ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಂಡಲನ ನಿಯಮಗಳು
ಮೆಂಡಲನ ನಿಯಮಗಳು
ಗ್ರೆಗೊರ್ ಮೆಂಡಲ್ 1851ರಲ್ಲಿ ಜೀವಿಗಳಲ್ಲಿಯ ಅನುವಂಶೀಯತೆಯನ್ನು ಕುರಿತಂತೆ ಬಟಾಣಿಗಿಡಗಳ ಮೇಲಿನ ಪ್ರಯೋಗಗಳ ಆಧಾರದ ಮೇಲೆ ಕೆಲವು ಮೂಲಭೂತ ನಿಯಮಗಳನ್ನು ಪ್ರತಿಪಾದಿಸಿದ. ಈತ ಗತಿಸಿದ 35 ವರ್ಷಗಳ ತರುವಾಯ ಸುಮಾರು 1900ರಲ್ಲಿ ಈ ನಿಯಮಗಳ ಮಹತ್ತ್ವವನ್ನು ವಿಜ್ಞಾನಿಗಳು ಅರಿತು ಬೆಳಕಿಗೆ ತಂದರು. ಮೆಂಡಲನಿಗೂ ಮುಂಚೆ ಕೆಲವು ವಿಜ್ಞಾನಿಗಳು ಅನುವಂಶೀಯತೆಯನ್ನು ಕುರಿತು ಅನೇಕ ಪ್ರಯೋಗಗಳನ್ನು ನಡೆಸಿದ್ದರಾದರೂ ಯಾವ ನಿರ್ದಿಷ್ಟ ತೀರ್ಮಾನಗಳಿಗೂ ಬರಲಾಗಿರಲಿಲ್ಲ. ಏಕೆಂದರೆ ಹಿಂದಿನವರೆಲ್ಲರೂ ಜೀವಿಯ ಹಲವಾರು ಗುಣವಿಶೇಷಗಳನ್ನು ಒಂದೇ ಸಲಕ್ಕೆ ಗಮನಿಸಿ ಅಧ್ಯಯನ ನಡೆಸಿದ್ದರು. ಈ ಕಾರಣವಾಗಿ ಜಟಿಲವಾಗಿ ಹೆಣೆದು ಕೊಂಡಿರುವ ಜೀವಿಯ ಲಕ್ಷಣಗಳ ಅನುವಂಶಿಕ ವರ್ತನೆಯನ್ನು ವಿಶ್ಲೇಷಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಅವರದು ಕೇವಲ ಒಂದು ವಿಹಂಗಮ ದೃಷ್ಟಿಯಾಗಿತ್ತು. ಇದಲ್ಲದೆ ಅವರ ಅಧ್ಯಯನ ಕೇವಲ ಎರಡು ಅಥವಾ ಮೂರು ಪೀಳಿಗೆಗೆ ಮಾತ್ರ ಸೀಮಿತವಾಗಿತ್ತು. ಇಂಥ ಸಂಶೋಧನೆಗಳಿಂದ ಫಲಿತಾಂಶಗಳು ಅಷ್ಟು ಸ್ಪಷ್ಟವಾಗಿರುತ್ತಿರಲಿಲ್ಲ. ಇದನ್ನೆಲ್ಲ ಮೆಂಡಲನು ಗಮನಿಸಿ ಪ್ರತಿಯೊಂದು ಜೀವಿಯ ಲಕ್ಷಣವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಗಿಡಗಳನ್ನು ಎಣಿಸಿ ಒಂದು ನಿಯಮಬದ್ಧವಾದ, ಸುವ್ಯವಸ್ಥಿತವಾದ ಮತ್ತು ಸಮಗ್ರವಾದ ದಾಖಲೆಯನ್ನು ಬರೆದಿಡುತ್ತಿದ್ದ.
ಚಿತ್ರ-1
ತನ್ನ ಪ್ರತಿಯೊಂದು ಪ್ರಯೋಗದಲ್ಲೂ ಏಕರೂಪತೆಯ ಫಲಿತಾಂಶಗಳನ್ನು ನೋಡಿ ಅನುವಂಶೀಯತೆಯ ನಿಯಮಗಳನ್ನು ಕಂಡುಹಿಡಿಯುವ ಸಾಧ್ಯತೆಯನ್ನು ನೋಡುತ್ತಿದ್ದ. ಪ್ರಯೋಗ ಫಲಿತಾಂಶಗಳನ್ನು ಬೀಜಗಣಿತ ರೂಪಕ್ಕೆ ಒರೆಹಚ್ಚಿ ಒಂದೊಂದು ಬಗೆಯ ಅನುಪಾತವನ್ನು ಮತ್ತೊಂದಕ್ಕೆ ಹೋಲಿಸಿ, ತಾಳೆನೋಡಿ ಮೂಲಭೂತವಾದ ಮತ್ತು ಗಣಿತಾತ್ಮಕವಾದ ಸೂತ್ರವನ್ನು ಕಂಡುಹಿಡಿಯುವುದೇ ಆತನ ಗುರಿಯಾಗಿತ್ತು.
