ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂತ್ರಾಂಗ ವ್ಯೂಹ

ವಿಕಿಸೋರ್ಸ್ದಿಂದ

ಮೂತ್ರಾಂಗ ವ್ಯೂಹ - ಮೂತ್ರೋತ್ಪತ್ತಿ ಮಾಡಿ ಅದನ್ನು ಕಾಲಕಾಲಕ್ಕೆ ವಿಸರ್ಜಿಸುವ ಅಂಗಗಳ ಸಮೂಹಕ್ಕೆ ಇರುವ ಹೆಸರು (ಯೂರಿನರಿ ಆಪರೇಟಸ್). ಮೂತ್ರಕೋಶ, ಮೂತ್ರಕೋಶನಾಳ, ಮೂತ್ರಪಿಂಡ, ಮೂತ್ರಪಿಂಡನಾಳ ಇವೇ ಈ ಸಮೂಹದ ಅಂಗಗಳು. ಇವುಗಳ ಸ್ಥೂಲರಚನೆ ಹಾಗೂ ಕ್ರಿಯೆಗಳನ್ನು ಆಯಾ ಶೀರ್ಷಿಕೆಗಳ ಅಡಿಯಲ್ಲಿ ಪ್ರತ್ಯೇಕವಾಗಿ ಕೊಟ್ಟಿದೆ. ಈ ಸಮೂಹದ ಪ್ರಮುಖ ಅಂಗವಾದ ಮೂತ್ರಪಿಂಡಗಳು ಇಡೀ ದೇಹಕ್ಕೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುವ ಪರಿಯನ್ನು ಈ ಲೇಖನದಲ್ಲಿ ತಿಳಿಸಿದೆ. ಮೂತ್ರಪಿಂಡಗಳು ವ್ಯಕ್ತಿ ಜನಿಸಿದ ಗಳಿಗೆಯಿಂದ ಮರಣ ಸಂಭವಿಸುವ ತನಕವೂ ಒಂದು ಕ್ಷಣವೂ ಬಿಡದೆ ಮೂತ್ರೋತ್ಪತ್ತಿ ಮಾಡುತ್ತಲೇ ಇರುತ್ತವೆ. ಒಂದೊಂದು ಮೂತ್ರಪಿಂಡದಿಂದಲೂ ವಯಸ್ಕರಲ್ಲಿ ಮಿನಿಟಿಗೆ ಸುಮಾರು 1/2 ಮಿಲಿಲೀಟರಿನಷ್ಟು ಮೂತ್ರ ಉತ್ಪತ್ತಿ ಆಗುತ್ತದೆ. ಆಯಾ ಕಡೆಯ ಮೂತ್ರಪಿಂಡನಾಳದ (ಯೂರಿಟರ್) ಮೂಲಕ ಮೂತ್ರ ಕಿಬ್ಬೊಟ್ಟೆಯಲ್ಲಿರುವ ಮೂತ್ರಕೋಶಕ್ಕೆ (ಯೂರಿನರಿ ಬ್ಲಾಡರ್) ಒಯ್ಯಲ್ಪಟ್ಟು ಅದರ ವ್ಯಾಕೋಚನಗಳಿಂದಾಗಿ ಅಲ್ಲಿ ಶೇಖರವಾಗುತ್ತದೆ. ಸುಮಾರು 300 ಮಿಲಿಲೀಟರುಗಳಷ್ಟು ಮೂತ್ರ ಸಂಗ್ರಹವಾದಾಗ ಸಾಮಾನ್ಯವಾಗಿ ಮೂತ್ರಕೋಶ ಸಂಕುಚಿಸುತ್ತದೆ ಮತ್ತು ಮೂತ್ರಕೋಶನಾಳದ (ಯೂರೆತ್ರ) ಮೂಲಕ ಮೂತ್ರವನ್ನು ದೇಹದಿಂದ ಹೊರದೂಡುತ್ತದೆ. ಹೀಗೆ ದಿವಸದ 24 ಗಂಟೆಗಳಲ್ಲಿ ಒಟ್ಟು ಸುಮಾರು 1 1/2 ಲೀಟರ್‍ಗಳಷ್ಟು ಮೂತ್ರ ದೇಹದಿಂದ ಹೊರಗೆ ಹೋಗುತ್ತದೆ.

