ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾರ್ಕ

ವಿಕಿಸೋರ್ಸ್ದಿಂದ

ಮಾರ್ಕ - ಹೊಸ ಒಡಂಬಡಿಕೆಯಲ್ಲಿ ಈತನ ಬಗೆಗೆ ಹೆಚ್ಚು ವಿವರಗಳಿವೆ. ಈತ ಜೆರೂಸಲೇಮಿನಲ್ಲಿದ್ದು ಆದಿ ಕ್ರೈಸ್ತ ಸಭೆಯಲ್ಲಿ ಹೆಸರುವಾಸಿಯಾಗಿದ್ದ ಮರಿಯಳ ಮಗನೂ ಅಪೋಸ್ತಲರ ಕಾಲದಲ್ಲಿ ಪ್ರಖ್ಯಾತಿಗೆ ಬಂದ ಬಾರ್ನಬ ಎಂಬವನ ದಾಯಾದನೂ ಪೇತ್ರನಿಗೆ ಪ್ರಿಯನೂ ಆಗಿದ್ದ. ಅಪೋಸ್ತಲರಲ್ಲಿ ಒಬ್ಬನಾದ ಪೌಲನೆಂಬವನ ಮೊದಲನೆಯ ಪ್ರಸಂಗ ಪ್ರಯಾಣದಲ್ಲಿ ಆತನಿಗೆ ಸಹಾಯಕನಾಗಿದ್ದು ಪೌಲ ಸುವಾರ್ತಾ ಸೇವೆಯ ನಿಮಿತ್ತ ಸೆರೆಯಲ್ಲಿದ್ದಾಗ ಆತನಿಗೆ ಸೇವೆ ಸಲ್ಲಿಸಿದ,

ಮಾರ್ಕ ಬರೆದ ಸುವಾರ್ತೆ: ಹೊಸ ಒಡಂಬಡಿಕೆಯಲ್ಲಿರುವ ನಾಲ್ಕು ಸುವಾರ್ತೆಗಳಲ್ಲಿ ಇದು ಮೊದಲು ಬರೆದುದಾಗಿದೆ. ಮತ್ತಾಯ ಮತ್ತು ಲೂಕರು ಬರೆದಿರುವ ಸುವಾರ್ತೆಗಳಿಗೆ ಇದೇ ಆಧಾರ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಯೋಹಾನ್ ಬರೆದ ಸುವಾರ್ತೆಯ ಗ್ರಂಥಕರ್ತನಿಗೂ ಈ ಸುವಾರ್ತೆಯ ಪರಿಚಯವಿತ್ತೆಂಬುದಕ್ಕೆ ಕಾರಣಗಳಿವೆ. ಈ ಸುವಾರ್ತೆಯ ಹಿನ್ನೆಲೆಯಲ್ಲಿ ಯೇಸುವಿನ ಶಿಷ್ಯನಾದ ಪೇತ್ರನ ಸಾಕ್ಷಿಯ ಪ್ರಭಾವವವಿದೆ. ಮೊದಲಿನಿಂದಲೂ ಈ ಸುವಾರ್ತೆ ಮಾರ್ಕ್‍ನಿಂದಲೇ ಬರೆಯಲ್ಪಟ್ಟಿತೆಂಬ ಅಭಿಪ್ರಾಯವಿದೆ.

ಈಗ ದೊರೆತಿರುವ ಆಧಾರಗಳಿಂದ ಕ್ರಿ.ಶ 65 ರಿಂದ 70 ರ ಒಳಗೆ ರೋಮಾಪುರದಲ್ಲಿ (ಈಗ ಇಟಲಿಯಲ್ಲಿರುವ ರೋಮ್ ನಗರ) ಈ ಕೃತಿ ರಚಿತವಾಯಿತೆಂದು ತಿಳಿದುಬರುತ್ತದೆ. ಇದನ್ನು ಬರೆದ ಸಂದರ್ಭ ಹೀಗಿದೆ : 1. ಮಾರ್ಕ ಈ ಸುವಾರ್ತೆಯನ್ನು ಬರೆಯುವ ಮೊದಲು ಕ್ರಿಸ್ತನ ಸುವಾರ್ತೆ ಸುಮಾರು 35 ವರ್ಷಗಳಿಂದ ಸಾರಲ್ಪಡುತ್ತಿತ್ತು. ಇದನ್ನು ಸಾರುತ್ತಿದ್ದ ಸೌವಾರ್ತಿಗರ ಮತ್ತು ಬೋಧಕರ ಪ್ರಯೋಜನಕ್ಕಾಗಿ ಹಲವಾರು ಕರ ಪತ್ರಗಳು ಬರೆಯಲ್ಪಟ್ಟಿದ್ದವು. ಆದರೆ ಅವು ಸುವಾರ್ತೆಯಲ್ಲಿ ಇರಬೇಕಾದ ಮುಖ್ಯಾಂಶಗಳ ವಿವರಗಳ್ನು ಒಳಗೊಂಡಿರಲಿಲ್ಲ. ಆದ್ದರಿಂದ ಕ್ರೈಸ್ತರು ತಿಳಿಯಬೇಕಾದ ವಿಷಯಗಳನ್ನು ಬರೆಯಲು ಮಾರ್ಕ ಮುಂದಾದ.

