ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಯಾ

ವಿಕಿಸೋರ್ಸ್ದಿಂದ

ಮಾಯಾ - ಮಧ್ಯ ಅಮೆರಿಕದಲ್ಲಿ ಕ್ರಿ.ಶ. 4-16ನೆಯ ಶತಮಾನದ ತನಕ ವ್ಯಾಪಿಸಿದ್ದ ಮಹಾನ್ ನಾಗರಿಕತೆಗೆ ಕಾರಣರಾದ ಜನರು. ಇವರು ಕೇವಲ ನವಶಿಲಾಯುಗದ ತಂತ್ರಜ್ಞಾನದಿಂದ, ಲೋಹದ ಉಪಕರಣಗಳ ಹಾಗೂ ಚಕ್ರಗಳ ಪರಿಚಯವಿಲ್ಲದೆಯೇ, ವಾಸ್ತುಶಿಲ್ಪಕ್ಷೇತ್ರದಲ್ಲಿ ಅದ್ಭುತ ಪ್ರಗತಿಸಾಧಿಸಿದರು; ವೈಜ್ಞಾನಿಕ ಉಪಕರಣಗಳಿಲ್ಲದೆಯೂ ಆಕಾಶ ವಿಜ್ಞಾನದಲ್ಲಿಯ ಇವರ ಸಾಧನೆಯ ಮಟ್ಟ ಬೆರಗನ್ನುಂಟುಮಾಡುತ್ತದೆ. ಚಿತ್ರಲಿಪಿ ಬರೆಹ, ಸಂಖ್ಯಾಶಾಸ್ತ್ರ ಕ್ಷೇತ್ರಗಳಲ್ಲಿಯೂ ಈ ಜನರ ಸಾಧನೆ ಅಪೂರ್ವವಾದುದು.

ಇಂದಿನ ಬೆಲಿಜ್, ಗ್ವಾಟೆಮಾಲದ ಬಹುಭಾಗ. ಕ್ವಿಂಟಾನ ರೂ ಹಾಗೂ ಯುಕಟಾನ್, ಕಾಂಪೀಚ್, ಟಬಾಸ್ಕೊ ಮತ್ತು ಪೂರ್ವ ಚಿಯಾಪಾಸ್ ಪ್ರದೇಶಗಳನ್ನೊಳಗೊಂಡ ಮೆಕ್ಸಿಕೊ-ಈ ಪ್ರದೇಶದಲ್ಲಿ ಮಾಯಾ ಜನರು ವಾಸಿಸಿದ್ದರು; ಪಶ್ಚಿಮ ಎಲ್‍ಸಲ್ವಡಾರ್ ಹಾಗೂ ಹೊಂಡುರಸ್ ಭಾಗದಲ್ಲೂ ಈ ಜನರು ನೆಲೆಸಿದ್ದರು. ಮಾಯಾ ನಾಗರಿಕತೆ ಹರಡಿದ ಪ್ರದೇಶ ಮೂರು ಬಗೆಯ ಭೂಭಾಗಗಳನ್ನೊಳಗೊಂಡಿದೆ. ದಕ್ಷಿಣದಲ್ಲಿ ಆಂಡಿಸ್ ಪರ್ವತ ಶ್ರೇಣಿಗಳಿಂದ ಕೂಡಿದ ಪ್ರದೇಶ; ಮಧ್ಯದಲ್ಲಿ ಉಷ್ಣವಲಯದ ದಟ್ಟ ಅರಣ್ಯದಿಂದ ಕೂಡಿದ ಬಯಲು ಪ್ರದೇಶ; ಹಾಗೂ ಉತ್ತರದಲ್ಲಿ ಯುಕಟಾನಿನ ಸುಣ್ಣಕಲ್ಲು ಭೂಮಿಯ ಶೀತಲ ಪ್ರಸ್ಥಭೂಮಿ. ಜನವಸತಿ ಹೆಚ್ಚಾಗಿದ್ದುದು ಸಮುದ್ರಮಟ್ಟದಿಂದ ಕೇವಲ 61 ಮೀಟರ್‍ನಿಂದ 180 ಮೀಟರ್‍ವರೆಗೆ ಎತ್ತರವಿದ್ದ ಬಯಲು ಪ್ರದೇಶದಲ್ಲಿ; ಮಾಯಾ ನಾಗರಿಕತೆಯ ಕ್ಲಾಸಿಕ್ ಯುಗಕ್ಕೆ (4ರಿಂದ 10ನೆಯ ಶತಮಾನ) ಸಂಬಂಧಪಟ್ಟ ಪ್ರದೇಶವಿದು. ತರುವಾಯದ ಪುನರುತ್ಥಾನ ಹಾಗೂ ಅವನತಿಯ ಕಾಲಗಳಿಗೆ ಉತ್ತರ ಯುಕಟಾನ್ ಪ್ರದೇಶ ಕೇಂದ್ರವಾಗಿದ್ದಿತು.

18ನೆಯ ಶತಮಾನದ ಕೊನೆಯ ದಶಕಗಳಲ್ಲಿ ಮಾಯಾ ನಾಗರಿಕತೆಯ ಅವಶೇಷಗಳನ್ನು ಪರಿಶೋಧಕರು ಪತ್ತೆ ಹಚ್ಚಿದರು. 1785ರಲ್ಲಿ ಪಲೆಂಕ್ ಎಂಬಲ್ಲಿ ಸ್ಪೆಯಿನ್ ದೇಶದ ಆಂಟೋನಿಯೊ ಡೆಲ್ ರಿಯೊ ಎಂಬಾತ ಉತ್ಖನನ ನಡೆಸಿದ. ಅನಂತರದ ವರ್ಷಗಳಲ್ಲಿ ಹಲವಾರು ಪ್ರವಾಸಿಗರು ಹಾಗೂ ಪುರಾತತ್ವ ಶಾಸ್ತ್ರಜ್ಞರು ದಟ್ಟ ಅರಣ್ಯಗಳಲ್ಲಿ ಹುದುಗಿಹೋಗಿದ್ದ ಮಾಯಾ ನಾಗರಿಕತೆಯ ಸಿರಿಸಂಪತ್ತನ್ನು ಬೆಳಕಿಗೆ ತಂದು ಮಾಯಾ ಇತಿಹಾಸದ ಬಗೆಗಿನ ಜ್ಞಾನ ಹೆಚ್ಚಲು ಕಾರಣವಾದರು. 1840ರ ದಶಕದಲ್ಲಿ ಜಾನ್ ಎಲ್ ಸ್ಟೀಫನ್ಸ್ ಎಂಬ ಅಮೆರಿಕನ್ ಪ್ರವಾಸಿ ವ್ಯಾಪಕವಾಗಿ ಸಂಚರಿಸಿ ಮಾಯಾ ಇತಿಹಾಸದ ಬಗ್ಗೆ ಎರಡು ಸಂಪುಟಗಳನ್ನು ಪ್ರಕಟಿಸಿದ. 19ನೆಯ ಶತಮಾನದಲ್ಲಿಯೇ ಗ್ರೇಟ್ ಬ್ರಿಟನ್ನಿನ ಆಲ್‍ಫ್ರೆಡ್ ಮಾಡ್‍ಸ್ಲೇ ಎಂಬ ವಿದ್ವಾಂಸ ಹಲವಾರು ಮಾಯಾ ಶಾಸನಗಳನ್ನು ಪ್ರತಿಮಾಡಿದ ಮತ್ತು ವಾಸ್ತುರಚನೆಗಳ ಮಾದರಿಗಳನ್ನು ಸಿದ್ಧಪಡಿಸಿದ. 1905-08ರಲ್ಲಿ ಎಡ್ವರ್ಡ್ ಥಾಂಪ್ಸನ್ ಎಂಬಾತ ಚೇಚೆನ್ ಈಟ್ಸಾದ ಪವಿತ್ರ ಯಾಗಬಾವಿಯ ಹೂಳೆತ್ತಿಸಿ ಸ್ವಚ್ಛಗೊಳಿಸಿದಾಗ ಚಿನ್ನ ಮತ್ತು ತಾಮ್ರದ ಕಾಣಿಕೆ ವಸ್ತುರಾಶಿಯೊಂದು ಲಭ್ಯವಾಯಿತು.

ಮೆಕ್ಸಿಕೊ ಹೊರಗೆ ಮಾಯಾ ನಾಗರಿಕತೆಯ ಅವಶೇಷಗಳ ಅತ್ಯುತ್ತಮ ಸಂಗ್ರಹವಿರುವುದು ಬ್ರಿಟಿಷ್ ಮ್ಯೂಸಿಯಮ್‍ನಲ್ಲಿ. ಮಾಯಾಜನರ ಕುಂಭಕಲೆ, ಶಿಲ್ಪ, ಸ್ಮಾರಕಸ್ತಂಭ, ಚಿತ್ರಲಿಪಿ ಹಾಗೂ ಚಿತ್ರಕಲೆ ಜೇಡಶಿಲೆಯ ಮೇಲಿನ ಕುಸುರಿ ಕೆಲಸಗಳಿಗೆ ಮಾದರಿಗಳನ್ನು ಇಲ್ಲಿ ಕಾಣಬಹುದು. ಕಳೆದ ಏಳೆಂಟು ದಶಕಗಳಲ್ಲಿ ಮಾಯಾ ಕುರಿತು ನಡೆಸಿದ ಪುರಾತತ್ವ ಸಂಶೋಧನೆಯ ಸಿಂಹಪಾಲು ಅಮೆರಿಕನ್ ಸಂಸ್ಥೆಗಳಿಗೆ, ಅದರಲ್ಲಿಯೂ ವಿಶೇಷವಾಗಿ ವಾಷಿಂಗ್‍ಟನ್ನಿನ ಕಾರ್ನೇಜ್ ಇನ್‍ಸ್ಟಿಟ್ಯೂಟಿಗೆ ಸಲ್ಲುತ್ತದೆ. ಮಾಯಾ ಇತಿಹಾಸದ ಅನೇಕ ಕೊಂಡಿಗಳು ನಮಗಿನ್ನೂ ಲಭ್ಯವಾಗಬೇಕಾಗಿದೆ. ಈಗ ದೊರೆತಿರುವುದು ಕುತೂಹಲಕಾರಿಯಾದ ಮತ್ತು ಗೋಜಲಾದ ಚಿತ್ರ ಮಾತ್ರವೆನ್ನಬಹುದು.

