ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಲಿ 2
ಮಾಲಿ 2
ಪಶ್ಚಿಮ ಆಫ್ರಿಕದ ಒಂದು ಗಣರಾಜ್ಯ. ಉತ್ತರದಲ್ಲಿ ಆಲ್ಜೀರಿಯ, ಪಶ್ಚಿಮದಲ್ಲಿ ಮಾರಿಟೇನಿಯ ಮತ್ತು ಸೆನೆಗಾಲ್. ದಕ್ಷಿಣದಲ್ಲಿ ಗನಿ ಮತ್ತು ಐವರಿಕೋಸ್ಟ್ ಹಾಗೂ ಪೂರ್ವದಲ್ಲಿ ಅಪ್ಪರ್ ವೋಲ್ಟಾ ಮತ್ತು ನೈಜರ್ ರಾಜ್ಯಗಳು ಈ ದೇಶವನ್ನು ಸುತ್ತುವರಿದಿವೆ. ವಿಸ್ತೀರ್ಣ 12,40,000 ಚಕಿಮೀ. ಜನಸಂಖ್ಯೆ 74,81,000 (1983). ರಾಜಧಾನಿ ಬಮಾಕೊ.
ಭೌತಲಕ್ಷಣ : ಮಾಲಿಯ ಬಹುಭಾಗ ಸಮತಲ ಪ್ರದೇಶ. ಇಲ್ಲಿ ಪ್ರಸ್ಥಭೂಮಿ ಮತ್ತು ಬಯಲುಸೀಮೆ ಕೂಡ ಇದ್ದು ಮಧ್ಯೆ ಮಧ್ಯೆ ಕೆಲವು ಸ್ಥಳಗಳಲ್ಲಿ ಉನ್ನತ ಪ್ರದೇಶವೂ ಇದೆ. ರಾಜ್ಯದ ದಕ್ಷಿಣ ಮತ್ತು ನೈರುತ್ಯ ಭಾಗದಲ್ಲಿಯ ಪ್ರಸ್ಥಭೂಮಿಗಳು ಸಮುದ್ರಮಟ್ಟಕ್ಕೆ ಸುಮಾರು 305ರಿಂದ 488 ಮೀಟರ್ ಎತ್ತರದಲ್ಲಿವೆ. ಇವು ಫುಟಜಲನ್ ಹಾಗೂ ಗಿನಿ ಪ್ರಸ್ಥಭೂಮಿಗಳ ವಿಸ್ತರಣಾ ಭಾಗಗಳಾಗಿವೆ. ಈ ಪ್ರಸ್ಥಭೂಮಿಗಳು ಬಮಾಕೊದ ಸಮೀಪದಲ್ಲಿ ಸುಮಾರು 61ಮೀಟರು ಮತ್ತು ಸಟಡೋಗೊದ ಸಮೀಪದಲ್ಲಿ 640 ಮೀಟರ್ ಎತ್ತರವಾಗಿದ್ದು ಮರಳುಗಲ್ಲಿನಿಂದ ಕೂಡಿವೆ. ಸೆನೆಗಲ್ ಮತ್ತು ನೈಜರ್ ನದಿಗಳು ಮತ್ತು ಇದರ ಉಪನದಿಗಳು ಈ ಪ್ರಸ್ಥಭೂಮಿಯನ್ನು ಆಳವಾಗಿ ಕೊರೆದಿರುವುದರಿಂದ ಅಂಚುಗಳಲ್ಲಿ ಕಡಿದಾದ ಪ್ರಪಾತಗಳು ಮತ್ತು ಜಲಪಾತಗಳು ಉಂಟಾಗಿವೆ. ಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿಯ ಪ್ರಸ್ತಭೂಮಿಗಳೂ ಸಣ್ಣ ಸಣ್ಣ ಗುಡ್ಡಗಳಿಂದ ಕೂಡಿವೆ. ಇವುಗಳ ಎತ್ತರ ಸಿಕಾಸೋ ಭಾಗದಲ್ಲಿ ಸುಮಾರು 305ಮೀಟರ್, ಮೆಂಟ್ ಮೀನಾ ಸಮೀಪದಲ್ಲಿ ಸುಮಾರು 530 ಮೀಟರ್. ನೈಜರ್ ನದಿಯ ಪೂರ್ವದಲ್ಲಿ ಇರುವ ಡೋಗನ್ ಪ್ರಸ್ಥಭೂಮಿ ಪಶ್ಚಿಮ ದಿಕ್ಕಿಗೆ ಕ್ರಮೇಣ ಇಳಿಜಾರಾಗಿದ್ದು ಆಗ್ನೇಯದಲ್ಲಿ ಕಡಿದಾದ ಶಿಖರಗಳಿಂದ ಕೂಡಿದೆ. ಬಂಡಿಯಾಗರದ ಸಮೀಪದಲ್ಲಿ ಈ ಶಿಖರಗಳು 1.005 ಮೀಟರುಗಳಷ್ಟು ಎತ್ತರವಾಗಿವೆ. ಉತ್ತರದಲ್ಲಿರುವ ಷಹರ ಮರುಭೂಮಿಯ ಹೊಗ್ಗಾರ್ ಪರ್ವತ ಪ್ರದೇಶದ ವಿಸ್ತರಣಾ ಭಾಗವಾದ ಅಡ್ರಾರ್ ಡೆಸ್ ಇಥೊರಸ್ 395ರಿಂದ 488 ಮೀಟರ್ ಎತ್ತರವಿದೆ.
