ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಸುಕಿನ ಜೋಳ
ಮುಸುಕಿನ ಜೋಳ - ಪೋಯೇಸೀ ಕುಟುಂಬದ ಮೇಡೀ ಗುಂಪಿಗೆ ಸೇರಿದ ಆಹಾರ ಧಾನ್ಯ ಸಸ್ಯ (ಮೇeóï, ಇಂಡಿಯನ್ ಕಾರನ್). ಮೆಕ್ಕೆ ಜೋಳ, ಗೋವಿನ ಜೋಳ ಪರ್ಯಾಯ ನಾಮಗಳು. ಸಸ್ಯ ವೈಜ್ಞಾನಿಕ ಪರಿಭಾಷೆಯಲ್ಲಿ ಇದರ ಹೆಸರು ಜಿûೀಯ ಮೇಸ್.
ಇದೊಂದು ಏಕವಾರ್ಷಿಕ ಸಸ್ಯ: ಇದರಲ್ಲಿ ಹಲವಾರು ಬಗೆಗಳಿದ್ದು ಇವುಗಳ ಎತ್ತರ 0.43ರಿಂದ 6 ಮೀಟರಿನವರೆಗೆ ವ್ಯತ್ಯಾಸವಾಗುತ್ತದೆ. ಗಿಡ ಕವಲೊಡೆಯದು. ಕಾಂಡ ಗಟ್ಟಿ ತಿರುಳುಳ್ಳದ್ದು: ಗೆಣ್ಣುಗಳಿಂದ ಕೂಡಿದೆ. ಬುಡದ ಕೆಲವು ಗೆಣ್ಣಿನೊಳಗೆ ಹೊಕ್ಕು ಗಿಡಕ್ಕೆ ಆಧಾರವನ್ನು ಒದಗಿಸುತ್ತವೆ. ಬುಡಭಾಗದ ಗೆಣ್ಣುಗಳು ಮೇಲ್ಭಾಗದವಕ್ಕಿಂತ ಮೋಟಾದವೂ ದಪ್ಪವಾದವೂ ಆಗಿವೆ. ಪ್ರತಿಯೊಂದು ಗೆಣ್ಣಿನಲ್ಲೂ ಒಂದು ಎಲೆಯುಂಟು. ಎಲೆಯ ಬುಡ ಕವಚದಂತಿದೆ. ಇದು ಅಂತರಗೆಣ್ಣಿನ ಒಂದಷ್ಟು ಭಾಗವನ್ನು ಸುತ್ತುವರಿದಿದ್ದು ಅನಂತರ ಕಾಂಡದಿಂದ ಬೇರ್ಪಟ್ಟು ಎಲೆಯ ಅಲಗು ಭಾಗವಾಗಿ ಉದ್ದ ಬೆಳೆಯುತ್ತದೆ. ಎಲೆಯ ಅಲಗು ಮತ್ತು ಬುಡ ಸೇರುವಲ್ಲಿ ಪೊರೆಯಂಥ ಲಿಗ್ಯೂಲ್ ಉಂಟು. ಎಲೆಯ ಅಲಗು ಉದ್ದನೆಯ ಚಪ್ಪಟೆ ರಚನೆ. ತುದಿಯೆಡೆಗೆ ಸಾಗಿದಂತೆ ಕಿರಿದುಗೊಳ್ಳುತ್ತ ಬರುತ್ತದೆ. ಇದರ ಮೇಲ್ಮೈ ಸಣ್ಣ ಕೂದಲುಗಳಿಂದ ಕೂಡಿದೆ. ಎಲೆಯ ಉದ್ದಕ್ಕೂ ಚೆನ್ನಾಗಿ ಕಾಣುವ ಮಧ್ಯ ನರ ಉಂಟು. ಅಲಗಿನ ಅಂಚು ಕೊಂಚ ಒರಟು ಹಾಗೂ ಎಲೆಯ ಬುಡಭಾಗದೆಡೆ ಅಂಕುಡೊಂಕಾಗಿದೆ.
ಮುಸುಕಿನ ಜೋಳದಲ್ಲಿ ಗಂಡು ಹೆಣ್ಣು ಹೂಗಳು ಪ್ರತ್ಯೇಕ ಮಂಜರಿಗಳಲ್ಲಿ ರೂಪುಗೊಳ್ಳುತ್ತವೆ. ಗಂಡು ಹೂಗೊಂಚಲು ಗಿಡದ ತುದಿಯಲ್ಲೂ ಹೆಣ್ಣು ಹೂಗೊಂಚಲು ಗಿಡದ ಮಧ್ಯೆ ಅಥವಾ ಬುಡದಲ್ಲಿ ಇರುವ ಎಲೆಯ ಕಕ್ಷದಲ್ಲೂ ಸ್ಥಿತವಾಗಿವೆ. ಗಂಡು ಗೊಂಚಲು ಅನೇಕ ಕವಲುಗಳುಳ್ಳ ಪ್ಯಾನಿಕಲ್ ಎಂಬ ಬಗೆಯದು. ಇದರಲ್ಲಿ ನೆಟ್ಟಗೆ ಬೆಳೆಯುವ ಪ್ರಧಾನ ಅಕ್ಷ ಮತ್ತು ಇದರಿಂದ ಹೊರಟು ಆಚೀಚೆ ಬಾಗಿರುವ ಕವಲುಗಳಿವೆ. ಎರಡರ ಮೇಲೂ ಒಂಟಿ ಇಲ್ಲವೆ ಎರಡು ಸಾಲುಗಳಲ್ಲಿ ಜೋಡಿ ಗಂಡು ಹೂಗಳಿರುವುವು. ಪ್ರತಿಯೊಂದು ಗಂಡು ಹೂವಿನಲ್ಲಿ 3 ಪುಂಕೇಸರಗಳಿವೆ.
