ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಚ್ನಿಕಾಫ್, ಎಲಿ
ಮೆಚ್ನಿಕಾಫ್, ಎಲಿ 1845-1916. ರಷ್ಯಸಂಜಾತ ಬಹುಮುಖವಿಜ್ಞಾನ ವ್ಯಾಸಂಗಿ. ಪೂರ್ಣಹೆಸರು ಮೆಚ್ನಿಕೌ, ಎಲಿಯಾ ಎಲಿಯಿಚ್. ಪಾಲ್ ಎಹರ್‍ಲಿಚ್ ಎಂಬ ಜರ್ಮನ್ ವೈದ್ಯವಿಜ್ಞಾನಿಯೊಡನೆ 1908ರ ವೈದ್ಯಕೀಯ ಹಾಗೂ ಶರೀರ ಕ್ರಿಯಾವಿಜ್ಞಾನದ ನೊಬೆಲ್ ಪಾರಿತೋಷಕ ವಿಜೇತ. ಭ್ರೂಣವಿಜ್ಞಾನ, ತುಲನಾತ್ಮಕ ಶರೀರರಚನಾವಿಜ್ಞಾನ, ರೋಗವಿಜ್ಞಾನ, ಏಕಾಣುವಿಜ್ಞಾನ, ರೋಗಪ್ರತಿರೋಧಕ ವಿಜ್ಞಾನ ಇವುಗಳಲ್ಲೆಲ್ಲ ಪ್ರಾಯೋಗಿಕ ವ್ಯಾಸಂಗಗಳನ್ನು ಕೈಗೊಂಡ ಮಹಾ ಪ್ರತಿಭಾವಂತ. ಸ್ವತಃ ವೈದ್ಯನಾಗಿಲ್ಲದೇ ಇದ್ದರೂ ವೈದ್ಯವಿಜ್ಞಾನಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ-ಲೂಯಿ ಪಾಸ್ತರನಂತೆ.
ರಷ್ಯದ ಖಾರ್‍ಕೊವ್ ಪ್ರದೇಶದ ಇವನೊವ್ಸ್ಕ ಎಂಬಲ್ಲಿ ಎಲಿಯಾ ಎಲಿಯಾನೋವಿಚ್ ಮತ್ತು ಎಮಿಲಿಯಾ ನವಹೌನ ಎಂಬ ದಂಪತಿಗಳ ಐವರು ಮಕ್ಕಳ ಪೈಕಿ ಕಿರಿಯವನಾಗಿ ಜನಿಸಿದ (16-5-1845). 17ನೆಯ ವಯಸ್ಸಿನಲ್ಲಿ ಖಾರ್‍ಕೊವ್ ವಿಶ್ವವಿದ್ಯಾಲಯ ಸೇರಿ 1864ರಲ್ಲಿ ಪದವೀಧರನಾದ. ಮುಂದಿನ ಎರಡು ವರ್ಷ ಜರ್ಮನಿಯಲ್ಲಿ ವಾನ್ ಸೀಬೋಲ್ಡನ ಕೈಕೆಳಗೆ ವ್ಯಾಸಂಗ ಮಾಡಿದ. ಆ ಬಳಿಕ ಇಟಲಿಗೆ ಹೋಗಿ ಅಲ್ಲಿ ಅಕಶೇರುಕ ಭ್ರೂಣಗಳ ಮೇಲೆ ಸಂಶೋಧನೆ ಮಾಡಿ 1867ರಲ್ಲಿ ಎಂ.