ಮೂತ್ರದಲ್ಲಿ ದೇಹಕ್ಕೆ ಅನಾವಶ್ಯಕವೆನಿಸುವ ಸಲ್ಫೇಟುಗಳು, ಆಮ್ಲೀಯ ಫಾಸ್ಪೇಟುಗಳು ಮುಂತಾದ ಲವಣಗಳೂ ಯೂರಿಕ್ ಆಮ್ಲ ಕ್ರಿಯಾಟೆನಿನ್, ಯೂರಿಯ ಮುಂತಾದ ನೈಟ್ರೊಜನ್‍ಯುಕ್ತ ವರ್ಜನೀಯ ವಸ್ತುಗಳೂ (ನೈಟ್ರೋಜಿನಸ್ ವೇಸ್ಟ್ಸ) ಅವಶ್ಯಕವಾಗಿದ್ದರೂ ನಿರ್ದಿಷ್ಟಮಟ್ಟಕ್ಕಿಂತ ಹೆಚ್ಚಾಗಿರುವ ಗ್ಲೂಕೋಸ್, ಸೋಡಿಯಮ್ ಕ್ಲೋರೈಡ್ ಮುಂತಾದವೂ ವಿಷಪ್ರಾಯವಾಗಿ ಪರಿಣಮಿಸಬಹುದಾದ ಅನ್ಯವಸ್ತುಗಳೂ ದೇಹದಲ್ಲಿ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾಗಿರುವ ನೀರಿನಲ್ಲಿ ಲೀನವಾಗಿ ವಿಸರ್ಜಿತವಾಗುತ್ತವೆ. ಹೀಗಾಗಿ ಮೂತ್ರ ವ್ಯೂಹದ ಕ್ರಿಯೆ ದೇಹಕ್ಕೆ ಬೇಡದ ವಸ್ತುಗಳನ್ನು ಹೊರದೂಡುವುದೇ ಎಂಬುದು ವೇದ್ಯ.

ತ್ಯಾಜ್ಯವಸ್ತುಗಳನ್ನು ಹೊರಹಾಕುವುವು ಮೂತ್ರಪಿಂಡಗಳು ಮಾತ್ರವೇ ಅಲ್ಲ. ಸ್ವೇದಗ್ರಂಥಿಗಳು ಬೆವರನ್ನು ಸ್ರವಿಸಿದಾಗ ಅದರಲ್ಲಿಯೂ ಸ್ವಲ್ಪಮಟ್ಟಿನ ಯೂರಿಯ ಹಾಗೂ ಸೋಡಿಯಮ್ ಕ್ಲೋರೈಡುಗಳು ವರ್ಜಿಸಲ್ಪಡುತ್ತವೆ. ಬಲು ಶ್ರಮದ ಕೆಲಸಮಾಡುವಾಗ ಬೆವರಿನಲ್ಲಿ ಲ್ಯಾಕ್ಟಿಕ್ ಆಮ್ಲವೂ ಕೊಂಚ ವಿಸರ್ಜಿತವಾಗುವುದುಂಟು. ದೇಹದಲ್ಲಿ ನಿರಂತರವಾಗಿ ಉತ್ಪತ್ತಿ ಆಗುವ ಕಾರ್ಬನ್ ಡೈ ಆಕ್ಸೈಡ್ ವಿಸರ್ಜನವಸ್ತುವೇ. ಆದರೆ ಇದು ಅನಿಲರೂಪದಲ್ಲಿ ಪುಪ್ಪುಸಗಳಿಂದ ವಿಸರ್ಜಿತವಾಗುತ್ತದೆ. ಲೀನವಾಗದ ಅನುಪಯುಕ್ತ ವಸ್ತುಗಳು ಮಲದ ಮೂಲಕ ವಿಸರ್ಜಿತವಾಗುತ್ತವೆ. ಹೀಗೆ ತ್ಯಾಜ್ಯವಸ್ತುಗಳು ಬಗೆಬಗೆಯಾಗಿ ವಿಸರ್ಜಿತವಾಗುತ್ತವಾದರೂ ರಕ್ತದಲ್ಲಿ ಲೀನವಾಗಿರುವ ಘನವಸ್ತುಗಳು (ಸೊಲ್ಯೂಟ್ಸ್) ಪ್ರಮುಖವಾಗಿ ಮೂತ್ರಾಂಗ ವ್ಯೂಹದಿಂದ ವಿಸರ್ಜಿತವಾಗುತ್ತವೆ. ಇದಕ್ಕಾಗಿ ಅರ್ಥಾತ್, ರಕ್ತದ ಶುದ್ಧೀಕರಣಕ್ಕಾಗಿ ರಕ್ತ ಅಗಾಧಪ್ರಮಾಣದಲ್ಲಿ ಮೂತ್ರಪಿಂಡಗಳಲ್ಲಿ ಪರಿಚಲಿಸುತ್ತದೆ. ಎಡಹೃತ್ಕುಕ್ಷಿಯಿಂದ ರೇಚಿಸಲ್ಪಡುವ ರಕ್ತದ ಸುಮಾರು 1/4 ಭಾಗವೇ ಮೂತ್ರಪಿಂಡಗಳಿಗೆ ಪೂರೈಕೆ ಆಗುತ್ತದೆ.