ಹೆಣ್ಣು ಹೂಗೊಂಚಲು ಪರಿವರ್ತಿತ ಪಾಶ್ರ್ವಕವಲು: ಪ್ರಧಾನ ಕಾಂಡದ ಮೇಲೆ ಎಲೆಯ ಕಕ್ಷದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನೇ ತೆನೆ ಎಂದು ಕರೆಯುವುದು. ಇದರಲ್ಲೂ ಮುಖ್ಯ ಅಕ್ಷವೊಂದಿದ್ದು ಅದರ ಮೇಲೆ ಅನೇಕ ಸಾಲುಗಳಲ್ಲಿ ಜೊತೆ ಜೊತೆಯಾಗಿ ಸ್ಥಿತವಾಗಿರುವ ಹೆಣ್ಣು ಹೂಗಳು ಇವೆ. ಪ್ರತಿಯೊಂದು ಜೋಡಿಯಲ್ಲೂ ಒಂದು ಹೂ ಮಾತ್ರ ಫಲವಂತವಾಗಿರುತ್ತದೆ. ಇಡೀ ಗೊಂಚಲನ್ನೇ ಆವರಿಸಿ ಅದಕ್ಕೆ ರಕ್ಷಣೆ ಒದಗಿಸುವಂತೆ ಅನೇಕ ಎಲೆಗಳ ಬುಡಕವಚದ ಹೊದಿಕೆಯಿಂದೆ. ಪ್ರತಿಯೊಂದು ಅಂಡಾಶಯಕ್ಕೂ ಉದ್ದನೆಯ ನಯವಾದ ದಾರದಂಥ ಶಲಕ್ಕೆ ಉಂಟು. ಇಂಥ ನೂರಾರು ಶಲಾಕೆಗಳು ಹೊಗೊಂಚಲಿನ ಮೇಲ್ತುದಿಯಿಂದ ಹೊರ ಚಾಚಿಕೊಂಡಿರುತ್ತದೆ. ಇವನ್ನು ಒಟ್ಟಾಗಿ 'ರೇಷ್ಮೆ (ಸಿಲ್ಕ್) ಎಂದು ಕರೆಯುವುದಂಟು. ಪ್ರತಿಯೊಂದು ಹೆಣ್ಣು ಹೂವಿನಲ್ಲಿ ಒಂದೇ ಒಂದು ಅಂಡಕವುಂಟು. ಪರಾಗಸ್ಪರ್ಶ ಕ್ರಿಯೆ ಗಾಳಿಯ ಮೂಲಕ ನಡೆಯುತ್ತದೆ. ನಿಷೇಚನ ಕ್ರಿಯೆ ಮುಗಿದ ಅನಂತರ ರೇಷ್ಮೆಗಳಲ್ಲ ಬಾಡಿ ಉದುರಿ ಹೋಗುತ್ತವಲ್ಲದೆ ಇಡೀ ಅಂಡಾಶಯ ಕ್ಯಾರಿಯಾಪ್ಸಿಸ್ ಎಂಬ ಹೆಸರಿನ ಫಲ (ಕಾಳು) ಆಗಿ ರೂಪುಗೊಳ್ಳುತ್ತದೆ. ತೆನೆಯುದ್ದಕ್ಕೂ ಈ ಕಾಳುಗಳು ಸಾಲಾಗಿ ದಂತಪಂಕ್ತಿಯಂತೆ ಜೋಡಣೆಗೊಂಡಿರುವುವು. ಕಾಳುಗಳ ಮೇಲ್ಮೆ ಗುಂಡಾಗಿ ನಯವಾಗಿರಬಹುದು, ಸುಕ್ಕುಗಟ್ಟಿರಬಹುದು ಇಲ್ಲವೆ ಒಂದೆಡೆಯಲ್ಲಿ ಗುಳಿಯಂತೆ ಕಾಣುವ ತಗ್ಗಿನಿಂದ ಕೂಡಿರಬಹುದು. ಬೀಜಗಳ ಒಳಗಿನ ಭ್ರೂಣಾಹಾರ ಗಟ್ಟಿಯಾಗಿರಬಹುದು ಅಥವಾ ಹಿಟ್ಟಿನಂತೆ ಮೆತುವಾಗಿರಬಹುದು. ಅದರ ಬಣ್ಣ ಕೂಡ ಬಿಳಿ, ಹಳದಿ, ಕೆಂಪು ಊದಾ ಹೀಗೆ ವೈವಿಧ್ಯಮಯವಾಗಿರುತ್ತದೆ. ಭ್ರೂಣಾಹಾರದಲ್ಲಿ ಪ್ರೋಟೀನು ಹಾಗೂ ಪಿಷ್ಟ ಇವು ಹೆಚ್ಚಿನ ಮೊತ್ತದಲ್ಲಿವೆ. ಭ್ರೂಣಭಾಗದಲ್ಲಿ ಕಾಳಿನ ತೂಕದ ಶೇಕಡಾ 6ರಷ್ಟು ಒಂದು ಬಗೆಯ ತೈಲವುಂಟು.
