ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಸ್ಕೊ

ವಿಕಿಸೋರ್ಸ್ದಿಂದ

ಮಾಸ್ಕೊ ರಷ್ಯ ಗಣರಾಜ್ಯದ ದೊಡ್ಡ ನಗರ ಹಾಗೂ ರಾಜಧಾನಿ ಐರೋಪ್ಯ ನಗರಗಳಲ್ಲಿ ಲಂಡನ್ನಿನ ಅನಂತರ ಇದೇ ದೊಡ್ಡದಾದ ಮತ್ತು ಪ್ರಪಂಚದ ಆರನೆಯ ಅತಿ ದೊಡ್ಡ ನಗರ. ಓಕಾ ಮತ್ತು ವೋಲ್ಗಾ ನದಿಗಳ ಸಂಗಮದ ಬಳಿ ಉ. ಅ. 550 45 ಮತ್ತು ಪೂ. ರೇ. 370 35 ಮೇಲೆ ಇದೆ. ಐರೋಪ್ಯ ರಷ್ಯದ ಉತ್ತರ ಮಧ್ಯಭಾಗದಲ್ಲಿರುವ ಮಾಸ್ಕೊ ಲೆನಿನ್‍ಗ್ರಾದಿನ ಆಗ್ನೇಯಕ್ಕೆ ಸುಮಾರು 640ಕಿ ಮೀ ದೂರದಲ್ಲಿದೆ. ವಿಸ್ತೀರ್ಣ 879ಚ.ಕಿ.ಮೀ. ಮಾಸ್ಕೊ ಕೇಂದ್ರ ನಗರ ಜನಸಂಖ್ಯೆ 8801,000. ಮಹಾನಗರದ ಜನಸಂಖ್ಯೆ 896700. ಹೆಚ್ಚು ಅಭಿವೃದ್ಧಿಗೊಂಡಿರುವ ಮಧ್ಯ ಕೈಗಾರಿಕಾ ವಲಯದಲ್ಲಿರುವ ಈ ನಗರ ರಷ್ಯದ ಸಮತಟ್ಟಿನ ಮೈದಾನ ಪ್ರದೇಶದಲ್ಲಿದೆ. ಮಾಸ್ಕೊ ಸಮುದ್ರ ಪಾತಳಿಯಿಂದ ಸುಮಾರು 120 ಮೀಟರ್ ಎತ್ತರದಲ್ಲಿದೆ. ಸ್ಟೇಪ್ ವಿಶ್ವವಿದ್ಯಾಲಯದ ಹೊಸ ಕಟ್ಟಡಗಳಿರುವ ಇಲ್ಲಿಯ ಲೆನಿನ್ ಹಿಲ್ಸ್ ಪ್ರದೇಶವೇ ಅತಿ ಉನ್ನತವಾದದು (202.6 ಮೀಟರ್) ಈ ನಗರವನ್ನು 1,725 ಚಕಿಮೀ ವಿಸ್ತೀರ್ಣದ ಅರಣ್ಯ ಮತ್ತು ಉದ್ಯಾನಗಳ ಪಟ್ಟಿಸುತ್ತುವರಿದಿದೆ.

ಮಾಸ್ಕೊ ನಗರವನ್ನು ಒಂದು ದೊಡ್ಡ ಗಾಲಿಯ ಆಕಾರದಲ್ಲಿ ರಚಿಸಲಾಗಿದೆ. ಅನೇಕ ವಿಶಾಲ ಬೀದಿಗಳಿವೆ. ಮಾಸ್ಕೊ ನದಿ ನಗರದೊಳಗೆ ಹರಿಯುತ್ತದೆ. ಇಲ್ಲಿಯದು ಅಟ್ಲಾಂಟಿಕ ಮೂಲದ ಪಶ್ಚಿಮ ಖಂಡೀಯ ಹವಾಗುಣ, ವರ್ಷದಲ್ಲಿ ಸುಮಾರು 600 ಮಿಲಿಮೀಟರ್ ಮಳೆ ಬೀಳುತ್ತದೆ. ಹೆಚ್ಚು ಬಿಸಿಲುಕಾಯದ ಜುಲೈ ಮತ್ತು ಆಗಸ್ಟ್ ಹೆಚ್ಚುಮಳೆ ಬೀಳುವ ತಿಂಗಳುಗಳು. ಅಕ್ಟೋಬರ್ ತಿಂಗಳ ಅಂತ್ಯದಿಂದ ಏಪ್ರಿಲ್ ತಿಂಗಳ ಆದಿಯ ತನಕ ನೆಲ ಹಿಮಾಚ್ಛಾದಿತವಾಗಿರುತ್ತದೆ. ಆಗ ಯಾಂತ್ರಿಕ ಸಾಧನಗಳ ಹಾಗೂ ಕೈ ದುಡಿಮೆಗಾರರ ದೊಡ್ಡ ತಂಡ ಹಿಮಗುಡಿಸಿ ರಸ್ತೆಗಳನ್ನು ಸಂಚಾರಯೋಗ್ಯವಾಗಿ ಮಾಡುವುದು. ಚಳಿಗಾಲ ದೀರ್ಘ. ಡಿಸೆಂಬರ್ ಜನವರಿ ತಿಂಗಳುಗಳಲ್ಲಿ 9 ಗಂಟೆಗೆ ಸೂರ್ಯೋದಯವಾಗಿ 2-30ಕ್ಕೆ ಸೂರ್ಯಾಸ್ತವಾಗುವುದುಂಟು. ಪ್ರಕಾಶ ಹೆಚ್ಚು ಕಾಲ ಇರುವ ಬೇಸುಗೆಯ ದಿನಗಳು ಹಿತವಾಗಿರುವುವು. ವಾರ್ಷಿಕ ಮಧ್ಯ ಉಷ್ಣತೆ 4.40ಅ. ಅತ್ಯಧಿಕ ಚಳಿ ಇರುವ ಜನವರಿ ತಿಂಗಳ ಮಧ್ಯ ಉಷ್ಣತೆ 9.70ಅ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸೌಮ್ಯ ಹವೆಯಿರುತ್ತದೆ. ಬೇಸಗೆಯ ದಿನಗಳಲ್ಲಿ ಲೆನಿನ್ ಹಿಲ್ಸ್‍ನ ಪ್ರದೇಶ ಉಳಿದೆಡೆಗಿಂತ ಹೆಚ್ಚು ತಂಪಾಗಿರುತ್ತದೆ. ಡಿಸಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಹಿಮಬೀಳುವುದಾದರೂ ಒಣ ಹವೆಯಿರುತ್ತದೆ.