ಎಸ್‍ಸಿ. ಪದವಿ ಪಡೆದು ರಷ್ಯಕ್ಕೆ ವಾಪಸಾದ. ಸೇಂಟ್ ಪೀಟರ್ಸ್‍ಬರ್ಗಿನಲ್ಲಿ ಪ್ರಾಣಿವಿಜ್ಞಾನದ ಅಧ್ಯಾಪಕನಾಗಿದ್ದುಕೊಂಡು 1868ರಲ್ಲಿ ಅದೇ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದು ಜರ್ಮನಿ, ಇಟಲಿ ಮುಂತಾದ ಕಡೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾಗ ಶ್ರಮವಹಿಸಿ ಸೂಕ್ಷ್ಮದರ್ಶಕದ ಬಳಕೆಯನ್ನು ಮಿತಿಮೀರಿ ಮಾಡುತ್ತಿದ್ದುದರಿಂದ ಇವನ ದೃಷ್ಟಿಯ ಚುರುಕು ಕೆಟ್ಟಿತು. ಸ್ವಲ್ಪ ಕಾಲಾನಂತರ (ಕಣ್ಣಿಗೆ ಸ್ವಲ್ಪ ವಿಶ್ರಾಂತಿ ದೊರಕಿದ ಮೇಲೆ) ದೃಷ್ಟಿದೋಷ ಗುಣವಾದರೂ ಕಣ್ಣು ಮಾತ್ರ ಮೊದಲಿನ ಚುರುಕುತನ ಗಳಿಸಲಿಲ್ಲ. ಜೊತೆಗೆ ವ್ಯಾಸಂಗ ಹಾಗೂ ಉದ್ಯೋಗಕ್ಷೇತ್ರಗಳಲ್ಲಿದ್ದ ದುರ್ನೀತಿ ನಡೆವಳಿಕೆಗಳಿಂದ ಕಟು ಅನುಭವಗಳನ್ನು ಸಹಿಸಬೇಕಾಗಿ ಬಂದು ಸ್ವಾಸ್ಥ್ಯ ಕೆಟ್ಟು ಕಾಯಿಲೆ ಬಿದ್ದದ್ದೂ ಉಂಟು. ಆ ಸಂದರ್ಭದಲ್ಲಿ ಇವನ ರೋಗ ಶುಶ್ರೂಷೆ ಮಾಡಿದ ಲುಡ್‍ಮಿಲ್ಲ ಫೆಡರೋವ ಎಂಬಾಕೆಯನ್ನು 1869ರಲ್ಲಿ ಮದುವೆ ಆದ. ಆದರೆ ಆಕೆಗೆ ಕೆಮ್ಮು ಹತ್ತಿತು. ಮೊದಲು ಅದು ಸಾಧಾರಣ ಕೆಮ್ಮು ಎಂದು ಉದಾಸೀನ ಮಾಡಿದರು. ಆದರೆ ಬರಬರುತ್ತ ಅದೇ ಪ್ರಬಲವಾಗಿ ಅವಳನ್ನು ಕುರ್ಚಿಯಲ್ಲಿ ಕೂರಿಸಿ ಎತ್ತಿ ಓಡಾಡಿಸಬೇಕಾಯಿತು. ಬೆಚ್ಚನೆ ಹವೆ ಇರುವ ಪ್ರದೇಶಕ್ಕೆ ಕಳುಹಿಸಿದರೆ ಉತ್ತಮ ಎನ್ನಿಸಿ ಅದಕ್ಕಾಗಿ ಹಣ ಸಂಪಾದಿಸಲು ಇವನು ಅನೇಕ ಕೃತಿಗಳನ್ನು ಭಾಷಾಂತರಿಸಿ ಪ್ರಕಟಿಸಲು ಪ್ರಾರಂಭಿಸಿದ. ಶ್ರಮ ಹೆಚ್ಚಾಗಿ ಕಣ್ಣುದೃಷ್ಟಿ ಪುನಃ ಕೆಟ್ಟಿತು. ಹೆಂಡತಿಯನ್ನು ಮೆಡೀರಕ್ಕೆ ಕಳುಹಿಸಿ ತಾನು ತಕ್ಕಷ್ಟು ವಿಶ್ರಾಂತಿ ತೆಗೆದುಕೊಂಡು ತಕ್ಕಮಟ್ಟಿಗೆ ದೃಷ್ಟಿಚುರುಕನ್ನು ಮರುಗಳಿಸಿದ. 1873ರಲ್ಲಿ ಅವನ ಹೆಂಡತಿಯ ದೇಹಸ್ಥಿತಿ ತೀರ ಕೆಟ್ಟಿತು. ಆಕೆ ಕ್ಷಯ ರೋಗಗ್ರಸ್ತೆ. ಅವಳನ್ನು ನೋಡುವುದಕ್ಕೆ ತೆರಳಿದ ಮೆಚ್ನಿಕಾಫನ ಕಣ್ಣ ಮುಂದೆಯೇ ಆಕೆ ಮಡಿದಳು. ಧೃತಿ ಮತ್ತು ಮತಿಗೆಟ್ಟ ಈತ ಆಕೆಯ ಶವ ಸಂಸ್ಕಾರಕ್ಕೂ ಹೋಗದೆ ರಷ್ಯಕ್ಕೆ ವಾಪಸಾಗಿ ಅತ್ಯಧಿಕ ಪ್ರಮಾಣದಲ್ಲಿ ಅಫೀಮು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ. ಆದರೆ ನುಂಗಿದ್ದೆಲ್ಲ ವಮನವಾಗಿ ಬದುಕಿಕೊಂಡ. ಚೇತರಿಸಿಕೊಂಡ ಬಳಿಕ ನಿಧಾನವಾಗಿ ಪುನಃ ವೈಜ್ಞಾನಿಕ ವ್ಯಾಸಂಗಗಳತ್ತ ಮನಸ್ಸು ತಿರುಗಿಸಿದ. ಆದರೆ ದೃಷ್ಟಿ ಸಾಕಷ್ಟು ಚುರುಕಾಗಿಲ್ಲದ್ದರಿಂದ ಸೂಕ್ಷ್ಮದರ್ಶಕ ವ್ಯಾಸಂಗಗಳನ್ನು ಕೈಬಿಡಬೇಕಾಯಿತು. ಸ್ವಲ್ಪಕಾಲ ನೊವೊರೋಸಿಯದಲ್ಲಿ ಪ್ರಾಧ್ಯಾಪಕನಾಗಿದ್ದು 1870ರಲ್ಲಿ ಪ್ರಾಣಿವಿಜ್ಞಾನ ಮತ್ತು ತುಲನಾತ್ಮಕ ಶರೀರರಚನಾ ವಿಜ್ಞಾನದ ಪ್ರಾಧ್ಯಾಪಕಪೀಠ ಅಲಂಕರಿಸಲು ಒಡೆಸ್ಸಕ್ಕೆ ತೆರಳಿದ. ಹನ್ನೆರಡು ವರ್ಷ ಈ ಹುದ್ದೆಯಲ್ಲಿದ್ದು ವಿದ್ಯಾಭ್ಯಾಸನೀತಿಯಲ್ಲಿ ಸರಕಾರ ಮಾಡಿದ ಬದಲಾವಣೆಗಳನ್ನು ಪ್ರತಿಭಟಿಸಿ ರಾಜೀನಾಮೆ ಕೊಟ್ಟ.
1875ರಲ್ಲಿ ಈತ ಓಲ್ಲ ಬೆಲಕೊಪಿಟೋವ ಎಂಬಾಕೆಯನ್ನು ಮದುವೆಯಾದ. ಈತ ವಾಸವಾಗಿದ್ದ ಗೃಹದ ಮಹಡಿಯ ಮೇಲೆಯೇ ತಂದೆ ತಾಯಿ ಮತ್ತು ದೊಡ್ಡ ಸಂಸಾರದೊಡನೆ ಈಕೆಯೂ ವಾಸಿಸುತ್ತಿದ್ದಳು. ಜೊತೆಗೆ ಈತನ ಶಿಷ್ಯೆಯೂ ಆಗಿದ್ದಳು. ಮದುವೆ ಆದ ಬಳಿಕ ಅವಳು ಅವನ ಜೀವಮಾನಪರ್ಯಂತ ಅನುರಕ್ತಸಂಗಾತಿಯಾಗಿಯೂ ಸಹವ್ಯಾಸಂಗಿಯೂ ಆಗಿದ್ದು ಈತನನ್ನು ವಿಶ್ವಾಸದಿಂದ ನೋಡಿಕೊಂಡಳು. ಈ ಮಧ್ಯೆ ಈಕೆಗೆ 1880ರಲ್ಲಿ ಟೈಫಾಯಿಡ್ ಜ್ವರ ಬಂತು. ಅದೇ ಕಾಲದಲ್ಲಿ ಒಡೆಸ್ಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗಲಭೆ ಪ್ರಾರಂಭವಾಯಿತು. ಜೊತೆಗೆ ರಾಜಕೀಯದಲ್ಲಿ ಮುಳುಗಿದ್ದ ಸಹವಿಜ್ಞಾನಿಗಳಿಂದ ಕಿರುಕುಳವಾಯಿತು. ಇವೆಲ್ಲವುಗಳಿಂದ ಬೇಸತ್ತ ಮೆಚ್ನಿಕಾಫ್ ಎರಡನೆಯ ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ. ಇದಕ್ಕಾಗಿ ಮರಕಳಿಸುವ ಜ್ವರದ ಕ್ರಿಮಿಗಳನ್ನು ಬಳಸಿದ. ಆದರೆ ಸಾವು ಬರುವುದರ ಬದಲು ದೀರ್ಘಕಾಲಿಕ ರೋಗಕ್ಕೆ ಈಡಾದ. ಕೊನೆಗೂ ಗುಣವಾದ ಮೇಲೆ ವ್ಯಾಸಂಗಗಳ ಬಗ್ಗೆ ಈತನಿಗಿದ್ದ ಹುಮ್ಮಸ್ಸೂ ಹಿಂತಿರುಗಿತು. ಆದರೆ ರೋಗದಿಂದ ಬಹುಶಃ ಈತನ ಹೃದಯ ದುರ್ಬಲಗೊಂಡಿತ್ತೆಂದು ತೋರುತ್ತದೆ. ಕೊನೆಯಲ್ಲಿ ಸುಮಾರು ಒಂದು ವರ್ಷ ಈತ ಈ ದುರ್ಬಲತೆಯಿಂದಲೇ ಬಳಲಿ ಮರಣವನ್ನಪ್ಪಿದ.
ಒಡೆಸ್ಸದಲ್ಲಿ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟ ಬಳಿಕ ಮೆಚ್ನಿಕಾಫ್ ಮೆಸ್ಸೀನಕ್ಕೆ ತೆರಳಿ ಅಲ್ಲಿ ಸ್ವಲ್ಪಕಾಲ ಏಕಾಣುಗಳ ಬಗೆಗೂ ಅನಂತರ ರೋಗವಿಜ್ಞಾನದ ಬಗೆಗೂ ವ್ಯಾಸಂಗ ಮಾಡಿ ಒಡೆಸ್ಸಕ್ಕೆ ವಾಪಸಾದ. ಅಲ್ಲಿ ತನ್ನದೇ ಖಾಸಗಿ ಪ್ರಯೋಗಾಲಯ ಪ್ರಾರಂಭಿಸಿ ಸಂಶೋಧಕವ್ಯಾಸಂಗಗಳನ್ನು ಮುಂದುವರಿಸಿದ. 1886ರಲ್ಲಿ ಈ ಪ್ರಯೋಗಾಲಯವನ್ನು ಸಾಂಕ್ರಾಮಿಕ ರೋಗಗಳ ಹತೋಟಿ ಸಂಬಂಧವಾದ ಏಕಾಣುಪ್ರಯೋಗಶಾಲೆಯಾಗಿ ಪರಿವರ್ತಿಸಿದ. ಇಂಥ ಸಂಸ್ಥೆ ದೇಶದಲ್ಲೇ ಪ್ರಪ್ರಥಮವಾಗಿದ್ದು ಹಲವರ್ಷಗಳಲ್ಲೇ ಇನ್ನೂ ಇಂಥವೇ ಅನೇಕ ಪ್ರಯೋಗಾಲಯಗಳನ್ನು ರಷ್ಯದಲ್ಲಿ ಪ್ರಾರಂಭಿಸಲಾಯಿತು.