ಪ್ರತಿಯೊಂದು ಮೂತ್ರಪಿಂಡದಲ್ಲೂ ಮಿನಿಟಿಗೆ ಸುಮಾರು 750 ಮಿಲಿಲೀಟರುಗಳಷ್ಟು ರಕ್ತ ಹರಿಯುತ್ತದೆ. ಇದರಿಂದ ಸುಮಾರು 60 ಮಿಲಿಲೀಟರುಗಳಷ್ಟು ತಿಳಿದ್ರಾವಣ ಜರಡಿಯಲ್ಲಿ ಸೋಸಿ ಬರುವಂತೆ ಮೊತ್ತಮೊದಲು ಫಲಿಸುತ್ತದೆ. ಈ ದ್ರಾವಣದಲ್ಲಿ ರಕ್ತದಲ್ಲಿದ್ದ ದೇಹಕ್ಕೆ ಬೇಕಾದ ಹಾಗೂ ಬೇಡವಾದ ಸಕಲಲೀನ ವಸ್ತುಗಳೂ ರಕ್ತದಲ್ಲಿದ್ದ ಶೇಕಡಾವಾರುಮಟ್ಟದಲ್ಲಿ ಇರುವುದು ವ್ಯಕ್ತ. ಈ ದ್ರಾವಣದಿಂದ ಸೋಡಿಯಮ್ ಕ್ಲೋರೈಡ್, ಸೋಡಿಯಮ್ ಬೈ ಕಾರ್ಬೊನೇಟ್ ಮುಂತಾದ ಲವಣಗಳು ದೇಹಕ್ಕೆ ಉಪಯುಕ್ತವಾಗಿರುವಷ್ಟು ಮಟ್ಟಕ್ಕೂ ಗ್ಲೂಕೋಸ್, ಅಮೈನೋ ಆಮ್ಲಗಳು ಇತ್ಯಾದಿ ಪೂರ್ಣವಾಗಿಯೂ ತಕ್ಕಷ್ಟು ನೀರಿನೊಡನೆ ವಾಪಸ್ಸು ಹೀರಲ್ಪಟ್ಟು ರಕ್ತಗತವಾಗುತ್ತವೆ. ಉಳಿದ ಸುಮಾರು 7-8 ಮಿಲಿಲೀಟರುಗಳಷ್ಟು ದ್ರಾವಣದಲ್ಲಿ ಉಳಿದ ವಸ್ತುಗಳಷ್ಟೂ ಲೀನವಾಗಿದ್ದು ಮೂತ್ರಪಿಂಡದಲ್ಲಿ ಮುಂದುವರಿಯುತ್ತ ಅನೇಕ ರಾಸಾಯನಿಕ ಪರಿವರ್ತನೆಗಳಿಗೆ ಒಳಗಾಗುತ್ತವೆ. ಈ ಪರಿವರ್ತಿತ ದ್ರಾವಣದಿಂದ ಇನ್ನೂ ಕೆಲವು ರಾಸಾಯನಿಕಗಳು ಸುಮಾರು 6 1/2-7 ಮಿಲಿಲೀಟರುಗಳಷ್ಟು ನೀರಿನೊಡನೆ ಹೀರಲ್ಪಟ್ಟು ರಕ್ತಗತವಾಗುತ್ತವೆ. ಪ್ರತಿಯೊಂದು ಮೂತ್ರಪಿಂಡದಲ್ಲೂ ಪ್ರತಿಯೊಂದು ಮಿನಿಟೂ ಅಂತಿಮವಾಗಿ ಉಳಿದ ಸುಮಾರು 1/2 ಮಿಲಿಲೀಟರಿನಷ್ಟು ಮೂತ್ರ ತ್ಯಾಜ್ಯವಸ್ತುಗಳಷ್ಟನ್ನೂ ಲೀನವಾಗಿಸಿಕೊಂಡು ಮೂತ್ರಕೋಶಕ್ಕೆ ಒಯ್ಯಲ್ಪಟ್ಟು ಅಲ್ಲಿ ಸಂಗ್ರಹವಾಗುತ್ತದೆ. ಮೂತ್ರಪಿಂಡದ ವಿಶಿಷ್ಟಕೋಶಗಳು ಅವಕ್ಕೇ ವಿಶಿಷ್ಟವಾದ ಕಿಣ್ವಗಳನ್ನು ಹೊಂದಿರುವುದರಿಂದಲೂ ಅನೇಕ ಇಂಥ ಕಿಣ್ವಗಳು ಮೂತ್ರಪಿಂಡದ ಮೇಲೆ ಪ್ರಭಾವಿಸುವ ಅನೇಕ ಹಾರ್ಮೋನುಗಳ ಹತೋಟಿಗೆ ಒಳಪಟ್ಟಿರುವುದರಿಂದಲೂ ಮೂತ್ರಪಿಂಡದಲ್ಲಿ ಈ ಹಿಂದೆ ವಿವರಿಸಿರುವ ರಾಸಾಯನಿಕ ಮಾರ್ಪಾಡುಗಳೂ ಅವುಗಳ ಹೀರಿಕೆ ಹಾಗೂ ವಿನಿಮಯಗಳೂ ಸಾಧ್ಯವಾಗಿವೆ. ಮೂತ್ರಪಿಂಡದ ನಿರಂತರವಾದ ಈ ಕ್ರಿಯೆ ನಿರ್ಬಾಧಿತ ಆರೋಗ್ಯಜೀವನಕ್ರಿಯೆಗೆ ಅತ್ಯಗತ್ಯ. ದೇಹದ ಸಹಜ ಜೈವಿಕಕ್ರಿಯೆಗಳು ಸಕಲವೂ ದೇಹದ್ರವದ ಒಟ್ಟು ಮೊತ್ತ ಮತ್ತು ಅದರ ರಾಸಾಯನಿಕ ಘಟಕಗಳ ನಿರುಂದೋಲನಸ್ಥಿತಿಯನ್ನು (ಹೋಮಿಯೋಸ್ಪೇಸಿಸ್) ಪೂರ್ಣವಾಗಿ ಅವಲಂಬಿಸಿದೆ. ಆದ್ದರಿಂದ ದೇಹ ಆ ದ್ರವದ ಸಮತೋಲಸ್ಥಿತಿಯನ್ನು ಸರ್ವಥಾ ಕಾಯ್ದಿಟ್ಟುಕೊಂಡಿರಬೇಕಾಗುತ್ತದೆ. ದೈಹಿಕ ಚಟುವಟಿಕೆ, ಉಸಿರಾಟ, ಆಹಾರಸೇವನೆ, ಉಪಾಪಚಯಕ್ರಿಯೆ ಮುಂತಾದವುಗಳಿಂದ ದೇಹದ್ರವದ ಮೊತ್ತ ಹಾಗೂ ರಾಸಾಯನಿಕ ಸಂಘಟನೆ (ಕೆಮಿಕಲ್ ಕಾಂಪೋಸಿಷನ್) ನಿರಂತರವೂ ಬದಲಾವಣೆಯಾಗುತ್ತಿರುತ್ತದೆ. ಇದಲ್ಲದೆ ವಜ್ರ್ಯವಸ್ತುಗಳೂ ಸೇರಿಕೊಂಡು ಈ ಕ್ರಿಯೆಗಳನ್ನು ವಿಷಮಿಸುತ್ತಲೇ ಇರುತ್ತವೆ. ದೇಹದ್ರವ ಹಾಗೂ ರಕ್ತ ಇವೆರಡರ ನಡುವೆ ನಿರಂತರವೂ ವಸ್ತುವಿನಿಮಯ ಆಗುತ್ತಿರುವುದರಿಂದ ದೇಹದ್ರವದ ಬದಲಾವಣೆಗಳು ರಕ್ತದಲ್ಲೂ ಪ್ರತಿಬಿಂಬಿತವಾಗುತ್ತದೆ. ದೇಹದ್ರವ ಕಲುಷಿತವಾದಾಗ ಅನುಗುಣವಾಗಿ ರಕ್ತವೂ ಕಲುಷಿತವಾಗುತ್ತದೆ. ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸುತ್ತ ತತ್ಪಲವಾಗಿ ದೇಹದ್ರವವನ್ನೂ ಶುದ್ಧೀಕರಿಸುತ್ತವೆ. ಇದರಿಂದ ದೇಹಕ್ರಿಯೆಗಳು ಕ್ಷೋಭೆಗೆ ಒಳಗಾಗದೆ ನಿಯತವಾಗಿ ಜರಗುವುದು ಸಾಧ್ಯವಾಗಿದೆ.

ದೇಹದ್ರವ ಅರ್ಥಾತ್ ರಕ್ತದ್ರವದ (ಪ್ಲಾಸ್ಮ) ಕೆಲವು ಮುಖ್ಯ ಘಟಕಗಳ ಸಂಬಂಧದಲ್ಲಿ ಮೂತ್ರಪಿಂಡಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಈ ಮುಂದೆ ವಿವರಿಸಿದೆ.

ನೀರು : ಆಹಾರಪಾನೀಯಗಳಿಂದ ದಿನಂಪ್ರತಿ ಸುಮಾರು 3 ಲೀಟರ್‍ಗಳಷ್ಟು ನೀರು ದೇಹದೊಳಕ್ಕೆ ಹೋಗುತ್ತದೆ. ಇದರಲ್ಲಿ ಸುಮಾರು 800 ಮಿಲಿ ಲೀಟರುಗಳಷ್ಟು ನೀರು, ಬೆವರು ಹಾಗೂ ಅವ್ಯಕ್ತ ಆವಿಯ ರೂಪದಲ್ಲಿ ಚರ್ಮದ ಮೂಲಕ ಕಳೆದುಹೋಗುತ್ತದೆ. ಇನ್ನು ಸುಮಾರು 400-600 ಮಿಲಿ ಲೀಟರುಗಳಷ್ಟು ನೀರು ಉಸಿರಿನಲ್ಲಿಯ ಆವಿಯ ರೂಪದಲ್ಲಿ ವರ್ಜಿತವಾಗುತ್ತದೆ. ಇನ್ನೂ ಸುಮಾರು 200 ಮಿಲಿಲೀಟರುಗಳಷ್ಟು ನೀರು ಇನ್ನು ಬೇರೆ ಬೇರೆ ರೂಪಗಳಲ್ಲಿ ನಷ್ಟಗಾಗುತ್ತದೆ. ಮಿಕ್ಕ ನೀರು ಸುಮಾರು 1500 ಮಿಲಿಲೀಟರುಗಳಷ್ಟು ಮೂತ್ರ ರೂಪದಲ್ಲಿ ವರ್ಜಿತವಾಗುತ್ತದೆ. ಕಾರಣಾಂತರಗಳಿಂದ ದೇಹದ ನೀರು ಹೆಚ್ಚಾದಾಗ (ಐಚ್ಛಿಕ-ಅನೈಚ್ಚಿಕವಾಗಿ ಅತಿಯಾಗಿ ಪಾನೀಯ ಸೇವನೆ, ಅಗಾಧ ಪ್ರಮಾಣದಲ್ಲಿ ಸೂಜಿಮದ್ದು ತೆಗೆದುಕೊಳ್ಳುವುದು ಇತ್ಯಾದಿ) ಮೂತ್ರದ ಪ್ರಮಾಣ ಮಾತ್ರ ಅಧಿಕವಾಗಿ ಹೆಚ್ಚುವರಿಯನ್ನು ಕಳೆಯುತ್ತದೆ. ಇಂಥ ಸಮಯದಲ್ಲಿ ಉಸಿರಿನಲ್ಲಿ, ಬೆವರು ರೂಪದಲ್ಲಿ ನೀರಿನ ವರ್ಜನೆ ಏನೂ ಹೆಚ್ಚಾಗುವುದಿಲ್ಲ. ಹಾಗೆಯೇ ದೇಹದ ನೀರು ಕಡಿಮೆ ಆದಾಗ (ಐಚ್ಚಕ-ಅನೈಚ್ಛಕವಾಗಿ ನೀರು ಹಾಗೂ ಪಾನೀಯಗಳನ್ನು ಸೇವಿಸದಿರುವುದು, ಅತಿವಮನ, ಅತಿಭೇದಿ, ಅತ್ಯಧಿಕವಾಗಿ ಬೆವರುವಿಕೆ ಇತ್ಯಾದಿ) ಪುನಃ ಮೂತ್ರದ ಪ್ರಮಾಣ ಮಾತ್ರವೇ ಕುಗ್ಗಿ ದೇಹದ ನೀರು ಇನ್ನಷ್ಟು ಈ ರೀತಿಯಿಂದಲೂ ಕಡಿಮೆ ಆಗದಂತೆ ಏರ್ಪಡುತ್ತದೆ. ಮೇಲಿನ ವಿಶಿಷ್ಟ ಸಂದರ್ಭಗಳಲ್ಲಿ ದಿವಸದಲ್ಲಿ ಸುಮಾರು 12-16 ಲೀಟರ್‍ಗಳಷ್ಟು ಮೂತ್ರ ಹೆಚ್ಚಬಹುದು ಇಲ್ಲವೇ ಸುಮಾರು 500 ಮಿಲಿಲೀಟರುಗಳಷ್ಟು ಕಡಿಮೆ ಆಗಬಹುದು. ಬೆವರುವುದು ಹೆಚ್ಚು ಕಡಿಮೆ ಆಗುವುದೂ ಸರ್ವವಿದಿತ. ಆದರೆ ಇದು ದೇಹೋಷ್ಣತೆಯ ನಿಯಂತ್ರಣಕ್ಕಾಗಿ ಏರ್ಪಡುವುದೇ ಹೊರತು ದೇಹದ ನೀರಿನ ನಿಯಂತ್ರಣಕ್ಕಾಗಿ ಅಲ್ಲ. ಬಿಸಿಲಿನ ಬೇಗೆ, ಕಷ್ಟದ ಕೆಲಸ ಹಾಗೂ ವ್ಯಾಯಾಮಗಳನ್ನು ಸೆಕೆಯಾಗಿರುವ ವಾತಾವರಣದಲ್ಲಿ ಮಾಡುವುದು. ಇತ್ಯಾದಿ ಸಂದರ್ಭಗಳಲ್ಲಿ ಹೆಚ್ಚಾಗಿ ಬೆವರುವುದು ತಿಳಿದದ್ದೇ. ಈ ಸಂದರ್ಭಗಳಲ್ಲಿ ದೇಹೋಷ್ಣತೆ ಹೆಚ್ಚಾಗಿರುತ್ತದೆ. ಬೆವರುವುದು ಹೆಚ್ಚಿ ಅದು ದೇಹದ ಮೇಲ್ಮೈಯಿಂದ ಆವಿಯಾಗಿ ಆರಿಹೋಗುತ್ತ ದೇಹೋಷ್ಣತೆಯ ಹೆಚ್ಚುವರಿ ತಳೆಯುತ್ತದೆ. ಉಸಿರಾಟ ಹೆಚ್ಚಾಗುವುದರಿಂದಲೂ ಅಲ್ಟಸ್ವಲ್ಪವಾಗಿ ಇಂಥ ಅನುಕೂಲವಿದೆ. ದನ, ನಾಯಿ ಇತ್ಯಾದಿಗಳು ಹೆಚ್ಚಿದ ದೇಹೋಷ್ಣತೆಯನ್ನು ಕಳೆದುಕೊಳ್ಳುವುದಕ್ಕಾಗಿ ನಾಲಗೆಯನ್ನು ಹೊರಚಾಚಿ ಮೇಲುಸಿರಾಡುವುದು ದೇಹೋಷ್ಣತೆಯ ನಿಯಂತ್ರಣಕ್ಕೇ.