ಮಾಲಿಯ ಉತ್ತರ ಮತ್ತು ಮಧ್ಯಭಾಗದಲ್ಲಿ ನೈಜರ್ ನದಿಯ ಜಲಾನಯನ ಭೂಮಿ ಮತ್ತು ಸಹಾರ ಮರುಭೂಮಿ ಇವೆ. ಉತ್ತರದಲ್ಲಿರುವ ವಿಶಾಲವಾದ ಮರಳು ದಿಬ್ಬಗಳಲ್ಲಿ ಚಲಿಸುವ ಮರಳು ಪ್ರದೇಶಗಳಿವೆ. ಇವನ್ನು ಅರ್ಗ್ ಎಂದು ಕರೆಯುವರು. ಮಾಲಿಯ ಮಧ್ಯಭಾಗದಲ್ಲಿ ಮೆರಿಯೆ ಮತ್ತು ಅಜಾವೊಕ್ ಎಂಬ ಮೆಕ್ಕಲು ಮಣ್ಣಿನ ಪ್ರದೇಶಗಳಿವೆ.
ನದಿಗಳು : ಸೆನೆಗಲ್ ಮತ್ತು ನೈಜರ್ ಪ್ರಮುಖ ನದಿಗಳು. ಸೆನೆಗಲ್ ನದಿ ಫುಟಜಲನ್ ಪ್ರಸ್ಥಭೂಮಿಯಲ್ಲಿ ಹುಟ್ಟುವ ಬಾಫಿಂಗ್ ಮತ್ತು ಬಕೋಯ ನದಿಗಳ ಸಂಗಮದಿಂದ ಹುಟ್ಟಿದ್ದು. ಇದು ಮಾಲಿಯಲ್ಲಿ ಸುಮಾರು 900 ಕಿಮೀ ದೂರ ವಾಯವ್ಯ ದಿಕ್ಕಿಗೆ ಹರಿದು ಅಟ್ಲಾಂಟಿಕ್ ಸಾಗರ ಸೇರುತ್ತದೆ. ಗೊಯಿನ ಮತ್ತು ಫೆಲೊ ಎಂಬಲ್ಲಿ ಈ ನದಿಗೆ ಜಲಪಾತಗಳಿವೆ. ಕಾಯಸ್ ಮತ್ತು ಸೆನೆಗಲ್ ಗಡಿಗಳ ನಡುವೆ ಈ ನದಿಗೆ ಬಲಭಾಗದಿಂದ ಕೊಲಿಂಬೈನ್ ಮತ್ತು ಕರಾಕೊರೊ ನದಿಗಳೂ ಎಡಭಾಗದಿಂದ ಫಿಲೇಮಿ ನದಿಯೂ ಬಂದು ಸೇರುತ್ತವೆ. ಸನೆಗಲ್ ನದಿಯಲ್ಲಿ ಜುಲೆ ಮತ್ತು ಅಕ್ಟೋಬರುಗಳ ನಡುವೆ ಪ್ರವಾಹ ಹೆಚ್ಚು.
ನೈಜರ್ ನದಿ ತನ್ನ ಒಟ್ಟು ಉದ್ದದ ಸುಮಾರು ಮೂರನೆಯ ಒಂದು ಭಾಗದಷ್ಟು ಅಂದರೆ 1,626 ಕಿಮೀ ದೂರ ಮಾಲಿ ಪ್ರದೇಶದಲ್ಲೇ ಹರಿಯುತ್ತದೆ. ಈ ನದಿ ಫುಟಜಲನ್‍ನಲ್ಲಿ ಹುಟ್ಟಿ ಬನನ್‍ಕೊರೊ ಬಳಿ ಮಾಲಿಯನ್ನು ಪ್ರವೇಶಿಸಿ ಮಾಂಡಿಂಗ್ ಪ್ರಸ್ಥಭೂಮಿಯ ಮೂಲಕ ಈಶಾನ್ಯಕ್ಕೆ ಹರಿಯುತ್ತದೆ. ಸೊಟುಬಾ ಎಂಬಲ್ಲಿ ಈ ನದಿಗೆ ಜಲಪಾತಗಳಿವೆ. ಕಾಲಿಕೊರೊವನ್ನು ಸೇರಿದಮೇಲೆ ಇದು ವಿಸ್ತಾರವಾದ ಕಣಿವೆಯಲ್ಲಿ ಹರಡಿ ಮಾಪ್ತಿ ಎಂಬಲ್ಲಿ ಬಾನಿಫಿಂಗ್ ನದಿಯನ್ನು ಸೇರುತ್ತದೆ. ಇಲ್ಲಿ ಭೂಮಿ ಸಮತಲವಾಗಿರುವುದರಿಂದ ನದೀ ಮುಖಜಭೂಮಿ ರೂಪುಗೊಂಡಿದೆ. ಇಲ್ಲಿ ನದಿ ಅನೇಕ ಶಾಖೆಗಳಾಗಿ ವಿಭಾಗವಾಗಿ ಡೆಬೋ ಫಾಟಿ, ಟೆಲೆ ಮತ್ತು ಫಾಗ್ಯುಬೈನ್ ಮುಂತಾದ ಸರೋವರಗಳುಂಟಾಗಿವೆ. ಈ ಪ್ರದೇಶದಲ್ಲಿ ಮೆಕ್ಕಲುಮಣ್ಣಿನ ಭೂಮಿಯಿರುವುದರಿಂದ ಇದು ಪ್ರಮುಖ ವ್ಯವಸಾಯ ಪ್ರದೇಶವೂ ಆಗಿದೆ.
