ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಘಮಾಸ
ಮಾಘಮಾಸ - ಚೈತ್ರ ಶುಕ್ಲ ಪ್ರಥಮದಿಂದ ಪ್ರಾರಂಭಿಸಿ ಲೆಕ್ಕ ಮಾಡುವ ಚೈತ್ರಾದಿಮಾಸಗಳಲ್ಲಿ ಇದು 11ನೆಯದು. ಅನೇಕ ವರ್ಷಗಳಿಗೊಮ್ಮೆ ಮಾಘಮಾಸವೂ ಅಧಿಕವಾಗುವುದುಂಟು. ಈ ತಿಂಗಳಿನ ಹುಣ್ಣಿಮೆಯಂದು ಆಶ್ಲೇಷಾ, ಮಖ, ಉತ್ತರಾ ಈ ನಕ್ಷತ್ರಗಳಲ್ಲೊಂದು ಇರುತ್ತದೆ. ವಿಂಧ್ಯಪರ್ವತಕ್ಕೆ ಉತ್ತರದಲ್ಲಿರುವ ಕೆಲವು ದೇಶಗಳಲ್ಲಿ ಕೃಷ್ಣ ಪಕ್ಷಾದಿ ಮಾಸ ಗಣನೆಯಂತೆ, ಪುಷ್ಯಕೃಷ್ಣ ಪ್ರಥಮೆಯಂದು ಮಾಘಮಾಸ ಆರಂಭವಾಗಿ ಮಾಘಮಾಸ ಪೂರ್ಣಿಮೆಯಂದು ಮುಕ್ತಾಯವಾಗುತ್ತದೆ. ಶುಕ್ಲಪಕ್ಷಾದಿ ಮಾಸಗಣನೆಯೇ ವಿಂಧ್ಯಕ್ಕೆ ದಕ್ಷಿಣದಲ್ಲಿರುವ ದೇಶಗಳಲ್ಲಿ ರೂಢಿಯಲ್ಲಿರುವುದು. ಸೂರ್ಯ ಮಕರ ರಾಶಿಯಲ್ಲಿರುವಾಗ ಬರುವ ಅಮಾವಾಸ್ಯೆಯ ಮಾರನೆಯ ದಿನ ಮಾಘಮಾಸ ಆರಂಭವಾಗಿ ಕುಂಭರಾಶಿಯಲ್ಲಿ ಸೂರ್ಯನಿರುವಾಗ ಬರುವ ಅಮಾವಾಸ್ಯೆಯಂದು ಮುಗಿಯುತ್ತದೆ. ಸೌರಮಾನದಲ್ಲಿ ಕುಂಭಮಾಸವನ್ನು ಮಾಘ ಎಂದು ಕರೆಯುತ್ತಾರೆ. ಮಾಘಮಾಸದ ಗಣನೆ ಹೀಗೆ 3 ವಿಧವಾಗಿದೆ. ಈ ತಂಗಳನ್ನು ಸಹಸ್ಯ ಎಂಬ ಹೆಸರಿನಿಂದ ಕರೆಯುತ್ತಾರೆ. ಮಾಘ-ಶುಕ್ಲ ಪ್ರಥಮೆಯ ದಿನ ಶಿಶಿರಋತು ಪ್ರಾರಂಭವಾಗುತ್ತದೆ. (ಎಸ್.ಎನ್.ಕೆ) ಪರಿಷ್ಕರಣೆ: ಡಾ|| ಬಿ. ಎಸ್. ಶೈಲಜಾ