ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹಾಕೂಟ

ವಿಕಿಸೋರ್ಸ್ದಿಂದ

ಮಹಾಕೂಟ ಕರ್ನಾಟಕ ರಾಜ್ಯದ ಬಾದಾಮಿ ತಾಲ್ಲೂಕಿನಲ್ಲಿ ಬಾದಾಮಿಯಿಂದ ಸುಮಾರು 5 ಕಿ.ಮೀ. ಪೂರ್ವಕ್ಕೆ ನಂದಿಕೇಶ್ವರ ಗ್ರಾಮದ ಬಳಿ ಇರುವ ತೀರ್ಥಕ್ಪೇತ್ರ. ಬಾದಾಮಿಯ ಚಾಳುಕ್ಯರ ಕಾಲದ ದೇವಾಲಯಗಳಿಂದ ಪ್ರಸಿದ್ಧವಾಗಿದೆ. ಇಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ಎಂಬ ಎರಡು ಪ್ರಮುಖ ದೇವಾಲಯಗಳಿವೆ. ಈ ದೇವಾಲಯಗಳ ಮಧ್ಯೆ. ಒಂದು ಪುಷ್ಕರಣಿ ಮತ್ತು ಅದರ ಸುತ್ತಲೂ ಸಣ್ಣ ಸಣ್ಣ ದೇವಾಲಯಗಳಿವೆ.

ಮಹಾಕೂಟೇಶ್ವರ ದೇವಾಲಯದ ಮುಂದೆ ಚಾಳುಕ್ಯರಾಜ ಮಂಗಲೀಶನ ಶಾಸನವುಳ್ಳ ಅಷ್ಟಕೋನದ ಶಿಲಾಸ್ತಂಭವಿತ್ತು. ಇದು ಈಗ ಬಿಜಾಪುರದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿದೆ. ಮಂಗಲೀಶ ಕಳಚುರಿ ಮುಂತಾದವರನ್ನು ಗೆದ್ದು ಯುದ್ಧದಲ್ಲಿ ಸಂಗ್ರಹವಾದ ಐಶ್ವರ್ಯವನ್ನು ಚಕ್ರವರ್ತಿಯಾಗಿದ್ದ ತನ್ನ ಅಣ್ಣ ಶಕವರ್ಷ 524ರಲ್ಲಿ ಅರ್ಪಿಸಿದನೆಂದು ಶಾಸನದಲ್ಲಿ ಹೇಳಿದೆ. ಆದ್ದರಿಂದ ಈ ದೇವಾಲಯ 6ನೆಯ ಶತಮಾನದ್ದೆಂದು ತೋರುತ್ತದೆ. ಈ ಶಾಸನವಲ್ಲದೆ ಮಹಾಕೂಟೇಶ್ವರನಿಗೆ ದೇವಾಲಯದ ಕಂಬದ ಮೇಲೆ ವಿಜಯಾದಿತ್ಯನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯ ಶಾಸನವೂ ಇದೆ. ಇವಳು ದೇವರಿಗೆ ಚಿನ್ನದಿಂದ ಕಟ್ಟಿದ ಪೀಠ ಮತ್ತು ಬೆಳ್ಳಿ ಕೊಡೆ ಮಾಡಿಸಿದಳೆಂದೂ ಮಂಗಳ ಊರಿನ ಎಂಟು ಕ್ಷೇತ್ರ ಭೂಮಿಯನ್ನು ದಾನ ಮಾಡಿದಳೆಂದೂ ಶಾಸನದಲ್ಲಿದೆ. ಇಲ್ಲಿರುವ ಹಲವು ಶೈವದೇವಾಲಯಗಳಿಂದ ಇದೊಂದು ಪ್ರಸಿದ್ಧ ಶೈವ ಧರ್ಮದ ಕೇಂದ್ರವಾಗಿದ್ದಿರಬೇಕೆಂದು ಊಹಿಸಿದಲಾಗಿದೆ. *