ಮಾಲಿ ರಾಜ್ಯದ ಅಧಿಕ ಭಾಗ ಫಲವತ್ತಾಗಿಲ್ಲ. ದೇಶದ ಹೆಚ್ಚಿನ ಭಾಗ ಸಹರ ಮರುಭೂಮಿಯನ್ನೊಳಗೊಂಡಿದ್ದು ಅಲೆಮಾರಿಗಳಿಗೆ ಆಶ್ರಯ ನೀಡಿದೆ. ಮಾಲಿಯ ದಕ್ಷಿಣಭಾಗದ ಭೂಪ್ರದೇಶ ಕಬ್ಬಿಣ ಅಂಶದಿಂದ ಕೂಡಿದ್ದು ಬಾಷ್ಪೀಕರಣದ ಕಾರಣದಿಂದ ಗಟ್ಟಿಯಾದ ಕೆಂಪು ಪದರವಾಗಿದೆ. ಸಹರದ ಸಮೀಪದ ಭಾಗದಲ್ಲಿ ನೀರಿನ ಕೊರತೆಯಿಂದ ಭೂಮಿ ಗಟ್ಟಿ ಪದರವಾಗಿ ರೂಪುಗೊಂಡಿಲ್ಲ. ಮರುಭೂಮಿಯ ಪ್ರದೇಶ ಮರಳು, ಬಂಡೆ ಹಾಗೂ ಗ್ರಾವೆಲ್‍ಗಳಿಂದ ಕೂಡಿದೆ.
ವಾಯುಗುಣ : ಇಲ್ಲಿಯದು ಉಷ್ಣವಲಯದ ವಾಯುಗುಣ. ಶುಷ್ಕ ವಾತಾವರಣ ಮತ್ತು ಸೆಕೆಯಿಂದ ಕೂಡಿದೆ. ನವೆಂಬರ್‍ನಿಂದ ಜೂನ್ ತನಕ ಒಳ ಹವೆಯಿದ್ದು ವಾಯುವಿನಲ್ಲಿ ಅತಿ ಕಡಿಮೆ ತೇವಾಂಶ ಮತ್ತು ಹೆಚ್ಚು ಉಷ್ಣತೆ ಇರುವುದು. ಈ ಕಾಲದಲ್ಲಿ ಅಲೈಟ್ ಮತ್ತು ಹರ್‍ಮಟನ್ ಮಾರುತಗಳು ಬೀಸುತ್ತವೆ. ಜೂನ್‍ನಿಂದ ಅಕ್ಟೋಬರ್ ತನಕ ನೈಋತ್ಯ ಮಾನ್‍ಸೂನ್ ಮಾರುತದಿಂದ ಮಳೆ ಆಗುತ್ತದೆ.
ವಾಯುಗುಣದ ಆಧಾರದ ಮೇಲೆ ಈ ದೇಶವನ್ನು ಸುಡಾನಿಕ್, ಸಹೇಲಿಯನ್ ಮತ್ತು ಮರುಭೂಮಿ ಪ್ರದೇಶವೆಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಸುಮಾರು 1/3 ಭಾಗದಲ್ಲಿ ಸುಡಾನಿಕ್ ವಾಯುಗುಣವಿದ್ದು ಸರಾಸರಿ ಉಷ್ಣತೆ 24oಅ-30oಅ ಇರುತ್ತದೆ. ಇಲ್ಲಿಯ ವಾರ್ಷಿಕ ಮಳೆ 508ರಿಂದ 1295 ಮೀಮೀ. ಸಹರದ ಅಂಚಿನ ಭಾಗದಲ್ಲಿ ಸಹೇಲಿಯನ್ ವಾಯುಗುಣವಿದ್ದು ಇಲ್ಲಿಯ ಸರಾಸರಿ ಉಷ್ಣತೆ 23oಅ-36oಅ ಮತ್ತು ವಾರ್ಷಿಕ ಮಳೆ 203ರಿಂದ 508 ಮಿಮೀ. ಸಹರ ಪ್ರದೇಶದಲ್ಲಿ ಮರುಭೂಮಿ ವಾಯುಗುಣವಿದ್ದು ಹಗಲಿನಲ್ಲಿ 47oಅ-60oಅ ಮತ್ತು ರಾತ್ರಿಯಲ್ಲಿ 4oಅ-5oಅ ಉಷ್ಣತೆ ಇರುತ್ತದೆ. ವಾರ್ಷಿಕ ಮಳೆ 178 ಮಿಮೀ ಗಳಿಗೂ ಕಡಿಮೆಯಿದ್ದು ಅನೇಕ ವರ್ಷಗಳಲ್ಲಿ ಮಳೆಯಾಗುವುದೇ ಇಲ್ಲ.