ಮಾಸ್ಕೊನಗರ ಇಂದು ರಷ್ಯದ ರಾಜಕೀಯ ಮತ್ತು ಆಡಳಿತದ ಮುಖ್ಯ ಕೇಂದ್ರ. ರಷ್ಯದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿ ಮತ್ತು ಸೋವಿಯತ್‍ನ ಉಚ್ಛ ರಾಜಕೀಯ ಅಧಿಕಾರಿಗಳ, ಮಂತ್ರಿಗಳ ಸಮ್ಮೇಳನದ ಮತ್ತು ಕಮ್ಯುನಿಸ್ಟ್ ಪಕ್ಷದ ಸರ್ವಸದಸ್ಯರ ಸಭೆಗಳು ಇಲ್ಲಿ ಸೇರುತ್ತವೆ. ರಷ್ಯ ಸರ್ಕಾರದ ದೈನಂದಿನ ವ್ಯವಹಾರ ಸಹ ಇಲ್ಲಿಯೇ ತೀರ್ಮಾನವಾಗಿ ಜಾರಿಗೆ ಬರುತ್ತದೆ. ಲೆನಿನ್ ಯಂಗ್ ಕಮ್ಯೂನಿಸ್ಟ್ ಲೀಗ್ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಇವೆಲ್ಲವುಗಳ ಕಾರ್ಯಾಲಯಗಳೂ ಇಲ್ಲಿವೆ.

ಈ ನಗರ ಕಚ್ಚಾ ಪದಾರ್ಥಗಳ ಮೂಲಗಳಿಗೆ ಹತ್ತಿರವಾಗಿರುವುದು. ಅಭಿವೃದ್ಧಿ ಹೊಂದಿದ ಸಾರಿಗೆ ವ್ಯವಸ್ಥೆ. ಅವಶ್ಯವಾದ ವಿದ್ಯುತ್ತಿನ ಪೂರೈಕೆ. ನುರಿತ ತಾಂತ್ರಿಕ ಸಿಬ್ಬಂದಿವರ್ಗದ ಅನುಕೂಲತೆ ಮತ್ತು ಯೋಜನೆ ಹಾಗೂ ಸಂಶೋಧನ ಕೇಂದ್ರಗಳ ವೈವಿಧ್ಯ ಇವು ಮಾಸ್ಕೋದ ಭದ್ರ ಆರ್ಥಿಕತೆಯ ಬೆಳೆವಣಿಗೆ ಸಹಾಯಕವಾಗಿವೆ. ಇಲ್ಲಿ ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ಬಟ್ಟೆ, ವಿದ್ಯುತ್, ರಸಾಯನ ಮತ್ತು ಆಹಾರ ಪದಾರ್ಥಗಳ ಕೈಗಾರಿಕೆಗಳಿವೆ. ಸ್ವಯಂಚಾಲಿತ ಯಂತ್ರ ಕಾರ್ಖಾನೆಗಳ ಉತ್ಪತ್ತಿ ಪ್ರಮಾಣ ಮತ್ತು ತಾಂತ್ರಿಕ ಪ್ರಗತಿ ರಾಷ್ಯದಲ್ಲಿ ಪ್ರಥಮಸ್ಥಾನದಲ್ಲಿವೆ. 170 ಪೂರ್ಣ ಸ್ವಯಂಚಾಲಿತ ಮತ್ತು 270 ಯಾಂತ್ರೀಕೃತ ಉತ್ಪಾದನಾ ಶಾಖೆಗಳಿಂದ ಕೂಡಿರುವ ನಗರದ ಅತಿ ದೊಡ್ಡವಾದ ಲಿಖಾಚ್ಯೋವ ಕಾರ್ಖಾನೆಗಳ ಸಂಕೀರ್ಣವನ್ನು 1966-70ರ ಪಂಚವಾರ್ಷಿಕ ಯೋಜನೆಯಲ್ಲೇ ಆಧುನೀಕರಿಸಲಾಯಿತು. ಲೆನಿನಿಸ್ಟ್ ಯಂಗ್ ಕಮ್ಯುನಿಸ್ಟ್‍ಲೀಗ್ ಆಟೊ ಮೊಬೈಲ್ ಕಾರ್ಖಾನೆಯೂ ಪ್ರಸಿದ್ಧವಾದದ್ದು. ಅತಿ ಚಿಕ್ಕದಾದ ಬೇರಿಂಗ್‍ಗಳನ್ನೂ ಮೊದಲುಗೊಂಡು 6 ಟನ್ ಗಾತ್ರದ ವರೆಗಿನ 3,000ಕ್ಕೂ ಹೆಚ್ಚು ಮಾದರಿಗಳ ಬೇರಿಂಗ್‍ಗಳನ್ನು ತಯಾರಿಸುವ ಕಾರ್ಖಾನೆಗಳೂ ಇಲ್ಲಿವೆ.