1888ರಲ್ಲಿ ಇವನು ರಷ್ಯವನ್ನು ಬಿಟ್ಟು ಪ್ಯಾರಿಸ್ಸಿಗೆ ಬಂದ. ಅಲ್ಲಿ ಲೂಯಿ ಪಾಸ್ತರ್ ಇವನಿಗೆ ವ್ಯಾಸಂಗಕ್ಕಾಗಿ ಒಂದು ಪ್ರಯೋಗಾಲಯವನ್ನೇ ಬಿಟ್ಟುಕೊಟ್ಟ. 1905ರಲ್ಲಿ ಇವನು ಪ್ಯಾರಿಸ್ಸಿನ ಪಾಸ್ತರ್ ಸಂಸ್ಥೆಯ ಸಹಾಯಕ ನಿರ್ದೇಶಕನಾಗಿ ನೇಮಿತನಾದ. ಇಂಥ ಸಹೃದಯ ವ್ಯವಹಾರಗಳಿಂದ ಸಂತೃಪ್ತನಾಗಿ ಮೆಚ್ನಿಕಾಫ್ ತನ್ನ ಕೊನೆಗಾಲದ ತನಕವೂ (28 ವರ್ಷ) ಪ್ಯಾರಿಸ್ಸಿನಲ್ಲೆ ನೆಲೆಸಿದ. ಆದರೆ ರಷ್ಯದ ನಂಟನ್ನು ತೀರ ಬಿಟ್ಟುಬಿಡದೆ ಅಲ್ಲಿಗೆ ಆಗಾಗ ಹೋಗಿ ಬಂದು ಮಾಡುತ್ತಿದ್ದನಲ್ಲದೆ ರಷ್ಯದ ಆಗಿನ ಘನವಿಜ್ಞಾನಿಗಳಾದ ಪಾವ್ಲೊವ್, ಮೆಂಡಲೀಫ್ ಮುಂತಾದವರೊಡನೆ ಪತ್ರವ್ಯವಹಾರವನ್ನೂ ಇಟ್ಟುಕೊಂಡಿದ್ದ.
1882 ರಿಂದ 88ರ ತನಕ ಮೆಚ್ನಿಕಾಫ್ ತನ್ನ ಸ್ವಂತ ಪ್ರಯೋಗಾಲಯದಲ್ಲಿ ಸಂಶೋಧನೆಗಳನ್ನು ಮಾಡುತ್ತಿದ್ದನಷ್ಟೆ. ಆಗ ಕೊವಲೆವ್‍ಸ್ಕಿ ಎಂಬ ವಿಜ್ಞಾನಿಯೊಡನೆ ಭ್ರೂಣವಿಜ್ಞಾನವನ್ನು ತುಲನಾತ್ಮಕವಾಗಿ ಅರಿಯುವುದಕ್ಕೂ ವಿಕಾಸವಾದಕ್ಕೆ ಅದು ಹೇಗೆ ಹೊಂದಿಕೊಳ್ಳುವುದೆಂಬುದನ್ನು ತಿಳಿದುಕೊಳ್ಳುವುದಕ್ಕೂ ಅನೇಕ ವ್ಯಾಸಂಗಗಳನ್ನು ಕೈಗೊಂಡ. ಆ ಕಾಲದಲ್ಲಿ ಇವನು ಮಾಡಿದ ಮುಖ್ಯ ಸಂಶೋಧನೆ ಎಂದರೆ ಕಣಕಬಳಿಕೆ (ಫೇಗೊಸೈಟೋಸಿಸ್) ಎಂಬ ವಿದ್ಯಮಾನ. ಕೆಲವು ಕೋಶಗಳು ಕಣಕಬಳಿಕೆ ಕೋಶಗಳು (ಫೇಗೊಸೈಟ್ಸ್) ನಿರ್ಜೀವಕಣಗಳನ್ನೂ ಜೀವಂತಕಣಗಳನ್ನೂ ಅಮೀಬ ಆಹಾರಕಣಗಳನ್ನು ಕಬಳಿಸುವಂತೆಯೇ ಕಬಳಿಸುವುದನ್ನು ಇವನು ವಿವರವಾಗಿ ಅಧ್ಯಯನ ಮಾಡಿ 