ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುರಿಯ
ಮುರಿಯ ಭಾರತೀಯ ಬುಡಕಟ್ಟುಗಳ ಪೈಕಿ ಒಂದು. ಇವರು ಮಧ್ಯ ಪ್ರದೇಶದ ಬಸ್ತಾರ್ ಜಿಲ್ಲೆಯ ಕಾಡುಗಳಲ್ಲಿ ಹೆಚ್ಚಾಗಿ ನೆಲಸಿದ್ದಾರೆ. ಚಿಕ್ಕ ಚಿಕ್ಕ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಾರೆ. ಒಂದು ಹಾಡಿಯಲ್ಲಿ ಎಂಟು ಹತ್ತು ಗುಡಿಸಲುಗಳಿರುತ್ತವೆ. ಕಾಡುಮೃಗಗಳ ಹಾವಳಿಯಿಂದ ಸ್ವರಕ್ಷಣೆ ಹಾಗೂ ಕೋಳಿಗಳ ರಕ್ಷಣೆಗಾಗಿ ಹಾಡಿಯ ಸುತ್ತ ಗಟ್ಟಿಮುಟ್ಟಾದ ಬೇಲಿ ಕಟ್ಟಿ ಕೊಂಡಿರುತ್ತಾರೆ. ಹಾಡಿಯಲ್ಲಿ ದೇವರಗುಡಿ. ಅದರ ಎದುರಿಗೇ ಕೊರಡುಸ್ತಂಭ. 'ಭಾರ ಬಂದಾಗ ಪೂಜಾರಿಗೆ ಕುಳಿತುಕೊಳ್ಳಲು ಚೂಪಾದ ಮೊಳೆಗಳನ್ನು ಜೋಡಿಸಿದ ಆಸನವುಳ್ಳ ಒಂದು ಜೋಕಾಲಿ. ಕಾಳುಕಡ್ಡಿಗಳ ದಾಸ್ತಾನಿಗಾಗಿ ದೊಡ್ಡ ಕಣಜ ಇನಿಷ್ಟು ಇರುತ್ತವೆ. ಹಾಡಿಯ ಒಂದು ಅಂಚಿನಲ್ಲಿ ಉಳಿದ ಗುಡಿಸಿಲುಗಳಿಗಿಂತ ದೊಡ್ಡದಾದ. ಒಂದು ಮನೆ ಇರುತ್ತದೆ. ಅದನ್ನು 'ಘೋಟುಲ್ ಎನ್ನುತ್ತಾರೆ. ಇದು ಹಾಡಿಯಲ್ಲಿ ಬೆಳೆಯುವ ಮಕ್ಕಳು ಮಲಗುವ ಸ್ಥಳ ಇಂಥ ಅನೇಕ ಹಾಡುಗಳು ಕಾಡಿನಲ್ಲಿ ಚದರಿದಂತೆ ಹರಡಿಕೊಂಡಿರುತ್ತವೆ. ಹಾಡಿಯ ಜನರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಂತೆ ಕೂಡಿಬಾಳುತ್ತಾರೆ. ಈ ಜನ ನೈರ್ಮಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಇವರ ಗುಡಿಸಿಲಿನ ಒಂದು ಪಕ್ಕದಲ್ಲಿ ತರಕಾರಿ ಬೆಳೆಸುವ ಹಿತ್ತಿಲು ಇದ್ದರೆ. ಇನ್ನೊಂದು ಬದಿಯಲ್ಲಿ ಕೋಳಿಒಡ್ಡಿ ಇರುತ್ತದೆ.