ಲವಣಗಳು : ಆಹಾರದ ಮೂಲಕ ದೇಹದ ಒಳಹೊಗುವ ಸೋಡಿಯಮ್ ಹಾಗೂ ಪೊಟ್ಯಾಸಿಯಮ್ ಕ್ಲೋರೈಡ್, ಆಮ್ಲೀಯ ಫಾಸ್ಫೇಟ್ ಇತ್ಯಾದಿಗಳನ್ನು ಮೊತ್ತಮೊದಲಾಗಿ ಉತ್ಪತ್ತಿಯಾದ ತಿಳಿದ್ರಾವಣದಿಂದ ಮೂತ್ರಪಿಂಡ ಅಗತ್ಯ ಮಟ್ಟಕ್ಕೆ ಅನುಗುಣವಾಗಿ ಮಾತ್ರ ಹೀರಿಕೊಂಡು ಉಳಿಕೆಯನ್ನು ವರ್ಜಿಸಿ ದೇಹ ದ್ರವದಲ್ಲಿ ಅವುಗಳ ಮಟ್ಟವನ್ನು ನಿಯಂತ್ರಿಸುತ್ತದೆ. ಈ ಕೆಲಸವನ್ನು ನಿರ್ವಹಿಸುವುದು ಮೂತ್ರಪಿಂಡ ಮಾತ್ರವೇ. ಇದರಿಂದ ದೇಹದ್ರವದ ಜಲಾಕರ್ಷಣ ಸಂಮರ್ದ (ಆಸ್ಮಾಟಿಕ್ ಪ್ರಷರ್) ಕಾಯಲ್ಪಡುತ್ತದೆ. ದೇಹದ ನೀರಿನಮಟ್ಟ ತಕ್ಕಷ್ಟು ಇಲ್ಲದೇ ಇದ್ದರೂ ಲವಣಗಳು ಅಧಿಕಪ್ರಮಾಣದಲ್ಲಿ ವರ್ಜಿತವಾಗಬೇಕಾಗಿದ್ದಲ್ಲಿ ಅದಕ್ಕೆ ತಕ್ಕಷ್ಟು ನೀರೂ ಅವಶ್ಯಕವಾಗಿ ವರ್ಜಿತವಾಗಬೇಕಾಗುತ್ತದೆ. ಇಂಥ ಸಮಯದಲ್ಲಿ ಮತ್ತು ಪ್ರೋಟೀನ್ ಅಂಶ ಹಿಚ್ಚಾಗಿರುವ ಆಹಾರ ಪಚನಾ ನಂತರ ಅವುಗಳಿಂದ ಹೆಚ್ಚಾಗಿ ಉದ್ಬವಿಸುವ ಯೂರಿಯ ಮುಂತಾದ ನೈಟ್ರೋಜನ್ ತ್ಯಾಜ್ಯವಸ್ತುಗಳ ವರ್ಜನೆಯ ಸಮಯದಲ್ಲಿ ಸ್ವಾಭಾವಿಕವಾಗಿಯೇ ಮೂತ್ರದ ಸಾಂದ್ರತೆ ಹೆಚ್ಚಾಗಿರುತ್ತದೆ. ಮಧುಮೇಹರೋಗಿಗಳಲ್ಲಿ ಮೂತ್ರದಲ್ಲಿ ಸಕ್ಕರೆ ಮರ್ಜಿತವಾಗುವಾಗಲೂ ಹೀಗೆಯೇ. ದೇಹದಲ್ಲಿ ನೀರಿನಮಟ್ಟ ಕಾರಣಾಂತರಗಳಿಂದ ಕಡಿಮೆ ಆಗಿದ್ದಾಗ ಕಡಿಮೆ ಮೂತ್ರೋತ್ಪತ್ತಿ ಆಗುತ್ತಿರುವಾಗಲೂ ಹೀಗೆಯೇ ಮೂತ್ರದ ಸಾಂದ್ರತೆ ಹೆಚ್ಚಾಗಿರುತ್ತದೆ. ಸಾಮಾನ್ಯ ಎನಿಸುವ 1.015-1.025ರ ಸಾಪೇಕ್ಷಸಾಂದ್ರತೆ ಇಂಥ ಸಮಯದಲ್ಲಿ 1.045ಕ್ಕೂ ಮೀರಬಹುದು. ಇದಕ್ಕೆ ಪ್ರತಿಯಾಗಿ ನೀರು ಅಧಿಕಮಟ್ಟದಲ್ಲಿ ವಿಸರ್ಜನೆ ಆಗುತ್ತಿರುವಾಗ ಸಾಪೇಕ್ಷ ಸಾಂದ್ರತೆ 1.005ರಷ್ಟಕ್ಕಿಂತಲೂ ಕಡಿಮೆ ಇರಬಹುದು.

