ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾರ್ಲ್

ವಿಕಿಸೋರ್ಸ್ದಿಂದ

ಮಾರ್ಲ್

ಸ್ವಲ್ಪ ಮಟ್ಟಿಗೆ ಸುಲಭವಾಗಿ ಪುಡಿಯಾಗುವ, ಜೇಡಿಮಣ್ಣಿನಿಂದಲೂ ಕ್ಯಾಲ್ಸಿಯಮ್ ಕಾರ್ಬೋನೇಟ್‍ನಿಂದಲೂ ಕೂಡಿದ ಮಿಶ್ರಣ. ಇದೇ ಸಂಯೋಜನೆಯಿಂದ ಕೂಡಿರುವ, ಇನ್ನೂ ಹೆಚ್ಚು ಗಟ್ಟಿಯಾಗಿರುವ ಶಿಲೆಗಳಿಗೆ ಮಾರ್ಲ್ ಶಿಲೆ ಅಥವಾ ಮಾಲ್ಲೈಟ್ ಎಂದು ಹೆಸರು. ಬಾರ್ತ್ ಕಾರೆನ್ಸ್ ಮತ್ತು ಎಸ್ಕೊಲಾ ಎಂಬ ವಿe್ಞÁನಿಗಳು ತಿಳಿಯಪಡಿಸಿರುವ (1936), ಜೇಡಿ ಮಣ್ಣು - ಸುಣ್ಣದ ಕಾರ್ಬೋನೇಟ್‍ಗಳ ಮಿಶ್ರಣ ಪ್ರಮಾಣವನ್ನು ಆಧರಿಸಿದ ವಿಂಗಡಣೆಯ ಪ್ರಕಾರ 35% - 65% ಭಾಗ ಕಾರ್ಬೋನೇಟ್ ಮತ್ತು ಇನ್ನುಳಿದ ಭಾಗ ಜೇಡಿಮಣ್ಣಿನಿಂದ ಕೂಡಿದ ಶಿಲೆಯನ್ನು ಮಾರ್ಲ್ ಎಂದು ನಿರೂಪಿಸಲಾಗಿದೆ. ಗ್ಲಾಕೋನೈಟ್‍ನಿಂದಾದ ಹಸುರು ಮರಳು, ಮುಖ್ಯವಾಗಿ ಇಂದಿನ ಸಿಹಿನೀರಿನ ಸರೋವರಗಳಲ್ಲಿ ಶೇಖರಣೆಯಾಗುವ ಹಾಗೂ ಸುಲಭವಾಗಿ ಪುಡಿಯಾಗಬಲ್ಲ ಕೆಲವು ಕಾರ್ಬೋನೇಟ್ ಮಣ್ಣುಗಳಿಗೆ ಕೂಡ ಮಾರ್ಲ್ ಎಂಬ ಹೆಸರೇ ಇದೆ. ಕ್ಯಾರಾ ಮುಂತಾದ ಸಸ್ಯಗಳು ದ್ಯುತಿಸಂಶ್ಲೇಷಣಕ್ರಿಯೆಯ ಮೂಲಕ ಕ್ಯಾಲ್ಸಿಯಮ್ ಬೈಕಾರ್ಬೋನೇಟ್‍ನಿಂದ ಕಾರ್ಬನ್ ಡೈ ಆಕ್ಸೈಡನ್ನು ಪಡೆಯುತ್ತವೆ.  ಇದರಿಂದಾಗಿ ಈ ಸಸ್ಯಗಳ ಎಲೆ ಮತ್ತು ಕಾಂಡಗಳ ಮೇಲೆ ಕ್ಯಾಲ್ಸಿಯಮ್ ಕಾರ್ಬೋನೇಟ್ ಪದರ ಪ್ರಕ್ಷೇಪಗೊಳ್ಳುತ್ತದೆ. ಕಾಲಕ್ರಮೇಣ ಈ ಪದರಗಳು ಬೇರ್ಪಟ್ಟು ಸರೋವರಗಳ ತಳದಲ್ಲಿ ಶೇಖರಣೆಗೊಳ್ಳುತ್ತವೆ. ಶೇಖರಣೆಯಾದ ಸುಣ್ಣಕಲ್ಲುಗಳಲ್ಲಿ ಹುಸಿಚೂರು ಕಲ್ಲಾಗುವಿಕೆಯ (ಸ್ಯೂಡೊಬ್ರೇಸಿಯೇಷನ್) ವೈಶಿಷ್ಟ್ಯ ಕಂಡುಬರುವುದು. ಸಣ್ಣ ಸಣ್ಣ ಕ್ಯಾಲ್ಸಿಯಮ್ ಕಾರ್ಬೋನೇಟ್ ಚೂರುಗಳು ಮತ್ತು ಪದರಗಳು ಇದೇ ಸಂಯೋಜನೆಯುಳ್ಳ ಮಣ್ಣಿನಲ್ಲಿ ಹುದುಗಿರುತ್ತವೆ. ಇದರೊಂದಿಗೆ ಸೂಕ್ಷ್ಮಾಣುಜೀವಿಗಳು ಪ್ರಕ್ಷೇಪಿಸುವ ಮತ್ತು ಸಿಹಿನೀರಿನ ಮೃದ್ವಂಗಿಗಳು ಸುರಿಸುವ ಕಾರ್ಬೋನೇಟ್ ಸಹ ಬಂದು ಸೇರುತ್ತವೆ. ಸಿಹಿನೀರಿನ ಮಾರ್ಲ್‍ಗಳು ಜಿಗುಟಾಗಿರುವುದರಿಂದ ಅದನ್ನು ಪೋರ್ಟ್‍ಲ್ಯಾಂಡ್ ಸಿಮೆಂಟ್ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ. ಇಟ್ಟಿಗೆಗಳನ್ನು ತಯಾರಿಸಲೂ ಮಾರ್ಲ್ ಉಪಯೋಗಕ್ಕೆ ಬರುತ್ತದೆ. 					     					

(ಆರ್.ಎನ್.ಐ.)