ಸಸ್ಯ ಮತ್ತು ಪ್ರಾಣಿಜೀವನ : ಸುಡಾನಿಕೆ ವಾಯುಗುಣವಿರುವ ಪ್ರದೇಶದಲ್ಲಿ ಮಾಲಿ ಮತ್ತು ಗಿನಿ ಮಧ್ಯದ ಗಡಿ ಪ್ರದೇಶದ ಉದ್ದಕ್ಕೂ ಹಾಗೂ ನದಿಗಳ ಕಣಿವೆಯಲ್ಲೂ ಕಾಡುಗಳಿವೆ. ಉಳಿದ ಭಾಗಗಳಲ್ಲಿ ಸವನ್ನಾ ಹುಲ್ಲುಗಾವಲಿದ್ದು ಕೆಲವು ಕಡೆ ಮರಗಳನ್ನು ಕಾಣಬಹುದು. ಸುಡಾನಿಕ್ ಭಾಗದಿಂದ ಉತ್ತರಕ್ಕೆ ಬಂದಂತೆಲ್ಲ ಮರಗಿಡಗಳ ಸಂಖ್ಯೆ ಕಡಿಮೆಯಾಗುತ್ತದೆ. ಸಹೇಲ್ ಭಾಗ ಬೆಂಗಾಡು ಪ್ರದೇಶವಾಗಿದ್ದು ಶುಷ್ಕ ವಾತಾವರಣದಲ್ಲಿ ಬೆಳೆಯುವ ಬಾಒಬ್ಯಾಬ್ ಹಾಗೂ ತಾಳೆ ಜಾತಿಯ ಮರ ಮುಂತಾದವನ್ನು ಕಾಣಬಹುದು. ಉತ್ತರ ಭಾಗದಲ್ಲಿ ಸಣ್ಣ ಮುಳ್ಳಿನಿಂದ ಕೂಡಿದ ಅಕೇಷಿಯ, ಮಿಮೊಸಾ ಮುಂತಾದ ಸಸ್ಯಗಳಿವೆ. ಸಹಾರ ಪ್ರದೇಶಕ್ಕೆ ಬಂದಂತೆ ಎಲ್ಲ ಬಗೆಯ ಸಸ್ಯಗಳೂ ಕಾಣದಾಗುತ್ತವೆ.
ಮಾಲಿಯಲ್ಲಿ ಕಾಣಬರುವ ಪ್ರಾಣಿವರ್ಗ ವೈವಿಧ್ಯಪೂರ್ಣವಾಗಿದೆ. ಜಿಂಕೆ ಜಾತಿಗೆ ಸೇರಿದ ಗಸೆóಲ್, ಜಿರಾಫೆ, ಆನೆ, ಜಿಂಕೆ ಮೊದಲಾದ ಸಸ್ಯಾಹಾರಿ ಪ್ರಾಣಿಗಳನ್ನೂ ಸಿಂಹ, ಚಿರತೆ, ಕತ್ತೆಕಿರುಬ ಮುಂತಾದ ಮಾಂಸಾಹಾರಿ ಪ್ರಾಣಿಗಳನ್ನೂ ಸೂಡಾನ್ ಮತ್ತು ಸಹೇಲ್ ಪ್ರದೇಶಗಳಲ್ಲಿ ಕಾಣಬಹುದು. ಇಲ್ಲಿಯ ನದಿಗಳಲ್ಲಿ ಮೊಸಳೆ, ನೀರಾನೆ ಮುಂತಾದವು ಇವೆ. ಪಶ್ಚಿಮದಲ್ಲಿ ಬಾಲೆ ನದಿಯ ದಂಡೆಯುದ್ದಕ್ಕೂ ರಾಷ್ಟ್ರೀಯ ಉದ್ಯಾನವಿದೆ. ಇದೇ ರೀತಿ ಪೂರ್ವದಲ್ಲಿ ಅನಸೋಂಗೊ ಮತ್ತು ಮೆನಾಕೊಗಳ ನಡುವೆ ಪ್ರಾಣಿಗಳ ಅಭಯಧಾಮವಿದೆ.
ಜನಜೀವನ : ಮಾಲಿ ಗಣರಾಜ್ಯದ ಸಹೇಲ್ ಮತ್ತು ಸಹಾರ ಭಾಗಗಳಲ್ಲಿ ಅಲೆಮಾರಿ ಪಂಗಡದವರೂ ಸುಡಾನಿಕ್ ಭಾಗದಲ್ಲಿ ವ್ಯವಸಾಯವನ್ನೇ ಅವಲಂಬಿಸಿರುವ ಜನರೂ ಇದ್ದಾರೆ. ಜನಸಂಖ್ಯೆ ಸುಮಾರು ಶೇಕಡಾ 83ರಷ್ಟು ಮಂದಿ ಗ್ರಾಮನಿವಾಸಿಗಳು. ಇವರು ಸುಮಾರು 150ರಿಂದ 600 ಜನಸಂಖ್ಯೆಯಿರುವ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಈ ಹಳ್ಳಿಗಳ ಸುತ್ತಲೂ ವ್ಯವಸಾಯಯೋಗ್ಯ ಭೂಮಿ ಮತ್ತು ಹುಲ್ಲುಗಾವಲುಗಳಿವೆ. ಹಳೆಯ ಪಟ್ಟಣಗಳಾದ ಜಿನ್ನೆ, ಗಾವೊ, ಸೆಗೂ ಮತ್ತು ಟಿಂಬಕ್ಟುಗಳನ್ನು ಸಂಪ್ರದಾಯಿಕ ಸುಡಾನೀ ವಾಸ್ತುಶಿಲ್ಪದ ಪ್ರಕಾರ ಕಟ್ಟಲಾಗಿದೆ. ಬಮಾಕೊ, ಕಾಯೆಸ್, ಸಾನ್, ಕಾಟಿ ಮೊದಲಾದ ಪಟ್ಟಣಗಳಲ್ಲಿ ಆಧುನಿಕ ಕಟ್ಟಡಗಳನ್ನು ಕಟ್ಟಿದ್ದಾರೆ.