ಮುರಿಯ ಜನ ಕುಳ್ಳುರಾದರೂ ದೃಢಕಾಯರು: ಸುರೂಪಿಗಳು, ಇವರ ಮೈಬಣ್ಣ ಕಂದು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಸೇಮಿಸುತ್ತಾರೆ. ಬೆಳಗಿನ ಊಟಕ್ಕೆ 'ಪೇಜು (ಗಂಜಿ) ಕುದಿಸಿ ಕುಡಿಯುತ್ತಾರೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಹೋಗುವಾಗ 'ಲಾಂದಾ (ಗಂಜೆ ಮತ್ತು ಅಕ್ಕಿಹೆಂಡ) ಸೇವಿಸುವರು. 'ಕುಚ್ಚಕ್ಕಿ ಅನ್ನ ಮತ್ತು ಕಾಯಿಪಲ್ಯೆ ಈಗೀಗ ಇವರಲ್ಲಿ ಸಾಮಾನ್ಯವಾಗಿದೆ. ಮಾಂಸಾಹಾರ ಹೆಚ್ಚಾಗಿ ಮೊಲ, ಕಾಡಳಿಲು, ಮೀನುಗಳಿಂದ ಕೂಡಿರುತ್ತದೆ. ಮದ್ಯಪಾನ ತಂಬಾಕು ಸೇವನೆ ಸ್ತ್ರೀ ಪುರಷರಿಬ್ಬರಲ್ಲೂ ಉಂಟು. ರಾತ್ರಿಯಲ್ಲಿ ದೀಪದೀವಟಿಕೆಗಳ ಉಪಯೋಗ ಇವರಲ್ಲಿಲ್ಲ. ಸೂರ್ಯಾಸ್ತದೊಂದಿಗೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಮುಗಿಸಿಕೊಳ್ಳುವ ಇವರು ರಾತ್ರಿಯ ಹೊತ್ತು ಗುಡಿಸಲುಗಳನ್ನು ಬೆಚ್ಚಗಿಡಲು ಮುಂದಾಗಿ ಬೆಂಕಿ ಉರಿಸುತ್ತಾರೆ.
ಕೆಲಸದ ವಿಂಗಡಣೆಯ ವಿಷಯದಲ್ಲಿ ಮುರಿಯಜನ ಇತರ ಬುಡಕಟ್ಟುಗಳಿಂದ ತೀರ ಭಿನ್ನರಲ್ಲ. ಪುರುಷರು ಕಾಡಿನಲ್ಲಿ ಬೇಟೆಯಾಡಿದರೆ ಸ್ತ್ರೀಯರು ಹಣ್ಣು ಹಂಪಲು, ಗೆಡ್ಡೆಗೆಣಸು, ಎಣ್ಣೆಕಾಳು (ಔಡಲಬೀಜ). ಎಲೆ (ದೊನ್ನೆಗಾಗಿ), ಸೌದೆ ಶೇಖರಿಸಿಕೊಂಡು ಬರುತ್ತಾರೆ. ಹಿತ್ತಿಲುವ್ಯವಸಾಯ ಮತ್ತು ಕೋಳಿ ಸಾಕಣೆ ಮುರಿಯ ಸ್ತ್ರೀಯರಿಗೆ ಬಲು ಪ್ರಿಯವಾದ ಕಸಬುಗಳು. ಹಿತ್ತಿಲಲ್ಲಿ ಸೊಪ್ಪು ತರಕಾರಿ ಬೆಳೆಸುತ್ತಾರೆ. ವಿರಾಮ ವೇಳೆಯಲ್ಲಿ ದೊನ್ನೆ ತಯಾರಿಸುವುದು. ಬುಟ್ಟಿ ಹೆಣೆಯುವುದು ಮೊದಲಾದ ಕೆಲಸಗಳನ್ನು ಕೈಗೊಳ್ಳುತ್ತಾರೆ. ಮುರಿಯ ಜನರಿಗೆ ವಾರಕೊಮ್ಮೆ ನಡೆಯುವ ಸಂತೆ. ವರ್ಷಕೊಮ್ಮೆ ಜರಗುವ ಜಾತ್ರೆ. ದಸರ ಹಬ್ಬಗಳೇ ಹೆಚ್ಚಿನ ಆಕರ್ಷಣೆ. ಇವರಲ್ಲಿ ಚಾಟಿವ್ಯವಸ್ಥೆ (ಬಾರ್ಟರ್ ಸಿಸ್ಟಮ್) ಈಗಲೂ ರೂಢಿಯಲ್ಲಿದೆ.