1882ರಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದ. ಹತ್ತು ವರ್ಷಗಳು ಇದರ ಬಗ್ಗೆ ವಾದ ವಿವಾದಗಳು ಸಮರ್ಥಿಸಲು ಹಾಗೂ ನಿಷೇಧಿಸಲು ಪ್ರಯತ್ನಿಸುವ ಸಂಶೋಧನೆಗಳು ಇವನಿಂದಲೂ ಇವನ ಪರ ಹಾಗೂ ವಿರೋಧಿ ವಿಜ್ಞಾನಿಗಳಿಂದಲೂ ಮಾಡಲ್ಪಟ್ಟು ಸುಮಾರು 1892ರ ಹೊತ್ತಿಗೆ ಈ ವಿದ್ಯಮಾನವನ್ನೂ ಇದರ ಪ್ರಾಮುಖ್ಯವನ್ನೂ ವೈದ್ಯವಿಜ್ಞಾನಲೋಕ ಒಪ್ಪಿತು. ಇಷ್ಟರಲ್ಲಿ ಇವನು ಉರಿಊತದ ಬಗ್ಗೆ ಕೈಗೊಂಡಿದ್ದ ತುಲನಾತ್ಮಕ ವ್ಯಾಸಂಗದ ಫಲಿತಾಂಶವನ್ನು ಪ್ರಕಟಿಸಿದ. ಸೋಂಕು, ಅದರಿಂದ ಉದ್ಭವಿಸುವ ಉರಿಊತ, ಆ ಸಂದರ್ಭದಲ್ಲಿ ಕಣಕಬಳಿಕೆ ಕೋಶಗಳ ಪಾತ್ರ-ಇವುಗಳಿಗೆ ಸಂಬಂಧಿಸಿದಂತೆ ರೋಗ ಪ್ರತಿರೋಧನೆ ಇವನ್ನೆಲ್ಲ ಒಳಗೊಂಡಂತೆ ರೋಗರಕ್ಷಣೆ ವಿಚಾರವಾಗಿ ತನ್ನ ಕೃತಿಗಳಲ್ಲೆಲ್ಲ ಬಹುಮುಖ್ಯವಾದ ಗ್ರಂಥವನ್ನು 1901ರಲ್ಲಿ ಪ್ರಕಟಿಸಿದ. ಈ ವ್ಯಾಸಂಗವೇ ಇವನಿಗೆ ನೊಬೆಲ್ ಪಾರಿತೋಷಕ ತಂದುಕೊಟ್ಟದ್ದು. 1903ರಲ್ಲಿ ಕಾಕ್ಸ್ ಎಂಬ ವಿಜ್ಞಾನಿಯೊಡನೆ ಕೋತಿಗಳಲ್ಲಿ ಪ್ರಾಯೋಗಿಕವಾಗಿ ಪರಂಗಿರೋಗದ ಸೋಂಕನ್ನು ಉಂಟುಮಾಡಿದ. ಪ್ರಾಯೋಗಿಕವಾಗಿ ಅನ್ಯಪ್ರಾಣಿಗಳಲ್ಲಿ ಈ ಸೋಂಕನ್ನು ಉಂಟುಮಾಡಲು ಕೈಗೊಂಡಿದ್ದ ಪ್ರಯತ್ನಗಳಲ್ಲಿ ಇವರದ್ದೆ ಮೊದಲು ಸಫಲವಾದದ್ದು. ಇದೇ ಕಾಲದಲ್ಲಿ ಕಾಲರಾ, ಟೈಫಾಯಿಡ್, ಕ್ಷಯ ಮುಂತಾದ ಪಿಡುಗುಗಳು ವ್ಯಾಪಕವಾಗಿ ಹರಡುವುದರ ಬಗ್ಗೆ (ಎಪಿಡೆಮಿಯಾಲಜಿ) ವ್ಯಾಸಂಗಗಳನ್ನು ಮಾಡಿದ. 1904-07 ಅವಧಿಯಲ್ಲಿ ಇವನು ಈ ಎಲ್ಲ ವಿಚಾರಗಳ ಮಂಥನ ಮಾಡುತ್ತ ಸಾಮಾನ್ಯವಾಗಿ ಮನುಷ್ಯರು