ಇಲ್ತಿ ಶ್ವೇತವರ್ಣೀಯರೆಂದು ಕರೆಯಲಾಗುವ ಪಂಗಡಗಳಲ್ಲಿ ಬರ್ಬರ್ ಮತ್ತು ಅರಬ್ಬೀ ಮೂಲದ ಮೂರ್‍ಗಳು ಸಹೇಲಿಯನ್ ಪ್ರದೇಶದಲ್ಲಿ ಮತ್ತು ನೈಜರ್ ಬೆಂಡ್‍ನ ಉತ್ತರಭಾಗದಲ್ಲಿ ವಾಸಿಸುತ್ತಾರೆ. ಕಪ್ಪು ಜನರಲ್ಲಿ ಅನೇಕ ವ್ಯವಸಾಯ ಪ್ರಧಾನವಾದ ಪಂಗಡಗಳಿದ್ದು ಅವುಗಳಲ್ಲಿ ಅತಿ ದೊಡ್ಡದು ನೈಜರ್ ನದಿಯ ಮೇಲ್ಭಾಗದಲ್ಲಿ ವಾಸಿಸುವ ಮಾಲಿಂಕೆ, ನೈಜರ್ ಕಣಿವೆಯಲ್ಲಿಯ ಸೊಂಘೈ, ಬಂಡಿಯಾಗರಾದ ಸುತ್ತಮುತ್ತ ವಾಸಿಸುವ ಡಾಗನಾನ್, ಪೂರ್ವ ಮತ್ತು ಆಗ್ನೇಯ ಭಾಗದಲ್ಲಿಯ ಬೊಬೊ, ಸೆನ್‍ಫೊ ಮತ್ತು ಮಿನಿಯಾನ್‍ಕಾ ಸಹೇಲ್ ಮ್ಯಾಸಿನಾಗಳಲ್ಲಿ ಫುಲಾನಿ ಅಥವಾ ಪಿಯಾಲ್ ಎಂಬ ಅಲೆಮಾರಿ ಪಂಗಡದವರಿದ್ದಾರೆ. ಇತರ ಪಂಗಡಗಳು ಟುಕುಲೋರ್ಸ್, ಕಸೋನೈ, ಬೋಜೋ ಮತ್ತು ಸೊಮೊನೋ.
ಮಾಲಿಯಲ್ಲಿ ಮೂರು ಪ್ರಮುಖ ಧರ್ಮಗಳಿವೆ. ಈ ದೇಶವನ್ನು 11ನೆಯ ಶತಮಾನದಲ್ಲಿ ಪ್ರವೇಶಿಸಿದ ಇಸ್ಲಾಮ್ ಧರ್ಮದ ಅನುಯಾಯಿಗಳ ಪೈಕಿ ಶೇಕಡಾ 65ರಷ್ಟು ಮಂದಿ ಸರ್ವಚೇತನವಾದಿಗಳು ಮತ್ತು ಶೇಕಡಾ 30ರಷ್ಟು ಮಂದಿ ಸಾಂಪ್ರದಾಯಿಕ ಆಚರಣೆಯಲ್ಲಿ ನಂಬಿಕೆಯಿಟ್ಟಿರುವರು. ಉಳಿದವರು ಕ್ರೈಸ್ತ ಧರ್ಮಾನುಯಾಯಿಗಳು.
