ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುದ್ರೆಗಳು

ವಿಕಿಸೋರ್ಸ್ ಇಂದ
Jump to navigation Jump to search

ಮುದ್ರೆಗಳು - ದಾಖಲೆಪತ್ರಗಳ ಪ್ರಾಮಾಣ್ಯವನ್ನು ಸ್ಥಿರೀಕರಿಸಿ ಅಥವಾ ಖಾತರಿಪಡಿಸಿ ಅವನ್ನು ಅಧಿಕೃತಗೊಳಿಸಲು ಬಳಸುವ ಸಾಧನಗಳಲ್ಲೊಂದು (ಸೀಲ್ಸ್). ಬರೆವಣಿಗೆ ತಿಳಿಯದ ಕಾಲದಲ್ಲಿಯೇ ಮುದ್ರೆಗಳ ಬಳಕೆ ಅಸ್ತಿತ್ವದಲ್ಲಿತ್ತು. ಈಗಲೂ ಪ್ರಪಂಚದ ಬಹುಭಾಗದಲ್ಲಿ ದಾಖಲೆಗಳು ಸಕ್ರಮವೆನಿಸುವುದು ಸಮ್ಮತಿಸೂಚಕ ಮುದ್ರೆಗಳಿಂದಲೇ. ಭೂವ್ಯವಹಾರ ಮತ್ತಿತ್ತರ ಹಲವು ಅಧಿಕೃತ ದಾಖಲೆಪತ್ರಗಳಿಗೆ ಕಾನೂನಿನ ಒಪ್ಪಿಗೆಯ ಮುದ್ರೆ ಅವಶ್ಯವಾಗುತ್ತದೆ. ಖಾಸಗಿವ್ಯವಹಾರದ ದಾಖಲೆಪತ್ರಗಳಿಗೆ ಮೇಣದ ಅಥವಾ ಅರಗಿನ ಮುದ್ರೆಯನ್ನು ಬಳಸುತ್ತಿದ್ದ ಉದಾಹರಣೆಗಳಿವೆ. ಈಗ ಅನೇಕವೇಳೆ ಲೋಹದ ಗುರುತು ಬಿಲ್ಲೆ ಅಥವಾ ರಬ್ಬರಿನ ಮೊಹರುಗಳ ಬಳಕೆಯನ್ನು ಕಾಣುತ್ತೇವೆ. ಸರಕಾರಿ ಕಛೇರಿಗಳು, ವಾಣಿಜ್ಯ ಕಂಪನಿಗಳು ಮುಂತಾದವು ಮುದ್ರೆಗಳನ್ನು ಬಳಸುತ್ತಿವೆ. ರಾಜ ಮಹಾರಾಜರು ಪರೋಕ್ಷವಾಗಿ ತಮ್ಮ ಸಮ್ಮತಿಯನ್ನು ಸೂಚಿಸಲು ಮುದ್ರೆಯನ್ನು ಒತ್ತುತ್ತಿದ್ದರು. ಉಂಗುರಗಳಲ್ಲಿ ಮುದ್ರೆಗಳನ್ನು ಅಳವಡಿಸಲಾಗುತ್ತಿತ್ತು. ಅಂಥವನ್ನು ಮುದ್ರೆಯುಂಗುರ ಎಂದೇ ಕರೆಯಲಾಗಿತ್ತು.

