ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಧವೀಲತೆ

ವಿಕಿಸೋರ್ಸ್ದಿಂದ

ಮಾಧವೀಲತೆ ಮಾಲ್ಪೀಘಿಯೇಸೀ ಕುಟುಂಬಕ್ಕೆ ಸೇರಿದ ಹಂಬುಸಸ್ಯ. ವಸಂತದೂತಿ ಪರ್ಯಾಯನಾಮ. ಇದನ್ನು ಮಲೆನಾಡಿನಲ್ಲಿ ಗಂಚೀ ಹಂಬು ಎಂದು ಕರೆಯಲಾಗುತ್ತದೆ. ಇದರ ಸಸ್ಯವೈಜ್ಞಾನಿಕ ಹೆಸರು ಹಿಪ್ಟೇಜ್ ಬೆಂಗಾಲೆನ್ಸಿಸ್. ಸದಾಹಸುರಾಗಿರುವ ಇದು ತನ್ನ ಚೆಲುವಾದ ರೂಪದಿಂದಲೂ ಸುಗಂಧಪೂರಿತ ಹೂವುಗಳಿಂದಲೂ ಬಲುಪ್ರಾಚೀನ ಕಾಲದಿಂದ ಅಲಂಕಾರ ಸಸ್ಯವಾಗಿ ಪ್ರಸಿದ್ಧವಾಗಿದೆ. ಕಾಳೀದಾಸನ ನಾಟಕದಲ್ಲಿ ಇದರ ಉಲ್ಲೇಖವಿದೆ.

ಭಾರತಾದ್ಯಂತ ಇದನ್ನು ನೋಡಬಹುದು. ಅಂಡಮಾನ್ ದ್ವೀಪಸ್ತೋಮಗಳಲ್ಲೂ ಉಂಟು. ಮೈದಾನಗಳಿಂದ ಹಿಡಿದು ಸುಮಾರು 2000 ಮೀ ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಆದ್ರ್ರತೆ ಹೆಚ್ಚಾಗಿರುವಂಥ ನೆಲೆಗಳಲ್ಲಿ, ಹುಲುಸಾಗಿ ಬೆಳೆಯುತ್ತದೆ. ತೊಗಟೆ ಕಂದುಬಣ್ಣದ್ದು, ಸಿಪ್ಪೆ ಸಿಪ್ಪೆಯಾಗಿ ಸುಲಿದುಕೊಳ್ಳುತ್ತದೆ. ಎಲೆಗಳು ಸರಳ, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿದೆ. ಒಂದೊಂದೂ 10-15 ಸೆ.ಮೀ ಉದ್ದದವೂ ದೀರ್ಘವೃತ್ತದಾಕಾರವೂ ಆಗಿವೆ. ಹೂಗಳು ಸುಗಂಧಯುಕ್ತ, ರೇಷ್ಮೆಯಂತೆ ಮೃದು; ಅಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ದಳಗಳು ಬಿಳಿ ಬಣ್ಣದವು; ಇವುಗಳ ಅಂಚು ಕುಚ್ಚುಗಳಿಂದ ಕೂಡಿದೆ. ಕಾಯಿ ಮೂರು ರೆಕ್ಕೆಗಳುಳ್ಳ ಪಕ್ಷಫಲ (ಸಮಾರ). ಮಧ್ಯದ ರೆಕ್ಕೆ ಅಕ್ಕಪಕ್ಕದವಕ್ಕಿಂತ ದೊಡ್ಡದಾಗಿದೆ. ಫಲಪ್ರಸಾರ ಗಾಳಿಯ ಮೂಲಕ ನಡೆಯುತ್ತದೆ.

ಮಾಧವೀಲತೆಯನ್ನು ಬೀಜಗಳಿಂದ ಇಲ್ಲವೆ ಕಸಿತುಂಡುಗಳಿಂದ ವೃದ್ಧಿಸಬಹುದು. ಇದು ಶೀಘ್ರಗತಿಯಲ್ಲಿ ಬೆಳೆಯುವುದರಿಂದಲೂ ವರ್ಷಪೂರ್ತಿ ಎಲೆಗಳಿಂದ ಕೂಡಿದ್ದು ತಂಪಾದ ನೆರಳು ನೀಡುವುದರಿಂದಲೂ ಜೊತೆಗೆ ಸುವಾಸನಾಯುಕ್ತ ಹೂಗಳಿರುವುದರಿಂದಲೂ ತೋಟಗಳಲ್ಲಿ ಬೆಳೆಸಲು ಯೋಗ್ಯವೆನಿಸಿದೆ.

ಎಲೆಗಳನ್ನು ಚರ್ಮವ್ಯಾಧಿ ಚಿಕಿತ್ಸೆಯಲ್ಲೂ ಕಜ್ಜಿ ನಿವಾರಣೆಗೂ ಬಳಸುವುದಿದೆ. ದೀರ್ಘಕಾಲಿಕ ಸಂಧಿವಾತ, ಉಬ್ಬಸಗಳಿಗೂ ಇದು ಔಷಧಿಯಾಗಿ ಬಳಕೆಯಲ್ಲಿದೆ. ಚೌಬೀನೆಯಿಂದ ಹತ್ಯಾರುಗಳ ಹಿಡಿ ಮಾಡುವುದುಂಟು. (ಕೆ.ಎಚ್.ಕೆ)