ಮಾಲಿದೇಶದ ಅರ್ಧಕ್ಕೂ ಹೆಚ್ಚು ಭಾಗ ಜನವಸತಿಯಿಲ್ಲದ ಮರಳುಗಾಡುಪ್ರದೇಶ. ನೈಜರ್ ನದೀ ಕಣಿವೆಯಲ್ಲಿ ಜನಸಾಂದ್ರತೆ ಚಕಿಮೀಗೆ 15.12 ರಿಂದ 25.13. ಪಶ್ಚಿಮ ಮತ್ತು ಪೂರ್ವಭಾಗದಲ್ಲಿ ಚಕಿಮೀಗೆ 8.91 ಇದೆ. ಅತಿ ಕಡಿಮೆ ಜನಸಾಂದ್ರತೆ ಇರುವುದು ಟಿಂಬಕ್ಟೂವಿನಲ್ಲಿ-ಚಕಿಮೀಗೆ ಕೇವಲ 1.16. ಇಲ್ಲಿ ಜನಸಂಖ್ಯೆ 1969ರಲ್ಲಿ 19,29,000 ಇದ್ದು 1976ರಲ್ಲಿ 65,24,650 ಇತ್ತು. ಅತ್ಯಂತ ದೊಡ್ಡ ಪಟ್ಟಣ ಬಮಾಕೊ. ಜನಸಂಖ್ಯೆ 4,04,000 (1976). ಇತರ ಪ್ರಮುಖ ಪಟ್ಟಣಗಳೆಂದರೆ ಸೆಗಾನ್, ಮಾಪ್ತಿ, ಸಿಕಾಸೋ ಮತ್ತು ಕಾಯೆಸ್. ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಜನ ಸತತವಾಗಿ ವಲಸೆ ಬರುತ್ತಿದ್ದಾರೆ. ಮಾಲಿಯ ಹೆಚ್ಚು ಕೆಲಸಗಾರರು ಅದರಲ್ಲೂ ಸೋನಿಂಕೆ ಪಂಗಡದವರು ಫ್ರಾನ್ಸ್ ಮತ್ತು ಯೂರೋಪಿನ ಇತರ ದೇಶಗಳಿಗೆ ವಲಸೆ ಹೋಗಿದ್ದಾರೆ. ಮಾಲಿದೇಶದ ವ್ಯಾಪಾರಸ್ಥರು ಐವರಿ ಕೋಸ್ಟ್, ಲೈಬೀರಿಯ ಮತ್ತು ಮಧ್ಯ ಆಫ್ರಿಕದಲ್ಲಿ ನೆಲಸಿದ್ದಾರೆ.
ಭಾಷೆ : ಮಾಲಿಯ ಅಧಿಕೃತ ಭಾಷೆ ಫ್ರೆಂಚ್. ಇದಲ್ಲದೆ ಇಲ್ಲಿ ಅನೇಕ ಸ್ಥಳೀಯ ಹಾಗೂ ಆಡುಭಾಷೆಗಳಿವೆ. ಇವುಗಳ ಪೈಕಿ ಮುಖ್ಯವಾದವು ಬಾಂಬಾರ, ಫುಲ್ ಆಲ್ಡೆ, ಮಾಲಿಂಕೆ, ಕಾಸೊನ್ಕೆ ಮತ್ತು ವಾಸುಲುಂಕಾ. ಮೂರ್ ಜನವರ್ಗ ಅರಾಬಿಕ್ ಭಾಷೆ ಮಾತನಾಡುತ್ತಾರೆ.
ಆರ್ಥಿಕತೆ : ನೈಸರ್ಗಿಕ ಸಂಪತ್ತಿನ ದೃಷ್ಟಿಯಿಂದ ಮಾಲಿ ಬಡದೇಶ. ದೇಶದ ಬಹುಭಾಗ ಸಹರ ಮರುಭೂಮಿಯಾಗಿದ್ದು ಅಲೆಮಾರಿ ಪಂಗಡಗಳು ಅಲ್ಲಿ ವಾಸಿಸುತ್ತವೆ. ಜನಸಂಖ್ಯೆಯಲ್ಲಿ ಶೇಕಡಾ 90ರಷ್ಟು ಮಂದಿ ವ್ಯವಸಾಯದಲ್ಲಿ ನಿರತರು. ಸುಡಾನಿ ಮತ್ತು ಸಹೇಲಿಯನ್ ವ್ಯವಸಾಯ ಪ್ರದೇಶಗಳು. ಇವುಗಳಲ್ಲಿ ಅತ್ಯಂತ ಪ್ರಮುಖ ಪ್ರದೇಶ ನೈಜರ್ ನದೀ ಮುಖಜಭೂಮಿ. ಇಲ್ಲಿಯ ಪ್ರಮುಖ ಬೆಳೆಗಳು ಮಿಲೆಟ್, ಬತ್ತ, ಗೋದಿ, ಮುಸುಕಿನ ಜೋಳ, ಆಲೂಗೆಡ್ಡೆ ಮತ್ತು ಮರಗೆಣಸು. ಹತ್ತಿ ಮತ್ತು ಕಡಲೆಕಾಯಿ ಆರ್ಥಿಕ ಬೆಳೆಗಳು. ಇವಲ್ಲದೆ ಕಬ್ಬು, ಹೊಗೆಸೊಪ್ಪು ಮತ್ತು ಟೀ ಬೆಳೆಯಲಾಗುತ್ತಿದೆ. ಪಶುಪಾಲನೆ ಇಲ್ಲಿಯ ಪ್ರಮುಖ ಕಸಬುಗಳಲ್ಲೊಂದು. 1968-74ರ ತೀವ್ರ ಕ್ಷಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳು ಸತ್ತವು. ಇಲ್ಲಿಯ ನದಿಗಳಲ್ಲಿ ಹೇರಳವಾಗಿ ಮೀನು ಸಿಕ್ಕುತ್ತವೆ. ಇದರಲ್ಲಿ ಶೇಕಡಾ 20 ಭಾಗದಷ್ಟು ಮೀನನ್ನು ಪರಿಷ್ಕರಿಸಿ ವಿದೇಶಗಳಿಗೆ ರಫ್ತು ಮಾಡುತ್ತಾರೆ.
