ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಕ್ತಾಬಾಯಿ 1

ವಿಕಿಸೋರ್ಸ್ದಿಂದ

ಮುಕ್ತಾಬಾಯಿ 1

ಮಹಾನುಭಾವ ಪಂಥದ ಸನ್ಯಾಸಿನಿ. ಗೋರಕ್ಷನಾಥನ ಶಿಷ್ಯ: ವಿದರ್ಭ ದೇಶದ ರಾಜನ ಮಗಳು ಮತು ಉಜ್ಜಯನಿಯ ಅರಸ ವಿಕ್ರಮಾದಿತ್ಯನ ಪತ್ನಿ. ಈಕೆಯ ಮೊದಲ ಹೆಸರು ಸತ್ಯವಂತೀ. ಯೋಗಿಯಾದ ಭರ್ತೃಹರಿಯಿಂದ ಈಕೆಗೆ ಪರಮಾರ್ಥದ ಪ್ರೇರಣೆ ದೊರೆಯಿತು. ಈತನಿಗೆ ಅನ್ನವನಿಕ್ಕದೆ ತಾನು ಊಟಮಾಡುತ್ತಿದ್ದಿಲ್ಲ. ಈ ನೇಮ ಕೆಲಕಾಲ ನಡೆಯಿತು. ಆದರೆ ಒಮ್ಮೆ ಭರ್ತೃಹರಿ ಊಟಕ್ಕೆ ಬರಲು ತಡಮಾಡಿದ. ಈಕೆ ಅವನಿಗಾಗಿ ಕಾದುಕಾದು ಕೊನೆಗೆ ಸ್ನಾನಮಾಡಿದರಾಯಿತೆಂದು ಸ್ನಾನದ ಮನೆಗೆ ಹೋದಳು. ಸ್ನಾನಕ್ಕೆಂದು ವಿವಸ್ತ್ರಳಾದಾಗ ಭೋಜನಾರ್ಥಿಯಾದ ಭರ್ತೃಹರಿ ಬಂದ. ರಾಣಿ ಅನ್ನ ನೀಡದೆ ಸ್ನಾನಕ್ಕಿಳಿದುದನ್ನು ಕಂಡು ಹಾಗೆ ಹಿಂತಿರುಗಿದ. ಇದನ್ನು ತಿಳಿದ ರಾಣಿ ವಿವಸ್ತ್ರಾವಸ್ಥೆಯಲ್ಲೇ ಊಟದ ಎಡೆ ತೆಗದುಕೊಂಡು ಭರ್ತೃಹರಿ ಇದ್ದ ಕಡೆಗೆ ಹೋದಳು. ಆದರೆ ಭರ್ತೃಹರಿ ನಗ್ನ ಸ್ತ್ರೀಯಿಂದ ಅನ್ನ ಸ್ವೀವಕರಿಸಲು ನಿರಾಕರಿಸಿದ. ಆ ಸಮಯಕ್ಕೆ ಅಲ್ಲಿಗೆ ಗೋರನಾಥ ಬಂದ. ಆತ ಭರ್ತೃಹರಿ ಸತ್ಯವಂತೀದೇವಿಯ ಉನ್ಮನೀ ಅವಸ್ಥೆ ವಿವರಿಸಿ ಅನ್ನ ಸ್ವೀಕರಿಸಲು ಹೇಳಿದ. ಆದರೆ ಆಕೆ ತಾನು ಆ ಸಂದರ್ಭದಲ್ಲಿ ಶ್ಮಶಾನಕ್ಕೆ ತಂದ ಹೆಣದಂತೆ ಇರುವುದಾಗಿ ತಿಳಿಸಿ ಅದು ಹೇಗೆ ಮತ್ತೆ ಮನೆಗೆ ಹೋಗದೋ ಹಾಗೆ ತಾನೂ ಹೋಗುವುದಿಲ್ಲ ಎಂದು ವಿವರಿಸಿದಳು. ಆಗ ಆಕೆಗೆ ಮುಕ್ತಾಯಿ-ಮುಕ್ತಾಬಾಯಿ ಎಂದು ಕರೆದರು. ಗೋರಕ್ಷನಾಥನ ಗುರುಬೋಧೆಯಿಂದ. ಆಕೆ ಯೋಗಿನಿಯಾದಳು, ಶ್ರೀಶೈಲದಲ್ಲಿ ತಪಸ್ಸು ಆಚರಿಸಿ ಅನಂತರ ಈಕೆ ಚಾಂಗಾವಟೇಶ್ವರನಿಗೆ ವಿದರ್ಭದಲ್ಲಿ ಜ್ಞಾನಬೋಧನೆ ನೀಡಿದಳು. ಮುಂದೆ ಸ್ವಲ್ಪ ಕಾಲದಲ್ಲೇ ಸಮಾಧಿಸ್ಥಳಾದಳು. ಈಕೆಯನ್ನು ಹಿರಿಯ ಮುಕ್ತಾಬಾಯಿಯೆಂದು ಗುರುತಿಸಲಾಗಿದೆ.

(ಎಸ್.ಎಸ್.ಜೆ.ಎ.)