ಮುರಿಯ ಜನರ ಉಡುಗೆತೊಡುಗೆಗಳೂ ಆಕರ್ಷಕವಾದವು. ಸ್ತ್ರೀಯರು ತಲೆಯ ಬಲಬದಿಗೆ ಬರುವಂತೆ ಮುಡಿ ಕಟ್ಟಿಕೊಂಡು ಕಾಡು ಹೂಮುಡಿಯುತ್ತಾರೆ. ತಾವೇ ಪೋಣಿಸಿ ಸಿದ್ಧಮಾಡಿದ ಗಾಜಿನ ಮುತ್ತು, ಮಣಿ ಸರಗಳ ರಾಶಿಯನ್ನು ಕೊರಳಿಗೆ ಧರಿಸುತ್ತಾರೆ. ಸೊಂಟಕ್ಕೆ ಕಿರುಸೀರೆಯನ್ನು ಸುತ್ತಿಕೊಳ್ಳುತ್ತಾರೆ. ಇತ್ತೀಚೆಗೆ ಮುತ್ತು. ಮಣಿಗಳನ್ನು ಪೇಟೆಯಿಂದ ಕೊಂಡು ತರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅವನು ವಿವಿಧ ವಿನ್ಯಾಸಗಳಲ್ಲಿ ಕಲಾತ್ಮಕವಾಗಿ ಪೋಣಿಸುವಲ್ಲಿ ಇವರ ಕೈಚಳಕ, ಪ್ರತಿಭೆ ಎದ್ದುಕಾಣುತ್ತದೆ. ಹೆಣ್ಣುಮಕ್ಕಳು ಕೈಬೆರೆಳುಗಳಿಗೆ ಹೆಚ್ಚಾಗಿ ಉಂಗುರ ಧರಿಸುತ್ತಾರೆ. ಮಾಂತ್ರಿಕ ಕಾರಣಗಳಿಗಾಗಿ ಲೋಹಾಭರಣಗಳನ್ನು ಧರಿಸುವುದನ್ನು ಈ ಜನ ರೂಢಿಸಿಕೊಂಡಿದ್ದಾರೆ. ಗುಡುಗು ಸಿಡಿಲು ಮಿಂಚುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಮದುವೆ ಕಾಲದಲ್ಲಿ ವಿರೋಧಿಗಳ ಮಾಟಮಂತ್ರವನ್ನು ದೂರಮಾಡಲು ಈ ಉಂಗುರಗಳು ಬೇಕಾಗುತ್ತವೆ. ತಲೆನೋವನ್ನು ಶಮನ ಗೊಳಿಸುವ ಗುಣ ಲೋಹಾಭರಣಗಳಿಗಿದೆ ಎಂಬುದು ಈ ಜನರ ಒಂದು ನಂಬಿಕೆ. ಮಾಟಮಂತ್ರಗಳಿಂದಾಗುವ ಪರಿಣಾಮಗಳನ್ನು ನಿವಾರಿಸಲು ಇವರು ಕವಡೆಗಳನ್ನೂ ಬಳಸುವುದುಂಟು. ತೀವ್ರ ಅನಾರೋಗ್ಯಕ್ಕೆ ತುತ್ತಾದ ಮಕ್ಕಳು ಕೊರಳಿಗೆ ಕವಡೆಸರ ಕಟ್ಟುವುದು ಸಂಪ್ರದಾಯ. ಹಾಡಿಗೆ ಅನಿಷ್ಟ ಅಂಟಿಕೊಳ್ಳದಿರಲೆಂದು ಬಾಗಿಲಲ್ಲಿ ಚಪ್ಪಲಿಯೊಂದಕ್ಕೆ ಕವಡೆಕಟ್ಟಿ ನೇತುಹಾಕುವುದುಂಟು. ಹಾವಿನ ವಿಷ ಇಳಿಸಲು ಕೂಡ ಕವಡೆಗಳನ್ನು ಬಳಸುತ್ತಾರೆ.
