ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೋಹಿನಿ

ವಿಕಿಸೋರ್ಸ್ ಇಂದ
Jump to navigation Jump to search

ಮೋಹಿನಿ - ಪುರಾಣಗಳಿಂದ ಹಿಡಿದು ಜನಪದ ಕಥೆಗಳವರೆಗೂ ಪ್ರಸ್ತಾವಗೊಂಡಿರುವ ಒಂದು ಸ್ತ್ರೀ ಪಾತ್ರ. ಪುರಾಣಗಳಲ್ಲಿ ಎರಡು ಪ್ರಸಂಗಗಳು ಅತ್ಯಂತ ಪ್ರಸಿದ್ಧವಾಗಿವೆ. ಒಂದು ಕಥೆಯ ಪ್ರಕಾರ ಸಮುದ್ರ ಮಥನದ ಫಲಾವಾಗಿ ಉದ್ಭವಿಸಿದ ಅಮೃತವನ್ನು ಹಂಚಿಕೊಳ್ಳುವಾಗ ಸುರಾಸುರರಿಗೆ ಜಗಳ ಅರಂಭವಾಯಿತು. ಆ ಸಂದರ್ಭದಲ್ಲಿ ಅವೃತವನ್ನೆಲ್ಲ ದೈತ್ಯರು ತೆಗೆದುಕೊಂಡು ಹೋದರು. ಆಗ ವಿಷ್ಣು ದೈತ್ಯರನ್ನು ಮರುಳುಗೊಳಿಸುವ ತಂತ್ರ ಹೂಡಬೇಕಾಗಿಬಂತು. ಆತ ಮೋಹಿನಿಯ ವೇಷ ಧರಿಸಿ ದೈತ್ಯರನ್ನು ಮೋಹದಿಂದ ವಂಚಿಸಿ ದೇವತೆಗಳಿಗೆ ಅಮೃತಪಾನ ಮಾಡಿಸಿದ. ಇನ್ನೊಂದು ಕಥೆಯ ಪ್ರಕಾರ ಭಸ್ಮಾಸುರನಿಗೆ ಶಿವಕೊಟ್ಟ ವರದಿಂದ ಶಿವನನ್ನೂ ತನ್ನನ್ನೂ ಪಾರುಮಾಡಿಕೊಳ್ಳಲು ವಿಷ್ಣು ಮೋಹಿನಿ ಅವತಾರ ಧರಿಸಬೇಕಾಯಿತು. ಭಸ್ಮಾಸುರ ಭಸ್ಮವಾದ ವಿಷಯವನ್ನು ತಿಳಿಸಲು ಮೋಹಿನಿ ರೂಪದ ವಿಷ್ಣು ಶಿವನ ಬಳಿಗೆ ಬಂದಾಗ ಸ್ತ್ರೀರೂಪಿಯಾದ ವಿಷ್ಣುವನ್ನು ಶಿವ ಮೋಹಿಸಿ ಅಲಿಂಗಿಸಿಕೊಳ್ಳಲು, ಕಾಪಾಲಿಮತದ ಭೈರವ ಹುಟ್ಟಿದನೆಂಬ ಕಥೆಯಿದೆ. (ಈ ಪೌರಾಣಿಕ ಹಿನ್ನೆಲೆಯಲ್ಲಿಯೇ ಹುಟ್ಟಿಕೊಂಡದ್ದು ಕೇರಳದ ಮೋಹಿನಿ ಅಟ್ಟಂ. ಕೇರಳದ ಪ್ರಸಿದ್ಧ ಕಲೆಗಳಲ್ಲಿ ಕಥಕ್ಕಳಿ ಪುರುಷ ಪ್ರಧಾನವಾದ ನೃತ್ಯ ಪ್ರಕಾರವಾದರೆ ಮೋಹಿನಿ ಅಟ್ಟಂ ಸ್ತ್ರೀಯರು ಮಾತ್ರ ಅಭಿನಯಸುವ ನೃತ್ಯ ಕಲೆಯಾಗಿದೆ).

ಮೋಹಿನಿ ಒಂದು ಕಾಲ್ಪನಿಕ ಪಾತ್ರವೂ ಹೌದು. ಮೋಹಿನಿ ಎಂಬ ಪದಕ್ಕೆ ವೀಕ್ಷಕನ ಮನಸ್ಸನ್ನು ಸೂರೆಗೈಯುವ ತರುಣಿ ಎಂಬ ಅರ್ಥವೂ ಇದೆ. ಜನಪದದಲ್ಲಿ ಮೋಹಿನಿಯ ಕಲ್ಪನೆ ವಿಶಿಷ್ಟ ಬಗೆಯದು. ಅತಿಯಾದ ಆಸೆಯನ್ನು ಇಟ್ಟುಕೊಂಡು ಸತ್ತ ತರುಣಿ ಅಥವಾ ಹೆಂಗಸು ತರುಣರನ್ನು ಮೋಹಿನಿಯಾಗಿ ಕಾಡುತ್ತಾಳೆ ಎಂಬ ನಂಬಿಕೆ ಜನಪದದಲ್ಲಿದೆ. ಅನೇಕ ವೇಳೆ ಮೋಹಿನಿಯನ್ನು ದೆವ್ವ ಎಂಬ ಅರ್ಥದಲ್ಲಿಯೂ ಕರೆಯುವುದುಂಟು. ಮೋಹಿನಿ ಯಾರ ಮೇಲೆ ಬೇಕಾದರೂ ಯಾವಾಗ ಬೇಕಾದರೂ ಬರಬಹುದು. ಆದರೆ ಸಾಮಾನ್ಯವಾಗಿ ತನಗೆ ಮೋಸಮಾಡಿ ವಂಚಿಸಿದವರ ಮೇಲೆ ಮೋಹಿನಿ ಬಂದು ಕಾಡುತ್ತಾಳೆ ಎಂಬ ನಂಬಿಕೆಯೇ ಹೆಚ್ಚು. ಅಂತಹ ಮೋಹಿನಿಯ ಕಾಟದಿಂದ ಪಾರಾಗಲು ಜನಪದರು ಅನೇಕ ಅಡೆತಡೆಗಳನ್ನು ಮಾಡುವುದೂ ಮಂತ್ರವಾದಿಗಳ ಮೊರೆ ಹೋಗುವುದೂ ಉಂಟು. (ಡಿ.ಕೆ.ಅರ್.)