ಕೈಗಾರಿಕೆಗಳಲ್ಲಿ ಮಾಲಿ ಹಿಂದುಳಿದ ದೇಶ. ಇಲ್ಲಿಯ ಮುಖ್ಯ ಕೈಗಾರಿಕೆಗಳೆಂದರೆ ಆಹಾರ ಸಂಸ್ಕರಣೆ, ಹತ್ತಿ, ತೊಗಲು ಮತ್ತು ಉಣ್ಣೆ ಇವುಗಳಿಗೆ ಸಂಬಂಧಿಸಿದುವು. ಇಲ್ಲಿ ಹಳೆಯ ಉಪ್ಪಿನ ಗಣಿಗಳಿವೆ. ಜೊತೆಗೆ ಸಣ್ಣ ಪ್ರಮಾಣದಲ್ಲಿ ಫಾಸ್ಫೇಟ್, ಚಿನ್ನ ಮತ್ತು ಯುರೇನಿಯಮ್ ಸಿಗುವ ಗಣಿಗಳಿವೆ. ಲಿಥಿಯಮ್, ವಜ್ರ, ಪೆಟ್ರೋಲಿಯಮ್, ಬಾಕ್ಸೈಟ್, ಕಬ್ಬಿಣ ಮತ್ತು ಮ್ಯಾಂಗನೀಸ್ ನಿಕ್ಷೇಪಗಳಿವೆ. ಬಟ್ಟೆ, ಕುಂಬಾರಗೆಲಸ, ಪಾದರಕ್ಷೆ, ಬುಟ್ಟಿಗಳು ಮತ್ತು ಮರದ ಕೆತ್ತನೆಯ ಸಾಮಾನುಗಳ ತಯಾರಿಕೆಗಳು ಇಲ್ಲಿಯ ಕೈಕಸಬುಗಳು..
ಮಾಲಿಯಿಂದ ಹತ್ತಿ, ಕಡಲೆಕಾಯಿ, ಜೀವಂತ ಪ್ರಾಣಿಗಳು. ಒಣಮೀನು ಮುಂತಾದವನ್ನು ಐವರಿಕೋಸ್ಟ್, ಸೆನೆಗಲ್ ಮತ್ತು ಫ್ರಾನ್ಸ್‍ಗೆ ಕಳುಹಿಸುತ್ತಾರೆ. ಚೀನ, ರಷ್ಯ ಮತ್ತು ಫ್ರಾನ್ಸ್‍ಗಳಿಂದ ಇದಕ್ಕೆ ಸಹಾಯದೊರಕುತ್ತಿದೆ. ಆದರೂ ಪ್ರಪಂಚದ ಬಡರಾಷ್ಟ್ರಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗಿದೆ. ಮಾಲಿಯ ಮುಖ್ಯ ಸಮಸ್ಯೆಯೆಂದರೆ ರಾಷ್ಟ್ರೀಯ ಸಾಲ. ರಫ್ತಿಗಿಂತ ಆಮದೇ ಹೆಚ್ಚಾಗಿದ್ದು ಕೃಷಿ ಪದಾರ್ಥಗಳ ರಫ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಬೆಲೆಯ ಏರಿಳಿತಗಳನ್ನು ಅವಲಂಬಿಸಿದೆ. ವಿಶ್ವಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳು ಧನಸಹಾಯ ನೀಡುತ್ತಿವೆ. ಮಾಲಿಯ ಆರ್ಥಿಕ ಅಭಿವೃದ್ಧಿಗಾಗಿ ಕೃಷಿ ಉತ್ಪಾದನೆಯ ಹೆಚ್ಚಳ, ಸಣ್ಣ ಕೈಗಾರಿಕೆಗಳ ಸ್ಥಾಪನೆ ಇವುಗಳಿಗೆ ಆದ್ಯತೆ ನೀಡಲಾಗುತ್ತಿದೆ. 1967ರಲ್ಲಿ ಮಾಲಿ ಫ್ರೆಂಚ್ ಫ್ರಾಂಕ್ ವಲಯಕ್ಕೆ ಸೇರಿದಾಗಿನಿಂದ ಫ್ರೆಂಚ್ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಈ ದೇಶದಲ್ಲಿ ಆಸಕ್ತಿವಹಿಸಿದ್ದಾರೆ.