ಮುಸುಕಿನ ಜೋಳಕ್ಕೆ ಪ್ರಪಂಚದ ಧಾನ್ಯ ಸಸ್ಯಗಳ ಪೈಕಿ ಮುಖ್ಯ ಸ್ಥಾನವುಂಟು. ಗೋದಿ, ಅಕ್ಕಿಗಳನ್ನು ಬಿಟ್ಟರೆ ವಿಸ್ತೀರ್ಣದಲ್ಲೂ ಇಳುವರಿಯಲ್ಲೂ ಮುಸುಕಿನ ಜೋಳ ಮೂರನೆಯದು. ಎಲ್ಲ ಭೂಖಂಡಗಳಲ್ಲೂ ಒಂದಲ್ಲ ಒಂದು ದೇಶದಲ್ಲಿ ಇದರ ಬೇಸಾಯ ಇದ್ದೇ ಇದೆ. ಪ್ರಪಂಚಾದ್ಯಂತ ಒಟ್ಟು 110 ಮಿಲಿಯನ್ ಹೆಕ್ಟೇರಿಗೂ ಹೆಚ್ಚು. ಪ್ರದೇಶದಲ್ಲಿ ಇದನ್ನು ಬೇಸಾಯ ಮಾಡಲಾಗುತ್ತಿದೆ.
ಮುಸುಕಿನ ಜೋಳ ಬಲು ಪ್ರಾಚೀನ ಕಾಲದಿಂದ ಕೃಷಿಯಲ್ಲಿದೆ. ಸಹಜವಾಗಿಯೇ ಇದರ ಉಗಮದ ಬಗ್ಗೆ. ಮೂಲನೆಲೆಯ ಬಗ್ಗೆ. ಪೂರ್ವಜ ಸಸ್ಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಮೆಕ್ಸಿಕೊ ಪ್ರದೇಶದಲ್ಲಿ 7000ರ ವರ್ಷಕ್ಕೂ ಹಿಂದಿನ ಫಾಸಿಲ್ ರೂಪದ ಮುಸುಕಿನ ಜೋಳದ ಪರಾಗ ಕಣಗಳೂ ಇತರೆ ಪುರಾತತ್ತ್ವ ಪುರಾವೆಗಳೂ ಪತ್ತೆಯಾಗಿರುವುದರಿಂದ ಈ ಸಸ್ಯ ಅಲ್ಲಿಯೇ ಪ್ರಪ್ರಥಮವಾಗಿ ಬೇಸಾಯಕ್ಕೆ ಬಂದಿತೆಂಬ ಅಭಿಪ್ರಾಯವನ್ನು ತಳೆಯಲಾಗಿದೆ. ಅಂತೆಯೇ ಈ ಪ್ರದೇಶದಲ್ಲಿ ಮುಸುಕಿನ ಜೋಳದ ಹತ್ತಿರ ಸಂಬಂಧಿ ಸಸ್ಯಗಳಾದ ಯೂಕ್ಲೀನ ಮೆಕ್ಸಿಕಾನ (ಟೀಯೊಸಿಂಟಿ) ಮತ್ತು ಟ್ರಿಟಿಕಮ್ ಪ್ರಭೇದಗಳು ಬೆಳೆಯುತ್ತಿದ್ದು, ಪೂರ್ವಜ ಬಗೆಯ ಮುಸುಕಿನ ಜೋಳದೊಂದಿಗೆ ನೈಸರ್ಗಿಕವಾಗಿ ನಡೆದ ಸಂಕರದ ಫಲವಾಗಿ ಇಂದು ಕೃಷಿಯಲ್ಲಿರುವ ಜೋಳ ರೂಪುಗೊಂಡಿತೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ಅಮೆರಿಕಗಳ ಬೊಲೀವಿಯ, ಈಕ್ವಡಾರ್ ಮತ್ತು ಪೆರು ಪ್ರದೇಶಗಳಲ್ಲಿ ಮುಸುಕಿನ ಜೋಳ ಉಗಮಿಸಿತೆಂಬ ಅಭಿಪ್ರಾಯವೂ ಇದೆ. ಇದು ಮಧ್ಯ ಹಾಗೂ ದಕ್ಷಿಣ ಅಮೆರಿಕಗಳ ಮಾಯಾ ಮತ್ತು ಇಂಕ ದೇಶಗಳ ಜನರ ಪ್ರಧಾನ ಆಹಾರವಾಗಿತ್ತು. ಇದೇ ರೀತಿ ಈಶಾನ್ಯ ಭಾರತದ ಅಸ್ಸಾಮ್, ಮೇಘಾಲಯ, ಅರುಣಾಚಲ ಪ್ರದೇಶಗಳಲ್ಲೂ ಹಿಮಾಚಲ ಪ್ರದೇಶದ ಚಂಬಾಕಣಿವೆಯಲ್ಲೂ ಮುಸುಕಿನ ಜೋಳ ಉಗಮಿಸಿತು ಇಲ್ಲವೆ ಕೊಲಂಬಸನ ಕಾಲಕ್ಕಿಂತ ಹಿಂದಿನಿಂದಲೂ ಕೃಷಿಯಲ್ಲಿತ್ತು ಎಂಬ ವಾದವೂ ಇದೆ. ಕೊಲಂಬಸ್ ಅಮೆರಿಕವನ್ನು ಪತ್ತೆ ಹಚ್ಚಿದ ಕೆಲವೇ ದಶಕಗಳಲ್ಲಿ ಮುಸುಕಿನ ಜೋಳದ ಬೇಸಾಯ, ಅಮೆರಿಕದ ಉಳಿದ ಪ್ರದೇಶಗಳಿಗೂ, 16-17ನೆಯ ಶತಮಾನದ ವೇಳೆಗೆ ಯೂರೋಪಿಗೂ 16ನೆಯ ಶತಕದ ಆರಂಭದಲ್ಲಿ ಆಫ್ರಿಕಕ್ಕೂ ಇದೇ ವೇಳೆಗೆ ಚೀನ ಜಪಾನುಗಳಿಗೂ ಪಸರಿಸಿತು. ಬಾರತಕ್ಕೆ ಈ ಕೃಷಿಯನ್ನು ಮೊದಲು ಪರಿಚಯಿಸಿದವರು ಪೋರ್ಚುಗೀಸರು ಎಂಬ ಅಭಿಪ್ರಾಯವಿದೆ. ಕೆಲವು ತಜ್ಞರ ಪ್ರಕಾರ ಪೋರ್ಚುಗೀಸರ ಆಗಮನಕ್ಕೂ ಬಹು ಮುಂಚೆ ಅರಬ್ ದೇಶಗಳಿಂದ ಭಾರತಕ್ಕೆ ಮುಸುಕಿನ ಜೋಳಬಂದಿತು. (ಆರ್.ಎನ್.ಎಸ್.)