ಹಬ್ಬ ಹರಿದಿನಗಳಂದು ಮುರಿಯ ಹೆಂಗಸರು ಗಂಡಸರು ವಿಶೇಷವಾಗಿ ಹೂ, ಎಲೆ ಮತ್ತು ಗರಿಗಳಿಂದ ಅಲಂಕಾರ ಮಾಡಿಕೊಳ್ಳುತ್ತಾರೆ. ಕೊರಳಿಗೆ ದೊಡ್ಡ ಕವಡೆಗಳನ್ನು ಧರಿಸುತ್ತಾರೆ. ಅವನ್ನು ಅಲಂಕಾರವಾಗಿ ತಲೆಗೂದಲಿಗೂ ಕಟ್ಟಿ ಕೊಳ್ಳುತ್ತಾರೆ. ಹೆಣ್ಣುಮಕ್ಕಳು ತಲೆಯ ಹಿಂಭಾಗ ಪೂರ್ಣವಾಗಿ ಮುಚ್ಚುವಂತೆ ಕವಡೆಗಳನ್ನು ಸಿಕ್ಕಿಸುವುದುಂಟು. ಹುಡುಗಿಯರು ಕೆಲವು ಸಂದರ್ಭಗಳಲ್ಲಿ ಕಲಾತ್ಮಕವಾಗಿ ಬಾಚಣಿಗೆಗಳನ್ನೂ ಧರಿಸುವುದುಂಟು. ಇವನ್ನು ತರುಣರು ಸಿದ್ಧ ಮಾಡಿಕೊಡುತ್ತಾರೆ. ವಿವಾಹಿತ ಸ್ತ್ರೀಯರ ಬಾಚಣಿಗೆಗಳನ್ನು ಧರಿಸದಂತೆ ಸಾಮಾಜಿಕ ನಿರ್ಬಂಧವಿದ್ದು ಒಂದು ವೇಳೆ ಧರಿಸಿದರೆ ತಲೆನೋವು ಅಥವಾ ಜ್ವರ ಬರುತ್ತದೆಂಬ ನಂಬಿಕೆಯಿದೆ.
ಮುರಿಯ ಜನ ಕಿರಿದಾದ ಗುಡಿಸಲುಗಳಲ್ಲಿ ವಾಸಿಸುವುದರಿಂದ ಸಂತಾನೋತ್ಪತ್ತಿಗೆ ಕಾಡಿನ ಆಸರೆ ಪಡೆಯುತ್ತಾರೆ. ಹೆರಿಗೆ ಒಂದು ಸ್ವಾಭಾವಿಕ ಪ್ರಕ್ರಿಯೆ ಎಂದು ನಂಬುತ್ತಾರೆ. ಹೆರಿಗೆ ಕಾಲದಲ್ಲಿ ಗರ್ಭಿಣಿಯರು ಸೂಲಗಿತ್ತಿಯ ನೆರವು ನಿರೀಕ್ಷಿಸುವುದಿಲ್ಲ. ಆದರೆ ಹಾಡಿಯ ಅನುಭವಿ ಸ್ತ್ರೀಯರು ಕೆಲವೊಮ್ಮೆ ನೆರವಾಗುವುದುಂಟು. ಮಗುವನ್ನು ಪ್ರಸವಿಸಿದ ಸ್ತ್ರೀ ಹೊಕ್ಕುಳುಬಳ್ಳಿಯನ್ನು ತಾನೇ ಕತ್ತರಿಸಿಕೊಂಡು ನಿದರ್ಶನಗಳೂ ಇವೆ.
ಮುರಿಯ ಮಕ್ಕಳು ಐದಾರು ವರ್ಷಗಳ ತನಕ ಗುಡಿಸಲ ಒಳಹೊರಗೆ ಅಡಿಕೊಂಡು ಬೆಳೆಯುತ್ತವೆ. ಗಿಳಿ, ಮೈನಾಗಳಿಗೆ ಮಾತು ಕಲಿಸುವುದು, ಕೋತಿ ಸಾಕಿ ಕುಣಿಸುವುದು, ಕಾಡಿನಲ್ಲಿ ಅಲೆದು ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡುವುದು ಮೊದಾಲಾದವು ಇವರ ದೈನಂದಿನ ಚಟುವಟಿಕೆಗಳು. ಸಂಜೆ ಊಟ ಮುಗಿದ ಮೇಲೆ 'ಘೋಟುಲ್‍ಗೆ ಹೋಗುತ್ತಾರೆ. ಅಲ್ಲಿ ಹುಡುಗ ಹುಡುಗಿಯರಿಗೆ ಸಮಾನ ಅವಕಾಶವಿದೆ. ಒಡಹುಟ್ಟಿದವರು ಕೂಡಿ ಬಾಳುವಂತೆ ಅಲ್ಲಿ ಹಾಡಿಯ ಮಕ್ಕಳೆಲ್ಲ ಕೂಡಿಬಾಳುವುದು ವಿಶೇಷ. ಇದು ಮುರಿಯ ಜನರು ವಿಶಿಷ್ಟ ಬಗೆಯ ಸಾಮಾಜಿಕ ವ್ಯವಸ್ಥೆ. ಹಾಡಿಗೆ ಹೊರಗಿನಿಂದ ಅತಿಥಿಗಳು ಆಗಮಿಸಿದರೆ ಅವರಿಗೆ ಘೋಟುಲ್‍ನಲ್ಲಿ ಆಶ್ರಯ ಮಾಡಿಕೊಡಲಾಗುತ್ತದೆ. ಹಾಡಿಯ ಪಂಚಾಯಿತಿ, ಸಭೆ, ಸಮಾರಂಭಗಳು ಜರಗುವುದು ಇಲ್ಲಿಯೇ. ಅಲ್ಲಿ ಹಾಡಿಯ ಎಲ್ಲ ಹುಡುಗ ಹುಡುಗಿಯರು ಸೇರಿ ಹಾಡಿ ಕುಣಿಯುವ ಕಾರ್ಯಕ್ರಮಗಳೂ ಇರುತ್ತವೆ. ಹಾಡು ಹಸೆ, ಗಾಯನ ಮುಂತಾದ ಚಟುವಟಿಕೆಗಳಿಗೆ ಅಲ್ಲಿ ಹೆಚ್ಚು ಪ್ರಾಶಸ್ತ್ಯ. ಪಿಳ್ಳಂಗೋವಿ, ಕೊಳಲು, ಮಾಂದ್ರಿ ನುಡಿಸುವ ಕಲಾವಿದರೂ ಇಲ್ಲಿ ಪಾಲ್ಗೊಳ್ಳುತ್ತಾರೆ. ಆಡಿ ಹಾಡಿ ದಣಿದಾಗ ಎಲ್ಲರೂ ಒಂದೇ ಕಡೆ ಒಟ್ಟಿಗೆ ಮಲಗುವುದು ರೂಢಿ. ಘೋಟುಲ್‍ನ ಹುಡುಗ ಹುಡುಗಿಯರು ಯಾರ ಸಹವಾಸ ಇಷ್ಟವಾಗುತ್ತದೊ ಅದರೊಂದಿಗೆ ರಾತ್ರಿ ಕಳೆಯುತ್ತಾರೆ. ಘೋಟುಲ್‍ನ ಸಾಮಾಜಿಕ ಕಾನೂನುಗಳೂ ಬಿಗಿಯಾಗಿಯೇ ಇವೆ. ಬುಡಕಟ್ಟಿನ ಯುವಜನತೆ ತಪ್ಪಿ ನಡೆದು ಹುಡುಗಿಯರು ಗರ್ಭಿಣಿಯರಾದರೆ ಅದಕ್ಕೆ ಕಾರಣರಾದ ತರುಣರೊಂದಿಗೆ ವಿವಾಹ ಏರ್ಪಡಿಸುವುದು ಕ್ರಮ.
ಮುರಿಯರಲ್ಲಿ ಹೆಣ್ಣು ಸಂತಾನ ಕಡಿಮೆ. ಆದ್ದರಿಂದಲೇ ಇವರಲ್ಲಿ ವಧುದಕ್ಷಿಣೆ ಅಥವಾ ತೆರಕೊಟ್ಟು ಮದುವೆ ಮಾಡಿಕೊಳ್ಳುವ ಪದ್ಧತಿ ಜಾರಿಯಲ್ಲಿದೆ. ತೆರ ಕೊಡಲು ಸಾಧ್ಯವಾಗದ ಗಂಡು ಮಾವನಮನೆಯಲ್ಲಿ ಕೆಲಕಾಲ ಜೀತದಾಳಾಗಿ ದುಡಿದು ತೆರಸಾಲ ತೀರಿಸಬೇಕಾಗುತ್ತದೆ. ಅಣ್ಣ ಅಕಾಲ ಮರಣಕ್ಕೆ ತುತ್ತಾದರೆ ತಮ್ಮ ಅತ್ತಿಗೆಯನ್ನು ವರಿಸುವ ವ್ಯವಸ್ಥೆ ಇವರಲ್ಲಿದೆ. ಹೆಣ್ಣು ಋತುಮತಿಯಾಗುವುದಕ್ಕೆ ಮೊದಲೆ ವಿವಾಹವಾಗುವ ಸಂಭವ ಹೆಚ್ಚು. (ಎ.ಎಚ್.)