ಇಲ್ಲಿಯ ಯಂತ್ರಸಾಧನೋಪಕರಣಗಳ ಕೈಗಾರಿಕೆ ಉನ್ನತ ಸ್ಥಾನದ್ದು. ವಿದ್ಯುತ್ ತಾಂತ್ರಿಕ ಕೈಗಾರಿಕೆ, ಎಲೆಕ್ಟ್ರಾನಿಕ್ ಗಣಕ ಮತ್ತು ಅತಿಸೂಕ್ಷ್ಮ ಅಳತೆಯ ಸಾಧನೆಗಳ ತಯಾರಿಕಾ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಪಡೆದ ಕೈಗಡಿಯಾರಗಳ ಕಾರ್ಖಾನೆಗಳು ಮಾಸ್ಕೋದಲ್ಲಿವೆ. ರಾಷ್ಟ್ರದ ರಾಸಾಯನಿಕ ಉದ್ದಿಮೆಗೆ ಇದು ಮುಖ್ಯ ಕೇಂದ್ರ. ಲಿನನ್, ಹತ್ತಿ, ರೇಷ್ಮೆ. ಮತ್ತು ಕೃತಕ ನಾರು ಬಟ್ಟೆ ತಯಾರಿಕೆ ಹಾಗೂ ಮಾಂಸ ಹೈನು ಪದಾರ್ಥಗಳೂ ಸೇರಿದಂತೆ ಆಹಾರ ಪದಾರ್ಥಗಳ ತಯಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ.

ಮಾಸ್ಕೊ ನಗರಕ್ಕೆ ಎಲ್ಲ ಭಾಗಗಳಿಂದಲೂ ವಿದೇಶಗಳಿಂದಲೂ ಸಂಪರ್ಕ ಸಾಧನಗಳುಂಟು. ಹಾಗೆಯೇ ಈ ಮಹಾನಗರದಿಂದ ರಷ್ಯದೇಶದ ಎಲ್ಲ ಕಡೆಗೂ ಮತ್ತು ವಿದೇಶಗಳಿಗೂ ಸಂಪರ್ಕ ಸಾಧನಗಳಿವೆ. 1935ರಲ್ಲಿ ಓಡಾಟ ಪ್ರಾರಂಭಿಸಿದ ಭೂಗರ್ಭ ರೈಲು, ಸಾರಿಗೆ ವ್ಯವಸ್ಥೆಯಲ್ಲಿ ಪ್ರಶಂಸನೀಯವಾದುದ್ದು. ಅದರ 70ಕ್ಕೂ ಹೆಚ್ಚು ಸಂಖ್ಯೆಯ ನಿಲ್ದಾಣಗಳು ಮನಮೋಹಕವಾಗಿವೆ. ಇಲ್ಲಿ ಪ್ರಯಾಣಿಕರಿಗಾಗಿ 9, ಮಾಲುಗಾಡಿಗಳಿಗಾಗಿ 11 ನಿಲ್ದಾಣಗಳಿದ್ದು. ಅವಕ್ಕೆ ವರ್ತುಳ ರೈಲು ಮಾರ್ಗದ ಮೂಲಕ ಪರಸ್ಪರ ಸಂಪರ್ಕವಿದೆ. ಮಾಸ್ಕೋದಿಂದ ಹೊರಡುವ 11 ಮುಖ್ಯ ರೈಲು ಮಾರ್ಗಗಳಿವೆ. ನಗರದಿಂದ ಹೊರಡುವ ದೂರಪ್ರಯಾಣದ ಮತ್ತು ಉಪನಗರ ನೂರಾರು ರೈಲುಬಂಡಿಗಳಲ್ಲಿ ಪ್ರತಿನಿತ್ಯ. ಲಕ್ಷಗಟ್ಟಲೆ ಜನರು ಪ್ರಯಾಣಮಾಡುತ್ತಾರೆ. 1937ರಲ್ಲಿ ಮಾಸ್ಕೊ ನಾಲೆಯಲ್ಲಿ ಜನಸಂಚಾರ ಪ್ರಾರಂಭವಾಯಿತು. ಮಾಸ್ಕೊ ನದಿಯಲ್ಲಿ ಮೋಟಾರು ಬೋಟುಗಳ ಮೂಲಕ ಸಂಚಾರವ್ಯವಸ್ಥೆಯಿದೆ. ಹೊಸತಾಗಿ ನಿರ್ಮಿಸಲಾದ ದೊಡ್ಡ ವಿಮಾನನಿಲ್ದಾಣ ಡೊಮೊಡೇಡೊವೋ ಎಂಬಲ್ಲಿದೆ. ಇದು ಪ್ರಪಂಚದ 60ಕ್ಕೂ ಮಿಕ್ಕಿ ದೊಡ್ಡನಗರಗಳೊಂದಿಗೆ ಸಂಪರ್ಕ ಒದಗಿಸುತ್ತದೆ. ಮಾಸ್ಕೊ ನಗರದ ನೈರುತ್ಯಕ್ಕೆ ಸುಮಾರು 24ಕಿಮೀ ದೂರದಲ್ಲಿ ವ್ನುತೋವೋದಲ್ಲಿ ಮುಖ್ಯವಿಮಾನ ನಿಲ್ದಾಣವಿದೆ. ಇನ್ನೊಂದು ದೊಡ್ಡ ವಿಮಾನನಿಲ್ದಾಣ ಆಗ್ನೇಯಕ್ಕೆ ಸುಮಾರು 32ಕಿಮೀ ದೂರದಲ್ಲಿರುವ ಬೈತೋವೋದಲ್ಲಿದೆ. ಉತ್ತರಕ್ಕೆ ಸುಮಾರು 26ಕಿಮೀ ದೂರದಲ್ಲಿರುವ ಮತ್ತೊಂದು ದೊಡ್ಡ ವಿಮಾನ ನಿಲ್ದಾಣ ಶೆರಮೆ ಟ್ಯೋವೋ ಹೆಚ್ಚಾಗಿ ಅಂತಾರಾಷ್ಟ್ರೀಯ ಸಾರಿಗೆಗಳನ್ನು ನಿರ್ವಹಿಸುತ್ತದೆ.

ಮಾಸ್ಕೊ ಪುರಾತನ ನಗರ. ಹೊಸ ಶಿಲಾಯುಗದ ಕಾಲಕ್ಕೆ (ಕ್ರಿ. ಪೂ. 8000) ಇಲ್ಲಿ ಜನವಸತಿ ಇದ್ದಿತೆಂದು ತೋರುತ್ತದೆ. ಸುಜ್ಡಾಲದ ರಾಜಕುಮಾರ ಯೂರಿ ದಾಲ್ಗೊರಕಿತ 1147ರಲ್ಲಿ ಮಾಸ್ಕೊನಗರ ನಿರ್ಮಾಣಮಾಡಿದ. 1283ರಲ್ಲಿ ಮಂಗೋಲರು ನಗರವನ್ನು ಸುಟ್ಟು ಹಾಕಿದರಾದರೂ ಇದು ತಿರುಗಿ ತಲೆಯೆತ್ತಿತು. ಹೆಚ್ಚುಕಡಿಮೆ ಮರದಿಂದಲೇ ನಿರ್ಮಿತವಾದ ಮಾಸ್ಕೊ ನಗರ ಅನೇಕ ಸಲ ಬೆಂಕಿಯಿಂದ ಸುಟ್ಟಿತಲ್ಲದೆ ಇದರ ಜನಸಂಖ್ಯೆ ಮತ್ತೆ ಮತ್ತೆ ಕ್ಷಾಮ ಮತ್ತು ಪ್ಲೇಗುಗಳಿಂದ ಇಳಿಯಿತು. ಈ ಬಗೆಯ ನಿರಂತರ ಅನರ್ಥದ ಅನಂತರವೂ ಇದು ಹಿಂದಿಗಿಂತಲೂ ದೊಡ್ಡದಾಗಿ ಎದ್ದು ನಿಂತಿತು. 13ನೆಯ ಶತಮಾನದ ಅಂತ್ಯದ ಸುಮಾರಿಗೆ ಇದೊಂದು ಪ್ರತ್ಯೇಕ ಪಾಳೆಯಪಟ್ಟಾಗಿತ್ತು. ಇವಾನ್ ಕಲಿತಾನ ಕಾಲದಲ್ಲಿ (1325-41) ವ್ಲಾದಿಮರ್ ಪಾಳೆಯಪಟ್ಟನ್ನು ಇದರೊಂದಿಗೆ ಸೇರಿಸಲಾಯಿತು. ಅವನು ಕೋಟೆಯನ್ನು ಈಶಾನ್ಯದತ್ತ ವಿಸ್ತರಿಸಿ ಅಲ್ಲಿ ಪ್ರಥಮ ಉಸ್ಪೆನ್ಸ್ಕಿ ಇಗರ್ಜಿಯನ್ನು ಕಟ್ಟಿಸಿದ. ಇದರ ಮಹತ್ತ್ವ ಬೆಳೆದಂತೆ ಇದರ ವಿಸ್ತಾರವೂ ಹೆಚ್ಚಿತು. ಊರು ಐರೋಪ್ಯ ರಷ್ಯದ ಮಧ್ಯೆದಲ್ಲಿ ಅದರಲ್ಲೂ ನದಿಯ ದಂಡೆಯಲ್ಲಿ ಇದ್ದದ್ದು ಅಲ್ಲಿಯ ವ್ಯಾಪಾರೋದ್ಯಮ ಬೆಳೆಯುವುದಕ್ಕೆ ಅನುಕೂಲವಾಯಿತು. 