ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಸ್ಕಟ್

ವಿಕಿಸೋರ್ಸ್ ಇಂದ
Jump to navigation Jump to search

ಮಸ್ಕಟ್ ಓಮಾನ್ ರಾಜ್ಯದ ರಾಜಧಾನಿ ಮತ್ತು ಬಂದರು ನಗರ. ಅರೇಬಿಯದ ಆಗ್ನೇಯ ಭಾಗದಲ್ಲಿರುವ ಓಮಾನ್ (ಸುಲ್ತನೇಟ್) ರಾಜ್ಯದ ಆಡಳಿತ ಕೇಂದ್ರ. ಈ ನಗರ ಉತ್ತರ ಅಕ್ಷಾಂಶ 23ಲಿ 37 ಪೂರ್ವರೇಖಾಂಶ 58ಲಿ 35ನಲ್ಲಿ ಅರಬ್ಬೀಸಮುದ್ರದ ಓಮಾನ್ ಕೊಲ್ಲಿಯ ತೀರದಲ್ಲಿದೆ. ಜನಸಂಖ್ಯೆ ಉಪನಗರ ಮಟ್ರಾ ಸೇರಿ 80.000 (1982) ಓಮಾನ್ ರಾಜ್ಯವನ್ನು 1970ರ ತನಕ ಮಸ್ಕಟ್ ಮತ್ತು ಓಮಾನ್ ಎಂದೆ ಕರೆಯುತ್ತಾರೆ. ಮಸ್ಕಟ್ ಓಮಾನ್ ಸುಲ್ತನೇಟ್ ಪ್ರಮುಖನಗರ ಹಾಗೂ ವ್ಯಾಪಾರಕೇಂದ್ರ ಇದರ ಪಶ್ಚಮಭಾಗದಲ್ಲಿರುವ ಬೆಟ್ಟಗಳು ಇಲ್ಲಿರುವ ಬೆಟ್ಟಶ್ರೇಣೆಯ ಅತ್ಯಂತ ಎತ್ತರ ಶಿಖರ (4107 ಮೀಟರ್) ಇಲ್ಲಿ ವಂಶಪಾರಂಪರ್ಯ ರಾಜಪ್ರಭುತ್ವವಿದೆ. ಸುಲ್ತಾನ ವಾಸಿಸುವುದೂ ಇಲ್ಲಿಯೇ.

ಮಸ್ಕಟೊನೊಡನೆ ಸಂಪರ್ಕ ಬೆಳೆಸಿದ ಯೂರೊಪಿಯನ್ನರಲ್ಲಿ ಪೋರ್ಚುಗೀಸರೆ ಮೊದಲಿಗರು (1508). ಇವರು ಈ ನಗರದಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ ತಮ್ಮ ಹಡಗು ನಿಲ್ದಾಣವಾಗಿ ಮಾಡಿಕೊಂಡರು. 1650ರ ತನಕವೂ ಇಲ್ಲಿ ಪೋರ್ಚುಗೀಸರ ಪ್ರಭಾವ ಹೆಚ್ಚಾಗಿತ್ತು. ಇವರ ಅನಂತರ 1741ರಿಂದ ಈ ನಗರ ಸುಲ್ತಾನರ ಅಧಿಕಾರಕ್ಕೆ ಸೇರಿತು. ಮಸ್ಕಟ್‍ನ ವಾಯವ್ಯದ ಉಪನಗರ ಮಟ್ರಾ ಬಹಳ ಪ್ರಾಮುಖ್ಯ ಪಡೆದಿದೆ. ಮಸ್ಕಟ್‍ನಿಂದ ಕೆಲವೇ ಕಿಲೊಮೀಟರುಗಳ ದೂರದಲ್ಲಿರುವ ಮೀನಾ ಅಲ್‍ಫ ಹಾಲ್ ತೈಲೋದ್ಯಮದ ಪ್ರಮುಖ ಕೇಂದ್ರ ಇಲ್ಲಿಂದ ಕೊಳಾಯಿಗಳ ಮೂಲಕ ಓಮಾನಿನ ಇತರ ಭಾಗಗಳಿಗೆ ಎಣ್ಣೆಯನ್ನು ಸರಬರಾಜು ಮಾಡಲಾಗುತ್ತಿದೆ. ಮಸ್ಕಟ್ ಸಮೀಪದ ಆಸಿಬ್ ಎಂಬಲ್ಲಿ ಅಂತಾರಾಷ್ರ್ಟೀಯ ವಿಮಾನನಿಲ್ದಾಣವಿದೆ. ನಗರದಲ್ಲಿ ಆಧುನಿಕ ಸೌಕಾರ್ಯಗಳೆಲ್ಲವೂ ಇದೆ. ಪರ್ಷಿಯ ಕೊಲ್ಲಿಗೆ ಹೋಗುವ ಮಾರ್ಗದಲ್ಲಿರುವ ಈ ನಗರ ವ್ಯಾಪಾರ ಮತ್ತು ರಕ್ಷಣೆ ದೃಷ್ಟಿಯಿಂದ ಮಹತ್ತ್ವ ಪಡೆದಿದೆ. (ಜಿ.ಪಿ.ಎಸ್.)