ಮೆಂಡಲನು ತನ್ನ ಪ್ರಯೋಗಗಳಿಗೆ ಬಟಾಣಿಗಿಡಗಳನ್ನು ಆಯ್ದುದಕ್ಕೆ ಕಾರಣ ಅದು ಏಕವಾರ್ಷಿಕ ಬೆಳೆಯಾಗಿದ್ದು ಬೇಗ ಫಸಲು ಕೊಡುವ ಸಾಮಥ್ರ್ಯ ಪಡೆದಿದ್ದುದು. ಅಲ್ಲದೆ ಬಟಾಣಿ ಗಿಡದ ಪುಷ್ಪರಚನೆ ಸ್ವಪರಾಗಾರ್ಪಣೆಗೆ ಹೊಂದಿಕೊಂಡಿದ್ದು ಬೇರಾವುದೇ ಅಜ್ಞಾತ ಮೂಲದ ಪರಕೀಯ ಪರಾಗದಿಂದ ತಳಿಸಂಕರವಾಗದಂತೆ ರಕ್ಷಿತವಾಗಿತ್ತು.
ತಾಯಿಗಿಡಗಳಾಗಿ ಉಪಯೋಗಿಸಲ್ಪಡುವ ಬಟಾಣಿಹೂವಿನಲ್ಲಿ ಸ್ವಕೀಯ ಪರಾಗಾರ್ಪಣೆಯನ್ನು ತಪ್ಪಿಸಲು ಇನ್ನೂ ಪಕ್ವವಾಗದ ಪುಂಕೇಸರಗಳನ್ನು ತೆಗೆದು ಹಾಕಿ ಅನಂತರ ಅದರ ಶಲಾಕಾಗ್ರದ ಮೇಲೆ ಬೇರೊಂದು ತಂದೆಗಿಡದ ಪರಾಗವನ್ನು ಹಚ್ಚಲಾಯಿತು. ಹೀಗೆ ಕೃತಕ ಪರಾಗಾರ್ಪಣೆ ಮಾಡಿದ ಹೂಗಳನ್ನು ಹೊರಗಿನ ಯಾವ ಪರಾಗವೂ ತಲುಪದಂತೆ ಸಂರಕ್ಷಿಸಲಾಗಿತ್ತು. ಇದರಿಂದಾಗಿ ಇಷ್ಟಪಟ್ಟ ಗುಣಗಳಿರುವ ಪುಷ್ಪಪರಾಗವನ್ನು ಅಭಿವೃದ್ಧಿಪಡಿಸಬೇಕಾದ ಗಿಡಕ್ಕೆ ಹಾಯಿಸಬಹುದಾಯಿತು. ಉದಾಹರಣೆಗೆ ಎತ್ತರವಾದ ಗಿಡದ ಪರಾಗವನ್ನು ಕುಳ್ಳು ಗಿಡದ ಹೂವಿನ ಶಲಾಕಾಗ್ರದ ಮೇಲೆ ಕೃತಕವಾಗಿ ತಂದುಹಾಕಬಹುದು. ತತ್ಫಲವಾಗಿ ಪರಿಚಿತ ಗುಣಲಕ್ಷಣಗಳುಳ್ಳ ಗಿಡಗಳನ್ನು ಪಡೆಯಬಹುದು.
ಹೀಗೆ ನಡೆಸಿದ ಕೃತಕ ಪರಾಗಾರ್ಪಣೆಯಿಂದ ಅಂಡಾಶಯಗಳು ಬೀಜಗಳನ್ನು ಉತ್ಪಾದಿಸುವುವು. ಈ ಬೀಜಗಳನ್ನು ಬಿತ್ತಿದಾಗ ಮೊದಲನೆಯ ಪೀಳಿಗೆ ಗಿಡಗಳು ಹುಟ್ಟಿಕೊಳ್ಳುತ್ತವೆ. ಬೀಜಗಳನ್ನು ಪಡೆದು ತಿರುಗಿ ಬಿತ್ತಿದಾಗ ಹುಟ್ಟುವ ಗಿಡಗಳು ಎರಡನೆಯ ಪೀಳಿಗೆ ಗಿಡಗಳೆಂದೂ ಅದೇ ಎರಡನೆಯ ಪೀಳಿಗೆ ಗಿಡಗಳನ್ನು ಬಿತ್ತಿ ಪಡೆಯುವ ಗಿಡಗಳಿಗೆ ಮೂರನೆಯ ಪೀಳಿಗೆಗಿಡಗಳೆಂದೂ ಗುರುತಿಸಲಾಗುತ್ತದೆ. ತಳಿಪೀಳಿಗೆಯನ್ನು ಈ1, ಈ2, ಈ3, ಈ4………ಎಂಬ ಇಂಗ್ಲೀಷ್ ಪದಸಂಕೇತದಿಂದ ಗುರುತಿಸಲಾಗುತ್ತದೆ.