ಕೃಷಿಯ ವಿಸ್ತೀರ್ಣ: ಪ್ರಪಂಚದ ವಿವಿಧ ದೇಶಗಳ ಪೈಕಿ ಮುಸುಕಿನ ಜೋಳದ ಬೀಸಾಯ ಭೂಮಿಯ ವಿಸ್ತೀರ್ಣದ ದೃಷ್ಟಿಯಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಮೊದಲನೆಯದಾದರೆ ಅನಂತರ ಕ್ರಮವಾಗಿ ಬ್ರಜಿಲ್, ಚೀನ, ಮೆಕ್ಸಿಕೊ ಮತ್ತು ಭಾರತ ಬರುತ್ತವೆ. ಇಳುವರಿಯನ್ನು ತೆಗೆದುಕೊಂಡರೆ ಭಾರತ ಹತ್ತನೆಯದು. ಭಾರತದ ಸುಮಾರು 6 ಮಿಲಿಯನ್ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಮುಸುಕಿನ ಜೋಳದ ಬೆಳೆಯಿದ್ದು, ಈ ಧಾನ್ಯ ಅಕ್ಕಿ, ಬತ್ತ, ಜೋಳ ಮತ್ತು ಸೆಜ್ಜೆಗಳ ಅನಂತರದ ಸ್ಥಾನವನ್ನು ಪಡೆದಿದೆ. ಇದರ ಬೇಸಾಯಕ್ಕೆ ಪ್ರಸಿದ್ಧವಾದ ರಾಜ್ಯಗಳೆಂದರೆ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ಹಿಮಾಚಲಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ. ಇತ್ತೀಚಿನ ವರ್ಷಗಳಲ್ಲಿ ಇದರ ಬೇಸಾಯ ಗಣನೀಯವಾಗಿ ಏರುತ್ತಿದೆ.
ಬಗೆಗಳು: ಮುಸುಕಿನ ಜೋಳವನ್ನು ಅದರ ಕಾಳಿನಲ್ಲಿರುದ ಭ್ರೂಣಾಹಾರದ ರಚನೆಯ ಆಧಾರದ ಮೇಲೆ 6 ಬಗೆಗಳನ್ನಾಗಿ ವಿಂಗಡಿಸಲಾಗಿದೆ: 1 ಫ್ಲಿಂಟ್ ಕಾರ್ನ್, 2 ಡೆಂಟ್‍ಕಾರ್ನ್, 3 ಪಾಪ್ ಕಾರ್ನ್, 4 ಸ್ವೀಟ್ ಕಾರ್ನ್, 5 ಅಮೈಲೇಸಿಯಸ್ ಕಾರ್ನ್ ಮತ್ತು 6 ವ್ಯಾಕ್ಸಿ ಕಾರ್ನ್, ಅಲ್ಲದೆ ಮುಸುಕಿನ ಜೋಳದಲ್ಲಿ ಹಲವಾರು ತಳಿಗಳಿದ್ದು, ಭಾರತದ ವಾಯುಗುಣ, ಮಣ್ಣು ಮತ್ತು ಗಿಡಗಳ ಗಾತ್ರ, ಇಳುವರಿ, ರೋಗನಿರೋಧಕ ಶಕ್ತಿ ಮುಂತಾದ ಗುಣಗಳನ್ನು ಅವಲಂಬಿಸಿ, ಸಂಕರ ಪ್ರಯೋಗಗಳ ಮೂಲಕ ವೃದ್ಧಿಸಲಾದ ನೂರಾರು ತಳಿಗಳನ್ನು ಕಾಣಬಹುದು. ಇವುಗಳ ಪೈಕಿ ಕೆಲವು ಇಂತಿವೆ: ಗಂಗಾ ಹೈಬ್ರಿಡ್-1, ಗಂಗಾ ಹೈಬ್ರಿಡ್ 101, ರಣಜಿತ್ ಹೈಬ್ರಿಡ್, ಡೆಕನ್ ಹೈಬ್ರಿಡ್, ಗಂಗಾ ಸಫೇದ್ ಹೈಬ್ರಿಡ್ 2, ಗಂಗಾ ಹೈಬ್ರಿಡ್ 5, ಡೆಕನ್ 101, ಆಂಬರ್ ಕಾಂಪೋಸಿಟ್, ಕಿಸ್‍ನ್, ಜವಹರ್, ವಿಕ್ರಮ್, ಸೋನ, ವಿಜಯ್, ಶಕ್ತಿ ಇತ್ಯಾದಿ.