2. ಯೇಸುವಿನ ಪರಿಚಯವಿದ್ದ ಶಿಷ್ಯರೂ ಅಪೋಸ್ತಲರೂ ಇತರರೂ ಒಬ್ಬೊಬ್ಬರಾಗಿ ಆ ಲೋಕದಿಂದ ಅದೃಶ್ಯರಾಗುತ್ತ ಬಂದಂತೆ ಅವರ ವಿಚಾರಗಳನ್ನು ಒಳಗೊಂಡ ಈ ಸುವಾರ್ತೆಗಳು ಹೊಸ ಕ್ರೈಸ್ತ ಪೀಳಿಗೆಗೆ ಅಗತ್ಯವಿದ್ದದ್ದರಿಂದ ಇದು ಬರೆಯಲ್ಪಟ್ಟಿತು.

3 ಕ್ರೈಸ್ತರು ತಮ್ಮ ನಂಬಿಕೆಯ ನಿಮಿತ್ತ ಅನ್ಯಾಯವಾಗಿ ಹಿಂಸೆ ಅನುಭವಿಸುತ್ತಿದ್ದುದರಿಂದ ಅವರ ವಿಶ್ವಾಸವನ್ನು ಬಲಪಡಿಸಿ, ಧೈರ್ಯ ತುಂಬಿ, ಎದೆಗುಂದದಂತೆ ಮಾಡಲು ಈ ಕೃತಿರಚಿತವಾಯಿತು.

	ಇದರ ರಚನೆಯಲ್ಲಿ ಎರಡು ಕಾರಣಗಳಿವೆ. ಇದನ್ನು ಓದುವ ಕ್ರೈಸ್ತೆರರಿಗೂ ಚರಿತ್ರೆಯಲ್ಲಿ ಕಾಣಿಸಿಕೊಂಡ ಯೇಸು ಯೆಹೂದ್ಯರೂ ನಿರೀಕ್ಷಿಸುತ್ತಿದ್ದ ಮೆಸ್ಸೀಯ (ರಕ್ಷಕ), ಎಲ್ಲ ಮನುಷ್ಯರನ್ನೂ ಪಾಪದಿಂದ ಬಿಡಿಸಿ ಕಾಪಾಡುವ ರಕ್ಷಕ ಮತ್ತು ದೇವರ ಕುಮಾರ (ಈ ಲೋಕಕ್ಕೆ ಬರುವ ಮೊದಲು ಇದ್ದ ಮತ್ತು ಈಗಲೂ ಜೀವಿಸುವ ದೇವರು) ಎಂಬ ದೃಢನಂಬಿಕೆ ಬರಲೆಂಬುದು ಒಂದು ಕಾರಣ.

ಕ್ರೈಸ್ತರು ತಾವು ನಂಬಿರುವ ಯೇಸುವನ್ನು ಇನ್ನೂ ಹೆಚ್ಚಾಗಿ ತಿಳಿದುಕೊಂಡು ಆತನ ತತ್ವಗಳನ್ನು ಪರಿಪಾಲಿಸಲು ಅನುಕೂಲವಾಗಲಿ ಎಂಬುದು ಇನ್ನೊಂದು ಕಾರಣ.