ತಾನು ನಡೆಸಿದ ಪ್ರಯೋಗ ಒಂದರಲ್ಲಿ ಎತ್ತರವಾದ ಬಟಾಣಿ ಗಿಡಗಳನ್ನು, ಗಿಡ್ಡಜಾತಿಯ ಗಿಡಗಳೊಂದಿಗೆ ಅಡ್ಡಹಾಯಿಸಿ ಮೊದಲನೆಯ ಪೀಳಿಗೆ ಬೀಜಗಳನ್ನು ಮೆಂಡಲ್ ಪಡೆದು ಬಿತ್ತಿದ. ಇದರಿಂದ ಹುಟ್ಟಿದ ಗಿಡಗಳೆಲ್ಲವೂ ಮೆಂಡಲ್ ಎಣಿಸಿದಂತೆ ಮಧ್ಯಮಾವರ್ತಿ ಎತ್ತರದ ಗಿಡಗಳಾಗಿರದೆ ಆಶ್ಚರ್ಯಕರವಾಗಿ ಎತ್ತರವಾದ ಗಿಡಗಳಾಗಿದ್ದವು. ಈ ಮೊದಲನೆಯ ಪೀಳಿಗೆಯ ಗಿಡಗಳ ನಡುವೆ ಸ್ವಕೀಯ ಪರಾಗಾರ್ಪಣೆಯಾಗಲು ಅವಕಾಶ ಮಾಡಿಕೊಟ್ಟು ಅನಂತರ ಪಡೆದ ಬೀಜಗಳಿಂದ ಎರಡನೆಯ ಪೀಳಿಗೆಯ ಗಿಡಗಳನ್ನು ಪಡೆದಾಗ ಶೇಕಡಾ 75ರಷ್ಟು ಗಿಡಗಳು ಎತ್ತರವಾಗಿಯೂ ಶೇಕಡಾ 25ರಷ್ಷು ಗಿಡಗಳು ಕುಳ್ಳಾಗಿಯೂ ಇದ್ದವು. ಅಂದರೆ ಎತ್ತರವಾದ ಗಿಡ ಮತ್ತು ಕುಳ್ಳಗಿಡಗಳು ಕ್ರಮವಾಗಿ 3:1 ಅನುಪಾತದಲ್ಲಿ ಇದ್ದುವು. ಕುಳ್ಳ ಗಿಡಗಳನ್ನು ಸ್ವಕೀಯ ಪರಾಗಾರ್ಪಣೆಗೆ ಒಳಪಡಿಸಿ ಉತ್ಪಾದಿಸಿದ 3ನೆಯ ಪೀಳಿಗೆ ಬೀಜದಾಗ ಎಲ್ಲ ಗಿಡಗಳು ಕುಳ್ಳಾಗಿಯೇ ಇದ್ದುವು. ಮೆಂಡಲ್ ನಡೆಸಿದ ಮೇಲಿನ ಮತ್ತು ಇತರೆ ಕೆಲವು ಪ್ರಯೋಗಗಳಿಂದ ಅನುವಂಶಿಕ ಲಕ್ಷಣಗಳಾದ ಆಕಾರ, ಬಣ್ಣ, ರುಚಿ ಮುಂತಾದವು ಯಾವುದೊ ಒಂದು ಘಟಕದಿಂದ ನಿರ್ಧರಿತವಾಗುತ್ತವೆ ಎಂಬ ತೀರ್ಮಾನಕ್ಕೆ ಬಂದ. ಎರಡನೆಯ ಪೀಳಿಗೆಯಲ್ಲಿ, ಎತ್ತರದ ಗಿಡ ಮತ್ತು ಕುಳ್ಳಗಿಡಗಳೆರಡು ಬಗೆಯವೂ ಇರುವುದರಿಂದ ಮೊದಲನೆಯ ಪೀಳಿಗೆಯ ಬೀಜಗಳಲ್ಲಿ ಘಟಕಗಳು ಜೋಡಿಯಾಗಿದ್ದು ಎರಡನೆಯ ಪೀಳಿಗೆಯ ಬಿತ್ತನೆಯಲ್ಲಿ ಚದರೆ ಹೋಗಿ ತಿರುಗಿ ಒಂದೊಂದು ಘಟಕವೂ ಪ್ರತ್ಯೇಕವಾಗಿ ಗೋಚರವಾಗುತ್ತದೆ. ಮೊದಲನೆಯ ಪೀಳಿಗೆಯಲ್ಲಿ ಜೋಡಿಯಾಗಿದ್ದ ಘಟಕಗಳು ಎರಡನೆಯ ಪೀಳಿಗೆಯಲ್ಲಿ ಇಬ್ಭಾಗ ಹೊಂದಿ ಎರಡೂ ಘಟಕಗಳು ಪ್ರತ್ಯೇಕ ಅಸ್ತಿತ್ವ ಹೊಂದುತ್ತವೆ. ಎತ್ತರ ಜಾತಿಯ ಬಟಾಣಿಗಿಡವನ್ನು ಗಿಡ್ಡ ಬಟಾಣಿಗಿಡದೊಂದಿಗೆ ಅಡ್ಡಹಾಯಿಸಿದಾಗ ಲಭಿಸುವ ಮೊದಲನೆಯ ಪೀಳಿಗೆಯಲ್ಲಿ ಎಲ್ಲ ಎತ್ತರದ ಗಿಡಗಳೇ ಇರುತ್ತವೆ. ಇದರಲ್ಲಿ ಎತ್ತರತನದ ಘಟಕ ಕುಳ್ಳಗಿನ ಘಟಕದೊಡನೆ ಜೊತೆಗೂಡಿರುತ್ತದೆ. ಆದರೆ ಎತ್ತರತನದ ಘಟಕ ಪ್ರಬಲವಾದ ಘಟಕವಾದ್ದರಿಂದ ಅಪ್ರಬಲ ಘಟಕವಾದ ಕುಳ್ಳುತನವನ್ನು ಮರೆಮಾಡಿ, ಇದರ ಪ್ರಾಬಲ್ಯದಿಂದ ಎಲ್ಲ ಗಿಡಗಳೂ ಎತ್ತರವಾಗಿ ಇರುವ ಹಾಗೆ ಆಗುತ್ತದೆ. ಈ ಪೀಳಿಗೆಯ ಬೀಜಗಳನ್ನು ಬಿತ್ತಿದಾಗ ಹುಟ್ಟುವ ಗಿಡಗಳಲ್ಲಿ ಜೊತೆ ಗೂಡಿದ್ದ ಎತ್ತರತನದ ಘಟಕವೂ ಮತ್ತು ಕುಳ್ಳುತನದ ಘಟಕವೂ ಇಬ್ಭಾಗವಾಗಿ ಹಂಚಿಹೋಗಿ ಎತ್ತರದ ಗಿಡಗಳು ಮತ್ತು ಕಳ್ಳಗಿನ ಗಿಡಗಳು ಬೇರೆ ಬೇರೆಯಾಗಿ ಕಾಣಿಸಿಕೊಳ್ಳುತ್ತವೆ. ಅಂದರೆ ಪೀಳಿಗೆಯ ಲಕ್ಷಣಗಳ ಸರ್ವಸಾಧ್ಯತೆಯಲ್ಲಿ ಜೊತೆಗೂಡಿದ ಅಥವಾ ಹಂಚಿಹೋಗುವ ನಿಯಮದಿಂದ ಜೀವಿಯ ಲಕ್ಷಣಗಳಿಗೆ ಪ್ರೇರಕವಾದ ಅಂಶ ಅಥವಾ ಘಟಕಗಳಿವೆ ಎಂದು ತಿಳಿದು ಬಂತು. ಇವು ತಂದೆ ತಾಯಿ ಗುಣಲಕ್ಷಣಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಾಧನೆಗಳು. ತಂದೆ ಅಥವಾ ತಾಯಿಯ ಒಂದು ಗೊತ್ತಾದ ಗುಣಲಕ್ಷಣಕ್ಕೆ ಪ್ರೇರಕವಾದ ಘಟಕವನ್ನು ಮುಂದಿನ ಪೀಳಿಗೆಗೆ ಸಾಗಿಸುವುದರಿಂದ ಪ್ರತಿಯೊಂದು ಜೀವಿಯಲ್ಲೂ ಒಂದು ಗುಣಕ್ಕೆ ಸಂಬಂಧಿಸಿದಂತೆ ಎರಡು ಘಟಕಗಳು ಕೂಡಿರುತ್ತವೆ ಎಂಬುದು ವೇದ್ಯ. ಅಂದರೆ ತಂದೆಯಿಂದ ಒಂದು ಘಟಕ ಮತ್ತು ತಾಯಿಯಿಂದ ಒಂದು ಘಟಕ-ಹೀಗೆ ಪಡೆದ ತಳಿಯ ಗುಣಲಕ್ಷಣಗಳು ಈ ಘಟಕಗಳಿಂದ ಕೂಡಿ ಉದ್ಭವವಾಗುತ್ತವೆ. ಘಟಕ ಅಥವಾ ಜೀನಿಗಳು ಅನುವಂಶೀಯತೆಯ ಗುಣಲಕ್ಷಣಗಳನ್ನು ನಿಯಂತ್ರಿಸುತ್ತವೆ ಮತ್ತು ಈ ಘಟಕಗಳು ಒಂದು ಜೋಡಿಯಲ್ಲಿ ಇರುತ್ತವೆ. ಇದೇ ಏಕಮಾನ ಘಟಕ ನಿಯಮ (ಲಾ ಆಫ್ ಯೂನಿಟ್ ಕ್ಯಾರಕ್ಟರ್).
ಪ್ರತಿಯೊಂದು ಜೀವಿಯಲ್ಲೂ ಒಂದೊಂದು ಗುಣಲಕ್ಷಣವನ್ನು ನಿರ್ದೇಶಿಸುವ ಒಂದೊಂದು ಘಟಕವಿರುತ್ತದೆ. ಪ್ರತಿಲಕ್ಷಣಕ್ಕೂ ಸಂಬಂಧಿಸಿದಂತೆ ಒಂದು ಜೊತೆ ಘಟಕಗಳಿರುತ್ತವೆ. ಈ ಜೋಡಿ ಘಟಕದಲ್ಲಿ ಒಂದು ತಂದೆಯಿಂದಲೂ ಮತ್ತೊಂದು ತಾಯಿಯಿಂದಲೂ ಬಂದು ಸೇರಿರುತ್ತದೆ. ಒಂದು ಘಟಕ ಪ್ರಬಲವಾಗಿದ್ದರೆ ಅದು ಮೊದಲನೆಯ ಪೀಳಿಗೆಯಲ್ಲಿ ಪ್ರಕಟಗೊಳ್ಳುತ್ತದೆ. ಗರ್ಭಾಂಕುರತೆ ಕಾಲದಲ್ಲಿ ಒಂದುಗೂಡಿದ್ದ ಘಟಕಗಳು ಪರಾಗ ಮತ್ತು ಅಂಡಕಗಳು ಉತ್ಪಾದನೆಯಾಗುವಾಗ ಪ್ರತ್ಯೇಕಗೊಳ್ಳುತ್ತವೆ. ಹಾಗೆ ಪ್ರತ್ಯೇಕಗೊಂಡ ಪ್ರತಿಘಟಕವೂ ಮೂಲ ಘಟಕದಂತೆಯೇ ತನ್ನ ವ್ಯತ್ತಿತ್ವವನ್ನು ಉಳಿಸಿ ಕೊಂಡಿರುತ್ತದೆ. ಇದೇ ಪ್ರತ್ಯೇಕತಾ ನಿಯಮ (ಲಾ ಆಫ್ ಸೆಗ್ರಿಗೇಷನ್).
