ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಧವ ದಂಡನಾಯಕ
ಮಾಧವ ದಂಡನಾಯಕ - 14ನೆಯ ಶತಮಾನದಲ್ಲಿದ್ದ ವಿಜಯ ನಗರದ ಪ್ರಾಂತ್ಯಾಧಿಕಾರಿ. ವಿದ್ವಾಂಸ. ನುರಿತ ಯೋಧ ಮತ್ತು ನಿಪುಣ ಮಂತ್ರಿ. ತಂದೆ ಚಾವುಂಡರಾಯ, ತಾಯಿ ಮೂಕಾಂಬಿಕಾ, ಮಾಧವಮಂತ್ರಿ, ಮಾಧವರಸ ಮತ್ತು ಮಾದರಸ ಒಡೆಯ ಎಂದೂ ಇವನ ಹೆಸರುಗಳು. ಈ ಕಾಲದಲ್ಲಿ ಬೇರೆ ಇಬ್ಬರು ಮಾಧವರಿದ್ದುದರಿಂದ ಈತನನ್ನು ಗುರುತಿಸಲು ಚೌಡಮಾಧವ ಎಂಬ ಹೆಸರು ಚರಿತ್ರಕಾರರಲ್ಲಿ ಬಳಕೆಯಲ್ಲಿದೆ. ಈತ ಶೈವಗುರು ಕಾಶೀವಿಲಾಸ ಕ್ರಿಯಾಶಕ್ತಿಯ ಶಿಷ್ಯನಾಗಿದ್ದ.
ಮೊದಲನೆಯ ಹರಿಹರನ ಸಹೋದರಲ್ಲೊಬ್ಬನಾದ ಮಾರಪ್ಪನ ಮಂತ್ರಿಯಾಗಿದ್ದ ಈತ ಗೋವೆಗೆ ಮುತ್ತಿಗೆ ಹಾಕಿ (1366) ಅಲ್ಲಿ ಮಹಮ್ಮದೀಯರನ್ನು ಸೋಲಿಸಿ, ಕೊಂಕಣ ಪ್ರದೇಶವನ್ನು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿಸಿದ.
ಶಾಸನಗಳ ಆಧಾರದ ಪ್ರಕಾರ ಈತ ಮೊದಲನೆಯ ಬುಕ್ಕನ ಮಂತ್ರಿಯೂ ಆಗಿದ್ದ. 1368ರಲ್ಲಿ ಬುಕ್ಕ ಈತನನ್ನು ಗೋವ ಮತ್ತು ಬನವಾಸಿಯ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಮೊದಲನೆಯ ಬುಕ್ಕನ ಅಪ್ಪಣೆ ಪಡೆದು ತನ್ನ ಸ್ವಂತ ಹಣದಿಂದ, ನಾಗರಖಂಡದಲ್ಲಿ ಮುಚ್ಛಂಡಿ ಎಂಬ ಗ್ರಾಮವನ್ನು ಕೊಂಡು, ಅದಕ್ಕೆ ವೈದ್ಯೇಶ್ವರಪುರ ಎಂದು ನಾಮಕರಣ ಮಾಡಿ ಕಾಶ್ಮೀರದ 80 ಶೈವ ವಿದ್ವಾಂಸ ಬ್ರಾಹ್ಮಣರಿಗೆ ದಾನಮಾಡಿದ. ಈತ ಶೈವಾಗಮ ಸಾರಸಂಗ್ರಹ ಎಂಬ ಗ್ರಂಥ ರಚಿಸಲು ಮಾರಪ್ಪನಿಗೆ ನೆರವಾದ. ಉಪನಿಷತ್ತುಗಳ ಮೇಲೆ ವ್ಯಾಖ್ಯಾನ ಬರೆದ. ಸೂತಸಂಹಿತಾ ತಾತ್ಪರ್ಯದೀಪಿಕಾವನ್ನೂ ರಚಿಸಿದ. ಈತ ಇಮ್ಮಡಿ ಹರಿಹರನ ಆಳ್ವಿಕೆಯಲ್ಲೂ ಸ್ವಲ್ಪ ಕಾಲ ಜೀವಿಸಿದ್ದ. ತಲಕಾಡಿನಲ್ಲಿರುವ ವೈದ್ಯೇಶ್ವರ ದೇವಾಲಯ ಮತ್ತು ಆ ಊರಿನ ಬಳಿ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಮಾಧವಮಂತ್ರಿ ಅಣೆಕಟ್ಟು ಇವನ್ನು ಈತ ಕಟ್ಟಿಸಿದ.