15ನೆಯ ಶತಮಾನದ ಅಂತ್ಯಕ್ಕೆ ಮಾಸ್ಕೊ ಪೂರ್ವಯೂರೋಪಿನ ಅತಿದೊಡ್ಡ ವ್ಯಾಪಾರಕೇಂದ್ರವಾಗಿತ್ತು. ಮಾಸ್ಕೊದ ಪ್ರಾರಂಭದ ಅರಸರು ಬಹಳ ಸಮರ್ಥರಾಗಿದ್ದರು. ಮಂಗೋಲರ ಕರವಸೂಲಿಕಾರರಾಗಿ ತಮಗಿದ್ದ ಅಧಿಕಾರವನ್ನು ಅವರು ನೆರೆಹೊರೆಯ ಪಾಳೆಯಪಟ್ಟುಗಳನ್ನು ಮಾಸ್ಕೊದ ಅಧೀನದಲ್ಲಿ ತರುವುದಕ್ಕೆ ಬಳಸಿಕೊಂಡರು. ಮುಂದೆ ಮಂಗೋಲರ ಆಡಳಿತದಿಂದ ಮಾಸ್ಕೊ ಸ್ವತಂತ್ರವಾಯಿತು. 1547ರಲ್ಲಿ ಮಾಸ್ಕೋದ ಆಳರಸ ಇವಾನ್ ದಿ ಟೆರಿಬಲ್‍ಸಾರ್ ಎಂಬ ಬಿರುದನ್ನು ಧರಿಸಿ ಮಾಸ್ಕೊವನ್ನು ಮೂರನೆಯ ರೋಮ್ ಎಂದು ಕರೆದ. ಅಂದಿನಿಂದ 1711ರ ತನಕ ಮಾಸ್ಕೊ ಸಾóರನ ರಾಜ್ಯದ ರಾಜಧಾನಿಯಾಗಿ ಉಳಿಯಿತು. 1711ರಲ್ಲಿ ಪೀಟರ್ ದಿ ಗ್ರೇಟ್ ರಾಜನಿವಾಸವನ್ನು ಸೇಂಟ್ ಪೀಟರ್ಸ್‍ಬರ್ಗಿಗೆ ಬದಲಾಯಿಸಿದ. ಅದಾಗ್ಯೂ ಮಾಸ್ಕೊ ಮಹತ್ತ್ವದ ವಾಣಿಜ್ಯನಗರವಾಗಿ ಉಳಿಯಿತು. ಸಾóರರು ಪ್ರತಿವರ್ಷದಲ್ಲೂ ಕೆಲವುಕಾಲ ಇಲ್ಲಿ ತಂಗುತ್ತಿದ್ದರು. ನೆಪೋಲಿಯನ್ 1812ರಲ್ಲಿ ನಗರವನ್ನು ವಶಪಡಿಸಿಕೊಂಡನಾದರೂ ಅದು ಸುಟ್ಟುಹೋದ ಕಾರಣ ಅವನು ಸೈನ್ಯವನ್ನು ಹಿಂತೆಗೆದುಕೊಳ್ಳಬೇಕಾಯಿತು. ಮಾಸ್ಕೊ ಮತ್ತೆ ತಲೆ ಎತ್ತಿತಲ್ಲದೆ 19ನೆಯ ಶತಮಾನದ ಅಂತ್ಯಕ್ಕೆ ಮಹತ್ತ್ವದ ಕೈಗಾರಿಕಾ ನಗರವಾಗಿಯೂ ಬೆಳೆಯಿತು. ನಗರದಿಂದ ಎಲ್ಲ ಕಡೆಗಳಿಗೂ ರೈಲು ಮಾರ್ಗಗಳ ಸಂಪರ್ಕವುಂಟಾಯಿತು. 1912ರಲ್ಲೇ ಇದರ ಜನಸಂಖ್ಯೆ 1,600,000ಕ್ಕೆ ಏರಿತ್ತು. 1917ರ ಅಕ್ಟೋಬರ್ ಕ್ರಾಂತಿಯ ಕಾಲಕ್ಕೆ ಮಾಸ್ಕೊದ ಕೆಂಪುಚೌಕದಲ್ಲಿ ಉಗ್ರಕದನ ನಡೆಯಿತು. 1918ರಲ್ಲಿ ಹೊಸ ಕಮ್ಯುನಿಸ್ಟ್ ಸರ್ಕಾರದ ವಿದೇಶಿದಾಳಿಯ ಭೀತಿಯಿಂದ ಹೆಚ್ಚು ಸುರಕ್ಷಿತವಿದ್ದ ಕ್ರೆಮ್ಲಿನ್ನಿಗೆ ರಾಜಧಾನಿಯನ್ನು ವರ್ಗಾಯಿಸಿತು. ಸೋವಿಯತ್ ಆಡಳಿತದಲ್ಲಿ ಮಾಸ್ಕೊ ಬಹಳ ಊರ್ಜಿತಗೊಂಡಿತು. 