ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಂಟೆಕಾರ್ಲೊ ವಿಧಾನ

ವಿಕಿಸೋರ್ಸ್ದಿಂದ

ಮಾಂಟೆಕಾರ್ಲೊ ವಿಧಾನ - ಯಾದೃಚ್ಚಿಕ ಸಂಖ್ಯೆಗಳನ್ನು ಉಪಯೋಗಿಸುವ, ಮುಖ್ಯವಾಗಿ ಸಂಖ್ಯಾಕಲನವಿಜ್ಞಾನದಲ್ಲಿ ಬಳಕೆಯಲ್ಲಿರುವ, ಒಂದು ಪ್ರಾಯೋಗಿಕ ವಿಧಾನ. 1858ರಲ್ಲಿ ಮೊನಾಕೊ ನಗರದ ದೊರೆ ಮೂರನೆಯ ಚಾಲ್ರ್ಸ್ ಜೂಜಾಟಕ್ಕಾಗಿ ಮಾಂಟೆಕಾರ್ಲೊ (ಸ್ಟ್ಯಾನಿಷ್ ಭಾಷೆಯಲ್ಲಿ ಚಾಲ್ರ್ಸ್‍ನ ಬೆಟ್ಟ ಎಂದರ್ಥ) ಎಂಬಲ್ಲಿ ದೊಡ್ಡ ಕಟ್ಟಡ ಕಟ್ಟಲು ಅನುಮತಿ ನೀಡಿದ. 1861ರಲ್ಲಿ ಇದು ಪೂರ್ತಿಗೊಂಡಿತು. ರಾಜಮನೆತನದವರಿಗೆ ಮನೋರಂಜನೆಯ ನೆಲೆಯಾಗಿ, ಮುಖ್ಯವಾಗಿ ಜೂಜಾಟ ಕೇಂದ್ರವಾಗಿ, ಮಾಂಟೆಕಾರ್ಲೊ ಪ್ರಸಿದ್ಧವಾಯಿತು. ಅಂತಿಮವಾಗಿ ಜೂಜಾಟವೆಂದರೆ ಯಾದೃಚ್ಛಿಕಸಂಖ್ಯೆಗಳ ಜೊತೆಗಿನ ಸೆಣಸಾಟ; ಯಾದೃಚ್ಛಿಕ ಪ್ರತಿಚಯ (ರ್ಯಾಂಡಮ್ ಸ್ಯಾಂಪಲ್) ಬಳಸಿ ಉದ್ದಿಷ್ಟಗುರಿ ತಲುಪುವ ಬೌದ್ಧಿಕ ಕಸರತ್ತು. ಎಂದೇ ಕ್ರಮೇಣ ಮಾಂಟೆಕಾರ್ಲೊ ಪದ ಅರ್ಥಾಂತರಗೊಂಡು ಇಂದು ಸಂಖ್ಯಾಕಲನವಿಜ್ಞಾನದಲ್ಲಿ ಒಂದು ಮುಖ್ಯ ವಿಧಾನವನ್ನು ಪ್ರತೀಕಿಸುತ್ತದೆ.

1944ರಿಂದ ಈಚೆಗೆ ಇದು ವಿಶೇಷವಾಗಿ ಬೆಳೆದಿದೆ. ಉದಾಹರಣೆಗೆ, ಸಾಂಖ್ಯಿಕ ಮಾದರಿಯ ಪ್ರಾಚಲಗಳ (ಪ್ಯರಾಮೀಟರ್ಸ್) ವಿವಿಧ ಅಂದಾಜು ಮೌಲ್ಯಗಳ ಸಾಮಥ್ರ್ಯವನ್ನು ತಾಳೆನೋಡುವುದೆಂದಿಟ್ಟುಕೊಳ್ಳೋಣ. ಈ ಮಾದರಿಯ ಪ್ರಾಚಲಗಳಿಗೆ ಗೊತ್ತಾದ ವಿಶಿಷ್ಟ ಬೆಲೆಗಳನ್ನು ಆದೇಶಿಸಿ ಒಂದು ಅಥವಾ ಹೆಚ್ಚು ರಚನೆಗಳನ್ನು ನಿರ್ಮಿಸಿ ನಿರೂಪಿತ ಸಮಷ್ಟಿಗೆ (ಪಾಸ್ಟ್ಯುಲೇಟೆಡ್ ಪಾಪ್ಯುಲೇಶನ್) ಸರಿಹೊಂದುವ ಕೃತಕಸಮಷ್ಟಿಯನ್ನು ರಚಿಸುತ್ತೇವೆ. ಅನಂತರ ಬಹಳಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ಗಾತ್ರದ ಪ್ರತಿಚಯಗಳನ್ನು ಪದೇ ಪದೇ ಆಯ್ಕೆ ಮಾಡುತ್ತೇವೆ. ಪ್ರತಿಚಯದ ನೆರವಿನಿಂದ ಪ್ರಾಚಲಗಳ ವಿವಿಧ ಅಂದಾಜು ಮೌಲ್ಯಗಳನ್ನು ಪಡೆದು ಅವುಗಳ ಆವರ್ತಾಂಕ ವಿತರಣೆಯನ್ನು ಪರಿಶೀಲಿಸಿ ಪ್ರಾಚಲಗಳ ನಿಜವಾದ ಮೌಲ್ಯಕ್ಕೆ ತಾಳೆನೋಡುತ್ತೇವೆ. ಇಲ್ಲಿ ಪ್ರಾಚಲಗಳ ವಿವಿಧ ಅಂದಾಜು ಮೌಲ್ಯಗಳ ಚಲನೀಯ ಸಹಕಾರಿ ಆಗುತ್ತದೆ. (ಎಸ್.ಬಿ.)