ಅಕಾಲವಾಗಿಯೇ ಮೃತರಾಗುತ್ತಾರೆಂದೂ ಮುಖ್ಯವಾಗಿ ವಿಷಾಣುಗಳು ಹೊರವಿಷಗಳು ಹಾಗೂ ದೇಹದಲ್ಲಿ ಆದ ವಿಷವಸ್ತುಗಳು ಅಕಾಲಮೃತ್ಯುವಿಗೆ ಕಾರಣವೆಂದೂ ತೀರ್ಮಾನಿಸಿದ. ಅದರಲ್ಲೂ ಕರುಳಿನಲ್ಲಿ ಯಾವಾಗಲೂ ಇರುವ ಏಕಾಣುಗಳಿಂದಲೇ ಈ ಪರಿಸ್ಥಿತಿ ಬಲುಪಾಲು ಉದ್ಭವಿಸುವುದೆಂದೂ ಆದ್ದರಿಂದ ಸುಖಸಂತೋಷಗಳಿಂದ ಕೂಡಿದ ಮತ್ತು ನೈಸರ್ಗಿಕವಾಗಿ ನೆಮ್ಮದಿಯಿಂದ ಕೊನೆಗೊಳ್ಳುವಂಥ ತುಂಬುಜೀವನದ (ಆರ್ಥೊಬೈಯೋಸಿಸ್) ಲಭ್ಯಕ್ಕಾಗಿ ಕ್ರಿಮಿರಹಿತ ಮಾಡಲ್ಪಟ್ಟ ಆಹಾರವನ್ನೂ, ಅಲ್ಪವಾಗಿ ಮಾಂಸವನ್ನೂ ಹೆಪ್ಪುಹಾಕಿದ ಹಾಲಿನ ಉತ್ಪನ್ನಗಳನ್ನೂ ಸೇವಿಸಬೇಕು ಎಂಬ ಅಭಿಪ್ರಾಯವನ್ನು ಮಂಡಿಸಿದ.
1914ರಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ ಮೆಚ್ನಿಕಾಫ್ ಬಲುನೊಂದ. ವೈಜ್ಞಾನಿಕವ್ಯಾಸಂಗಗಳಿಗೆ ಇನ್ನು ತನಗೆ ಬಿಡುವು, ಅನುಕೂಲಗಳು ದೊರೆಯವು ಎಂಬುದು ಮಾತ್ರ ಕಾರಣವಲ್ಲ. ವಿಜ್ಞಾನ ಇಷ್ಟು ಮುನ್ನಡೆದಿದ್ದರೂ ಮನುಷ್ಯ ಸ್ವಭಾವದಲ್ಲಿ ಉನ್ನತಿ ಕಾಣಬರದೆ ಯುದ್ಧದಂಥ ಕಾರ್ಯಾಚರಣೆಯಲ್ಲೇ ಇನ್ನೂ ತೊಡಗುವಂತಾಯಿತೇ ಎಂದು ತೀರ ಮನನೊಂದ. 1916ರ ಬೇಸಗೆಯಲ್ಲಿ ಈ ಚಿಂತೆಯಿಂದಲೇ ಹಾಸಿಗೆ ಹತ್ತಿದ. ತಕ್ಕ ಶುಶ್ರೂಷೆಗಾಗಿ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಇವನನ್ನು ಪಾಸ್ತರ್ ಪ್ರಯೋಗಾಲಯದಲ್ಲಿದ್ದ ಇವನ ಪ್ರೀತಿಯ ಸ್ವಂತ ಬಿಡಾರಕ್ಕೆ ಒಯ್ದರು. ಅಲ್ಲಿ ಇವನು ಹೃದಯಾಘಾತದಿಂದ 1915ರ ಜುಲೈ 15ರಂದು ನಿಧನಹೊಂದಿದ. (ಎಸ್.ಆರ್.ಆರ್.)