ಇತಿಹಾಸ: ಮಾಯಾ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ಏಷ್ಯದಿಂದ ವಲಸೆಹೊರಟು ಬಂದವರು. ಕ್ರಿ.ಪೂ. 3ನೆಯ ಸಹಸ್ರಮಾನದಲ್ಲಿ ಅಲೆಮಾರಿ ಬೇಟೆಗಾರರಾಗಿದ್ದ ಇವರು ಮುಸುಕಿನ ಜೋಳ ಮತ್ತು ತರಕಾರಿ ಬೇಸಾಯ ಕಲಿತಿದ್ದರು. ಕ್ರಿ.ಪೂ. 1500ರ ಹೊತ್ತಿಗೆ ಈ ಜನ ಗ್ರಾಮಗಳಲ್ಲಿ ಶಾಶ್ವತವಾಗಿ ನೆಲಸಿದ್ದರು. ನವಶಿಲಾಯುಗದ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದ ಇವರಿಗೆ ಮೃಣ್ಪಾತ್ರೆ ತಯಾರಿಕೆ ಹಾಗೂ ಬಟ್ಟೆ ನೇಯ್ಗೆ ತಿಳಿದಿತ್ತು. ಆದರೆ ಪ್ರಾಣಿ ಸಾಕಣೆ ಇನ್ನೂ ಪರಿಚಿತವಾಗಿರಲಿಲ್ಲ.

ಮಾಯಾ ಇತಿಹಾಸ ಕಾಲದ ವರ್ಗೀಕರಣ ಹಾಗೂ ಅದಕ್ಕೆ ನೀಡಿದ ತೇದಿಗಳ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಹೊಸ ಹೊಸ ಅನ್ವೇಷಣೆ ಸಂಶೋಧನೆಗಳು ನಡೆದಂತೆ ಹಿಂದೆ ಸಮ್ಮತವಾಗಿದ್ದ ಅಭಿಪ್ರಾಯಗಳು ಬದಲಾಗಿವೆ. ಮಧ್ಯ ಅಮೆರಿಕದ ಇತರ ನಾಗರಿಕತೆಗಳು ಮಾಯಾ ನಾಗರಿಕತೆಯ ಮೂಲದ ಸಂಪರ್ಕದಿಂದಲೇ ಉದಯಿಸಿದವೆಂಬ ಅಭಿಪ್ರಾಯ ಕಳೆದ ಕೆಲವು ವರ್ಷಗಳಲ್ಲಿದ್ದಿತು. ಆದರೆ ಎರಡನೆಯ ಮಹಾಯುದ್ಧಾನಂತರ ಇಲ್ಲಿ ನಡೆದ ಪುರಾತತ್ವ ಪರಿಶೋಧನೆ, ಅಧ್ಯಯನ ಮತ್ತು ವಿಶ್ಲೇಷಣೆಗಳಿಂದ ಹೆಚ್ಚುಕಡಿಮೆ ಒಂದೇಕಾಲದಲ್ಲಿ ಮಧ್ಯ ಅಮೆರಿಕದಲ್ಲಿ ಸ್ವತಂತ್ರವಾದ ಹಲವು ನಾಗರಿಕತೆಗಳು ಉಗಮಿಸಿದವೆಂದು ತಿಳಿದುಬರುತ್ತದೆ. ಈ ಬೆಳಕಿನಲ್ಲಿ ಮಾಯಾ ಪ್ರದೇಶದಲ್ಲಿ ಹಲವು ವರ್ಷಗಳ ಕಾಲ ಪರಿಶೋಧನೆ ಉತ್ಖನನಗಳನ್ನು ನಡೆಸಿದ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಜೆ.ಎರಿಕ್ ಎಸ್.ಥಾಂಸನ್ ಎಂಬಾತ ಮಾಯಾ ಇತಿಹಾಸಕಾಲವನ್ನು ವರ್ಗೀಕರಿಸಿದ್ದಾರೆ. ಇವರ ಅಭಿಪ್ರಾಯವನ್ನು ಬಹುಪಾಲು ವಿದ್ವಾಂಸರು ಒಪ್ಪಿಕೊಂಡಿದ್ದಾರೆ.

ಕ್ರಿ.ಪೂ.ಸು. 500ರಿಂದ ಕ್ರಿ.ಶ. 325ರ ಅವಧಿಯನ್ನು ಬೆಳೆವಣಿಗೆಯ ಯುಗವೆಂದು ಕರೆಯಲಾಗಿದೆ. ಈ ಕಾಲದಲ್ಲಿ ಮಾಯಾ ಜನ ಇತರ ಅಮೆರಿಕನ್ ಇಂಡಿಯನ್‍ರಿಂದ ವಿಭಿನ್ನವೂ ವಿಶಿಷ್ಟವೂ ಆದ ಸಂಸ್ಕøತಿಯೊಂದನ್ನು ರೂಪಿಸಿ ಬೆಳೆಸಿದರು. ಈ ಸಂಸ್ಕøತಿಗೂ ತರುವಾಯ ಬಂದ ಸಂಸ್ಕøತಿಗೂ ಇರುವ ಸಾದೃಶ್ಯ-ವೈದೃಶ್ಯಗಳನ್ನೂ ಗುರುತಿಸಲು ನಮಗೆ ದೊರೆಯುವ ಸಾಕ್ಷ್ಯಾಧಾರವೆಂದರೆ ಮೃಣ್ಪಾತ್ರೆಗಳು ಮಾತ್ರ. ಈ ಕಾಲಕ್ಕೆ ಸಂಬಂಧಿಸಿದ ಸ್ಮಾರಕಗಳೆಲ್ಲ ಪ್ರಾಯಶಃ ಮರಮುಟ್ಟುಗಳಲ್ಲಿ ನಿರ್ಮಿತವಾಗಿದ್ದಿರಬೇಕು. ಇಲ್ಲಿಯ ಹವಾಗುಣ ಪರಿಸ್ಥಿತಿಯಿಂದಾಗಿ ಈ ಯಾವ ಅವಶೇಷಗಳೂ ಸಂರಕ್ಷಿತವಾಗಿ ಉಳಿದು ಬರಲಿಲ್ಲ. ಮಧ್ಯಪ್ರಾಚ್ಯದ ಹವಾಗುಣ ಪರಿಸ್ಥಿತಿಯಿಂದಾಗಿ ಅವಶೇಷಗಳು ಸಂರಕ್ಷಿತವಾಗಿ ಈಜಿಪ್ಟ್‍ಶಾಸ್ತ್ರಜ್ಞನಿಗೆ ನೆರವಾದಂತೆ ಇಲ್ಲಿಯ ಹವಾಗುಣ ಪರಿಸ್ಥಿತಿ ಮಾಯಾ ಇತಿಹಾಸ ತಜ್ಞನಿಗೆ ನೆರವಾಗಲಿಲ್ಲ.