ಮುಸುಕಿನ ಜೋಳ ಪ್ರಧಾನವಾಗಿ ಉಷ್ಣಹವೆಯ ಬೆಳೆ. ಕೆನಡ ಹಾಗೂ ರಷ್ಯಗಳಲ್ಲಿ 580 ಉತ್ತರ ಅಕ್ಷಾಂಶದಿಂದ ತೊಡಗಿ ದಕ್ಷಿಣಾರ್ಧಗೋಳದ 400 ದಕ್ಷಿಣ ಅಕ್ಷಾಂಶದವರೆಗಿನ ಪ್ರದೇಶಗಳಲ್ಲಿ ಇದರ ಕೃಷಿ ಇದೆ. ಸಮುದ್ರ ಮಟ್ಟದಿಂದ ಹಿಡಿದು ಪೆರುವಿನ ಆಂಡೀಸ್ ಪರ್ವತ ಶ್ರೇಣಿಯ 3600 ಮೀ ಎತ್ತರದ ನೆಲದಲ್ಲಿ ಇದನ್ನು ಬೆಳೆಸಲಾಗುತ್ತದೆ. ಹಗಲಿನ ಉಷ್ಣತೆ 190-920ಅ ಇರುವಂಥ ಪ್ರದೆಶಗಳಲ್ಲಿ ಇದನ್ನು ಕೃಷಿಮಾಡಬಹುದು. ಅತಿಹೆಚ್ಚು ಉಷ್ಣತೆಯಾಗಲೀ ಕಡು ಚಳಿಯಾಗಲೀ ಇದರ ಬೆಳೆವಣಿಗೆಗೆ ಹಾನಿಕರ. ಅಂತೆಯೇ 25 ಸೆಂಮಿ.ಗೂ ಕಡಿಮೆ ಮಳೆ ಬೀಳುವ ಪ್ರದೇಶಗಳಿಂದ ಹಿಡಿದು 500 ಸೆಂಮೀಗೂ ಹೆಚ್ಚು ಮಳೆಯ ಪ್ರದೇಶಗಳಲ್ಲಿ ಇದನ್ನು ಬೆಳೆಯುವುದಿದೆ. ಭಾರತದಲ್ಲಿ ಇದನ್ನು ಮುಂಗಾರು ಬೆಳೆಯಾಗಿ ಜೂನ್-ಜುಲೈನಲ್ಲಿ ಬಿತ್ತಿ ಸೆಪ್ಟೆಂಬರ್-ನವಂಬರ್ ತಿಂಗಳಲ್ಲಿ ಕುಯ್ಲು ಮಾಡಲಾಗುತ್ತದೆ.
ಮುಸುಕಿನ ಜೋಳಕ್ಕೆ ಆಳವಾದ, ನೀರು ಸುಲಭವಾಗಿ ಬಸಿದು ಹೋಗುವಂಥ ಗೋಡುಮಣ್ಣು ಒಳ್ಳೆಯದು. ಇದನ್ನು ಮಳೆ ಆಸರೆಯ ಬೆಳೆಯಾಗಿಯೊ ಇಲ್ಲವೆ ನೀರಾವರಿ ಮೂಲಕವೊ ಬೆಳೆಸುವುದಿದೆ. ಹೊಲದಲ್ಲಿ ನೇರವಾಗಿ ಕೂರಿಗೆಯಿಂದ ಬೀಜ ಬಿತ್ತಿ ಬೆಳೆಸಲಾಗುತ್ತದೆ. ಸಾಲಿನಿಂದ ಸಾಲಿಗೆ 45-75 ಸೆಂಮೀ, ಬೀಜದಿಂದ ಬೀಜಕ್ಕೆ 20-25 ಸೆಂಮೀ ಅಂತರವಿರುವಂತೆ ಬಿತ್ತುವುದೇ ಕ್ರಮ. ಬಿತ್ತಿದ 3-6 ದಿನಗಳಲ್ಲಿ ಬೀಜಗಳೂ ಮೊಳೆತು ಅನಂತರದ 2-3 ದಿನಗಳಲ್ಲಿ ನೆಲದಿಂದ ಮೇಲಕ್ಕೆ ಹಾಯುತ್ತವೆ. ಸಸಿಗಳ ಬೆಳೆವಣಿಗೆಗೆ ಯಥೇಚ್ಛ ನೀರು ಆವಶ್ಯಕ, ಆದರೆ ನೀರು ಹೆಚ್ಚು ಕಾಲ ನಿಲ್ಲಬಾರದು.