ಮೆಂಡಲನು ನಡೆಸಿದ ಎತ್ತರದ ಮತ್ತು ಕುಳ್ಳಗಿನ ಬಟಾಣಿಗಿಡದ ಅಡ್ಡಹಾಯ್ಕೆ ಪ್ರಯೋಗದಲ್ಲಿ ಖಿ ಎಂಬುದು ಎತ್ತರತನದ ಘಟಕ ಅಥವಾ ಜೀನಿಯ ಸಂಕೇತ ಮತ್ತು ಇದು ಎತ್ತರದನವನ್ನು ನಿಯಂತ್ರಿಸುತ್ತದೆ. ಣ'ಎಂಬುದು ಕುಳ್ಳುತನದ ಘಟಕ ಅಥವಾ ಜೀನಿಯ ಸಂಕೇತ ಮತ್ತು ಇದು ಕುಳ್ಳುತನವನ್ನು ನಿಯಂತ್ರಿಸುತ್ತದೆ. ಖಿಎಂಬ ಇಂಗ್ಲಿಷಿನ ದೊಡ್ಡ ಅಕ್ಷರ ಪ್ರಾಬಲ್ಯಗುಣವನ್ನು ತೋರಿಸುವ ಲಿ ಸಂಕೇತ. ಅದೇ ಣ' ಎಂಬ ಇಂಗ್ಲಿಷಿನ ಸಣ್ಣ ಅಕ್ಷರ ಅಪ್ರಬಲವಾದ ಗುಣವನ್ನು ತೋರಿಸುವ ಲಿಪಿಸಂಕೇತ.
ಚಿತ್ರ-2
ಎತ್ತರತನವುಳ್ಳ ತಂದೆತಾಯಿಯನ್ನು ಖಿಖಿ ಎಂದು ತೋರಿಸುತ್ತಾರೆ. ಏಕೆಂದರೆ ಘಟಕವು ಒಂದು ತಂದೆಯಿಂದಲೂ ಮತ್ತೊಂದು ತಾಯಿಯಿಂದಲೂ ಕೂಡಿಬಂದಿರುತ್ತದೆ. ಆದ್ದರಿಂದ ಅವು ಜೋಡಿಯಲ್ಲಿ ಇರುತ್ತವೆ. ಹೀಗೆಯೇ 'ಣಣ ಎಂಬುದು ಕುಳ್ಳಗಿನ ತಂದೆ ತಾಯಿಯ ಸಂಕೇತ. P ಎಂಬ ಲಿಪಿ ಪಿತೃಪೀಳಿಗೆಯ ಸಂಕೇತ.
ಈ ಪಿತೃಗಳು ಉತ್ಪಾದಿಸಿದ ಲಿಂಗಕೋಶಿಕ ಅಥವಾ ಗ್ಯಾಮೀಟುಗಳಲ್ಲಿ ಘಟಕಗಳು ಜೋಡಿಯಲ್ಲಿ ಇರುತ್ತವೆ. ಲಿಂಗಕೋಶಿಕಗಳ ಉತ್ಪಾದನೆಯ ಕಾಲದಲ್ಲಿ ಈ ಘಟಕಗಳು ಪ್ರತ್ಯೇಕಗೊಳ್ಳುತ್ತವೆ. ಗರ್ಭಾಂಕುರತೆ ಕಾಲದಲ್ಲಿ ಹೆಣ್ಣು ಮತ್ತು ಗಂಡು ಲಿಂಗಕೋಶಿಕಗಳು ಕೂಡಿದಾಗ ಖಿ ಮತ್ತು ಣ ಘಟಕಗಳು ಅಂದರೆ ಒಂದು ಪ್ರಬಲಘಟಕ ಮತ್ತೊಂದು ಅಪ್ರಬಲಘಟಕ ಜೋಡಿಯಾಗುತ್ತವೆ. ಅಂದರೆ ಮಿಶ್ರತಳಿಯಲ್ಲಿ ಖಿಣ ಎಂಬ ಘಟಕರೂಪ ಅಥವಾ ಜೀನಿರೂಪ ಕಾಣಬರುತ್ತದೆ. ಮೊದಲ ಪೀಳಿಗೆಯಲ್ಲಿ ಗಿಡಗಳನ್ನು ಖಿಣ ಎಂದು ತೋರಿಸಲಾಗುತ್ತದೆ. ಅಂದರೆ ಈ ಪೀಳಿಗೆಯ ಗಿಡದ ಪ್ರತಿಯೊಂದು ಜೀವಕೋಶದಲ್ಲಿ ಎತ್ತರ ತನದ ಒಂದು ಘಟಕ ಕುಳ್ಳುತನದ ಇನ್ನೊಂದು ಘಟಕ ಇರುತ್ತದೆ. ಮೊದಲನೆಯ ಪೀಳಿಗೆಯ ಗಿಡಗಳಲ್ಲಿ ಸ್ವಕೀಯಪರಾಗಾರ್ಪಣೆ ಮಾಡಿದಾಗ ಎರಡು ರೀತಿಯ ಗ್ಯಾಮೀಟುಗಳು ಉತ್ಪತ್ತಿಯಾಗುತ್ತವೆ. ಒಂದು ಗಂಡು, ಮತ್ತೊಂದು ಹೆಣ್ಣು, ಉತ್ಪತ್ತಿಯಾದ ಗಂಡು ಗ್ಯಾಮೀಟುಗಳಲ್ಲಿ ಅರ್ಧಭಾಗ ಖಿ ಘಟಕ ತನದ ಘಟಕ ಇದ್ದರೆ ಉಳಿದ ಇನ್ನರ್ಧಭಾಗದಲ್ಲಿ ಣ ಅಂದರೆ ಕುಳ್ಳುತನದ ಘಟಕ ಇರುತ್ತದೆ. ಉತ್ಪತ್ತಿಯಾದ ಹೆಣ್ಣು ಗ್ಯಾಮೀಟುಗಳಲ್ಲಿಯೂ ಅರ್ಧ ಭಾಗ ಖಿ ಘಟಕ, ಇನ್ನರ್ಧಭಾಗ ಣ ಘಟಕ ಇರುತ್ತದೆ. ಗರ್ಭಾಂಕುರತೆ ಸಮಯದಲ್ಲಿ ಈ ಗ್ಯಾಮೀಟುಗಳು ಯಾದೃಚ್ಛಿಕವಾಗಿ ಕೂಡಿಕೊಳ್ಳುತ್ತವೆ. ಖಿ ಸಂಕೇತದ ಗಂಡು ಗ್ಯಾಮೀಟು ಖಿ ಸಂಕೇತದ ಹೆಣ್ಣು ಗ್ಯಾಮೀಟಿನೊಡನೆ ಸೇರಿ ಎರಡನೆಯ ತಳಿಯಲ್ಲಿ ಖಿಖಿ ಘಟಕದ ಜೀವಿಯ ಉತ್ಪಾದನೆಯಾಗುತ್ತದೆ: 'ಖಿ ಸೇರಿ 'ಖಿಣ ಘಟಕದ ಜೀವಿ ಉತ್ಪಾದನೆಯಾಗುತ್ತದೆ; ಣ ಸಂಕೇತದ ಗಂಡು ಗ್ಯಾಮೀಟು ಖಿ ಸಂಕೇತದ ಹೆಣ್ಣು ಗ್ಯಾಮೀಟಿನೊಡನೆ ಬೆರೆತು ಣಖಿ ಘಟಕದ ಜೀವಿ ಉತ್ಪಾದನೆಯಾಗುತ್ತದೆ; 'ಣ ಸಂಕೇತದ ಗಂಡು ಗ್ಯಾಮೀಟುಣ ಸಂಕೇತದ ಹೆಣ್ಣು ಗ್ಯಾಮೀಟಿನೊಡನೆ ಬೆರೆತು 'ಣಣ ಘಟಕ ಜೀವಿ ಉತ್ಪಾದನೆಯಾಗುತ್ತದೆ. ಗರ್ಭಾಂಕುರತೆಯಿಂದ ಮೇಲೆ ತಿಳಿಸಿದ ನಾಲ್ಕು ವಿಧದ ಸಂಯೋಜನೆಗಳ ಸಾಧ್ಯತೆ ಉಂಟು. ಖಿಖಿ ಘಟಕದ ಗಿಡವು ಎತ್ತರವಾಗಿರುತ್ತದೆ. ಏಕೆಂದರೆ ಅದರಲ್ಲಿ ಎತ್ತರತನದ ಜೀನ್ಗಳು ಮಾತ್ರ ಇವೆ. ಖಿಣ ಘಟಕದ ಎರಡು ಸಂಯೋಜಿತ ಗಿಡಗಳಿವೆಯಷ್ಟೆ. ಇವು ಕೂಡ ಎತ್ತರವಾಗಿಯೇ ಇರುತ್ತವೆ. ಏಕೆಂದರೆಖಿ ಎಂಬ ಎತ್ತರತನದ ಘಟಕ ತನ್ನ ಪ್ರಭಾವದಿಂದ ಕುಳ್ಳುತನದ ಘಟಕವಾದ 'ಣ ಘಟಕವನ್ನು ಮಸಕು ಮಾಡುತ್ತದೆ. ಣಣ ಘಟಕವುಳ್ಳ ಗಿಡಗಳೂ ಗಿಡ್ಡವಾಗಿಯೇ ಇರುತ್ತವೆ. ಏಕೆಂದರೆ ಣ ಎಂಬ ಕುಳ್ಳುತನದ ಘಟಕವನ್ನು ಮಾತ್ರ ಇವು ಪಡೆದಿವೆ. ಹೀಗೆ ಖಿಖಿ, ಖಿಣ, ಣಖಿ ಎಂಬ ಮೂರು