ಕ್ರಿ.ಶ.ಸು. 325-925ರ ಅವಧಿಯನ್ನು ಕ್ಲಾಸಿಕ್ ಯುಗವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಾಸ್ತುಶಿಲ್ಪ, ಗಣಿತ, ಆಕಾಶ ವಿಜ್ಞಾನ ಮತ್ತಿತರ ಬೌದ್ಧಿಕ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿತವಾಯಿತು. ಇಂಥ ಪ್ರಗತಿಯನ್ನು ಕೊಲಂಬಸ್ ಪೂರ್ವ ಅಮೆರಿಕದ ಯಾವುದೇ ಜನರಿಂದಲೂ ಅಷ್ಟೇಕೆ ಪುನಃ ಮಾಯಾಜನರಿಂದಲೂ ಸಾಧಿಸಲಾಗಲಿಲ್ಲ. ಬೆಳೆವಣಿಗೆಯ ಕಾಲದ ಅಂತ್ಯ ಹಾಗೂ ಕ್ಲಾಸಿಕ್ ಯುಗದ ಆರಂಭ ಕಾಲದಲ್ಲಿದರು. ಶಿಲ್ಪಸ್ಮಾರಕ ಸ್ತಂಭಗಳ ಮೇಲೆ ತೇದಿ ಮತ್ತಿತರ ವಿವರಗಳನ್ನು ಚಿತ್ರಲಿಪಿಯಲ್ಲಿ ಕಂಡರಿಸಿದರು. ಪಲೆಂಕ್, ಪ್ಯಾಡ್ರಸ್ ನೆಗ್ರಸ್, ಟಿಕಲ್, ವಾಕ್ಷಟ್‍ಟೂನ್ ಮುಂತಾದ ನಗರಗಳು ಉತ್ತರ ಗ್ವಾಟೆಮಾಲ ಹಾಗೂ ಅದರ ನೆರೆಯ ಮೆಕ್ಸಿಕೊ ಪ್ರದೇಶದಲ್ಲಿ ಬೆಳೆದುವು. ಹೊಂಡುರಸ್ ಪ್ರದೇಶದ ಕೋಪನ್ ನಗರವೂ ಇದೇ ಕಾಲದ್ದೆನ್ನಲಾಗಿದೆ. ಸು. 800-925ರ ನಡುವೆ ಪ್ರಾಚೀನ ಅಮೆರಿಕನ್ ಇತಿಹಾಸದಲ್ಲಿ ಅತಿ ನಿಗೂಢ ಘಟನೆಯೊಂದು ಸಂಭವಿಸಿತು. ಮಾಯಾ ಜನ ತಮ್ಮಧಾರ್ಮಿಕ ಹಾಗೂ ಕಾರ್ಯಾಚರಣೆಯ ಕೇಂದ್ರಗಳನ್ನು ಒಂದೊಂದಾಗಿ ಪರಿತ್ಯಜಿಸತೊಡಗಿದರು. ಕೆಲವೆಡೆ ಕಟ್ಟಡಗಳು ನಿರ್ಮಾಣ ಹಂತದಲ್ಲಿರುವಾಗಲೇ ಹಠಾತ್ತಾಗಿ ಪರಿತ್ಯಕ್ತವಾದ ನಿದರ್ಶನಗಳು ಕಾಣಸಿಗುತ್ತವೆ. ಆದುದರಿಂದ ಮಾಯಾಜನ ಸಾಮೂಹಿಕವಾಗಿ ಈ ಪ್ರದೇಶದಿಂದ ವಲಸೆಹೋದರೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು. ಆದರೆ ಈ ಅಭಿಪ್ರಾಯ ತಪ್ಪೆಂದು ಈಚಿನ ಶೋಧನೆಗಳಿಂದ ತಿಳಿದುಬಂದಿದೆ. ಬಹುಪಾಲು ಜನ ಈ ಕೇಂದ್ರಗಳನ್ನು ತ್ಯಜಿಸಿಹೋದದ್ದು ನಿಜ. ಹೀಗೆ ಹೋಗಲು ಕಾರಣವೇನೆಂಬುದನ್ನು ವಿದ್ವಾಂಸರು ಊಹಿಸುವ ಯತ್ನಮಾಡಿದ್ದಾರೆ. ರೋಗ ರುಜಿನ, ಭೂಕಂಪ, ಹವಾಗುಣ ವಿಷಮತೆ, ಹೊರಗಿನ ಆಕ್ರಮಣ, ಮಾಯಾ ದೇವವಾಣಿಗೆ ಅರ್ಚಕವರ್ಗ ನೀಡಿದ ಅರ್ಥವಿವರಣೆ ಇತ್ಯಾದಿ ಕಾರಣಗಳನ್ನು ವಿದ್ವಾಂಸರು ಊಹಿಸಿದ್ದಾರೆ. ಕೆಲವು ವಿವರಣೆಗಳಂತೂ ಹಾಸ್ಯಾಸ್ಪದ ಕಲ್ಪನೆಗಳು. ಆದರೆ ಪ್ರಪಂಚದ ಇತಿಹಾಸದಲ್ಲಿ ಇತರೆಡೆಗಳಲ್ಲಿ ಕಂಡುಬಂದಿರುವಂತೆ ಇಲ್ಲಿಯೂ ರೈತಾಪಿವರ್ಗಕ್ಕೂ ಆಳರಸ-ಅರ್ಚಕವರ್ಗಕ್ಕೂ ಸಂಘರ್ಷವೇರ್ಪಟ್ಟು ಬಂಡಾಯ ನಡೆದಿರಬೇಕೆಂಬ ಊಹೆ ಸಮಂಜಸವಾದುದೆಂದು ತೋರುತ್ತದೆ. ಬಂಡಾಯವೆದ್ದ ಕೃಷಿಕಾರ್ಮಿಕರು ಅರ್ಚಕ-ಆಳರಸವರ್ಗದವರನ್ನು ಹತ್ಯೆಮಾಡಿದರು. ಇಲ್ಲವೆ ಓಡಿಸಿದರು ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಕೃಷಿವರ್ಗದ ಮೇಲೆ ಹೊಸ ಧಾರ್ಮಿಕ ಪರಿಕಲ್ಪನೆ ಹಾಗೂ ಆಚರಣೆಗಳನ್ನು ಹೇರಲು ಯತ್ನಿಸಿದಾಗ ಬಂಡಾಯ ಸಂಭವಿಸಿದ್ದಿರಬೇಕೆಂದು ಭವಿಸಲಾಗಿದೆ. ಕೃಷಿ ಕಾರ್ಮಿಕರು ತಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತ ಉಳಿದದ್ದರಿಂದ ನಗರಕೇಂದ್ರಗಳು ಕೇಳುವವರಿಲ್ಲದೆ ಪಾಳುಬಿದ್ದುವು. ಜೊತೆಗೆ ಇತರ ಕಾರಣಗಳೂ ಇಲ್ಲದಿರಲಿಲ್ಲ. ಪಶ್ಚಿಮದಿಂದ ಮೆಕ್ಸಿಕನ್ ಪ್ರಭಾವಗಳು ವ್ಯಾಪಿಸುತ್ತಿದ್ದುವು. ಹಾಗಾಗಿ ಕ್ಲಾಸಿಕ್ ಯುಗದ ಕೊನೆಯ ಹೊತ್ತಿಗೆ ಈ ಕಾರಣಗಳೆ ಚಳವಳಿಯ ಆವೇಗ ಪಡೆದುಕೊಂಡವೆನ್ನಬಹುದು. ಸುಮಾರು ಒಂದು ಶತಮಾನದ ತನಕ ಈ ಮೆಕ್ಸಿಕನ್ ಅಂತಸ್ಸರಣ ಮುಂದುವರಿಯಿತು. ಹೊಸ ಸಂಕರ ಸಂಸ್ಕøತಿಯೊಂದು ರೂಪುಗೊಂಡಿತು. ವಿಶೇಷವಾಗಿ ಯುಕಟಾನ್ ಪ್ರದೇಶದ ಬೇಚೆನ್ ಈಟ್ಸಾ ಎಂಬ ನಗರದಲ್ಲಿಯ ವಾಸ್ತು ಅವಶೇಷಗಳಿಂದ ಈ ಆಕ್ರಮಣದಾರರು ಈಗಿನ ಮೆಕ್ಸಿಕೊ ನಗರದ ಉತ್ತರಕ್ಕಿರುವ ಪ್ರದೇಶದಿಂದ ಬಂದ ಟಾಲ್ಟೆಕ್ ಜನರೆಂದು ಸ್ಪಷ್ಟಪಡುತ್ತದೆ. ಇವರು ಯುಕಟಾನಿನ ಬಹುಭಾಗವನ್ನು ಆಳಿದರು. ಆದ್ದರಿಂದ ಈ ಕಾಲವನ್ನು ಮೆಕ್ಸಿಕನ್ ಯುಗವೆಂದು ಕರೆಯಲಾಗಿದೆ.

ಯೋಧಪ್ರಧಾನವಾದ ಟಾಲ್ಟೆಕ್ ಸಮುದಾಯದ ಸಂಪರ್ಕದಿಂದ ಸ್ಥಳೀಯ ಮಾಯಾ ಸಂಸ್ಕøತಿಯಲ್ಲಿ ಹೊಸ ಪರಿಕಲ್ಪನೆಗಳು ಹುಟ್ಟಿಕೊಂಡವು. ಮೂಲಭೂತವಾಗಿ ಸೌಮ್ಯ ಸ್ವಭಾವದವರೂ ಶ್ರಮಜೀವಿಗಳೂ ಆದ ಮಾಯಾಜನರಲ್ಲಿ ಕ್ಷಾತ್ರಭಾವ ಹೆಚ್ಚಿತು. ಗರಿಸಹಿತನಾದ ಸರ್ಪದೇವತೆ ಕ್ವಿಟ್ಜಾಲ್‍ಕೊವಾತ್ಲ್ ಮತ್ತಿತರ ಮೆಕ್ಸಿಕನ್ ದೇವತೆಗಳು ಮಾಯಾ ದೇವತಾ ಪರಿಹಾರದಲ್ಲಿ ಸೇರಿಹೋದರು. ಮೆಕ್ಸಿಕನ್ ಧರ್ಮದಲ್ಲಿ ದೇವತೆಗಳನ್ನು ತೃಪ್ತಿಗೊಳಿಸಲು ನರಮೇಧವನ್ನು ನಡೆಸುವ ಸಂಪ್ರದಾಯವಿತ್ತು. ಇದರ ಪರಿಣಾಮವಾಗಿ ಮಾಯಾ ಜನರಲ್ಲಿ ಹೋರಾಟದ ಮನೋಭಾವ ಬೆಳೆಯಿತು. ಪ್ರಾಚೀನ ಅಮೆರಿಕದಲ್ಲಿ ಒಂದು ವರ್ಗದವರ ಹಿಂಸಭಾವವನ್ನು ಉತ್ತೇಜಿಸಿ ಪೋಷಿಸುವ ಮತ್ತು ನರಬಲಿಯ ಶ್ರೇಷ್ಠತೆ ಉಜ್ವಲತೆಗಳನ್ನು ಸಾರುವ ಉದ್ದೇಶದಿಂದ ರಚಿತವಾದ `ಜನಪ್ರಿಯ ಸಾಹಿತ್ಯವೂ ಗಣನೀಯವಾಗಿ ಹೆಚ್ಚಿತು. ಆದರೂ ಮಿಕ್ಸಿಕನ್ ಸಂಸ್ಕøತಿಯನ್ನು ಮಾಯಾಜನ ರಕ್ತಗತ ಮಾಡಿಕೊಳ್ಳುತ್ತಿದ್ದಂತೆಯೇ ಆಕ್ರಮಣಕಾರರೇ ಮಾಯಾ ಜನಜೀವನ ವಿಧಾನವನ್ನು ಒಪ್ಪಿ ಅನುಸರಿಸುವ ಪರಿಯನ್ನು ಕಾಣುತ್ತೇವೆ. ಸಾಮಾನ್ಯವಾಗಿ ಇತಿಹಾಸದಲ್ಲಿ ನಾಗರಿಕತೆಗಳು ಆಕ್ರಮಣಕಾರರಿಂದ ಪ್ರಭಾವಿತವಾದುದನ್ನು ಕಾಣುತ್ತೇವೆ; ಆದರೆ ಇಲ್ಲಿ ಅದು ತಿರುಗುಮುರುಗಾಗಿದೆ. ಆದ್ದರಿಂದ 1200-1540ರ ನಡುವಣ ಕಾಲವನ್ನು ಮೆಕ್ಸಿಕನ್ ಲೀನತೆಯ ಕಾಲವೆಂದು ಕರೆಯಲಾಗಿದೆ.

