ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿಲ್, ಜಾನ್ ಸ್ಟೂಅರ್ಟ್
ಮಿಲ್, ಜಾನ್ ಸ್ಟೂಅರ್ಟ್ 1806-73. ಖ್ಯಾತ ಆಂಗ್ಲ ವಿಚಾರವಾದಿ, ಸಾಹಿತಿ ಹಾಗೂ ತತ್ತ್ವಜ್ಞಾನಿ. ಹುಟ್ಟಿದ್ದು ಲಂಡನ್ನಿನಲ್ಲಿ. ಹದಿನೈದನೆಯ ವಯಸ್ಸಿಗಾಗಲೇ ಸಾಹಿತ್ಯ, ತರ್ಕ, ರಾಜಕೀಯ, ಅರ್ಥಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಓದಿಕೊಂಡಿದ್ದ. 1823ರಲ್ಲಿ ಇಂಡಿಯ ಆಫೀಸಿನಲ್ಲಿ ಗುಮಾಸ್ತನಾಗಿ ಸೇರಿದ. ಬಲುಬೇಗ ಆ ಹುದ್ದೆಯಲ್ಲಿ ತನ್ನ ತಂದೆಯಂತೆ ಮೇಲೇರಿದ. ಕಂಪನಿ ಮುಚ್ಚಿದ ಪ್ರಯುಕ್ತ ಧಾರಾಳವಾದ ನಿವೃತ್ತಿವೇತನ ಪಡೆದು ನಿವೃತ್ತನಾದ. 1825ರಲ್ಲಿ ಬೆನ್‍ಥಾಮ್‍ನ್ ನ್ಯಾಷನಲ್ ಆಫ್ ಜ್ಯೂಡಿಷಿಯಲ್ ಎವಿಡನ್ಸ್ ಅನ್ನು ಸಂಪಾದಿಸಿದ. ಆ ಮುಂದಿನ ವರ್ಷಗಳಲ್ಲಿ ರ್ಯಾಡಿಕಲ್ ಜರ್ನಲ್‍ಗಳಿಗೆ ಆಗಾಗ್ಗೆ ಲೇಖನಗಳನ್ನು ಬರೆಯುತ್ತಿದ್ದ. ಜೊತೆಗೆ ಲಂಡನ್ ರಿವ್ಯೂ ಸಂಪಾದಿಸಿದ ಕೂಡ. 1843ರಲ್ಲಿ ಸಿಸ್ಟಮ್ ಆಫ್ ಲಾಜಿಕ್ ಎಂಬ ಕೃತಿಯನ್ನು ಹೊರತಂದು ಹೆಸರು ಮಾಡಿದ. 1848ರಲ್ಲಿ ಪ್ರಿನ್ಸಿಪಲ್ಸ್ ಆಫ್ ಪೊಲಿಟಿಕಲ್ ಎಕಾನಮಿಯನ್ನು ಪ್ರಕಟಿಸಿದ. 1858-65 ಈ ದಿನಗಳಲ್ಲಿ ಮಿಲ್‍ನ ಅನೇಕ ಪುಸ್ತಕಗಳು ಪ್ರಕಟವಾದವು. ಲಿಬರ್ಟಿ, ಯೂಟಿಲಿಟೇರಿಯನಿಸಮ್, ರೆಪ್ರೆಸೆಂಟೇಟಿವ್ ಗವರ್ನ್‍ಮೆಂಟ್ ಮತ್ತು ಎಕ್ಸಾಮಿನೇಷನ್ ಆಫ್ ಸರ್ ಡಬ್ಲ್ಯೂ ಹ್ಯಾಮಿಲ್ಟ್‍ನ್ಸ್ ಫಿಲಾಸಫಿ ಎಂಬ ಪುಸ್ತಕಗಳನ್ನು ಹೊರತಂದ. 1865ರಲ್ಲಿ ವೆಸ್ಟ್ ಮಿನ್‍ಸ್ಟರ್‍ನಿಂದ ಹೌಸ್ ಆಫ್ ಕಾಮನ್ಸ್ ಸಭೆಗೆ ಆಯ್ಕೆಗೊಂಡ. ಆದರೆ ಗುರುತಿಸುವಂಥ ಕಾರ್ಯವನ್ನೇನೂ ಅಲ್ಲಿ ಈತ ಮಾಡಲಿಲ್ಲ. ದಿ ಸಬ್ಜೆಕ್ಷನ್ ಆಫ್ ವುಮೆನ್ (1869); ದಿ ಐರಿಷ್ ಲ್ಯಾಂಡ್ ಕ್ವೆಸ್ಚೆನ್ (1870); ಆಟೊಬಯಾಗ್ರಫಿ (1873)-ಇವು ಈತ ರಾಜಕೀಯ ವಾತಾವರಣದಿಂದ ದೂರವಾದ ಬಳಿಕ ಬರೆದ ಕೃತಿಗಳು. 