ಮುಸುಕಿನ ಜೋಳಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ಕ್ಯಾಲ್ಸಿಯಮ್ ಅಮೋನಿಯಮ್ ನೈಟ್ರೇಟ್, ಸೂಪರ್ ಫಾಸ್ಫೇಟ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಅಮೋನಿಯಮ್ ಸಲ್ಫೇಟ್, ಯೂರಿಯ ಮುಂತಾದ ರಾಸಾಯನಿಕ ಗೊಬ್ಬರಗಳ ಆವಶ್ಯಕತೆ ಇದೆ.
ಮುಸುಕಿನ ಜೋಳವನ್ನು ಶುದ್ಧ ಬೆಳೆಯಾಗಿ ಬೇಸಾಯ ಮಾಡುವುದೇ ವಾಡಿಕೆಯಾದರೂ ಕೆಲವೊಮೆ ಹೆಸರು, ಉದ್ದು, ಅಲಸಂದೆ ಮುಂತಾದ ದ್ವಿದಳಧಾನ್ಯಗಳನ್ನೊ, ಎಳ್ಳು, ಸೇಂಗ ಮುಂತಾದ ಎಣ್ಣೆ ಸಸ್ಯಗಳನ್ನೊ ಬೆಂಡೆ, ಈರುಳ್ಳಿ, ಗಜ್ಜರಿ ಇತ್ಯಾದಿ ತರಕಾರಿ ಸಸ್ಯಗಳನ್ನೊ ಅಕ್ಕಡಿ ಬೆಳೆಗಳನ್ನಾಗಿ ಕೃಷಿಮಾಡುವುದಿದೆ. ಕೆಲವೆಡೆ ಸೋಯಾ ಸಸ್ಯವನ್ನು, ಇನ್ನು ಕೆಲವೆಡೆ ಹತ್ತಿಯನ್ನು, ಮಹಾರಾಷ್ಟ್ರದ ಕೆಲವೆಡೆ ಕಬ್ಬನ್ನು ಈ ರೀತಿ ಮಿಶ್ರ ಬೆಳೆಯಾಗಿ ಬೆಳೆಸುವುದುಂಟು. ಮುಸುಕಿನ ಜೋಳ ಕುಯ್ಲಾದ ತರುವಾಯ ಗೋದಿ, ಬಾರ್ಲಿ, ಕಬ್ಬು, ಆಲೂಗಡ್ಡೆ, ಸಾಸುವೆ, ಕುಸುಬೆ ಮುಂತಾದ ಬೆಳೆಗಳನ್ನು ಹಾಕುವ ರೂಢಿಯೂ ಉಂಟು.
ಮುಸುಕಿನ ಜೋಳಕ್ಕೆ ಹಲವಾರು ಬಗೆಯ ರೋಗರುಜಿನಗಳು, ಕೀಟ ಪಿಡುಗುಗಳು ತಗುಲಿ ಹಾನಿಮಾಡುವುವು. ರೋಗಗಳು ವೈರಸ್, ಬೂಷ್ಟು ಇಲ್ಲವೆ ಬ್ಯಾಕ್ಟೀರಿಯ ಆಗಿರಬಹುದು. ಅಂತೆಯೇ ಗಿಡದ ಬೇರು. ಕಾಂಡ, ಎಲೆ ಮುಂತಾಗಿ ಯಾವುದೇ ಅಂಗಕ್ಕೆ ಇವು ತಗಲಬಹುದು.
ಎಲೆಗಳಿಗೆ ತಗಲುವ ಬೂಷ್ಟು ರೋಗಗಳ ಪೈಕಿ ಲೀಫ್ ಬ್ಲೈಟ್ (ಹೆಲ್ಮಿಂತೊಸ್ಪೋರಿಯಮ್ ಟರ್ಸಿಕಮ್ ಮತ್ತು ಹೆಲ್ಮಿಂತೊಸ್ಪೋರಿಯಮ್ ಮೇಯ್ಡಿಸ್). ಲೀಫ್ ಸ್ಪಾಟ್ (ಸರ್ಕೊಸ್ಪೊರ ಸೋರ್ಗೈ), ಬ್ರೌನ್ ಸ್ಪಾಟ್ (ಫೈಸೊಡರ್ಮ ಮೇಯ್ಡಿಸ್), ರಸ್ಟ್ (ಪಕ್ಸೀನಿಯ ಸೋರ್ಗೈ), ಡೌನಿ ಮಿಲ್ ಡ್ಯೂ (ಸ್ಕ್ಲೀರೋ ಸ್ಪೊರ ಪ್ರಭೇದಗಳು), ಮುಖ್ಯವಾಗಿವೆ. ಪಿತಿಯಮ್ ಅಫನಿಡರ್ಮೇಟಮ್ ಎಂಬುದರಿಂದ ಬರುವ ಕಾಂಡ ಕೊಳೆ ರೋಗಗಳ ಪೈಕಿ ಪ್ರಧಾನನವಾದ್ದು. ಡಿಪ್ಲೋಡಿಯ ತೆನೆರೋಗ (ಡಿಪ್ಲೋಡಿಯಜೀಯಿ), ಜಿಬರೆಲ್ಲ ತೆನೆ ಕೊಳೆರೋಗ (ಜಿಬರೆಲ್ಲ ಜೀಯಿ), ಸ್ಮಟ್ (ಯುಸ್ಟಿಲ್ಯಾಗೊ ಮೇಯ್ಡಿಸ್-ಕಾಡಿಗೆ) ಮುಂತಾದವು ತೆನೆಗಳಿಗೆ ಹಾನಿಯುಂಟುಮಾಡುವ ರೋಗಗಳು.