1200ರ ಸುಮಾರಿಗೆ ಹುನಾಕಸೀಲ್ ಎಂಬ ಯೋಧನ ನೇತೃತ್ವದಲ್ಲಿ ಬೇಚೆನ್ ಈಟ್ಸಾ ಆಡಳಿತದ ವಿರುದ್ಧ ಬಂಡಾಯುವುಂಟಾಯಿತು. ಬೇಚೆನ್ ಈಟ್ಸಾ, ಮಾಯಪನ್ ಹಾಗೂ ವಾಕ್ಷಮಲ್ ನಡುವೆ ಏರ್ಪಟ್ಟಿದ್ದ ಮೈತ್ರಿಯ ಒಕ್ಕೂಟ ಭಗ್ನವಾಯಿತು. ಪರಸ್ಪರ ಕಾದಾಟಗಳಿಂದ ಬೇಚೆನ್ ಈಟ್ಸಾ ನಾಶವಾಯಿತು. ಹುನಾಕಸೀಲ್ ಯೋಧ ಮಾಯಪನ್ ಎಂಬಲ್ಲಿ ಹೊಸ ರಾಜಧಾನಿಯನ್ನು ಸ್ಥಾಪಿಸಿದ. 1450ರ ತನಕ ಈ ನಗರ ವಿಶಾಲ ಪ್ರದೇಶವೊಂದರ ಆಡಳಿತ ಕೇಂದ್ರವಾಯಿತು. ಆದರೆ ಇಲ್ಲಿಯ ಅಧಿಪರಿಗೂ ನಿಯಂತ್ರಿತ ನಗರ ಪ್ರಾಂತಗಳ ಆಡಳಿತಗಾರರಿಗೂ ವಿರಸವೇರ್ಪಟ್ಟಿತು. ಈ ಯಾಧವೀ ಕಲಹದಿಂದಾಗಿ ವಾಸ್ತುಶಿಲ್ಪ ಇತ್ಯಾದಿ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅವನತಿಯುಂಟಾಯಿತು. ಸ್ಪೆಯಿನ್ ದೇಶೀಯರಿಂದ ಆಕ್ರಮಿತವಾಗುವ ತನಕ ಈ ಪ್ರದೇಶದಲ್ಲಿ ಪರಸ್ಪರ ಕಾದಾಟ ಮುಂದುವರಿಯಿತು. ತರುವಾಯದ ಕಾಲವನ್ನು ಸ್ಪೆಯಿನಿನ ಯುಗವೆಂದು ಕರೆಯಲಾಗಿದೆ. ಸ್ಪೆಯಿನ್ ದೇಶೀಯರು 16ನೆಯ ಶತಮಾನದ ಆರಂಭದ ದಶಕದಲ್ಲಿ ಮಾಯಾ ಪ್ರದೇಶವನ್ನು ಆಕ್ರಮಿಸಿದರು. ಮೊದಮೊದಲು ಈ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವಲ್ಲಿ ಮಾಯಾ ಜನ ಯಶಸ್ವಿಯಾದರು. ಆದರೆ ಅನತಿಕಾಲದಲ್ಲಿಯೇ ಪರಿಸ್ಥಿತಿ ಬದಲಾಯಿತು. 1523ರಲ್ಲಿ ಪೆಡ್ರೊ ಡಿ ಆಲ್ವರಾಡೊ ಎಂಬಾತನ ನೇತೃತ್ವದಲ್ಲಿ ಸ್ಪೆಯಿನಿನ ಸೇನಾ ತಂಡಗಳು ಗ್ವಾಟೆಮಾಲ ಪ್ರದೇಶಕ್ಕೆ ನುಗ್ಗಿದುವು. 1540ರ ದಶಕದಲ್ಲಿ ಫ್ರಾನ್ಸಿಸ್ಕೊ ಡಿ ಮಾಂಟಿಗೊ ಹಾಗೂ ಆತನ ಮಗ ಯುಕಟಾನ್ ಎಂಬ ಪ್ರದೇಶವನ್ನು ಜಯಿಸಿದರು. 1697ರಲ್ಲಿ ಪೇಟನ್ನಿನ ಇಟ್ಜಾ ಜನರು ಭೀಕರ ಹೋರಾಟಾನಂತರ ಶರಣಾಗತರಾದಾಗ ಮಾಯಾಜನರ ಪ್ರತಿರೋಧ ಕೊನೆಗೊಂಡಿತು.

ಜನಜೀವನ: ಚಿತ್ರಶಿಲ್ಪಗಳಿಂದ ಪ್ರಾಚೀನ ಮಾಯಾಜನರ ಬಾಹ್ಯಸ್ವರೂಪವನ್ನು ತಿಳಿಯಲು ಸಾಧ್ಯವಾಗಿದೆ. ಹಾಗೆಯೇ ಪ್ರಾಚೀನ ಹೂಳುಗಾಡುಗಳಲ್ಲಿ ಉತ್ಖನನ ನಡೆಸಿ ಹೊರ ತೆಗೆದಿರುವ ಅಸ್ಥಿ ಅವಶೇಷಗಳಿಂದ ಮತ್ತಷ್ಟು ವಿವರಗಳು ದೊರೆಯುತ್ತವೆ. ಇವುಗಳಿಂದ ಯುಕಟಾನ್ ಪರ್ಯಾಯ ದ್ವೀಪ ಹಾಗೂ ನೆರೆಹೊರೆಯ ಪ್ರದೇಶಗಳಲ್ಲಿ ಈಗ ವಾಸಿಸುತ್ತಿರುವ ಮಾಯಾ-ಇಂಡಿಯನ್ನರಂತೆಯೇ ಇವರ ಪೂರ್ವಜರು ಇದ್ದರೆಂದು ತಿಳಿದುಬರುತ್ತದೆ. ಈ ಮಾತು ಬಾಹ್ಯಸ್ವರೂಪಕ್ಕಷ್ಟೇ ಸೀಮಿತವಾದುದು. ಹಿಂದಿನ ಮಾಯಾ ಜನ ಕುಬ್ಜರು ಹಾಗೂ ಠೊಣಪರಾಗಿದ್ದರು. ಮೈಚರ್ಮ ನಸುಗಪ್ಪು ವರ್ಣದ್ದು. ಉಬ್ಬುಕಪೋಲಮೂಳೆಗಳುಳ್ಳ ಈ ಜನರಿಗೆ ಗಮನಾರ್ಹವಾಗಿ ಗುಂಡುತಲೆ ಹಾಗೂ ಕಪ್ಪು ಕೇಶವಿರುತ್ತಿತ್ತು. ಇಳುಕಲು ಹಣೆ ಇವರಿಗೆ ತುಂಬ ಇಷ್ಟ. ಹಾಗಾಗಿ ಇವರು ಮಕ್ಕಳ ತಲೆಗಳನ್ನು ಮಟ್ಟಸ ಮಾಡುತ್ತಿದ್ದರು. ಓರೆ ದೃಷ್ಟಿಯ ಸೂರ್ಯದೇವತೆಯ ಗೌರವಾರ್ಥವಾಗಿಯೋ ಏನೋ ಮಕ್ಕಳಿಗೂ ಮಾಲುಗಣ್ಣಾಗಲೆಂದು ತಾಯಂದಿರು ಮಕ್ಕಳಕಣ್ಣ ಮುಂದೆ ಮಣಿ ಸರಗಳನ್ನು ಓಲಾಡಿಸುತ್ತಿದ್ದರು. ಮಕ್ಕಳು ಬಹುಮಟ್ಟಿಗೆ ತಾಯಿತಂದೆಯರಿಂದಲೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಅರ್ಚಕ, ಆಡಳಿತಗಾರರ ಮಕ್ಕಳಿಗೆ ಶಾಲಾ ಶಿಕ್ಷಣದ ಸೌಲಭ್ಯವಿದ್ದಿತು. ಅವರಿಗೆ ಇತಿಹಾಸ, ಚಿತ್ರಲಿಪಿ, ಖಗೋಳಶಾಸ್ತ್ರ, ಜ್ಯೋತಿಷ್ಯ ಹಾಗೂ ವೈದ್ಯ ವಿಷಯಗಳನ್ನು ಕಲಿಸಲಾಗುತ್ತಿತ್ತು. ಇತಿಹಾಸ ಹಾಗೂ ಪುರಾಣ ಕಥೆಗಳನ್ನು ತಿಳಿಸುವ ಮಂತ್ರಗಳನ್ನು ಮಕ್ಕಳು ಕಂಠಪಾಠ ಮಾಡುತ್ತಿದ್ದರು. ಈ ಜನ ಮಾತನಾಡುತ್ತಿದ್ದ ಮಾಯಾ ಭಾಷೆಯಲ್ಲಿ ಹಲವು ಒಳಪ್ರಭೇದಗಳಿದ್ದುವು. ಈ ಸಂಸ್ಕøತಿಯ ಉಚ್ಛ್ರಾಯ ಕಾಲದಲ್ಲಿದ್ದ (ಕ್ರಿ.ಶ.200-800) ಮಾಯಾ ಜನರ ಸಂಖ್ಯೆ 20 ಲಕ್ಷವೆಂದು ಅಂದಾಜು ಮಾಡಲಾಗಿದೆ.