1922ರಲ್ಲಿ ರಷ್ಯನ್ ಸೋವಿಯತ್ ಸಂಯುಕ್ತ ಸಮಾಜವಾದಿ ಪ್ರಜಾಪ್ರಭುತ್ವದ ಸ್ಥಾಪನೆಯಾದ ಅನಂತರ ಮಾಸ್ಕೊ ಸೋವಿಯತ್ ಒಕ್ಕೂಟದ ರಾಜಧಾನಿಯಾಯಿತು. 1928ರಲ್ಲಿ ಸೋವಿಯತ್ ಸರ್ಕಾರ ಬೃಹತ್ ಕೈಗಾರಿಕೆಗಳ ಯೋಜನೆಯನ್ನು ಕೈಗೊಂಡ ಬಳಿಕ ನಗರದ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದಕ್ಕೆ ರೈತಾಪಿ ಜನರು ಇಲ್ಲಿಗೆ ಬಂದರು. 1941ರಲ್ಲಿ ಹಿಟ್ಲರನ ಜರ್ಮನ್ ಪಡೆಗಳು ಮಾಸ್ಕೊವನ್ನು ಮುತ್ತಿದುವು. ಆದರೆ ಅವು ಸೋಲನ್ನನುಭವಿಸಬೇಕಾಯಿತು. ವಾಯುದಾಳಿಗಳು ನಗರಕ್ಕೆ ವಿಶೇಷ ಧಕ್ಕೆ ಉಂಟುಮಾಡಲಿಲ್ಲ. ದ್ವಿತೀಯ ಮಹಾಯುದ್ಧದ ಅನಂತರ ಮಾಸ್ಕೊ ಮತ್ತಷ್ಟು ತೀವ್ರಗತಿಯಲ್ಲಿ ಅಭಿವೃದ್ಧಿಯಾಯಿತು.

ಮಾಸ್ಕೊ ಸೋವಿಯತ್ ಒಕ್ಕೂಟದ ಮುಖ್ಯ ಸಾಂಸ್ಕøತಿಕ ಕೇಂದ್ರವಾಗಿತ್ತು. ಇಲ್ಲಿಯ 30 ರಂಗಮಂದಿರಗಳಲ್ಲಿ ಜಗತ್ಪ್ರಸಿದ್ಧ ಬಲ್ಷೋಯ್ ರಂಗಮಂದಿರ ಒಂದು. ರಷ್ಯದ ವಿಶಿಷ್ಟ ನೃತ್ಯಕಲೆಯಾದ ಬ್ಯಾಲೆ ರೂಪಕಗಳು ಸಂಗೀತ ಪ್ರಧಾನ ನಾಟಕಗಳು ಇಲ್ಲಿ ಪ್ರದರ್ಶಿಸಲ್ಪಡುತ್ತವೆ. ಇಲ್ಲಿರುವ ಸೂತ್ರದಬೊಂಬೆಯಾಟದ ರಂಗಮಂದಿರ ಬಲು ದೊಡ್ಡದು. ಮಾಸ್ಕೊ ರಾಜ್ಯ ಸರ್ಕಸ್ ಬಲು ಜನಪ್ರಿಯ. ಮಾಸ್ಕೊದಲ್ಲಿರುವ ಮಾಸ್ಪಿಲ್ಮ್, ಗಾರ್ಕಿ ಮತ್ತು ಸೋಯಾಜ್ ಮಲ್ಪಿಫಿಲ್ಮ್ ಸ್ಪೂಡಿಯೋಗಳು ಸೋವಿಯತ್ ಚಲನಚಿತ್ರ ಉದ್ಯಮದಲ್ಲಿ ಮಹತ್ತ್ವದ ಪಾತ್ರವಹಿಸಿವೆ. ಇಲ್ಲಿ ಕಲೆ ವಿಜ್ಞಾನ ಮತ್ತು ಯಂತ್ರಕಲಾಶಾಸ್ತ್ರ, ವಿವಿಧ ಕ್ಷೇತ್ರಗಳಿಗೆ ಮೀಸಲಾದ 60ಕ್ಕೂ ಹೆಚ್ಚು ವಸ್ತುಸಂಗ್ರಹಾಲಯಗಳಿವೆ. ಇವುಗಳಲ್ಲಿ ಲೆನಿನ್ ಸೆಂಟ್ರಲ್ ಮ್ಯೂಸಿಯಮ್, ಕೆ, ಮಾರ್ಕ್ ಮತ್ತು ಎಫ್, ಎಂಜಲ್ಸ್ ಮ್ಯೂಸಿಯಮ್, ತ್ರ್ಯಚಿಕೋವ್‍ಸ್ಕಿ ಗ್ಯಾಲರಿ, ಲಲಿತಕಲೆಗಳ ಮ್ಯೂಸಿಯಮ್ ಸೇರಿವೆ. ಪ್ರಪಂಚದ ಅತಿ ದೊಡ್ಡ ಗ್ರಂಥಾಲಯದಲ್ಲಿ ಒಂದಾದ ಲೆನಿನ್ ರಾಜ್ಯ ಗ್ರಂಥಾಲಯ ಸೇರಿದಂತೆ 4000ಕ್ಕೂ ಹೆಚ್ಚು ಗ್ರಂಥಾಲಯಗಳು ಇಲ್ಲಿವೆ. ಮಾಸ್ಕೊ ರಷ್ಯದ ಪ್ರಧಾನ ವೃತ್ತಪತ್ರ ಮತ್ತು ಗ್ರಂಥ ಪ್ರಕಟನಾಕೇಂದ್ರ. ಇಲ್ಲಿಯ ದೂರದರ್ಶನದ ಪ್ರಸಾರಗೋಪುರ 535.83 ಮೀಟರ್ ಎತ್ತರವಿದೆ. ಈ ಬೃಹತ್ ಗೋಪುರವನ್ನು 1967ರಲ್ಲಿ ಉದ್ಫಾಟಿಸಲಾಯಿತು. ಮಾಸ್ಕೊ ರೇಡಿಯೋ ಸುಮಾರು 70 ಸೋವಿಯತ್ ಭಾಷೆಯಲ್ಲಿ ಬಿತ್ತರಿಸುತ್ತದೆ. ವಿಶ್ವವಿದ್ಯಾಲಯಗಳ ನಗರವೆಂದನ್ನಬಹುದಾದ ಮಾಸ್ಕೊದಲ್ಲಿ ಸುಮಾರು 80 ಸಂಸ್ಥೆಗಳಲ್ಲಿ ಉಚ್ಛ ಶಿಕ್ಷಣವೀಯುವ ಅನುಕೂಲವಿದ್ದು 620,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶವುಂಟು. ಎಲ್ಲ ಶಿಕ್ಷಣವೂ ಉಚಿತ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ. ರಷ್ಯದಲ್ಲಿ ಅತಿ ಹಳೆಯದೂ ಮತ್ತು ದೊಡ್ಡದೂ ಆದ ಮಾಸ್ಕೊ ಸ್ಟೇಟ್ ವಿಶ್ವವಿದ್ಯಾಲಯವಿದೆ. ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ವಿಶ್ವವಿದ್ಯಾಲಯ ಮತ್ತು ವಿಜ್ಞಾನಗಳ ಸೋವಿಯತ್ ಅಕಾಡೆಮಿಯ ಪ್ರಧಾನಕಾರ್ಯಾಲಯ ಮಾಸ್ಕೊದಲ್ಲಿವೆ. 1970ರ ದಶಕದ ಪ್ರಾರಂಭಕ್ಕೆ ಇಲ್ಲಿ ಸುಮಾರು 300 ಆಸ್ಪತ್ರೆಗಳು ಮತ್ತು 1000ಕ್ಕೂ ಹೆಚ್ಚು ಹೊರಗಡೆ ಚಿಕಿತ್ಸೆ ಪಡೆಯುವ ರೋಗಿಗಳ ಪಾಲಿಕ್ಲಿನಿಕ್ಕುಗಳು ಇದ್ದುವು. ಹಾಗೆಯೇ ಅನೇಕ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಶೋಧನ ಕೇಂದ್ರಗಳು ಇಲ್ಲಿವೆ. ಮಾಸ್ಕೊದ ಸುತ್ತಮುತ್ತಲಿನ ಗ್ರಾಮಪ್ರದೇಶಗಳಲ್ಲಿ ಹಲವಾರು ಆರೋಗ್ಯ ಮತ್ತು ವಿಹಾರ ಸ್ಥಳಗಳಿವೆ.

