೇಗ, ಅದು ಹೊತ್ತು ಬರುವ ಮರಳುಕಣಗಳ ಗಾತ್ರ ಮತ್ತು ತಡೆಯೊಡ್ಡುವ ಪ್ರದೇಶಗಳ ಸ್ಥಿತಿಗತಿಗಳ ಸಲುವಾಗಿ ಶೇಖರಗೊಳ್ಳುವ ಮರಳಿನ ರಾಶಿ (ಸ್ಯಾಂಡ್ ಡ್ಯೂನ್). ಭೂಸವೆತದ ಕಾರ್ಯದಲ್ಲಿ ತೊಡಗಿರುವ ಗಾಳಿ ಸಾಮಾನ್ಯವಾಗಿ ಸಾಗಣೆ ಮತ್ತು ಸಂಚಯನಗಳನ್ನು ಏಕಕಾಲದಲ್ಲಿ ಮಾಡುತ್ತದೆ. ಗಿಡಮರಗಳಿಲ್ಲದ ವಿಶಾಲ ಮರಭೂಮಿಗಳಲ್ಲೂ ಕೆಲವೊಮ್ಮೆ ಕಡಲತೀರಗಳಲ್ಲೂ ಅದರ ಸಾಮಥ್ರ್ಯ ಅಧಿಕ. ಬೀಸುವ ಗಾಳಿಯ ದಿಕ್ಕನ್ನು ಅನುಸರಿಸಿ ಅದರಲ್ಲಿ ಸೇರಿರುವ ಮರಳಿನ ಕಣಗಳು ಮತ್ತು ಚೂರುಗಲ್ಲಿನ ಮಡಿಗಳು ಯಾವುದಾದರೊಂದು ಗಿಡ ಅಥವಾ ದೊಡ್ಡಕಲ್ಲಿನಿಂದ ತಡೆಯಲ್ಪಟ್ಟು ರಾಶಿಗೂಡುತ್ತವೆ. ಕೆಲವು ದಿಬ್ಬಗಳು ಗಾಳಿಬೀಸುವ ದಿಕ್ಕಿಗೆ ಸಮಾಂತರವಾಗಿಯೂ ಉದ್ದುದ್ದವಾಗಿಯೂ ಮತ್ತೆ ಕೆಲವು ದಿಬ್ಬಗಳು ಗಾಳಿಬೀಸುವ ದಿಕ್ಕಿಗೆ ಅಡ್ಡವಾಗಿಯೂ ರಚನೆಗೊಂಡಿರುತ್ತವೆ. ಉತ್ತರ ಆಫ್ರಿಕ ಮತ್ತು ನೈಋತ್ಯ ಏಷ್ಯದ ಮರುಭೂಮಿಗಳಲ್ಲಿ ಉದ್ದುದ್ದವಾಗಿ ಚಾಚಿರುವಂಥ ದಿಬ್ಬಗಳನ್ನು ಕಾಣಬಹುದು. ಅವುಗಳಿಗೆ ಸೀಫ್ ಎಂದು ಹೆಸರು. ಅವುಗಳ ಎತ್ತರ ಸುಮಾರು 100-200ಮೀ. ವರಗೆ; ಅಗಲ ಎತ್ತರದ ಆರು ಪಟ್ಟು. ಗಾಳಿ ಇವುಗಳಿಗೆ ಸಮಾಂತರವಾಗಿ ಬೀಸುವಾಗ ಅವು ಉದ್ದವಾಗುತ್ತಲೂ ಅಡ್ಡವಾಗಿ ಬೀಸುವಾಗ ಎತ್ತರ ಮತ್ತು ಅಗಲವಾಗುತ್ತಲೂ ಹೋಗುತ್ತವೆ. ಇದು ಮರಳಿನ ಸಾಗರಗಳ ದೊಡ್ಡ ದೊಡ್ಡ ಅಲೆಗಳಂತೆ ತೋರುತ್ತವೆ. ಚಿಕ್ಕ ಚಿಕ್ಕ ಅಲೆಗಳಂತೆ ತೋರುವ ದಿಬ್ಬಗಳೂ ಉಂಟು. ಇವು ಮೊದಲು ಕಿರಿದಾದ ಬದಿಗಳಿರುವ ಚಿಕ್ಕ ಚಿಕ್ಕ ದಿಣ್ಣೆಗಳಾಗಿದ್ದು ಇವುಗಳ ಹಿಂಭಾಗದಿಂದ ಏರಿಬರುವ ಮರಳಿನ ಕಣಗಳು ಕಡಿದಾದ ಮುಂಭಾಗದಲ್ಲಿ ದೀರ್ಘ ಬಾಹುಗಳಾಗಿ ಬೀಳುತ್ತವೆ. ಅಲ್ಲಿ ಬೀಸುವ ಗಾಳಿ ಇವನ್ನು ಮುಂದೂಡುತ್ತ ಸಾಗಿದಂತೆ, ಮಧ್ಯಭಾಗ ಹೆಚ್ಚಿನ ಹೊರೆಯ ದೆಸೆಯಿಂದ ನಿಧಾನವಾಗಿಯೂ ಕಡಿಮೆ ಮರಳು ಇರುವ ಬಾಹುಗಳು