ಕೀಟಪಿಡುಗುಗಳ ಪೈಕಿ ಮುಖ್ಯವಾದುವು ಕಾಂಡಕೊರಕ (ಕೈಲೊಪಾರ್ಟೆಲಸ್) ಕೆಂಪು ಕಂಬಳಿಹುಳು (ಆಮ್‍ಸ್ಯಾಕ್ಟ ಮೂರಿಯೈ). ಪಿಂಕ್ ಕಾಂಡ ಕೊರಕ (ಸೆಸೇಮಿಯ ಇನ್‍ಫೆರನ್ಸ್), ಆರ್ಮಿವರ್ಮ್ (ಸಿರ್ಪಿಸ್ ಯೂನಿಪಂಕ್ಟ) ಮತ್ತು ಹಲವಾರು ಬಗೆಯ ಮಿಡತೆಗಳು, ಗೆದ್ದಲು, ಚಿಮ್ಮಂಡೆಗಳು, ನೊಣಗಳು,
ಮುಸುಕಿನ ಜೋಳವನ್ನು ಧಾನ್ಯ, ಮೇವು ಇಲ್ಲವೇ ಸೈಲೇಜ್‍ಗಾಗಿ ಕಟಾವು ಮಾಡಲಾಗುತ್ತದೆ. ಬೀಜ ಬಿತ್ತಿದ 80-100 ದಿನಗಳ ತರುವಾಯ ಕುಯ್ಲಿಗೆ ಬರಲು 4-6 ತಂಗಳಾಗುವುದೂ ಉಂಟು. ತೆನೆಗಳು ಬಲಿತ ಮೇಲೆ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ, ಅನಂತರ ಕೋಲಿನಿಂದ ಬಡಿದು ಕಾಳುಗಳನ್ನು ಬಿಡಿಸಲಾಗುತ್ತದೆ. ಬಿತ್ತನೆಗಾಗಿ ಬೇಕಾದ ಕಾಳುಗಳನ್ನು ತೆನೆಗಳಿಂದ ಬಿಡಿಸದೆ ಹಾಗೆಯೇ ಒಣಗಿಸಿ ಇಡುವುದುಂಟು. ಕರ್ನಾಟಕದ ಕೆಲವೆಡೆ ತೆನೆಗಳ ನಿಷೇಚನವಾದ ತರುವಾಯ, ಗಿಡದ ತುದಿಗಳನ್ನು ಕತ್ತರಿಸಿ ಮೇವಿನ ರೂಪದಲ್ಲಿ ದನಗಳಿಗೆ ಕೊಡುವುದಿದೆ.
ಮುಸುಕಿನ ಜೋಳದ ಕಾಳಿನಲ್ಲಿ ಪಿಷ್ಟಯುಕ್ತ ಭ್ರೂಣಾಹಾರ ಎಂದು ಮೂರು ಭಾಗಗಳನ್ನು ಗುರುತಿಸಬಹುದು. ಒಟ್ಟು ಕಾಳಿನ ಶೇಕಡಾವಾರು ರಾಸಾಯನಿಕ ಸಂಯೋಜನೆ ಈ ರೀತಿ ಇದೆ: 14.9 ನೀರಿನಂಶ, 11.1 ಪ್ರೋಟೀನ್, 3.6 ಕೊಬ್ಬು, 2.7ನಾರಿನ ಅಂಶ, 66.2 ಪಿಷ್ಟ ಹಾಗೂ 1.5 ಖನಿಜ ವಸ್ತುಗಳ ಪೈಕಿ ಫಾಸ್ಫರಿಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸಲ್ಪರ್ ಹೆಚ್ಚಿನ ಮೊತ್ತದಲ್ಲಿವೆ. ಮುಸುಕಿನ ಜೋಳದಲ್ಲಿ ತಯಾಮಿನ್, ನಯಾಸಿನ್, ರೈಬೊಫ್ಲೇವಿನ್ ಮುಂತಾದ ವಿಟಮಿನ್ನುಗಳೂ ಇವೆ. ಪ್ರೋಟೀನುಗಳ ಪೈಕಿ ಅತಿ ಮುಖ್ಯವಾದ್ದು ಜಿûೀಯಿನ್ (ಪ್ರೋಲಮೈನ್) ಎಂಬುದು.