ಮಾಯಾ ಸಂಸ್ಕøತಿಯ ನಗರಗಳು `ವಾಸ್ತವವಾಗಿ' ನಗರಗಳಲ್ಲ. ಇವು ಧಾರ್ಮಿಕ ಉತ್ಸವಗಳ, ವ್ಯಾಪಾರ ವ್ಯವಹಾರಗಳ ಹಾಗೂ ನ್ಯಾಯಾಡಳಿತದ ಕೇಂದ್ರಗಳಾಗಿದ್ದುವು. ಶಾಶ್ವತ ನಗರ ನಿವಾಸಿಗಳ ಸಂಖ್ಯೆ ಅತ್ಯಲ್ಪವಿರುತ್ತಿತ್ತು. ಬೃಹತ್ ಧಾರ್ಮಿಕ ಸಮಾರಂಭಗಳ ಸಮಯದಲ್ಲಿ ಮಾತ್ರ ಅರ್ಚಕರು ಬಂದು ಇಲ್ಲಿಯೆ ನೆಲಸುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಒಂಟೊಂಟಿ ಗುಡಿಸಲು ಅಥವಾ ಕೆಲವು ಗುಡಿಸಲುಗಳಲ್ಲಿ ಜನ ವಾಸಮಾಡುತ್ತಿದ್ದರು. ಈ ಗುಡಿಸಲುಗಳು ಆಯಾಕಾರದವು ಅಥವಾ ಅಂಡಾಕಾರದವು. ಮರದ ಕಂಬಗಳ ಗೋಡೆಗೆ ಕೆಲವೊಮ್ಮೆ ಮಣ್ಣು ಮೆತ್ತುತ್ತಿದ್ದುದುಂಟು. ಚಾವಣಿಗೆ ತಾಳೆ ಜಾತಿಯ ಮರದ ಗರಿ ಅಥವಾ ಹುಲ್ಲು ಹೊದಿಸಲಾಗುತ್ತಿತ್ತು. ಮದುವೆಯಾಗುವ ತನಕ ಬಾಲಕರು ಹಾಗೂ ತರುಣರು ಈಗಿನ ಡಾರ್ಮಿಟರಿಯಂಥ ಪ್ರತ್ಯೇಕ ವಾಸಗೃಹಗಳಲ್ಲಿರುತ್ತಿದ್ದರು.

ಕಾಳುಕಡ್ಡಿ, ತಿಂಗಳುರುಳಿ (ಬೀನ್ಸ್), ಕುಂಬಳ ಹಾಗೂ ಗೆಣಸು ಮಾಯಾ ಜನರ ಮುಖ್ಯ ಆಹಾರ. ಮುಸುಕಿನ ಜೋಳ ಇವರ ಬದುಕಿನ ಜೀವನಾಡಿ ಧಾನ್ಯ. ಬೇಯಿಸಿದ ಅಥವಾ ಹುರಿದುಬಾಡಿಸಿದ ತಿನಿಸು, ಕಾಳುರೊಟ್ಟಿಗಳು ಈ ಜನರಿಗೆ ಪ್ರಿಯವಾಗಿದ್ದವು. ಅಪರೂಪವಾಗಿ ಮಾಂಸ ತಿನ್ನುತ್ತಿದ್ದರು. ನಾಯಿ ಹಾಗೂ ಟರ್ಕಿಕೋಳಿ ಇವರ ಸಾಕು ಪ್ರಾಣಿಗಳು. ಇತರ ಪ್ರಾಣಿಗಳ ಸಾಕಣೆ ಇವರಿಗೆ ತಿಳಿದಿರಲಿಲ್ಲ. ಹಾಗಾಗಿ ಇವರಲ್ಲಿ ಮಾಂಸಭಕ್ಷಣೆ ಸೀಮಿತವಾಗಿದ್ದಿತು. ವೇಷಭೂಷಣಗಳು ಸರಳವಾಗಿದ್ದುವು. ಗಂಡಸರು ಬಟ್ಟೆಯನ್ನು ನಡುವಿನ ಸುತ್ತ, ಬಟೆಯ ತುದಿಗಳು ಹಿಂದೆ ಮುಂದೆ ಇಳಿಬಿದ್ದಿರುವ ರೀತಿಯಲ್ಲಿ ಸುತ್ತಿಕೊಳ್ಳುತ್ತಿದ್ದರು. ಚಳಿಗಾಲದಲ್ಲಿ ಕಂಬಳಿ ಹೊದೆಯುತ್ತಿದ್ದರು. ಸ್ತ್ರೀಯರು ಬಿಗಿಲಂಗ ಅಥವಾ ಮೇಲು ಜುಬ್ಬದಂಥ ಉಡುಪು ಧರಿಸುತ್ತಿದ್ದರು. ಹೆಚ್ಚಿನವು ಹತ್ತಿಯ ಉಡುಪುಗಳು. ಕೆಲವೊಮ್ಮೆ ಅವಕ್ಕೆ ಕಸೂತಿ ಹಾಕುತ್ತಿದ್ದರು; ಇಲ್ಲವೆ ವಿವಿಧ ಬಣ್ಣುಗಳಲ್ಲಿ ವಿನ್ಯಾಸ ಬಿಡಿಸುತ್ತಿದ್ದರು. ಬಟ್ಟೆಯ ಅಂಚುಗಳನ್ನು ಗರಿಗಳಿಂದ ಅಲಂಕರಿಸುತ್ತಿದ್ದುದೂ ಉಂಟು. ಮರದ ತೊಗಟೆಯಿಂದ ಬಟ್ಟೆ ತಯಾರಿಸುವ ವಿಧಾನ ಈ ಜನರಿಗೆ ತಿಳಿದಿತ್ತು. ಅರ್ಚಕರು ಬೀಜಗಳಿಂದ ಮಾಡಿದ ಕಂಠಹಾರಗಳನ್ನೂ ಜೇಡಶಿಲೆ, ಚಿಪ್ಪು, ಮರ ಇವುಗಳಿಂದ ತಯಾರಿಸಿದ ಕರ್ಣಾಭರಣಗಳನ್ನೂ ಹಾಕಿಕೊಳ್ಳುತ್ತಿದ್ದರು. ಮಾಯಾ ಜನರಿಗೆ ನರ್ತನವೆಂದರೆ ಬಲು ಪ್ರೀತಿ, ಪ್ರತಿಯೊಂದು ಧಾರ್ಮಿಕ ಅಥವಾ ಸಾಮಾಜಿಕ ಸಮಾರಂಭದಲ್ಲಿಯೂ ಗಂಡಸರು ನರ್ತಿಸುತ್ತಿದ್ದರು. ಹೆಂಗಸರಿಗೆ ನರ್ತನ ನೋಡಲು ಅವಕಾಶವಿರಲಿಲ್ಲ. ಪ್ರತಿಯೊಂದು ನಗರದಲ್ಲಿಯೂ ನೃತ್ಯಾಂಗಣವಿರುತ್ತಿತ್ತು. ಇಂದಿನ ಬ್ಯಾಸ್ಕೆಟ್‍ಬಾಲ್ ಕ್ರೀಡೆಯನ್ನು ತುಸು ಹೋಲುವ ಆಟವೊಂದು ಇವರಲ್ಲಿ ಪ್ರಚಲಿತವಿತ್ತು.