ದೇಹದ್ರವ ಯಾವಾಗಲೂ ಸ್ವಲ್ಪ ಪ್ರತ್ಯಾಮ್ಲೀಯವೇ ಆಗಿರಬೇಕಾಗಿರುವುದು ಜೀವಕ್ರಮಕ್ಕೆ ಅತ್ಯಗತ್ಯ. ಇದು ದೇಹದಲ್ಲಿ ಕಾರ್ಬನಿಕ್ ಆಮ್ಲ ಹಾಗೂ ಸೋಡಿಯಮ್ ಮತ್ತು ಪೊಟ್ಯಾಸಿಯಮ್ ಬೈಕಾರ್ಬೊನೇಟ್‍ಗಳ ಪರಸ್ಪರ ನಿಷ್ಟತ್ತಿಯನ್ನು (1:20) ಮುಖ್ಯವಾಗಿ ಅವಲಂಬಿಸಿದೆ. ಇದಲ್ಲದೆ ಸಾಧಾರಣವಾಗಿ ಉಸಿರಾಟ ಸಂದರ್ಭಾನುಸಾರ ಹೆಚ್ಚಿ ಅಥವಾ ಕಡಿಮೆ ಆಗಿ ತನ್ಮೂಲಕ ಹೆಚ್ಚು ಅಥವಾ ಕಡಿಮೆಕಾರ್ಬನ್ ಡೈ ಆಕ್ಸೈಡ್ ಅರ್ಥಾತ್ ಕಾರ್ಬಾನಿಕ್ ಆಮ್ಲದ ವಿಸರ್ಜನೆ ಆಗುತ್ತ ಈ ಪ್ರಮಾಣ ಕಾಯಲ್ಪಡುತ್ತದೆ. ಆದರೆ ಈ ಕ್ರಿಯೆಗೋಸ್ಕರ ಉಸಿರಾಟದಲ್ಲಿ ವ್ಯತ್ಯಾಸ ಏರ್ಪಡುವುದು ತಾತ್ಕಾಲಿಕ ಮಾತ್ರ. ಉಸಿರಾಟ ಎನ್ನುವುದು ಪ್ರಮುಖವಾಗಿ ದೇಹಕ್ಕೆ ಅಗತ್ಯಬಿದ್ದಾಗ ತಾತ್ಕಾಲಿಕವಾಗಿ ಉಸಿರಾಟದ ವ್ಯತ್ಯಾಸದಿಂದ ಕಾರ್ಬನ್ ಡೈ ಆಕ್ಸೈಡಿನ ಪ್ರಮಾಣ ನಿಯಂತ್ರಿತವಾಗಿ ದೇಹದ್ರವದ ಪ್ರತ್ಯಾಮ್ಲತೆಯ ನಿಯಂತ್ರಣ ಅನುಷಂಗಿಕವಾಗಿ ಹಾಗೂ ತಾತ್ಕಾಲಿಕವಾಗಿ ಏರ್ಪಡುತ್ತದೆ ಅಷ್ಟೆ. ದೇಹದ್ರವದ ಪ್ರತ್ಯಾಮ್ಲೀಯತೆಗೆ ಇನ್ನೊಂದು ಮುಖ್ಯ ಕಾರಣ ಎಂದರೆ ಅದರಲ್ಲಿ ಲೀನವಾಗಿರುವ ಫಾಸ್ಫೇಟುಗಳು. ದೇಹದ್ರವದಲ್ಲಿ ಆಮ್ಲೀಯ ಹಾಗೂ ಪ್ರತ್ಯಾಮ್ಲೀಯ ಫಾಸ್ಫೇಟುಗಳು ಎರಡೂ ಇರುತ್ತವೆ. ಅವುಗಳ ಪರಸ್ಪರ ನಿಷ್ಪತ್ತಿ 1:4 ಇರುವುದರಿಂದ ದೇಹದ್ರವ ಪ್ರತ್ಯಾಮ್ಲ ಸ್ವಭಾವದ್ದಾಗಿರುತ್ತದೆ. ಈಗಾಗಲೆ ತಿಳಿದಿರುವಂತೆ ಆಹಾರ ಸೇವನೆ. ಉಪಾಪಚಯಕ್ರಿಯೆ ಇತ್ಯಾದಿ ಕಾರಣಗಳಿಂದ ದೇಹದ್ರವದ ಪ್ರತ್ಯಾಮ್ಲೀಯತೆ ಕಡಿಮೆ ಆಗುತ್ತಲೇ ಇರುತ್ತದೆ. ಎಂದರೆ ಆಮ್ಲೀಯ ಫಾಸ್ಪೇಟುಗಳೂ ಹೆಚ್ಚಾಗಿ ಪ್ರತ್ಯಾಮ್ಲೀಯ ಫಾಸ್ಫೇಟುಗಳು ಕಡಿಮೆ ಆಗಿರುತ್ತವೆ. ಮೂತ್ರಪಿಂಡಗಳು ಆಮ್ಲೀಯ ಫಾಸ್ಫೇಟುಗಳನ್ನೇ ಹೆಚ್ಚಾಗಿ ವಿಸರ್ಜಿಸಿ ಪ್ರತ್ಯಾಮ್ಲೀಯ ಫಾಸ್ಫೇಟುಗಳು