ಸಾರಿಗೆ : ಸೆನೆಗಲ್ ಮತ್ತು ನೈಜರ್ ನದಿಗಳು ಮಾಲಿಯಲ್ಲಿ ಒಟ್ಟು 2,526 ಕಿಮೀ ದೂರ ಹರಿಯುತ್ತವೆ. ಇವುಗಳಲ್ಲಿ ನೌಕಾಯಾನಕ್ಕೆ ಅನುಕೂಲವಿದೆ. ಇದು ದೇಶದ ಅತಿಮುಖ್ಯ ಸಾರಿಗೆ ಜಾಲಗಳಲ್ಲೊಂದು. ಕಾಲಿಕೊರೊವಿನಿಂದ ಬಮಾಕೋ ಮೂಲಕ ಡಕಾರ್‍ಗೆ ಹೋಗುವ 640 ಕಿಮೀ ದೂರದ ಒಂದು ರೈಲು ಮಾರ್ಗವಿದೆ. ದೇಶದಲ್ಲಿ ಒಟ್ಟು 18,000 ಕಿಮೀ ಉದ್ದ ರಸ್ತೆಗಳಿದ್ದು ಅವುಗಳಲ್ಲಿ 7,500 ಕಿಮೀ ರಸ್ತೆಗಳನ್ನು ಎಲ್ಲ ಕಾಲಗಳಲ್ಲೂ ಉಪಯೋಗಿಸಬಹುದಾಗಿದೆ. ದೇಶದ ಅತಿ ಮುಖ್ಯ ವ್ಯಾಪಾರಿ ಮಾರ್ಗವಾದ 556 ಕಿಮೀ ಉದ್ದದ ಸಹರನ್ ರಸ್ತೆ ಮಾಲಿಯ ಗಾವೊದಿಂದ ಆಫ್ರಿಕದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಏರ್‍ಮಾಲಿ ರಾಷ್ಟ್ರೀಯ ವಾಯುಮಾನ ಸಂಸ್ಥೆ ದೇಶದಲ್ಲಿ ವಾಯುಯಾನ ಸೌಲಭ್ಯ ಕಲ್ಪಿಸಿದೆ.
ಆಡಳಿತ : 1895ರಿಂದ 1959ರ ತನಕ ಇದಕ್ಕೆ ಫ್ರೆಂಚ್ ಸೂಡಾನ್ ಎಂದು ಕರೆಯಲಾಗುತ್ತಿತ್ತು. ಏಪ್ರಿಲ್ 1959ರಲ್ಲಿ ಇದು ಸೆನೆಗಲ್‍ನೊಂದಿಗೆ ಸೇರಿ ಮಾಲಿ ಫೆಡರೇಷನ್ ಸ್ಥಾಪನೆಯಾಗಿ ಜೂನ್ 1960ರಲ್ಲಿ ಸ್ವತಂತ್ರವಾಯಿತು. ಎರಡುತಿಂಗಳ ಅನಂತರ ಸೆನೆಗಲ್ ಪ್ರತ್ಯೇಕವಾಗಿ ಫೆಡರೇಷನ್ನಿನ ಉಳಿದಭಾಗ 1960 ಸೆಪ್ಟೆಂಬರ್ 22ರಂದು ಮಾಲಿ ಗಣರಾಜ್ಯವಾಯಿತು. 1968ರಲ್ಲಿ ಮಿಲಿಟರಿ ಕ್ರಾಂತಿಯಾಗಿ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. ಮಾಲಿಯ ಆಡಳಿತದ ಹೊಣೆಯನ್ನು ಮಿಲಿಟರಿ ಕಮಿಟಿ ಆಫ್ ನ್ಯಾಷನಲ್ ಲಿಬರೇಷನ್ ವಹಿಸಿಕೊಂಡಿತು. 1974 ಜೂನಿನಲ್ಲಿ ಪ್ರಜಾಭಿಮತದ ಆಧಾರದ ಮೇಲೆ ಹೊಸ ರಾಜ್ಯಾಂಗವನ್ನು ರೂಪಿಸಿ 1979 ಜೂನಿನಲ್ಲಿ ಜಾರಿಗೆ ತರಲಾಯಿತು. ಇದರ ಪ್ರಕಾರ ರಾಷ್ಟ್ರದ ಅಧ್ಯಕ್ಷರನ್ನು ಆರು ವರ್ಷಗಳ ಅವಧಿಗೆ ವಯಸ್ಕ ಮತದಾನ ಪದ್ಧತಿ ಮೇಲೆ ಆರಿಸಲಾಗುತ್ತದೆ. ದೇಶದಲ್ಲಿ ಒಂದೇ ರಾಜಕೀಯ ಪಕ್ಷವಿದ್ದು ರಾಷ್ಟ್ರೀಯ ಅಸೆಂಬ್ಲಿಗೆ 82 ಸದಸ್ಯರನ್ನು ಈ ರಾಜಕೀಯ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಿಂದ ಆರಿಸಲಾಗುತ್ತದೆ. 1981ರಲ್ಲಿ ರಾಜ್ಯಾಂಗವನ್ನು ತಿದ್ದುಪಡಿಮಾಡಿ ರಾಷ್ಟ್ರೀಯ ಅಸೆಂಬ್ಲಿಯ ಅವಧಿಯನ್ನು 3 ವರ್ಷಗಳಿಗೆ ಇಳಿಸಲಾಯಿತು. ಮಾಲಿಯನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದ್ದು ದೇಶದಲ್ಲಿ ಒಟ್ಟು 42 ಜಿಲ್ಲೆಗಳೂ ಮತ್ತು 224 ವಾರ್ಡ್‍ಗಳೂ ಇವೆ. ಎಲ್ಲ ಸ್ಥಳೀಯ ಅಧಿಕಾರಿಗಳನ್ನೂ ಕೇಂದ್ರ ಸರ್ಕಾರವೇ ನೇಮಿಸುತ್ತದೆ.
(ಜೆ.ಎಸ್.ಎಸ್.)