ಧರ್ಮ ಈ ನಾಗರಿಕತೆಯ ಮೂಲ ಸ್ರೋತಬಿಂದು. ಮಳೆ (ಚಾಕ್), ಭೂಮಿ, ಧಾನ್ಯ, ಮೃತ್ಯು (ಆಹ್‍ಪಚ್) ಮುಂತಾದವಕ್ಕೆ ಸಂಬಂಧಿಸಿದ ದೇವತೆಗಳನ್ನೂ ಪಾತಾಳಲೋಕದ ದೇವತೆಗಳನ್ನೂ ಸೂರ್ಯ (ಕಿನಿಚ್ ಅಹಂ) ಚಂದ್ರರನ್ನೂ ಈ ಜನ ಆರಾಧಿಸುತ್ತಿದ್ದರು. ಅನೇಕ ದೇವತೆಗಳಿಗೆ ಒಂದಕ್ಕಿಂತ ಹೆಚ್ಚು ರೂಪಗಳಿದ್ದುವು. ಉದಾಹರಣೆಗೆ ನಾಲ್ವರು ಮಳೆ ದೇವತೆಗಳಿದ್ದು, ಪ್ರತಿಯೊಬ್ಬರನ್ನೂ ಒಂದೊಂದು ದಿಕ್ಕು ಹಾಗೂ ವರ್ಣಗಳಿಂದ ಗುರುತಿಸಲಾಗುತ್ತಿತ್ತು. ನೆಯ್ಗೆ ಮತ್ತು ಸುಖ ಪ್ರಸವಗಳಿಗೆ ಸಂಬಂಧಿಸಿದ ಸ್ತ್ರೀದೇವತೆಚಂದ್ರ. ಎಲ್ಲ ದೇವಮಾನವರೂ ಸೂರ್ಯಚಂದ್ರರಿಂದ ಉದಿಸಿದರೆನ್ನುವುದು ಇವರ ನಂಬುಗೆಯಾಗಿದ್ದಿತು; ಈಗಲೂ ಮಾಯಾ ಜನ ಸೂರ್ಯ-ಚಂದ್ರರನ್ನು ತಮ್ಮ ತಂದೆತಾಯಿಗಳೆಂದು ಕರೆದುಕೊಳ್ಳುತ್ತಾರೆ. ಮೆಕ್ಸಿಕನ್ ಪ್ರಭಾವದಿಂದಾಗಿ ಆ ಸಂಸ್ಕøತಿಯ ದೇವೆಗಳನ್ನೂ ಪ್ರಧಾನವಾಗಿ ಕುಕುಲ್ಕಾನ್ ಅಥವಾ ಕ್ವಿಟ್ಜಾಲ್‍ಕೊವಾತ್ಲ್ ದೇವತೆಯನ್ನೂ-ಇವರು ಆರಾಧಿಸಿದರು. ನರಮೇಧ ಪದ್ಧತಿ ಇವರಲ್ಲಿದ್ದರೂ ನೆರೆಯ ಅಜ್‍ಟೆಕ್ ಜನರಲ್ಲಿದ್ದಂತೆ ಬೃಹತ್ ಪ್ರಮಾಣದಲ್ಲಿರಲಿಲ್ಲ. ಮಾಯಾ ಅರ್ಚಕ ವರ್ಗದವರು ಪ್ರಧಾನವಾಗಿ ಕಾಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಧ್ಯಯನದಲ್ಲಿ ಆಸಕ್ತರಾಗಿದ್ದರು. ಕಾಲದ ಪ್ರತಿಯೊಂದು ಘಳಿಗೆಯೂ ಮಾನವನ ಅದೃಷ್ಟದ ಮೇಲೆ ಪರಿಣಾಮ ಬೀರುವುದೆಂದೂ ಅದನ್ನು ನಿಯಂತ್ರಿಸುವ ಪ್ರತ್ಯೇಕ ದೈವವೊಂದಿದೆಯೆಂದೂ ಇವರು ನಂಬುತ್ತಿದ್ದರು. ಇವರ ಜ್ಯೋತಿಷ್ಯ ವಿಜ್ಞಾನದ ಖಚಿತತೆ ಅಚ್ಚರಿಯನ್ನುಂಟುಮಾಡುತ್ತದೆ. ತೇದಿಗಳ ಕೋಷ್ಟಕಗಳನ್ನು ಇವರು ಸಿದ್ಧಪಡಿಸಿದ್ದರು. ಗ್ರಹಣ ಮುಂತಾದ ಸರ್ವದಿನಗಳನ್ನು ಮೊದಲೇ ತಿಳಿದುಕೊಳ್ಳಬಹುದಾಗಿತ್ತು. 360 ಮತ್ತು 365 ದಿನಗಳ ಸಾಮಾನ್ಯ ವರ್ಷಗಳನ್ನು ಹಾಗೂ 260 ದಿನಗಳ ಪವಿತ್ರ ವರ್ಷವನ್ನೂ (ತ್ಜೊಲ್ಕನ್) ಇವರು ಲೆಕ್ಕ ಹಾಕಿ ರೂಪಿಸಿದ್ದರು. ಈ ಮೂರು ಬಗೆಯ ವರ್ಷಗಳಲ್ಲಿ ಪ್ರತಿಯೊಂದರಲ್ಲಿಯೂ ದಿನದಿನಕ್ಕೂ ಇವರು ಒಂದು ನಿರ್ದಿಷ್ಟ ಸಂಖ್ಯೆ ಹಾಗೂ ಸಂಕೇತಗಳನ್ನು ಬಳಸುತ್ತಿದ್ದರು ವರ್ಷ ವರ್ಷಗಳ ನಡುವೆ ಇರುವ ಪರಸ್ಪರ ಸಂಬಂಧ ಮಾಯಾ ಜನಜೀವನದಲ್ಲಿ ತುಂಬ ಮಹತ್ತ್ವ ಪಡೆದಿತ್ತು. ಬೀಜಬಿತ್ತನೆಯಿಂದ ಅಥವಾ ಗುಡಿಸಲು ಕಟ್ಟುವುದರಿಂದ ಹಿಡಿದು ಯುದ್ಧ ಆರಂಭಿಸುವ ತನಕ ಪ್ರತಿಯೊಂದು ಕಾರ್ಯಾರಂಭಕ್ಕೂ ಶುಭದಿನವನ್ನು ಅರ್ಚಕರು ಪಂಚಾಂಗ ನೋಡಿ ಲೆಕ್ಕ ಹಾಕಿ ನಿಶ್ಚಯಿಸುತ್ತಿದ್ದರು.

ಮಾಯಾಜನರ ಕಾಲಾನುಪೂರ್ವಿಯಲ್ಲಿಯೂ ದೇವದೇವತೆಗಳಿಗೆ ಪ್ರಾಧಾನ್ಯವಿದ್ದಿತು. ಇವರ ವಿಶ್ವದ ಕಲ್ಪನೆಯೂ ವಿಶಿಷ್ಟವಾದುದು. ಅದರ ಪ್ರಕಾರ ಒಂದರ ಮೇಲೊಂದರಂತೆ 13 ಆಂತರಿಕ ಲೋಕಗಳೂ ಒಂದರ ಕೆಳಗೊಂದರಂತೆ 9 ಪಾತಾಳ ಲೋಕಗಳೂ ಇದ್ದುವು. ಪ್ರತಿಯೊಂದು ಲೋಕಕ್ಕೂ ಒಬ್ಬೊಬ್ಬ ದೇವತೆ ಇದ್ದ. ಪ್ರಪಂಚದ ಸೃಷ್ಟಿಕರ್ತ ಹುನಾಬನಾದರೂ ಅವನಿಗಿಂತ ಪ್ರಮುಖನೆನಿಸಿದವನು ಆತನ ಮಗನಾದ ಇಟ್ಜಮ್ನ; ಈತ ಆಕಾಶ ಹಾಗೂ ದಿನರಾತ್ರಿಗಳ ಅಧಿದೈವ. ಇಕ್ಷ್‍ಚೆಲ್ ಎಂಬ ದೇವತೆ ಒಳ್ಳೆಯತನದ ಒಡೆಯ. ಈ ಜನರ ದೈನಂದಿನ ಬದುಕಿನಲ್ಲೂ ದೇವತೆಗಳ ಪಾತ್ರ ಗಣನೀಯವಾದುದಾಗಿತ್ತು.

ಗಣಿತ ಅಥವಾ ಸಂಖ್ಯಾಶಾಸ್ತ್ರ ಮಾಯ ಜನರಿಗೆ ತುಂಬ ಪ್ರಿಯವಾದಶಾಸ್ತ್ರ, ಈಗಿನ ದಶಮಾನ ಪದ್ಧತಿಯಂತೆ ಮಾಯಾ ಜನ ವಿಶಂತಿಮಾನ ಪದ್ಧತಿಯನ್ನು ಅನುಸರಿಸುತ್ತಿದ್ದರು. ಚುಕ್ಕಿ ಹಾಗೂ ಗೆರೆಗಳಲ್ಲಿ ಸಂಖ್ಯೆಗಳನ್ನು ನಮೂದಿಸುತ್ತಿದ್ದರು; ಅವುಗಳ ಸ್ಥಾನ ಸಂಖ್ಯೆಯನ್ನು ನಿರ್ಧರಿಸುತ್ತಿತ್ತು. ಉದಾಹರಣೆಗೆ ಚುಕ್ಕಿ (1 ಅಥವಾ 20).= ಎಂಬುದನ್ನು 31ನ್ನು ಸೂಚಿಸಿದರೆ ಎಂಬುದು 61ನ್ನು ಸೂಚಿಸುತ್ತದೆ. ಇದಲ್ಲದೆ ಸಂಕೇತರೂಪಗಳಲ್ಲಿ ಇವರು 64 ಮಿಲಿಯನ್ ವರ್ಷಗಳಷ್ಟು ಬೃಹತ್ ಸಂಖ್ಯೆಯನ್ನು ಲೆಕ್ಕಹಾಕಿದ್ದಾರೆಂದರೆ ಇವರ ಸಂಖ್ಯಾ ಮೋಹ ಹಾಗೂ ಗಣಿತದಲ್ಲಿಯ ಪರಿಣತಿಯ ಬಗ್ಗೆ ಅರಿವುಂಟಾಗಬಹುದು. ಸೊನ್ನೆಯ ಉಪಯೋಗವೂ ಪ್ರಾಯಶಃ ಮಾಯಾಜನರಿಗೆ ತಿಳಿದಿತ್ತು.