ದೇಹದಲ್ಲೆ ಉಳಿಯುವಂತೆ ಮಾಡುತ್ತವೆ. ಮೂತ್ರದಲ್ಲಿ ಈ ಎರಡು ಫಾಸ್ಫೇಟುಗಳ ನಿಷ್ಪತ್ತಿ 10 : 1 ಈ ರೀತಿ ವಿಸರ್ಜನೆ ಸಾಧ್ಯವಾಗಲು ಮೂತ್ರಪಿಂಡಗಳು ಪ್ರತ್ಯಾಮ್ಲೀಯ ಫಾಸ್ಫೇಟುಗಳನ್ನು ಆಮ್ಲೀಯ ಫಾಸ್ಫೇಟುಗಳನ್ನಾಗಿ ಪರಿವರ್ತಿಸಿ ದೇಹದ ಆಮ್ಲೀಯತೆಯನ್ನು ಕಳೆಯುತ್ತದೆ. ಇದೇ ಸಂದರ್ಭದಲ್ಲಿ ದೇಹದ್ರವದ ಪ್ರತ್ಯಾಮ್ಲೀಯತೆಗೆ ಪರೋಕ್ಷವಾಗಿ ಕಾರಣವಾದ ಸೋಡಿಯಮ್ ಹಾಗೂ ಪೊಟ್ಯಾಸಿಯಮ್ ಅಯಾನುಗಳು ಮೂತ್ರದಲ್ಲಿ ಅನ್ಯಾಯವಾಗಿ ವಿಸರ್ಜಿತವಾಗುವಂತೆ ಮೂತ್ರಪಿಂಡಗಳು ಅಮೋನಿಯವನ್ನು ಉತ್ಪತ್ತಿ ಮಾಡಿ ಸೋಡಿಯಮ್ ಹಾಗೂ ಪೊಟ್ಯಾಸಿಯಮ್ ಫಾಸ್ಫೇಟುಗಳ ಬದಲಿಗೆ ಅಮೋನಿಯಮ್ ಫಾಸ್ಫೇಟುಗಳು ಮೂತ್ರದಲ್ಲಿ ವಿಸರ್ಜನೆ ಆಗುವಂತೆ ಮಾಡುತ್ತವೆ.

ಹೊಸ ರಾಸಾಯನಿಕ ಉತ್ಪತ್ತಿ: ಮೂತ್ರಪಿಂಡಗಳು ರಾಸಾಯನಿಕಗಳು ಉತ್ಪತ್ತಿ ಹಾಗೂ ಮಾರ್ಪಾಡುಗಳನ್ನು ಮಾಡುವುದು ಫಾಸಫೇಟುಗಳ ಬಗ್ಗೆ ಮಾತ್ರವೇ ಅಲ್ಲ. ದೇಹಕ್ಕೆ ಸೇರುವ ಅನೇಕ ಔಷಧಗಳೂ ಹಾಗೂ ವಿಷವಸ್ತುಗಳೂ ರಾಸಾಯನಿಕ ಮಾರ್ಪಾಡು ಹೊಂದಿ ವಿಸರ್ಜಿತವಾಗುವುದೂ ಇದೆ (ಉದಾಹರಣೆಗೆ ಬೆನ್‍ಜೋóಯಿಕ್ ಆಮ್ಲ ಹಿಪ್ಪೂರಿಕ್ ಆಮ್ಲವಾಗಿ ಪರಿವರ್ತಿತವಾಗುವುದು). ಮೂತ್ರಪಿಂಡಗಳಿಂದ ರೀನಿನ್ ಎಂಬ ಹಾರ್ಮೋನು ಉತ್ಪತ್ತಿ ಆಗುತ್ತದೆ. ಇದು ಅಡ್ರಿನಲ್ ಗ್ರಂಥಿಗಳ ಮೇಲೆ ವರ್ತಿಸಿ ಅವುಗಳಿಂದ ಆಲ್ಡೋಸ್ಟಿರೋನ್ ಎಂಬ ಹಾರ್ಮೋನಿನ ಉತ್ಪತ್ತಿಗೆ ಕಾರಣವಾಗಿದೆ. ಅಲ್ಲದೇ ಅದು ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡದಲ್ಲಿಯೇ ಇರುವ ಹೈಪರ್‍ಟೆನ್ಸಿನೊಜೆನ್ ಎಂಬ ಪ್ರೋಟೀನ್ ವಸ್ತುವನ್ನು ಹೈಪರ್‍ಟೆನ್ಸಿನ್ ಎಂಬ ರಾಸಾಯನಿಕವಾಗಿ ಪರಿವರ್ತಿಸಿ ತನ್ಮೂಲಕ ದೇಹದಲ್ಲಿ ರಕ್ತದ ಒತ್ತಡ ಏರುವಂತೆ ಮಾಡುತ್ತದೆ. (ಎಸ್.ಆರ್.ಆರ್.)