ಮೂಲತಃ ಕೇಡು ಸಂಭವಿಸದಿರಲೆಂದು ಕಟ್ಟಿಕೊಳ್ಳುತ್ತಿದ್ದ ತಾಯಿತ ಅಥವಾ ರಕ್ಷಾಯಂತ್ರ ಕಾಲಕ್ರಮೇಣ ಬೆಳೆವಣಿಗೆ ಹೊಂದಿ ಮೊದಲ ಮುದ್ರೆಯಾಗಿರಬೇಕೆಂದು ಭಾವಿಸಲಾಗಿದೆ. ಮೃದುವಾದ ಜೇಡಿಮಣ್ಣಿನ ಮೇಲೆ ಸ್ಫುಟವಾದ ಪ್ರತಿಕೃತಿ ಮೂಡಿಸಲು ಕೊರೆದ ಹರಳು ಅಥವಾ ಮಣಿಯನ್ನು ಬಳಸಲಾಯಿತು. ಇದರಿಂದಾಗಿ ಮೂಲಮುದ್ರೆಯಲ್ಲಿ ಹುದುಗಿದ್ದ ರಕ್ಷಕಶಕ್ತಿಯ ಕೆಲವಂಶ ಪ್ರತಿಕೃತಿಗೂ ಲಭ್ಯವಾಗುತ್ತವೆಂಬ ಭಾವನೆ ಇತ್ತು. ಜಾಡಿಯೊಂದರ ಜೇಡಿಮಣ್ಣಿನ ಮುಚ್ಚಳದ ಮೇಲೆ ತಾಯಿತ ಅಥವಾ ರಕ್ಷಾಯಂತ್ರದ ಮುದ್ರೆ ಇದ್ದರೆ, ಜಾಡಿಯಲ್ಲಿಯ ಪದಾರ್ಥಗಳನ್ನು ಕದಿಯಲಾಗುವುದಿಲ್ಲ ಎನ್ನುವ ನಂಬಿಕೆ ಬೆಳೆಯಿತು. ಮುದ್ರೆಗಳು ಇಂಥ ಜಾಡಿಗಳು ನಿರ್ದಿಷ್ಟ ವ್ಯಕ್ತಿಗಳಿಗೆ ಸೇರಿದವೆಂಬುದನ್ನು ತಿಳಿಸುವ ಸಾಕ್ಷಿಯಾದವು. ಹೀಗಾಗಿ ಇವು ಬಹುಬೇಗನೆ ವ್ಯಕ್ತಿಯೊಬ್ಬನ ಖಾಸಗಿ ಸ್ವತ್ತನ್ನು ಗುರುತಿಸಲು ಸಹಾಯಕವಾಗುವ ಸಾಧನಗಳೂ ಆದವು. ಮೆಸೆಪೊಟೇಮಿಯಾದ ನವಶಿಲಾಯುಗದ ವಸತಿಸ್ಥಳಗಳಲ್ಲಿ ಈ ತೆರನ ಮುದ್ರೆಗಳು ಕಂಡುಬಂದಿವೆ.

ಅತಿ ಪ್ರಾಚೀನ ಮುದ್ರೆಗಳು ಮಟ್ಟಸವಾಗಿದ್ದು ಜೇಡಿಮಣ್ಣಿನ ಮೇಲೆ ಛಾಪಿಸಲ್ಪಟ್ಟ ಚಿಹ್ನೆಗಳಿಂದ ಕೂಡಿದ್ದವು. ಇವು ಅಂಕಿತಮುದ್ರೆ ಎಂದು ಪರಿಚಿತವಾದವು. ಅನಂತರದ ಬೆಳೆವಣಿಗೆ ಎಂದರೆ ವರ್ತುಲಸ್ತಂಭಾಕೃತಿಯ ಮುದ್ರೆಗಳು ಹಸಿ ಜೇಡಿಮಣ್ಣಿನ ವರ್ತುಲಸ್ತಂಭದ ಹೊರಮೈಯಲ್ಲಿ ಕೊರೆದ ಸಂಕೇತಗಳಿಂದ ಕೂಡಿದ ಮುದ್ರೆಗಳ ಪ್ರತಿಕೃತಿಗಳಿದ್ದವು.