ಪಂಚಾಂಗಗಳನ್ನು ರೂಪಿಸಿದ ಮಾಯಾಜನರು ಕಾಲಗಣನೆಯನ್ನು ಬೃಹತ್ ಶಿಲ್ಪಸ್ಮಾರಕ ಸ್ತಂಭಗಳು, ಯಜ್ಞವೇದಿಗಳು, ಬೃಹತ್ ಸೋಪಾನಮಾರ್ಗಗಳು, ಬಾಗಿಲುವಾಡ ಹಾಗೂ ಗೋಡೆಗಳ ಮೇಲೆ ಕೆತ್ತಿ ಬಿಡಿಸಿದರು. ಆದರೆ ಇವರ ಚಿತ್ರಲಿಪಿ ಬರೆಹ ತುಂಬ ಸಂಕೀರ್ಣವಾದುದು. ಕೇವಲ ಸಂಖ್ಯೆಗೆ ಸಂಬಂಧಿಸಿದ ಕೆಲವು ಸಂಕೇತಗಳನ್ನಷ್ಟೇ ಪತ್ತೆ ಹಚ್ಚಲು ಸಾಧ್ಯವಾಗಿದೆ. ಈ ಬರೆಹದ ವಿಷಯ ಸ್ಥೂಲವಾಗಿ ತಿಳಿಯುತ್ತದಷ್ಟೇ. ಸಂಕೇತಗಳು ಭಾಗಶಃ ಧ್ವನ್ಯಾತ್ಮಕವೂ ಭಾಗಶಃ ಭಾವ ರೂಪಾತ್ಮಕವೂ ಆಗಿದ್ದ ಒಂದು ವಿಧದ ಚಿತ್ರಲಿಪಿಯಾಗಿವೆ, ಸುಮಾರು 850 ಸಂಕೇತಗಳು ಇದರಲ್ಲಿವೆ. ಮರದ ತೊಗಟೆಯನ್ನು ಜಜ್ಜಿ, ಅದರ ಮೇಲೆ ತೆಳುವಾಗಿ ಸುಣ್ಣ ಲೇಪಿಸಿ, ಅದರ ಮೇಲ್ಮೈಯಲ್ಲಿ ಚಿತ್ರಲಿಪಿ ಬರಹಗಳನ್ನೂ ರೇಖಾಚಿತ್ರಗಳನ್ನೂ ಮಾಯಾಜನರು ರಚಿಸಿದರು. ಇಂಥ ಹಸ್ತಪ್ರತಿಗಳು ಹಲವಾರಿದ್ದುವು. ಆದರೆ ಸ್ಪೆಯಿನಿನ ವಿಜಯಾನಂತರ ಬಿಷಪ್ ಡಿಯಾಗೊ ಡಿ ಲಂಡಾ ಎಂಬಾತನ ಆಜ್ಞೆಯ ಮೇರೆಗೆ ಇವೆಲ್ಲವನ್ನೂ ಕ್ಷುದ್ರಧರ್ಮಗ್ರಂಥಗಳೆಂದು ಸುಟ್ಟುಹಾಕಲಾಯಿತು. ಕೇವಲ ಮೂರು ಕೃತಿಗಳು ಡ್ರೆಸ್‍ಡೆನ್ ಕೋಡೆಕ್ಸ್, ಮ್ಯಾಡ್ರಿಡ್ ಕೋಡೆಕ್ಸ್ ಹಾಗೂ ಪ್ಯಾರಿಸ್ ಕೋಡೆಕ್ಸ್ (ಈ ಗ್ರಂಥಗಳನ್ನು ಸಂರಕ್ಷಿಸಿಟ್ಟಿರುವ ಸ್ಥಳಗಳ ಮೇಲೆ ಹೆಸರಿಸಲಾಗಿದೆ) ನಮಗೆ ಲಭ್ಯವಾಗಿದೆ. ಇವುಗಳಲ್ಲಿ ಪ್ರಾಚೀನತಮವಾದ ಡ್ರೆಸ್‍ಡೆನ್ ಕೋಡೆಕ್ಸ್ ಅನ್ನು ಫಾಸ್ಟ್‍ಮನ್ ಎಂಬ ಜರ್ಮನ್ ಪುರಾತತ್ತ್ವಶಾಸ್ತ್ರಜ್ಞ ಅರ್ಥೈಸುವಲ್ಲಿ, ವಿಶೇಷವಾಗಿ ಕಾಲಾನುಪೂರ್ವಿಗೆ ಸಂಬಂಧಿಸಿದ ಗಣನೀಯ ಪ್ರಮಾಣದ ವಿವರಗಳನ್ನು ಪಡೆಯುವಲ್ಲಿ ಬಲುಮಟ್ಟಿಗೆ ಸಫಲನಾದ.

ಮಾಯಾ ಜನರ ವಾಸ್ತುಶಿಲ್ಪಕಲೆ ಧರ್ಮಕ್ಕೆ ನಿಕಟವಾಗಿ ಸಂಬಂಧಿಸಿದುದು, ಸ್ತಂಭ, ಪೀಠ ಹಾಗೂ ದೇಗುಲಭಾಗಗಳಲ್ಲಿ ದೇವದೇವತೆಯರ ಧಾರ್ಮಿಕ ಸನ್ನಿವೇಶಗಳ ಉಬ್ಬುಗೆತ್ತನೆಯ ಅಲಂಕರಣವಿರುತ್ತಿತ್ತು. ವಿನ್ಯಾಸಗಳು ಒತ್ತೊತ್ತಾಗಿದ್ದು ಅತಿಯೆಂದು ಈಗ ತೋರಬಹುದು. ಆದರೆ ಮಾಯಾ ಸಂಪ್ರದಾಯಾನುಸಾರ ದೇವ ದೇವತೆಗಳ ಎಲ್ಲ ಲಕ್ಷಣ ಸ್ವರೂಪಗಳನ್ನೂ ಇವರ ಶಿಲ್ಪಕಲೆ ಪ್ರತಿನಿಧಿಸುತ್ತದೆ. ದೈನಂದಿನ ಬದುಕಿನ ಚಿತ್ರಕ್ಕೆ ಶಿಲ್ಪಕಲೆಗಿಂತ ಚಿತ್ರಕಲೆಯಲ್ಲಿ ಹೆಚ್ಚು ಸ್ವಾತಂತ್ರ್ಯ ದೊರೆತಿದೆ. ಮೃಣ್ಪಾತ್ರೆ ಹಾಗೂ ದೇಗುಲ ಗೋಡೆಗಳ ಮೇಲೆ ಚಿತ್ರಕಲೆಯ ಕೌಶಲ ಗೋಚರಿಸುತ್ತದೆ. ಗಾಢವರ್ಣಗಳ ಬಳಕೆ ಮತ್ತು ನೆಳಲಿನ ವಿನ್ಯಾಸದ ಅನುಪಸ್ಥಿತಿಗಳಿಂದಾಗಿ ಇವರ ಚಿತ್ರಗಳು ಅಲಂಕಾರಿಕವಾಗಿ ತೋರುತ್ತವೆ.

ಎತ್ತರದ ಪಿರಮಿಡ್ಡುಗಳ ಮೇಲಿನ ಚಪ್ಪಟ್ಟೆಯ ಭಾಗದಲ್ಲಿ ಪುಟ್ಟ ದೇಗುಲಗಳ ನಿರ್ಮಾಣ ಮಾಯಾ ವಾಸ್ತುಶೈಲಿಯ ವೈಶಿಷ್ಟ್ಯ. ದೇಗುಲಗಳಿಗೆ ಮೆಟ್ಟಲೇರಿ ಅರ್ಚಕರು ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರು. ಕೆಳಗಣ ಅಂಗಣದಲ್ಲಿ ಸಾಮಾನ್ಯ ಜನ ನಿಂತು ಉತ್ಸವಾದಿಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದ್ದಿತು. ಎತ್ತರದ, ಆದರೆ ಕಿರಿದಾದ ಕಿಟಕಿಗಳಿಲ್ಲದ ಹಲವು ಕೋಣೆಗಳ ಕಟ್ಟಡಗಳನ್ನೂ ಈ ಜನ ನಿರ್ಮಿಸಿದ್ದರು. ಇವು ಧಾರ್ಮಿಕ ಸಮಾರಂಭ ಸಮಯದಲ್ಲಿ ಅರ್ಚಕರಿಗೆ ನಿದ್ರಾಕೊಠಡಿಗಳಾಗಿದ್ದುವೆಂದು ತೋರುತ್ತದೆ; ಹಾಗೆಯೇ ಪದಾರ್ಥಸಂಗ್ರಹಣೆಯ ಉಗ್ರಾಣವೂ ನ್ಯಾಯಾಡಳಿತದ ಕೇಂದ್ರವೂ ಆಗಿದ್ದವೆಂದು ತೋರುತ್ತದೆ. ವಾಸ್ತವವಾಗಿ ಮಾಯಾ ವಾಸ್ತುಶೈಲಿಯಲ್ಲೆಲ್ಲೂ ಕಮಾನು ಕಂಡುಬರುವುದಿಲ್ಲ. ಬೋದಿಗೆ ಕಟ್ಟಡಗಳನ್ನಷ್ಟೇ ನಿರ್ಮಿಸಲು ಇವರಿಗೆ ಸಾಧ್ಯವಾಯಿತು. ಈ ಎಲ್ಲ ನಿರ್ಮಾಣಗಳನ್ನು ಇವರು ಕಲ್ಲಿನ ಉಪಕರಣಗಳಿಂದಲೇ ಮಾಡಿದ್ದರೆನ್ನುವುದು ಗಮನಾರ್ಹ.

ಮಾಯಾ ಶಿಲ್ಪಕಲೆ ಪ್ರಪಂಚದ ಶ್ರೇಷ್ಠ ಕಲಾಶೈಲಿಗಳಲ್ಲೊಂದೆಂದು ಪರಿಗಣಿಸಲ್ಪಟ್ಟಿದೆ. ಶಿಲ್ಪಸ್ಮಾರಕ ಸ್ತಂಭಗಳು-ಸ್ಟೀಲಿ-ಈ ಶೈಲಿಯ ವೈಶಿಷ್ಟ್ಯ. ಸರ್ಪ, ಎರಡು ತಲೆಯ ಡ್ರ್ಯಾಗನ್, ಗರುಡ, ಮೂಗಿನ ದೇವತೆ ಮುಂತಾದವು ಹೆಚ್ಚು ಪ್ರತಿನಿಧಿತವಾಗಿರುವ ಶಿಲ್ಪಗಳು. ದಿವಂಗತ ಸಿಲ್ವೇನಸ್ ಮೋರ್ಲಿ ಮತ್ತು ಆತನ ಸಹೋದ್ಯೋಗಿಗಳು ವಾಕ್ಷಕ್‍ಟೂನ್ ಎಂಬಲ್ಲಿ ಅನ್ವೇಷಿಸಿದ ಹಲವಾರು ಸಾಕ್ಷ್ಯಾಧಾರಗಳಲ್ಲಿ "ಸ್ಟೆಲಾನೈನ್" ಎಂದು ಪರಿಚಿತವಾಗಿರುವ ಪ್ರಾಚೀನ ಶಿಲ್ಪಸ್ಮಾರಕ ಸ್ತಂಭ ಗಮನಾರ್ಹವಾದುದು. ಇದರ ಮೇಲೆ ಕೆತ್ತಿರುವ ತೇದಿ ಕ್ರಿ.ಶ.3 28ಕ್ಕೆ ಸರಿಹೊಂದುತ್ತದೆ. ಮಾಯಾ ಜನರ ಕುಂಭಕಲೆ ನಯನಾಜೂಕುಗಳಲ್ಲಿ ಉನ್ನತಮಟ್ಟ ಸಾಧಿಸಿತ್ತು. ಹೊಳಪುಳ್ಳ ನಯವಾದ ಮೃಣ್ಪಾತ್ರೆಗಳ ಮೇಲೆ ಜ್ಯಾಮಿತಿ ವಿನ್ಯಾಸಗಳಿಂದ ಮತ್ತು ಧಾರ್ಮಿಕ ಜೀವನ ದೃಶ್ಯಗಳಿಂದ ಅಲಂಕರಿಸಿದುದನ್ನು ಕಾಣುತ್ತೇವೆ.