1851ರಲ್ಲಿ ಟೇಲರಳೊಂದಿಗೆ ಮದುವೆಯಾಗಿ ಆಕೆಯೊಂದಿಗೆ ಅನ್ಯೋನ್ಯವಾಗಿ ಸುಮಾರು 15 ವರ್ಷಗಳ ಕಾಲ ಜೀವನ ನಡೆಸಿದ. ಈತ ಅವಿಗ್ನನ್‍ನಲ್ಲಿ ಮರಣ ಹೊಂದಿದ. ಮಿಲ್ ಬರೆದ ಆಟೊಬಯಾಗ್ರಫಿ ಕುತೂಹಲಕಾರಿಯಾದ ಕೃತಿ. ಇದರ ತುಂಬ ವಿಷಾದದ ಛಾಯೆ ಮುಸುಕಿದೆ. ಬೌದ್ಧಿಕ ಕಟ್ಟುನಿಟ್ಟಿನಲ್ಲಿ ಬಾಲ್ಯವನ್ನು ಕಳೆದ ಮಿಲ್ ಕಲ್ಪನೆ, ಭಾವನೆಗಳ ದಾರಿದ್ರ್ಯದಿಂದ ನೊಂದು ಕ್ರಮೇಣ ಮನುಷ್ಯನ ಕಲ್ಯಾಣಕ್ಕೆ ಅಗತ್ಯವಾದ ಅಂಶಗಳಲ್ಲಿ ವ್ಯಕ್ತಿಯ ಅಂತರ್ವಿಕಾಸನವೂ ಒಂದು ಎನ್ನುವುದನ್ನು ಅರಿತ ಬಗ್ಗೆ ವಿವರಗಳಿವೆ. ಮಿಲ್‍ನ ಗದ್ಯಶೈಲಿಯಲ್ಲಿ ಲವಲವಿಕೆ, ಉಲ್ಲಾಸಗಳಿಲ್ಲದಿದ್ದರೂ ಈತನದು ಸರಳ ಶೈಲಿ. ಈತನ ತರ್ಕಬದ್ಧ ಶೈಲಿ, ಬೌದ್ಧಿಕ ಪ್ರಾಮಾಣಿಕತೆಗಳು ಕೃತಿಗೆ ಸೊಗಸನ್ನು ನೀಡಿವೆ.
ತನ್ನ ತಂದೆಯಂತೆ ಮನಃಶ್ಯಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಸಂವೇದನೆ, ಭಾವನೆಗಳಿಗಿದ್ದ ವ್ಯತ್ಯಾಸವನ್ನು ಒಪ್ಪಿಕೊಂಡು ಸಂಯೋಜನಾ ನಿಯಮಗಳನ್ನು ನಿರೂಪಿಸಿದ. ಸಾದೃಶ್ಯ, ಸಾಯುಜ್ಯ, ಸಂವೇದನಾಬಲ ಇವುಗಳನ್ನು ಮೊದಲೂ 1865ರಲ್ಲಿ ಸಂವೇದನಾ ಬಲವನ್ನು ಬಿಟ್ಟು ಸಾದೃಶ್ಯ, ಸಾಯುಜ್ಯ, ಪುನರ್ಭಾವ. ಅವಿಶ್ಲೇಷ-ಈ ನಿಯಮಗಳನ್ನೂ ನಿರೂಪಿಸಿದ. ಅಲ್ಲದೆ ಪ್ರತ್ಯಕ್ಷದ ವಿಚಾರವಾಗಿಯೂ ಈತ ತಾರ್ಕಿಕ ಚಿಂತನೆ ನಡೆಸಿದ್ದಾನೆ. ಸಂವೇದನೆಗಳನ್ನು ನೇರವಾಗಿ ಅರಿಯದೆ ಇದ್ದರೂ ಸಂವೇದನೆಗಳ ಸಂಭಾವ್ಯತೆಯನ್ನು ಅರಿಯುವುದು ಸಾಧ್ಯ ಎಂಬ ತತ್ತ್ವ ಮುಂದೆ ವುರ್ಸ್‍ಬರ್ಗ್ ಶಾಖೆಯಲ್ಲಿ ಬಳಕೆಗೆ ಬಂದಿತು. (ಎಲ್.ಎಸ್.ಎಸ್.)