ಮಾರ್ಕ ಯೇಸುವಿನ ಜೀವನಚರಿತ್ರೆಯನ್ನು ಪೂರ್ಣವಾಗಿ ಬರೆಯಲು ಪ್ರಯತ್ನಿಸಲಿಲ್ಲ. ಅಂಥ ಜೀವನ ಚರಿತ್ರೆಯಲ್ಲಿ ಕಂಡು ಬರಬಹುದಾದ ಅನೇಕ ಸಂಗತಿಗಳು ಈ ಸುವಾರ್ತೆಯಲ್ಲಿ ಕಂಡುಬರುವುದಿಲ್ಲ. ಉದಾಹರಣೆಗೆ ಯೇಸುವಿನ ಜನನ, ಜನ್ಮಸ್ಥಳ, ಕುಟುಂಬ ಸ್ಥಿತಿ, ವಿದ್ಯಾಭ್ಯಾಸ, ಬಾಲ್ಯ ಯೌವ್ವನ ಇತ್ಯಾದಿ ವಿಷಯಗಳನ್ನೂ ತಿಳಿಸುವುದಿಲ್ಲ.

ಮಾರ್ಕ ತನ್ನ ಕೃತಿಯ ಮೊದಲಿನ ಹತ್ತು ಅಧ್ಯಾಯಗಳಲ್ಲಿ ಪ್ಯಾಲಿಸ್ತೀನಿನ ಉತ್ತರ ಭಾಗದಲ್ಲಿದ್ದ ಗಲಿಲಾಯ (ಈಗಿನ ಇಸ್ರೇಲಿನ ಉತ್ತರ) ಪ್ರದೇಶದಲ್ಲಿ ಮಾಡಿದ ಸೇವೆಯನ್ನೂ (ಬೋಧಿಸಿ ರೋಗಿಗಳನ್ನು ಗುಣಪಡಿಸಿ ದೆವ್ವ ಹಿಡಿದವರನ್ನು ಸ್ವಸ್ಥ ಪಡಿಸಿದ ಮುಂತಾದವು) ಗಲಿಲಾಯದಿಂದ ದಕ್ಷಿಣಕ್ಕೆ ಪ್ರಯಾಣ ಮಾಡುತ್ತ ಜೆರೊಸಲೇಮಿಗೆ ಮಾಡಿದ ಪ್ರಯಾಣದಲ್ಲಿ ನಡೆದ ಘಟನೆಗಳನ್ನೂ ಮಾಡಿದ ಬೋಧನೆಗಳನ್ನೂ ತಿಳಿಸುತ್ತಾನೆ.

ಈ ಸುವಾರ್ತೆಯಲ್ಲಿ 16 ಅಧ್ಯಾಯಗಳೂ 678 ವಚನಗಳೂ ಇವೆ. ಯೇಸುವಿನ ಜೀವಿತದ ಕಡೆಯ ವಾರವನ್ನೂ ( ಆತನ ಭೋಧನೆ, ಶ್ರಮ ಮರು ಸಮಾಧಿಗಳಿಗೆ ಸಂಬಂಧಪಟ್ಟ ಏಳು ದಿನಗಳು) ಪುನರುತ್ಥಾನವನ್ನೂ ವಿವರಿಸಲು ಮಾರ್ಕ ತನ್ನ ಗ್ರಂಥದ ಕಡೆಯ 6 ಅಧ್ಯಾಯಗಳನ್ನು ಅಂದರೆ 253 ವಚನಗಳನ್ನು ಪ್ರತ್ಯೇಕಿಸಿದ್ದಾನೆ. ಈ ಗ್ರಂಥದ ಶೇಕಡಾ 35ರಷ್ಟು ಭಾಗವನ್ನು ಯೇಸುವಿನ ಜೀವಿತದ ಕಡೆಯ ವಾರಕ್ಕೆ ಮೀಸಲಿಟ್ಟು ಯೇಸುವಿನ ಶ್ರಮ, ಮರಣ ಮತ್ತು ಪುನರುತ್ಥಾನಗಳನ್ನು ತಿಳಿಸಿದ್ದಾನೆ. ಯೇಸು ಈ ಲೋಕಕ್ಕೆ ಎಲ್ಲರಿಗಾಗಿ ಪ್ರಾಣ ಕೊಡಲು ಒಂದು ಶಿಲುಬೆಯ ಮೇಲೆ ಎಲ್ಲರ ಪಾಪಗಳಿಗಾಗಿ ತನ್ನ ಪ್ರಾಣ ತೆತ್ತು ಮೂರನೆಯ ದಿನದಲ್ಲಿ ಎದ್ದು ಬಂದು ಈಗಲೂ ಜೀವಿಸುವ ರಕ್ಷಕನಾಗಿದ್ದಾನೆ ಎಂಬುದನ್ನು ಈ ಭಾಗದಲ್ಲಿ ತಿಳಿಸುವುದೇ ಮಾರ್ಕನ ಉದ್ದೇಶ. (ಎಸ್.ಎ.ಕೆ.ಯು.)