ವಿಧದ ಸಂಯೋಜನೆಯುಳ್ಳ ಗಿಡಗಳು ಎತ್ತರವಾಗಿದ್ದು ಣಣ ಎಂಬ ಘಟಕದ ಗಿಡಗಳು ಕುಳ್ಳಾಗಿರುತ್ತವೆ. ಅಂದರೆ 3:1 ಅನುಪಾತದಲ್ಲಿ ಗಿಡಗಳು ಹುಟ್ಟಿಕೊಳ್ಳುತ್ತವೆ: ಇದರಿಂದ ತಿಳಿದುಬರುವುದೇನೆಂದರೆ ಎರಡು ಜೀವಿಗಳು ಬಾಹ್ಯನೋಟದಲ್ಲಿ ನೋಡುವುದಕ್ಕೆ ಒಂದೇ ರೀತಿ ಇದ್ದರೂ ಅವುಗಳು ಹೊಂದಿರುವ ಜೀನ್ ಅಥವಾ ಘಟಕಗಳಲ್ಲಿ ವ್ಯತ್ಯಾಸವಿರುತ್ತದೆ. ಮಿಶ್ರತಳಿಯಲ್ಲಿ-ಖಿಣ ಎಂಬ ಘಟಕರೂಪ ಅಥವಾ ಜೀನಿರೂಪ (ಖಿಣ ಮತ್ತು ಣಖಿ) ಕಂಡುಬರುತ್ತದೆಯಷ್ಟೆ. ಇದೇ ಆ ಜೀವಿಯ ನಿಜವಾದ ರೂಪ. ಆದರೆ ಶುದ್ಧಸಂತಾನದ ಹಾಗೂ ಮಿಶ್ರ ತಳಿಯ ಜೀವಿ ಎತ್ತರವಾಗಿ (ಖಿಖಿ ಮತ್ತು ಖಿಣ) ಕಾಣುವುದರಿಂದ ಜೀವಿಯ ದೃಶ್ಯರೂಪ (ಫೀನೊಟೈಪ್) ಎಂದು ಕರೆಯಲಾಗುತ್ತದೆ. ಬೇರೆ ತೆರನಾದ ಎರಡು ಘಟಕಗಳು ಸೇರಿ ಆದ ಸಂಯುಕ್ತ ರೂಪವನ್ನು ಅಂದರೆ ಖಿಖಿ ಮತ್ತು ಣಣಯನ್ನು ಸಮಜಂಪತಿ ಸಂಯುಕ್ತ ರೂಪ (ಹೋಮೋಜೈಗಸ್) ಎಂದೂ ಬೇರೆ ತೆರನಾದ ಘಟಕಗಳು ಸೇರಿ ಆದ ಸಂಯುಕ್ತ ರೂಪವನ್ನು ಅಂದರೆ ಖಿಣ ಘಟಕವನ್ನು ವಿಷಮ ಜಂಪತಿ ಸಂಯುಕ್ತರೂಪ (ಹೆಟರೊಜೈಗಸ್) ಎಂದೂ ಕರೆಯಲಾಗುತ್ತದೆ. ಸಮಜಂಪತಿರೂಪದ ಜೀವಿಗಳು ಶುದ್ಧಸಂತಾನದ ಜೀವಿಗಳನ್ನೇ ಕೊಡುತ್ತವೆ. ಸಮಜಂಪತಿ ಸಂಯುಕ್ತರೂಪದ ಗಿಡಗಳು, ಸ್ವಪರಾಗಾರ್ಪಣೆಯಿಂದಾಗಲೀ ಅಥವಾ ಇನ್ನೊಂದು ಸಮಜಂಪತಿರೂಪದ ಗಿಡದೊಡನೆ ಅಡ್ಡ ಹಾಯಿಸಿದಾಗಲೀ ತಮಗೆ ತದ್ರೂಪವಾದ ಗಿಡಗಳನ್ನು ಕೊಡುವುದನ್ನು ಕಾಣಬಹುದು. ಸಂಗ್ರಹವಾಗಿ ಹೇಳುವುದಾದರೆ ಪರಸ್ಪರ ಅಡ್ಡಹಾಯ್ಕೆಯಿಂದ ಕೆಲವು ಗುಣಲಕ್ಷಣಗಳು ತಂದೆ ತಾಯಿಯಿಂದ ಮುಂದಿನ ಪೀಳಿಗೆಯಲ್ಲಿ ಅಪ್ರಬಲ ಗುಣಲಕ್ಷಣಗಳನ್ನು ಮಸುಕುಮಾಡಿ ತನ್ನ ಪ್ರಾಬಲ್ಯವನ್ನು ತೋರುತ್ತವೆ. ಇದೇ ಪ್ರಬಲ್ಯ ನಿಯಮ (ಲಾ ಆಫ್ ಡಾಮಿನೆನ್ಸ್).