ಗ್ರೀಸ್ ಮತ್ತು ಈಜಿಪ್ಟ್‍ನಿಂದ ಇರಾನ್‍ವರೆಗೆ ಆಗ್ನೇಯ ಯೂರೋಪ್ ಹಾಗೂ ಮಧ್ಯಪ್ರಾಚ್ಯದ ಎಲ್ಲೆಡೆ ನಡೆಸಿದ ಉತ್ಖನನಗಳಲ್ಲಿ ಮುದ್ರೆಗಳು ಲಭ್ಯವಾಗಿವೆ. ಈಜಿಪ್ಟ್‍ನ ಫೆರೊ ಜೆನೆಸಿಸ್ ಎಂಬಲ್ಲಿಗೆ ಜೋಸೆಫನನ್ನು ಪ್ರತಿನಿಧಿಯಾಗಿ ನೇಮಿಸಿ ಆತನಿಗೆ ಅಧಿಕಾರ ವಹಿಸಿದ ಕುರುಹಾಗಿ ಉಂಗುರವೊಂದನ್ನು ನೀಡಿದನೆಂದು ತಿಳಿದುಬರುತ್ತದೆ. ಇದು ಪ್ರಾಯಶಃ ಮುದ್ರೆಯುಂಗುರವಾಗಿದ್ದು ಜೋಸೆಫನಿಗೆ ಇದರಿಂದ ರಾಜವಂಶದ ಆಸ್ತಿಪಾಸ್ತಿಗಳನ್ನು ಗುರುತಿಸಲು ಅನುಕೂಲವಾಯಿತು. ದಾಖಲೆಪತ್ರಗಳ ಮೇಲೆ ಮುದ್ರೆಹಾಕಲು ಕೂಡ ಇದರ ಬಳಕೆಯಾಗಿದ್ದಿರಬೇಕು. ಈಜಿಪ್ಟಿನ ಅನೇಕ ಮುದ್ರೆಗಳು ಜೀರುಂಡೆ ರೂಪದಲ್ಲಿವೆ.

ಜ್ಯಾಮಿತೀಯ ವಿನ್ಯಾಸಗಳು, ಕುಲದೇವತಾ ಚಿಹ್ನೆಗಳು, ಮಾಂತ್ರಿಕವಸ್ತುರೂಪಗಳು ಅಥವಾ ಪ್ರಾಣಿಚಿತ್ರಗಳು ಮುದ್ರೆಗಳ ಮೇಲಿರುವ ಪ್ರಾಚೀನತಮ ಚಿಹ್ನೆಗಳು. ಲಿಪಿಯ ಅನ್ವೇಷಣೆಯ ತರುವಾಯ ಮುದ್ರೆಗಳ ಮೇಲೆ ಅವುಗಳ ಮಾಲೀಕನ ಹೆಸರೂ ಸೇರ್ಪಡೆಯಾಯಿತು. 1904ರಲ್ಲಿ ಮ್ಯಾಗಿಡೊ ಎಂಬಲ್ಲಿ ನಡೆದ ಉತ್ಖನನದಲ್ಲಿ ದೊರೆತ ಮುದ್ರೆ ಇದಕ್ಕೆ ಉತ್ತಮ ನಿದರ್ಶನ. ಜಾಸ್ಸರ್ ಶಿಲೆಯಲ್ಲಿ ಮಾಡಿದ ಈ ಮುದ್ರೆಯ ಮೇಲೆ ಗರ್ಜಿಸುತ್ತಿರುವ ಸಿಂಹದ ಚಿತ್ರವಿದೆ. ಮುದ್ರೆಯ ಮೇಲೆ ಜೆರೊಬೋಮಿನ ಸೇವಕನಾದ ಷೇಮನದು ಎಂಬ ಶಾಸನವಿದೆ. ಷೇಮನ ಮುದ್ರೆ ಅಥವಾ ಆಸ್ತಿಯನ್ನು ಇದು ಸೂಚಿಸುತ್ತದೆ. ಈ ಮುದ್ರೆಯ ಕಾಲ ಕ್ರಿ. ಪೂ. ಸು. 750. (ಎಚ್.ಎಂ.ಎನ್.ಆರ್.)