ಮುಸುಕಿನ ಜೋಳದ ಪ್ರಧಾನ ಉಪಯುಕ್ತತೆ ಆಹಾರವಾಗಿ. ಭಾರತದ ಒಟ್ಟು ಉತ್ಪನ್ನದ ಶೇಕಡಾ 80-90 ರಷ್ಟು ಹೀಗೆ ಆಹಾರವಾಗಿ ಬಳಕೆಯಾಗುತ್ತದೆ. ಇದನ್ನು ಹಿಟ್ಟುಮಾಡಿ ರೊಟ್ಟಿ ಅಥವಾ ಚಪಾತಿಗಳನ್ನು ತಯಾರಿಸಿ ಬಳಸುವುದಿದೆ. ಮೈದಾ, ರವೆ, ಗಂಜಿಗಳನ್ನೂ ತಯಾರಿಸಲಾಗುತ್ತಿದೆ. ಇಡೀ ತೆನೆಯನ್ನು ಸುಟ್ಟು ಇಲ್ಲವೇ ಕುಟ್ಟಿ ತಿನ್ನುವುದು ಸರ್ವಸಾಮಾನ್ಯ. ಮಧ್ಯ ಅಮೆರಿಕದಲ್ಲಿ ಟಾರ್ಟಿಲ, ಅರೆಪಾಸ್ ಎಂಬ ಹೆಸರಿನ ರೊಟ್ಟಿ ರೂಪದಲ್ಲಿ ಇದನ್ನು ಸೇವಿಸಲಾಗುತ್ತಿದೆ. ಆಫ್ರಿಕದ ನೈಜೀರಿಯದಲ್ಲಿ ಇದರ ಹಿಟ್ಟಿನಿಂದ ಓಜಿ ಎಂಬ ಖಾದ್ಯ ವಸ್ತುವನ್ನು ತಯಾರಿಸಲಾಗುತ್ತದೆ. ಹಾಗೆ ಪೂರ್ವ ಆಫ್ರಿಕದ ಕೆಲವೆಡೆ ಇದರಿಂದ ಉಗಾಲೆ, ಚಿಂಗ ಎಂಬ ಗಂಜಿಯಂಥ ಆಹಾರವನ್ನು ಮಾಡುವುದುಂಟು.
ಮುಸುಕಿನ ಜೋಳ ಧನಗಳಿಗೆ ಒಳ್ಳೆಯ ಮೇವು. ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಯೂರೋಪುಗಳಲ್ಲಿ ಹೀಗೆ ಜಾನುವಾರುಗಳಗೆ ಮೇವಾಗಿ ಬಳಕೆಯಾಗುವುದೇ ಹೆಚ್ಚು. ಇದರ ಹಿಟ್ಟು ಬಟ್ಟೆಗೆ ಹಾಕುವ ಗಂಜಿ, ಡೆಕ್ಸ್‍ಟ್ರೋಸ್, ಪುಡಿಂಗ್, ಸಿಹಿಪಾಕ (ಸಿರಪ್), ಗೋಂದು, ಔಷಧಿಗಳಲ್ಲಿ ಬಳಸುವ ಜೆಲ್, ಕೆಲವು ತೆರನ ಪ್ರಸಾಧನ ಸಾಮಗ್ರಿಗಳು ಮುಂತಾದ ವಸ್ತುಗಳ ತಯಾರಿಕೆಗೆ ಒದಗುತ್ತದೆ.
ಕಾಳಿನ ಮೊಳಕೆ (ಜರ್ಮ್) ಕಾರ್ನ್‍ಆಯಿಲ್ ಎಂಬ ತೈಲದ ಒಳ್ಳೆಯ ಆಕರ. ಇದನ್ನು ಅಡುಗೆ ತೈಲ, ವಿಟಮಿನ್ನುಗಳ ವಾಹಕ ಸಾಮಗ್ರಿ ಮುಂತಾಗಿ ಬಳಸಲಾಗುತ್ತದೆ. ಅಲ್ಲದೆ ಇದನ್ನು ಲಿನ್‍ಸೀಡ್ ಎಣ್ಣೆಯೊಂದಿಗೆ ಬೆರೆಸಿ ವಾರ್ನಿಷ್‍ಗಳ ತಯಾರಿಕೆಗೂ ಚರ್ಮ ಹದಗಾರಿಕೆಗೂ ಅಥವಾ ಹಾಗೆಯೇ ಸಾಬೂನು ತಯಾರಿಕೆಗೂ ಉಪಯೋಗಿಸುವುದುಂಟು. ಮುಸುಕಿನ ಜೋಳದ ಕಾಳಿನಿಂದ ಆಲ್ಕೊಹಾಲನ್ನು ತಯಾರಿಸುವುದಿದೆ. ಕಾಂಡನ್ನು ಹೊದಿಕೆ ಕಾಗದ. ರಟ್ಟು ಮುಂತಾದವುಗಳ ತಯಾರಿಕೆಗೆ ಬಳಸುವುದುಂಟು. ಕಾಳು ಬೇರ್ಪಡಿಸಿದ ಉಳಿದ ತೆನೆಯಿಂದ ಫರ್‍ಪ್ಯುರಾಲ್ ಪಡೆಯಬಹುದು. ಅಲ್ಲದೆ ಕಾಳುಗಳಿಂದ ಕಾರ್ನ್‍ಫ್ಲೇಕ್ಸ್ ಮತ್ತು ಅರಳು (ಪಾಪ್ ಕಾರ್ನ್) ತಯಾರಿಸಲಾಗುತ್ತದೆ.
(ಪರಿಷ್ಕರಣೆ : ಕೆ ಬಿ ಸದಾನಂದ)