ದ್ವಿಗುಣ ಮಿಶ್ರತಳಿ ಎಂದರೆ ಎರಡು ಬೇರೆ ಗುಣಗಳಿರುವ ಜೀವಿಗಳನ್ನು ಮಿಶ್ರತಳೀಕರಣ ಮಾಡುವುದು. ಉದಾಹರಣೆಗೆ ಮೆಂಡಲ್ ಎರಡು ಜಾತಿಯ ಬಟಾಣಿಗಿಡಗಳನ್ನು ಅಡ್ಡಹಾಯಿಸಿದ. ಒಂದು ಜಾತಿಯ ಗಿಡದ ಬಟಾಣಿ ಬೀಜಗಳು ಹಳದಿ ಬಣ್ಣವನ್ನೂ ಗುಂಡನೆಯ ಆಕಾರವನ್ನೂ ಪಡೆದಿದ್ದುವು. ಇನ್ನೊಂದು ಜಾತಿಯ ಗಿಡದ ಬಟಾಣಿ ಬೀಜಗಳು ಹಸುರು ಬಣ್ಣದವಾಗಿದ್ದು ಸುಕ್ಕುಸುಕ್ಕಾಗಿದ್ದವು. ಈ ಮಿಶ್ರತಳಿ ಪ್ರಯೋಗದ ಮೂಲಕ ಮೆಂಡಲ್ ಹಳದಿ ಬಣ್ಣ ಮತ್ತು ದುಂಡಗಿನ ಆಕಾರಗಳು ಪ್ರಬಲಗುಣಗಳೆಂದೂ ಹಸುರು ಬಣ್ಣ ಮತ್ತು ಸುಕ್ಕು ಅಪ್ರಬಲಗುಣಗಳೆಂದೂ ಪತ್ತೆಹಚ್ಚಿದ. ಹಳದಿ ಬಣ್ಣಕ್ಕೆ ಙಙ ಎಂಬ ಸಂಕೇತ ಮತ್ತು ದುಂಡಗಿನ ಆಕಾರಕ್ಕೆ ಖಖ ಎಂಬ ಸಂಕೇತ. ಅದೇ ಹಸುರು ಬಣ್ಣಕ್ಕೆ ಥಿಥಿ ಮತ್ತು ಸುಕ್ಕು ನಿರಿಗೆಗೆ ಡಿಡಿ ಎಂಬ ಸಂಕೇತಗಳು. ಪ್ರಬಲಗುಣವಿರುವ ಪಿತೃತಳಿಗಳು ಙ, ಖ ಗ್ಯಾಮೀಟುಗಳನ್ನು ಉತ್ಪಾದಿಸುತ್ತವೆ. ಬೇರೆಯುವು ಥಿ, ಡಿ ಇರುವ ಗ್ಯಾಮೀಟುಗಳನ್ನು ಉತ್ಪಾದಿಸುತ್ತವೆ. ಈ ಗ್ಯಾಮೀಟುಗಳು ಸೇರಿದಾಗ ಉತ್ಪತ್ತಿಯಾಗುವ ಯುಗ್ಮಗಳು ಙಥಿ. ಖಡಿ ಜೀನಿಗಳನ್ನು ಹೊಂದಿರುತ್ತವೆ. ಈ ಯುಗ್ಮಗಳಿಂದ ಉತ್ಪತ್ತಿಯಾದ ಗಿಡಗಳೆಲ್ಲ ಹಳದಿಬಣ್ಣದ ಗುಂಡುಬೀಜಗಳನ್ನು ಉತ್ಪಾದಿಸುತ್ತವೆ. ಏಕೆಂದರೆ ಹಳದಿಬಣ್ಣ ಮತ್ತು ಗುಂಡಾಕಾರ ಪ್ರಬಲ ಘಟಕ ಜೋಡಿ. ಈ ಮೊದಲನೆಯ ಪೀಳಿಗೆಯ ಗಿಡಗಳನ್ನು ವಿವಿಧ ಜಂಪತಿಯ ಸಂಯುಕ್ತ ರೂಪಗಳೆಂದು ಕರೆಯಬಹುದು. ಇವನ್ನು ಸ್ವಪರಾಗಾರ್ಪಣೆಗೆ ಒಳಪಡಿಸಿದಾಗ ಹೆಣ್ಣು ಮತ್ತು ಗಂಡು ಗ್ಯಾಮೀಟುಗಳು ಉದ್ಭವವಾದುವು. ಗಂಡಿನಲ್ಲೂ ಹೆಣ್ಣಿನಲ್ಲೂ ನಾಲ್ಕು ರೀತಿಯ ಗ್ಯಾಮೀಟುಗಳನ್ನು ಇದರಲ್ಲಿ ಕಾಣಬಹುದು: ಙಖ, ಙಡಿ, ಥಿಖ ಮತ್ತು ಥಿಡಿ ಇವು ಸೇರಿ ಎರಡನೆಯ ಪೀಳಿಗೆಯ ಯುಗ್ಮಗಳು ಉದ್ಭವವಾಗುತ್ತವೆ. ಇವುಗಳ ದೃಶ್ಯರೂಪಗಳು 9 : 3 : 3 : 1 ಎಂಬ ಅನುಪಾತದಲ್ಲಿರುತ್ತವೆ. ಒಂದು ಜೀವಿಯಲ್ಲಿ ಅಸಂಖ್ಯಾತ ಗುಣಲಕ್ಷಣಗಳು ಕ್ಲಿಷ್ಟವಾಗಿ ಹೆಣೆದುಕೊಂಡಿರುವುದರಿಂದ ಆ ಗುಣಲಕ್ಷಣಗಳಿಗೆ ಕಾರಣಗಳಾದ ಘಟಕ ಅಥವಾ ಜೀನಿಗಳ ವರ್ತನೆಯನ್ನು ಮೆಂಡಲ್ ಮೇಲೆ ತಿಳಿಸಿದ ದ್ವಿಗುಣ ಮಿಶ್ರತಳಿ ಅಡ್ಡಹಾಯುವಿಕೆಯಿಂದ ವಿಶ್ಲೇಷಿಸಿದ. ಅಂದರೆ ಒಂದು ಜೊತೆ ಘಟಕಗಳು ಪ್ರತ್ಯೇಕವಾಗುವಾಗ ಜೀವಿಕೋಶದಲ್ಲಿರುವ ಇತರೆ ಘಟಕಜೋಡಿಗಳ ಸಂಪರ್ಕ ಮತ್ತು ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ವಿಂಗಡಣೆಗೊಳ್ಳುತ್ತವೆ. ಇದೇ ಸ್ವತಂತ್ರ ವಿಂಗಡಣೆ ನಿಯಮ (ಲಾ ಆಫ್ ಇಂಡಿಪೆಂಡೆಂಟ್ ಅಸಾರ್ಟ್ಮೆಂಟ್). (ಕೆ.ಆರ್.ಜಿಎ.; ಎನ್.ಎಚ್.ವಿ.)