ಮಾಸ್ಕೊ ಕ್ರೀಡಾ ಕೇಂದ್ರವೂ ಆಗಿದೆ. ಲೆನಿನ್ ಕ್ರೀಡಾರಂಗ ಸೇರಿದಂತೆ ಸುಮಾರು 70 ಕ್ರೀಡಾರಂಗಗಳು. 26 ಈಜುಕೊಳಗಳು, ಸುಮಾರು 30ಸಾಕರ್ ಪುಟ್‍ಬಾಲ್ ಮೈದಾನಗಳು ಮತ್ತು 1200 ವ್ಯಾಯಾಮ ಶಾಲೆಗಳು ಇಲ್ಲಿವೆ. ಇಲ್ಲಿಯ ಉದ್ಯಾನಗಳಲ್ಲಿ ಚದುರಂಗದಾಟಗಳು ನಡೆಯುತ್ತವೆ. ಚಳಿಗಾಲದಲ್ಲಿ ಇಲ್ಲಿಯ ಜನರು ಹಿಮದ ಮೇಲೆ ಜಾರುವ ಸ್ಕೇಟಿಂಗ್ ಕ್ರೀಡೆಯೂ ಪ್ರಸಿದ್ಧ. ಮಾಸ್ಕೊದಲ್ಲಿ 100ಕ್ಕೂ ಹೆಚ್ಚು ಉದ್ಯಾನಗಳಿವೆ. ಅವುಗಳಲ್ಲಿ ಇನ್ಮೆಲೊವೆಸ್ಕಿ ಉದ್ಯಾನ ಬಹಳ ದೊಡ್ಡದು. ಉಳಿದ ಉದ್ಯಾನಗಳಲ್ಲಿ ಲುಚ್ನಿಕಿ ಮತ್ತು ಸಖೋಲ್ ನಿಕಿ, ಪಾರ್ಕ್ ಕಲೂರಿ, ಉದ್ಯಾನ ವಿಜ್ಞಾನಗಳ ಅಕಾಡೆಮಿಯ ಸಸ್ಯವಿಜ್ಞಾನದ ತೋಟ, ಗಾರ್ಕಿ ಕೇಂದ್ರ ಉದ್ಯಾನ ಮುಂತಾದವು ಇವೆ.

ಮಾಸ್ಕೊ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯದ ರಾಜಧಾನಿಯಾಗಿದ್ದು 1991ರಲ್ಲಿ ಸೋವಿಯತ್ ಸಂಯುಕ್ತ ಗಣರಾಜ್ಯದ ಅವನತಿಯಂತರ ರಷ್ಯದ ರಾಜಧಾನಿಯಾಗಿರುವ ಈ ನಗರ ಹಳತು ಹೊಸತುಗಳ ಮಿಶ್ರಣ. ನಗರದ ಮಧ್ಯದಲ್ಲಿ ಸುಪ್ರಸಿದ್ಧ ಕೆಂಪುಚೌಕವಿದೆ. ಇದು ಪುರಾತನ ಕಾಲದಿಂದಲೂ ನಾಗರಿಕರು ಸೇರುವ ಸ್ಥಳ. ನಗರದ ಐತಿಹಾಸಿಕ ಕಟ್ಟಡಗಳಲ್ಲಿ 1475-79ರಲ್ಲಿ ನಿರ್ಮಿತವಾದ ಉಸ್ಪೆನ್ಸ್ಕಿ ಇಗರ್ಜಿ ಒಂದು. ಇಲ್ಲಿ ಇವಾನ್ ದಿ ಟೆರಿಬಲ್ 1547ರಲ್ಲಿ ರಷ್ಯ ಚಕ್ರವರ್ತಿಯಾಗಿ ಕಿರೀಟಧಾರಣೆ ಮಾಡಿದ. ಅಂದಿನಿಂದ ರಷ್ಯದ ದೊರೆಗಳ ರಾಜ್ಯಾಭಿಷೇಕ ಇಲ್ಲಿ ನಡೆಯುತ್ತಿತ್ತು. ಇದರ ಎದುರಿಗೆ 65 ಟನ್ನುಗಳ ಭಾರದ ಗಂಟೆಯೊಂದು ಸೇರಿದಂತೆ 33 ಗಂಟೆಗಳ ಪುರಾತನ ಗೋಪುರವಿದೆ. ಅರ್ಕಾಂಜಾಲ್ಸ್ಕ್ ಇಗರ್ಜಿಯಲ್ಲಿ (1505-09)ಮಾಸ್ಕೊದ ರಾಜಕುಮಾರರ ಗೋರಿಗಳಿವೆ. ಗ್ರಾನೋವಿತಾಯ (1473-90) ಹಳೆಯ ಅರಮನೆಗಳಲ್ಲೊಂದು. ಒರುಜೆನಾಯಾ ಅರಮನೆಯಲ್ಲಿ (1840-51) ಹಳೆಯ ಕಲಾ ನಿಕ್ಷೇಪಗಳಿವೆ. 1484-80 ನಡುವೆ ನಿರ್ಮಿತವಾದ ಕಥೀಡ್ರಲ್ ಆಫ್ ದಿ ಅನಸ್ಸಿಯೇಶನ್ ಇನ್ನೊಂದು ಆಕರ್ಷಕ ಹಳೆಯ ಕಟ್ಟಡ. (ಜಿ.ಕೆ.ಯು.)