ಶೀಘ್ರವಾಗಿಯೂ ಚಲಿಸುತ್ತವೆ. ಚಲನೆಯಲ್ಲಿಯ ಈ ವ್ಯತ್ಯಾಸದಿಂದ ಅಡ್ಡ ಬೆಳೆದಿರುವ ದಿಬ್ಬಗಳು ಅರ್ಧಚಂದ್ರಾಕೃತಿಯವಾಗುತ್ತವೆ. ಅವುಗಳಿಗೆ ನಿಮ್ನಮಧ್ಯವುಳ್ಳ (ಒಳಬಾವು), ಕಡಿದಾದ ಮುಂಭಾಗವೂ ಪೀನಮಧ್ಯ (ಹೊರಉಬ್ಬು) ಇರುವ ಹಿಂಭಾಗವೂ ಇವೆ. ಇಂಥ ಮರಳುದಿಬ್ಬಗಳಿಗೆ ಬರ್ಕಾನ್ ಎಂದು ಹೆಸರು. ಮುಂಭಾಗದ ವ್ಯಾಸ ಸುಮಾರು 402 ಮೀ. ಇರುವ ಅರ್ಧಚಂದ್ರಾಕೃತಿಯ ದಿಬ್ಬಗಳು ಸುಮಾರು 30-60 ಮೀ. ಎತ್ತರಕ್ಕೆ ಬೆಳೆದಿರುತ್ತವೆ. ಈ ಬಗೆಯ ದಿಬ್ಬಗಳು ವರ್ಷಕ್ಕೆ ಸುಮಾರು 7-10 ಮೀ. ವರಗೆ ಚಲಿಸುತ್ತವೆಂದು ಅಂದಾಜು. ಆಫ್ರಿಕ ಮತ್ತು ಅರೇಬಿಯಗಳ ಮರುಭೂಮಿಗಳಲ್ಲಿಯೂ ಸಿಂಧ್, ರಾಜಸ್ತಾನಗಳ ಮರುಭೂಮಿ ಬೀಸುವ ಗಾಳಿಗೆ ಸಮಾಂತರವಾಗಿ ಹರಡಿರುವ ಸುಮಾರು 30 ಮೀ. ಉದ್ದ, ಸುಮಾರು 4.2 ಮೀ. ಅಗಲ ಹಾಗೂ ಸುಮಾರು 50 ಮೀ. ಎತ್ತರವಿರುವ, ತಿಮಿಂಗಿಲದ ಬೆನ್ನಿನ ಆಕೃತಿಯ ಏರುದಿಬ್ಬಗಳಿವೆ. ಇವಕ್ಕೆ ಚಲನೆ ಇಲ್ಲ. ಇವು ಮರುಭೂಮಿಯ ಸಂಚಾರಕ್ಕೆ ಸಹಾಯವೆಸಗುವ ಮಾರ್ಗದರ್ಶಕ ದಿಬ್ಬಗಳು. ಕರಾವಳಿ ತೀರದ ಮರಳುದಿಬ್ಬಗಳು ಇನ್ನೊಂದು ಬಗೆಯವು. ವರ್ಷಕ್ಕೆ ಸುಮಾರು 7 ಮೀಟರಿನಂತೆ ಮುನ್ನುಗುವ ಇಂಥ ಕೆಲವು ದಿಬ್ಬಗಳು ಹೊಲಮನೆಗಳಿಗೆ ತಂದೊಡ್ಡುವ ಹಾನಿಕಾರಕ ಪರಿಣಾಮಗಳನ್ನು ಇಂಗ್ಲೆಂಡಿನ ಕಾರ್ನ್‍ವಾಲ್ ಮತ್ತು ಸ್ಕಾಟ್ಲೆಂಡಿನ ಮೊರೆ ನದೀಮುಖದ ದಕ್ಷಿಣ ಭಾಗಗಳಲ್ಲಿ ಕಾಣಬಹುದು. ಚಲಿಸುವ ಮರಳುದಿಬ್ಬಗಳ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗುವ ಅನುಕೂಲ ಸಸ್ಯಗಳನ್ನು ಬೆಳೆಸುವ ಯೋಜನೆಗಳು ಇತರೆಡೆಗಳಂತೆ ಭಾರತದ ರಾಜಸ್ತಾನದಲ್ಲೂ ನಡೆದಿವೆ. ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಲಕಾಡು ಎಂಬ ಸ್ಥಳದಲ್ಲಿ ಚಲಿಸುವ ಮರಳು ದಿಬ್ಬಗಳು ಇವೆ. (ನೋಡಿ- ತಲಕಾಡು) (ನೋಡಿ- ಮರಳು) (ಎಂ.ವಿ.)