ಮಾಯಾ ಜನ ಪ್ರಧಾನವಾಗಿ ಕೃಷಿಕರು. ಇವರಲ್ಲಿ ಕುಂಬ್ರಿ ಬೇಸಾಯ ಪದ್ಧತಿ ಪ್ರಚಲಿತವಿತ್ತು. ಕಲ್ಲಿನ ಕೊಡಲಿಗಳಿಂದ ಕಾಡನ್ನು ಕಡಿದು ಸುಟ್ಟು ಹೊಲಗಳನ್ನು ನಿರ್ಮಿಸುತ್ತಿದ್ದರು. ಅಗೆಯುವ ಕೋಲಿನಿಂದ ಬೂದಿಯ ನೆಲದಲ್ಲಿ ಉಳುಮೆ ಮಾಡಿ ಬಿತ್ತನೆ ಮಾಡುತ್ತಿದ್ದರು. ಇವರ ಬೆಳೆಗೆ ಮಾರಕ ಕೀಟಗಳ ಕಾಟವಿರಲಿಲ್ಲ. ಆದರೆ ಇವರ ಅಗೆಯುವ ಕೋಲುಗಳು ಬೇಗ ಮೊಂಡಾಗುತ್ತಿದ್ದವಾದ್ದರಿಂದ ಮೇಲಿಂದ ಮೇಲೆ ಅವನ್ನು ತಯಾರಿಸಿಕೊಳ್ಳಬೇಕಾಗುತ್ತಿತ್ತು. ಕಾಳುಕಡ್ಡ, ಬೀನ್ಸ್, ಗೆಣಸು, ಕುಂಬಲ, ಹತ್ತಿ, ಹೊಗೆಸೊಪ್ಪು, ಮರಗೆಣಸು ಹಾಗೂ ಕಕೇವೂ ಇವರ ಪ್ರಧಾನ ಬೆಳೆಗಳು. ಕೆಲವು ಕುಟುಂಬಗಳು ಜೇನಿಗಾಗಿ ಗೂಡುಗಳನ್ನಿಡುತ್ತಿದ್ದುವು.

ಚಕ್ರಗಳಿರುವ ವಾಹನಗಳ ಪರಿಚಯ ಮಾಯಾ ಜನರಿಗಿರಲಿಲ್ಲ. ನಗರಗಳನ್ನು ಅಥವಾ ನಗರದ ಇತರ ಭಾಗಗಳನ್ನು ಸಂಪರ್ಕಿಸಲು ಭೂಮಾರ್ಗಗಳಿದ್ದುವು. ಕಲ್ಲುಹಾಸಿನ ಈ ರಸ್ತೆಗಳು ಸುಮಾರು 9 ಮೀಟರ್ ಅಗಲವಾಗಿದ್ದುವು. ಪ್ರಾಯಶಃ ಧಾರ್ಮಿಕ ಮತ್ತು ನಾಗರಿಕ ಉತ್ಸವಾದಿ ಸಮಾರಂಭಗಳಿಗೆ ಇವನ್ನು ಬಳಸುತ್ತಿದ್ದಿರಬಹುದು. ಗಣ್ಯರನ್ನು ಗುಲಾಮರು ಮೇನಾಗಳಲ್ಲಿ ಹೊತ್ತು ಸಾಗಿಸುತ್ತಿದ್ದರು. ವ್ಯಾಪಾರಿಗಳು ಈ ರಸ್ತೆಗಳನ್ನು ಬಳಸುತ್ತಿದ್ದರಾದರೂ ಅನುಕೂಲತೆ ಇದ್ದ ಕಡೆಗಳಲ್ಲೆಲ್ಲ ಅವರು ಜಲಮಾರ್ಗವನ್ನೇ ಆರಿಸಿಕೊಂಡು ದೋಣಿಗಳಲ್ಲಿ ಸಾಮಾನು ಸರಂಜಾಮುಗಳೊಡನೆ ಪ್ರಯಾಣಿಸುತ್ತಿದ್ದರು. ತಗ್ಗುಗಾಡಿನ ಜನ ಚಿರತೆಚರ್ಮ, ಗರಿ, ರಾಳ, ಸುಣ್ಣ, ಫ್ಲಿಂಟ್ ಶಿಲೆಯ ಚಾಕು, ತಾಳೆಮರದ ಖಾದ್ಯಭಾಗ ಇತ್ಯಾದಿಗಳನ್ನು ಕೊಟ್ಟು ಬದಲಿಗೆ ಪ್ರಸ್ಥಭೂಮಿಯ ಜನರಿಂದ ಜೇಡಶಿಲೆ, ಕ್ವೆಟ್‍ಜಾಲ್ ಗರಿ, ಫ್ಲಿಂಟ್ ಶಿಲೆಯ ಚಾಕುಗಳ ತಯಾರಿಕೆಗೆ ಅವಶ್ಯವಾದ ಕಾಚಶಿಲೆ ಮೊದಲಾದವನ್ನು ಪಡೆಯುತ್ತಿದ್ದರು. ಯುಕಟಾನ್ ಪ್ರದೇಶ ಹೊಂಡುರಸ್‍ಗೆ ಉಪ್ಪು ಹಾಗೂ ಕಿನ್‍ಕಾಪು ಹತ್ತಿಯನ್ನು ರವಾನಿಸಿ ಅಲ್ಲಿಂದ ಕಕೇವೊ ಬೀಜ ತರಿಸಿಕೊಳ್ಳುತ್ತಿತ್ತು. ಇದನ್ನು ಹಣದ ರೀತಿಯಲ್ಲಿ ಚಲಾವಣೆಗೆ ಬಳಸಲಾಗುತ್ತಿತ್ತು.

ಆಡಳಿತ ವ್ಯವಸ್ಥೆ: ಮೊದಮೊದಲು ಕಾಲದ ಮಾಯಾ ಆಡಳಿತದ ಬಗ್ಗೆ ಏನೂ ತಿಳಿದುಬಂದಿಲ್ಲ. ಪ್ರಾಯಶಃ ಪ್ರತಿಯೊಂದು ನಗರವೂ ತನ್ನ ಸುತ್ತಮುತ್ತಲಿನ ಪ್ರದೇಶದ ಆಡಳಿತವನ್ನು ನಡೆಸುತ್ತಿದ್ದಿತು. ಪ್ರಾಚೀನ ಗ್ರೀಸ್‍ನಲ್ಲಿದ್ದಂತೆ ನಗರಾಡಳಿತ ಪದ್ಧತಿ ಇದ್ದಿರಬಹುದು. ಪ್ರತಿಯೊಂದರಲ್ಲೂ ಆಡಳಿತಗಾರರಿದ್ದರು. ನಗರಪ್ರಾಂತಗಳ ಒಕ್ಕೂಟವಿದ್ದಿರುವ ಸಾಧ್ಯತೆಯೂ ಉಂಟು. ಅನಂತರದ ಕಾಲದಲ್ಲಿ ಬೇಚೆನ್ ಈಟ್ಸಾ ಮತ್ತು ಮಾಯಪನ್ ನಗರಗಳು ಹೆಚ್ಚು ಪ್ರದೇಶವನ್ನಾಳಿ, ಆ ಭಾಗದ ನಗರ ಪ್ರಾಂತಗಳ ಆಡಳಿತವನ್ನು ನಿಯಂತ್ರಿಸಿದವು.

ಈಗಿನ ಮಾಯಾ: ಮಾಯಾ ನಾಗರಿಕತೆ ಇದ್ದ ಪ್ರದೇಶದಲ್ಲಿಂದು ಸು. 15 ಲಕ್ಷಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಚೋಲ್, ಲಕಾನ್‍ಡನ್, ಯುಕಟೆಕ್ ಮುಂತಾದ ಅನೇಕ ಬುಡಕಟ್ಟುಗಳಿಗೆ ಸೇರಿದ ಈ ಜನ ಮಾಯಾಭಾಷೆಯನ್ನು ಆಡುತ್ತಾರೆ. ರೋಮನ್ ಕ್ಯಾಥೊಲಿಕರಾಗಿ ಪರಿವರ್ತಿತರಾಗಿದ್ದರೂ ಇವರು ಪ್ರಾಚೀನ ಧಾರ್ಮಿಕ ಆಚರಣೆಗಳಲ್ಲಿ ಕೆಲವನ್ನು ಈಗಲೂ ಅನುಸರಿಸುತ್ತಾರೆ. ಆದರೆ ಈ ಜನ ತಮ್ಮ ಪೂರ್ವದ ಮಹಾಸಾಧನೆಗಳ ಬಗ್ಗೆ ಏನೇನೂ ಅರಿಯರು. (ಎಚ್.ಎಂ.ಎನ್.ಆರ್.)